More

    ಜಪಾನ್‌ನಲ್ಲಿ ಅರಳಿದ ಕನ್ನಡ ಕಂಪು: ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಸಮ್ಮೇಳನ

    ಮಂಡ್ಯ: ಜಪಾನ್‌ನ ಒಸಾಕಾದ ಆರ್ಟ್ ಹೋಟೆಲ್‌ನಲ್ಲಿ ಎರಡು ದಿನದ ವಿಶ್ವ ಕನ್ನಡ ಸಮ್ಮೇಳನಕ್ಕೆ ಭಾನುವಾರ ಸಂಜೆ ಚಾಲನೆ ನೀಡಲಾಯಿತು. ಇದರೊಂದಿಗೆ 24ನೇ ಸಮ್ಮೇಳನದೊಂದಿಗೆ ವಿದೇಶದಲ್ಲಿ ಕನ್ನಡದ ಕಂಪು ಅರಳಿತು.
    ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಕಲಾನಿಕೇತನ ಹಾಗೂ ಜಪಾನ್ ಕನ್ನಡ ಸಂಘದ ಸಹಯೋಗದಲ್ಲಿ ಮತ್ತು ಅಂತಾರಾಷ್ಟ್ರೀಯ ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ಕೃಷ್ಣಮೂರ್ತಿ ಅವರು, ನಾಡಗೀತೆ ಮತ್ತು ಓ ನನ್ನ ಚೇತನಾ, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಸೇರಿದಂತೆ ಹಲವು ಗೀತೆಗಳನ್ನು ಹಾಡಿದರು. ಅಂತೆಯೇ ವಿವಿಧ ಕ್ಷೇತ್ರದ ಸಾಧಕರಿಗೆ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ಜೆ.ಎಚ್.ಅನಿಲ್‌ಕುಮಾರ್, ವಿದೇಶದಲ್ಲಿ ಕನ್ನಡ ಕಾರ್ಯಕ್ರಮ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ರಾಷ್ಟ್ರಕವಿಯ ಸಾಹಿತ್ಯ ಮನೆಮಾತಾಗಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಹೆಚ್ಚೆಚ್ಚು ಆಯೋಜನೆಗೊಳ್ಳಬೇಕು ಎಂದು ಸಲಹೆ ನೀಡಿದರು.
    ಸಮ್ಮೇಳನಾಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ಕುವೆಂಪು ಅವರ ಗೀತೆಗಳಲ್ಲಿ ಪ್ರಕೃತಿ ಮಾತೆಯ ಆರಾಧನೆ ಇದೆ. ಕನ್ನಡ ನಾಡು ನುಡಿಯ ಮಹತ್ವವಿದೆ. ದೇಶಾಭಿಮಾನದ ಗೀತೆಗಳಿವೆ. ಇಂತಹ ಪುಣ್ಯ ಪುರುಷರ ಹೆಸರಿನಲ್ಲಿ ಜಪಾನ್‌ನಲ್ಲಿ ಸಮ್ಮೇಳನ ಆಯೋಜಿಸಿ ನನ್ನನ್ನು ಸಮ್ಮೇಳನಾಧ್ಯಕ್ಷನನ್ನಾಗಿ ಮಾಡಿರುವುದು ಪೂರ್ವ ಜನ್ಮದ ಪುಣ್ಯ ಎಂದರು.
    ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಅಣ್ಣೇಗೌಡ ಮಾತನಾಡಿ, ದೇಶ ವಿದೇಶಗಳಲ್ಲಿ ಕುವೆಂಪು ಉತ್ಸವ ಆಯೋಜಿಸುತ್ತಿರುವ ಕಲಾನಿಕೇತನದ ಕಾರ್ಯ ಶ್ಲಾಘನೀಯ. ಮುಂದಿನ ದಿನದಲ್ಲಿ ಸರ್ಕಾರದ ನೆರವಿನೊಂದಿಗೆ ಮತ್ತಷ್ಟು ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
    ಕುವೆಂಪು ಕಲಾನಿಕೇತನದ ಅಧ್ಯಕ್ಷ ಡಿ.ಪ್ರಕಾಶ್, ಜಪಾನ್ ಕನ್ನಡ ಸಂಘದ ಚಿಡಿಯಾ ಕನಕ್ ಸಮರ್, ಆತ್ಮಾರಾಂ, ಯುಕೊ, ಒಸಾಕಾ, ಪ್ರವೀಣ್ ಓಸ್ವಾಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts