More

    ಕೊರೊನಾ ವೈರಸ್​ ಬಗೆಗಿನ 13 ಕಟ್ಟುಕತೆಗಳಿಗೆ ಸ್ಪಷ್ಟನೆ ನೀಡಿ ಎಚ್ಚರಿಕೆ ಸಂದೇಶ ರವಾನಿಸಿದ ವಿಶ್ವ ಆರೋಗ್ಯ ಸಂಸ್ಥೆ

    ವುಹಾನ್​: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ವಿಶ್ವದೆಲ್ಲೆಡೆ ಭೀತಿ ಸೃಷ್ಟಿಸಿದೆ. ಸೋಂಕು ತಗಲದಂತೆ ಅನೇಕ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸೋಂಕು ತಡಗಟ್ಟುವಿಕೆ ಕುರಿತು ಹರಿದಾಡುತ್ತಿರುವ ಸುಮಾರು 13 ಕಟ್ಟುಕತೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಅಲ್ಲಗೆಳೆದಿದ್ದು, ಜನರಲ್ಲಿ ಸೋಂಕು ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಿದೆ.

    ಬೆಳ್ಳುಳ್ಳಿಯನ್ನು ತಿನ್ನುವುದರಿಂದಲೂ ನೀವು ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಹ್ಯಾಂಡ್​ ಡ್ರೈಯರ್​, ಅಲ್ಟ್ರಾವೈಲೆಟ್​ ಲ್ಯಾಂಪ್​ಗಳು ಕೂಡ ಏನು ಮಾಡದು. ಬ್ಲೀಚ್​ ಕುಡಿಯುವುದು ಮತ್ತು ಮದ್ಯವನ್ನು ದೇಹದ ಮೇಲೆ ಸುರಿದುಕೊಳ್ಳುವುದು ಅಪಾಯಕಾರಿ ಎಂದು ವಿಶ್ವಸಂಸ್ಥೆ ಜಾಲತಾಣದಲ್ಲಿ ಹರಿದಾಡುತ್ತಿರುವ ಕಟ್ಟುಕತೆಗೆ ಬದಲಾಗಿ ಉಪಯುಕ್ತ ಮಾಹಿತಿಯನ್ನು ನೀಡಿದ್ದು, ಅದರ ವಿವರ ಈ ಕೆಳಕಂಡಂತಿದೆ.

    1. ಹ್ಯಾಂಡ್​ ಡ್ರೈಯರ್​ನಿಂದ ಕೊರೊನಾ ವೈರಸ್​ ಕೊಲ್ಲಲಾಗದು
    ಡ್ರೈಯರ್​ನಿಂದ ಬರುವ ಬಿಸಿಗಾಳಿಗೆ ಸುಮಾರು 30 ಸೆಕೆಂಡ್​ ಕೈಗಳನ್ನು ಹಿಡಿದರೆ ಯಾವುದೇ ವೈರಸ್​ ಅನ್ನು ಕೊಲ್ಲಬಹುದೆಂಬ ವದಂತಿ ಹರಿದಾಡುತ್ತಿದೆ. ಆದರೆ, ಇದರಿಂದ ಕೊರೊನಾವೈರಸ್​ ಕೊಲ್ಲಲು ಸಾಧ್ಯವಿಲ್ಲ ಎಂದು ಡಬ್ಲ್ಯುಎಚ್ಒ ತಿಳಿಸಿದೆ. ಇದರ ಬದಲಾಗಿ ಕೈಗಳನ್ನು ಶುಚಿಯಾಗಿ ಇಟ್ಟುಕೊಳ್ಳಲು ಗಮನ ಇಡಿ. ಆಗಾಗ ನಿಮ್ಮ ಕೈಗಳನ್ನು ಸೋಪು ನೀರಿನಲ್ಲಿ ತೊಳೆದು ಅದನ್ನು ಪೇಪರ್​ ಟವೆಲ್ಸ್​ನಿಂದ ಅಥವಾ ಡ್ರೈಯರ್​ನಿಂದ ಒಣಗಿಸಿಕೊಳ್ಳಿ ಎಂದು ಸಲಹೆ ನೀಡಿದೆ.

    2. ಯುವಿ​ ಲ್ಯಾಂಪ್​ನಿಂದ ಚರ್ಮದಲ್ಲಿರುವ ಕ್ರಿಮಿನಾಶಕ ಹೊಗಲಾಡಿಸಲಾಗದು
    ಯುವಿ ಲ್ಯಾಂಪ್​ನಿಂದ ಅಲ್ಟ್ರಾವೈಲೆಟ್​ ಕಿರಣಗಳನ್ನು ಚರ್ಮದ ಮೇಲೆ ಹೊರಸೂಸುವ ಮೂಲಕ ಚರ್ಮದ ಮೇಲಿನ ಕ್ರಿಮಿಗಳನ್ನು ಹೋಗಲಾಡಿಸಲಾಗದು. ಬದಲಾಗಿ ಅಲ್ಟ್ರಾವೈಲೆಟ್​ ಕಿರಣ ಚರ್ಮ ತೊಂದರೆಗೆ ಈಡುಮಾಡಲಿದೆ ಎಂದು ಎಚ್ಚರಿಸಿದೆ. ಅಲ್ಲದೆ, ಸೂರ್ಯನ ಕಿರಣಗಳಿಂದ ಬರುವ ಅಲ್ಟ್ರಾವೈಲೆಟ್​ ನಮ್ಮ ದೇಹದಲ್ಲಿನ ಡಿಎನ್​ಯ ಕೋಶಗಳಿಗೆ ಹಾನಿ ಮಾಡಲಿದ್ದು, ಅದು ಕ್ಯಾನ್ಸರ್​ಗೆ ತಿರುಗುತ್ತದೆ ಎಂದು ಡಬ್ಲ್ಯುಎಚ್ಒ ಎಚ್ಚರಿಸಿದೆ. ಆಸ್ಪತ್ರೆಗಳಲ್ಲಿ ಅಲ್ಟ್ರಾವೈಲೆಟ್​ ಅನ್ನು ಸೂಕ್ಷ್ಮಜೀವಿಗಳನ್ನು ಕೊಲ್ಲಲು ಬಳಸುತ್ತಾರೆ. ಆದರೆ, ಅದನ್ನು ಮಾನವರ ಮೇಲೆ ಪ್ರಯೋಗ ಮಾಡಲ್ಲ ಎಂದು ಸ್ಪಷ್ಟನೆ ನೀಡಿದೆ.

    3. ಬೆಳ್ಳುಳ್ಳಿ ತಿನ್ನುವುದರಿಂದ ರಕ್ಷಣೆ ಸಾಧ್ಯವಿಲ್ಲ
    ಬೆಳ್ಳುಳ್ಳಿ ಆರೋಗ್ಯಯುತ ಆಹಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲಿ ಸೂಕ್ಷ್ಮಜೀವಿಗಳನ್ನು ಕೊಲ್ಲುವ ಕೆಲ ಆಂಟಿಮೈಕ್ರೊಬಿಯಲ್​ಗಳಿವೆ ಎಂದು ಡಬ್ಲ್ಯುಎಚ್ಒ ಹೇಳಿದೆ. ಆದಾಗ್ಯು ಹೊಸ ಕೊರೊನಾ ವೈರಸ್​ ಪೀಡಿತರು ಬೆಳ್ಳುಳ್ಳಿ ತಿಂದು ರಕ್ಷಣೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಎಲ್ಲೂ ಸೂಕ್ತ ಸಾಕ್ಷ್ಯಾಧಾರ ಇಲ್ಲ ಎಂದು ಹೇಳಿದೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಒಂದು ಬೌಲ್​ ಬೆಳ್ಳುಳ್ಳಿ ಬೇಯಿಸಿದ ನೀರನ್ನು ಸೇವಿಸಿದರೆ ಕೊರೊನಾ ವೈರಸ್​ ಗುಣಪಡಿಸಲಿದೆ ಎಂದು ವಾದಿಸಲಾಗಿದೆ. ಆದರೆ ಇದು ಸೂಕ್ತವಲ್ಲ ಎಂಬುದು ಡಬ್ಲ್ಯುಎಚ್ಒ ಅಭಿಪ್ರಾಯ.

    4. ಎಳ್ಳೆಣ್ಣೆ ಕೂಡ ದೇಹ ಪ್ರವೇಶಿಸುವ ಕೊರೊನಾ ವೈರಸ್​ ತಡೆಹಿಡಿಯದು
    ಏಷ್ಯಾ ಭಾಗದಲ್ಲಿ ಹೆಚ್ಚಾಗಿ ಎಳ್ಳೆಣ್ಣೆಯನ್ನು ಅಡುಗೆಗೆ ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು ಕೂಡ. ಆದರೆ, ಎಳ್ಳೆಣ್ಣೆಯನ್ನು ಚರ್ಮದ ಮೇಲೆ ಸವರಿಕೊಂಡರೆ ವೈರಸ್​ ಬರುವುದಿಲ್ಲ ಎಂಬುದು ಸುಳ್ಳೆಂದು ಡಬ್ಲ್ಯುಎಚ್ಒ ತಿಳಿಸಿದೆ.

    5. ಮದ್ಯ, ಕ್ಲೋರಿನ್​ ದೇಹದ ಮೇಲೆ ಚೆಲ್ಲಿಕೊಳ್ಳುವುದರಿಂದಲೂ ಪ್ರಯೋಜನವಿಲ್ಲ
    ಒಂದು ಬಾರಿ ಕೊರೊನಾ ವೈರಸ್​ ದೇಹವನ್ನು ಪ್ರವೇಶಿಸಿದರೆ, ಅದನ್ನು ಹೋಗಲಾಡಿಸಲು ಮದ್ಯವನ್ನು ದೇಹದ ಮೇಲೆ ಚೆಲ್ಲಿಕೊಂಡರೆ ಪ್ರಯೋಜನವಿಲ್ಲ. ಅಲ್ಲದೆ, ಕ್ಲೋರಿನ್​ ಕೂಡ ಉಪಯೋಗಕ್ಕೆ ಬರುವುದಿಲ್ಲ. ಆದರೆ, ಇದು ಚರ್ಮದ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದೆ.

    6. ಥರ್ಮಲ್​ ಸ್ಕ್ಯಾನರ್​ ಯಾವಾಗಲು ಸೋಂಕು ತಗುಲಿದ ಜನರನ್ನು ಪತ್ತೆ ಹಚ್ಚುವುದಿಲ್ಲ
    ಥರ್ಮಲ್​ ಸ್ಕ್ಯಾನರ್​ ಅನ್ನು ವಿಶ್ವದ್ಯಾಂತ ವಿಮಾನ ಮತ್ತು ರೈಲು ನಿಲ್ದಾಣಗಳಲ್ಲಿ ಬಳಸಲಾಗುತ್ತದೆ. ಜನರಲ್ಲಿರುವ ಜ್ವರದ ಪ್ರಮಾಣವನ್ನು ಅದು ಪತ್ತೆ ಹಚ್ಚುತ್ತದೆಯೇ ಹೊರತು ಕೊರೊನಾ ವೈರಸ್​ ಅನ್ನು ಪತ್ತೆ ಹಚ್ಚುವುದಿಲ್ಲ. ಯಾವುದೇ ಸೋಂಕು ಇನ್ನೊಬ್ಬರಿಗೆ ಹರಡಬಾರದೆಂಬ ಕಾರಣಕ್ಕೆ ಥರ್ಮಲ್​ ಪರೀಕ್ಷೆ ನಡೆಸಲಾಗುತ್ತದೆ.

    7. ಚೀನಾದಿಂದ ಬರುವ ಪತ್ರಗಳು, ಪ್ಯಾಕೇಜ್​ಗಳು ಕೊರೊನಾ ವೈರಸ್​ ತರುವುದಿಲ್ಲ
    ಚೀನಾದಿಂದ ಬರುವ ಪ್ಯಾಕೇಜ್​ಗಳನ್ನು ಸ್ವೀಕರಿಸಬಹುದು. ವಿಶೇಷವಾಗಿ ದೇಶಗಳ ನಡುವೆ ಪ್ರಯಾಣಿಸುವಾಗ ವಸ್ತುಗಳ ಮೇಲಿನ ಕೊರೊನಾ ವೈರಸ್​ ಹೆಚ್ಚಿಗೆ ಸಮಯ ಬದುಕುವುದಿಲ್ಲ ಎಂದು ಅಧ್ಯಯನ ತಿಳಿಸಿರುವುದಾಗಿ ಡಬ್ಲ್ಯುಎಚ್ಒ ಹೇಳಿದೆ.

    8. ಕೊರೊನಾದಿಂದ ಸಾಕುಪ್ರಾಣಿಗಳು ಅನಾರೋಗ್ಯಕ್ಕೀಡಾಗುವುದಿಲ್ಲ
    ಕೊರೊನಾ ವೈರಸ್​ ವುಹಾನ್​ನಲ್ಲಿರುವ ಪ್ರಾಣಿಗಳ ಮಾರುಕಟ್ಟೆಯಿಂದ ಮಾನವರಿಗೆ ಹರಡಿದೆ ಎಂದು ಅರ್ಥೈಸಿಕೊಳ್ಳಲಾಗಿದೆ. ಆದಾಗ್ಯು ಪ್ರಾಣಿಗಳು ಕೊರೊನಾ ವೈರಸ್​ಗೆ ತುತ್ತಾಗುತ್ತದೆ ಎಂಬುದಕ್ಕೆ ಈವರೆಗೂ ಯಾವುದೇ ಆಧಾರವಿಲ್ಲ ಎಂದು ಹೇಳಿದೆ. ಕೊರೊನಾ ಹರಡಲು ಪ್ರಾಣಿಗಳೇ ಕಾರಣ ಎಂದು ಹೇಳಿ ಚೀನಾ ಜನರು ಕೆಲ ದಿನಗಳ ಹಿಂದೆ ತಮ್ಮ ಸಾಕು ಪ್ರಾಣಿಗಳನ್ನು ಕಟ್ಟಡದಿಂದ ಎಸೆದಿದ್ದರು ಎಂದು ವರದಿಯಾಗಿತ್ತು.

    9. ನ್ಯುಮೋನಿಯಾ ವಿರುದ್ಧ ಲಸಿಕೆಗಳು ಕೂಡ ವರವಾಗುವುದಿಲ್ಲ
    ಕೊರೊನಾ ವೈರಸ್​ಗೆ ಈವರೆಗೂ ಅಧಿಕೃತವಾಗಿ ಲಸಿಕೆ ಕಂಡುಹಿಡಿದಿಲ್ಲ. ಆದರೆ, ಪ್ರಯತ್ನಗಳು ಮಾತ್ರ ಮುಂದುವರಿದಿದೆ. ವಿಶ್ವದ ಪರಿಣಿತರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ನ್ಯುಮೋನಿಯಾ ವಿರುದ್ಧ ಲಸಿಕೆಗಳು ಕೊರೊನಾ ವೈರಸ್​ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ತಿಳಿಸಿದೆ.

    10. ಲವಣಯುಕ್ತ ಮೂಗು ಸಿಂಪಡಣೆಯು ರಕ್ಷಿಸುವುದಿಲ್ಲ
    ಲವಣಯುಕ್ತ ಮೂಗು ಸಿಂಪಡಣೆಯು ಕೊರೊನಾ ವೈರಸ್​ನಿಂದ ರಕ್ಷಿಸುತ್ತದೆ ಎಂಬುದಕ್ಕೆ ಈವರೆಗೂ ಯಾವುದೇ ದಾಖಲೆಯಿಲ್ಲ. ಆದರೆ, ಇದರಿಂದ ಗುಣವಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಓಡಾಡುತ್ತಿದ್ದು, ಇದು ಸುಳ್ಳೆಂದು ಡಬ್ಲ್ಯುಎಚ್ಒ ಸ್ಪಷ್ಟಪಡಿಸಿದೆ.

    11. ಪದೇಪದೆ ಬಾಯಿ ಮುಕ್ಕಳಿಸುವುದರಿಂದಲೂ ಯಾವುದೇ ರಕ್ಷಣೆ ಇಲ್ಲ
    ಮಾರಕ ಕೊರೊನಾ ವೈರಸ್​ ಸೋಂಕಿನಿಂದ ಬಾಯಿ ಮುಕ್ಕಳಿಸುವ ಮೂಲಕ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವು ಬ್ರ್ಯಾಂಡ್‌ಗಳು ಅಥವಾ ಮೌತ್‌ವಾಶ್ ನಿಮ್ಮ ಬಾಯಿಯಲ್ಲಿರುವ ಲಾಲಾರಸದಲ್ಲಿ ಕೆಲವು ನಿಮಿಷಗಳವರೆಗೆ ಕೆಲವು ಸೂಕ್ಷ್ಮಜೀವಿಗಳನ್ನು ನಿವಾರಿಸುತ್ತದೆಯಷ್ಟೇ. ಆದರೆ, ಅವು ನಿಮ್ಮನ್ನು ಕೊರೊನಾದಿಂದ ರಕ್ಷಿಸುತ್ತದೆ ಎಂಬುದು ಸುಳ್ಳು.

    12. ಯುವಜನಾಂಗಕ್ಕೂ ಕೊರೊನಾ ತಗುಲಲಿದೆ
    ಎಲ್ಲ ವಯೋಮಾನದ ಜನರಿಗೂ ಕೊರೊನಾ ವೈರಸ್​ ಸೋಂಕು ತಗುಲಲಿದೆ. ಹಿರಿಯ ನಾಗರಿಕರು ಹಾಗೂ ಅನಾರೋಗ್ಯ ಪೀಡಿತರಿಗೆ ಇದರಿಂದ ಹೆಚ್ಚಿಗೆ ತೊಂದರೆಯಾಗಲಿದೆ. ಹೀಗಾಗಿ ಎಲ್ಲ ವಯೋಮಾನದವರು ಆದಷ್ಟು ಜಾಗ್ರತೆ ವಹಿಸಬೇಕೆಂದು ಡಬ್ಲ್ಯುಎಚ್ಒ ಸಲಹೆ ನೀಡಿದೆ.

    13. ರೋಗನಿರೋಧಕಗಳಿಂದ ಕೊರೊನಾ ವೈರಸ್​ ಗುಣವಾಗದು
    ಕೊರೊನಾ ಒಂದು ವೈರಸ್​. ಆದ್ದರಿಂದ ಮುಂಜಾಗ್ರತ ಕ್ರಮವಾಗಿ ಚಿಕಿತ್ಸೆಯಲ್ಲಿ ರೋಗನಿರೋಧಕಗಳನ್ನು ಉಪಯೋಗಿಸಲಾಗದು. . ರೋಗನಿರೋಧಕಗಳು ಬ್ಯಾಕ್ಟಿರೀಯಾ ಸೋಂಕಿನ ವಿರುದ್ಧ ಮಾತ್ರ ಕೆಲಸ ಮಾಡುತ್ತದೆ. ಕೊರೊನಾ ವೈರಸ್​ನಿಂದ ಒಂದು ವೇಳೆ ಆಸ್ಪತ್ರೆಗೆ ದಾಖಲಾದರೆ, ಬ್ಯಾಕ್ಟಿರೀಯಾ ಸೋಂಕು ಸಹ ತಗುಲುವುದರಿಂದ ರೋಗನಿರೋಧಕಗಳನ್ನು ನೀಡುತ್ತಾರೆ ಎಂದು ಡಬ್ಲ್ಯುಎಚ್ಒ ಹೇಳಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts