More

    ವಿಸ್ಟ್ರಾನ್ ಕಂಪನಿಯಲ್ಲಿ ದಾಂಧಲೆ, ಗುಂಪು ಚದುರಿಸಲು ಲಾಠಿ ಪ್ರಹಾರ

    ಕೋಲಾರ/ನರಸಾಪುರ: ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ತೈವಾನ್ ಮೂಲದ ಐಫೋನ್ ತಯಾರಿಕಾ ಘಟಕ ವಿಸ್ಟ್ರಾನ್ ಇನ್​ಫೋ ಕಾಮ್ ಪ್ರೈ. ಲಿಮಿಟೆಡ್​ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೂರಾರು ಕಾರ್ವಿುಕರು ಏಜೆನ್ಸಿ ಸಂಸ್ಥೆಯವರು ಮೂರು ತಿಂಗಳಿಂದ ವೇತನ ನೀಡಿಲ್ಲವೆಂದು ಹಠಾತ್ ದಾಂಧಲೆ ನಡೆಸಿದ್ದರಿಂದ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿಗೆ ಹಾನಿಯಾಗಿದೆ. 40 ಸಾವಿರಕ್ಕೂ ಹೆಚ್ಚು ಐಫೋನ್​ಗಳು ನಾಶವಾಗಿವೆ.

    ತೆಲುಗು, ತಮಿಳು ಮತ್ತು ಕನ್ನಡ ಮಾತನಾಡುತ್ತಿದ್ದ ಯುವಕರು ಕೃತ್ಯ ನಡೆಸಿ ಸಿಸಿ ಕ್ಯಾಮರಾಗಳನ್ನು ಧ್ವಂಸಗೊಳಿಸಿದ್ದಾರೆ. ಭದ್ರತಾ ಸಿಬ್ಬಂದಿ ಉದ್ರಿಕ್ತರನ್ನು ನಿಯಂತ್ರಿಸಲಾಗದೆ ಕೈಚೆಲ್ಲಿ ನಿಂತಿದ್ದರು ಎನ್ನಲಾಗಿದೆ. ವಿಷಯ ತಿಳಿದ ವೇಮಗಲ್ ಪೊಲೀಸರು ಅಗ್ನಿಶಾಮಕ ದಳದೊಂದಿಗೆ ಸ್ಥಳಕ್ಕೆ ಹೋಗುವಷ್ಟರಲ್ಲಿ ಘಟಕ ರಣರಂಗವಾಗಿತ್ತು. ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಗುಂಪು ಚದುರಿಸಲು ಹರಸಾಹಸ ಮಾಡಿ ಪರಿಸ್ಥಿತಿ ಹತೋಟಿಗೆ ತರಲು ಹೆಚ್ಚುವರಿ ಪೊಲೀಸರನ್ನು ಕರೆಸುವ ವೇಳೆಗೆ ಸಾವಿರಾರು ಕೋಟಿ ರೂ. ಆಸ್ತಿ ನಾಶವಾಗಿತ್ತು.

    ನಡೆದಿದ್ದೇನು? ವೇತನ ಪಾವತಿಸಬೇಕು, ಕೆಲಸದ ಅವಧಿಯನ್ನು 12 ಗಂಟೆ ಬದಲು 8 ಗಂಟೆಗೆ ನಿಗದಿಪಡಿಸಿ ವಾರಕ್ಕೆ 5ರಿಂದ 6 ದಿನ ಕೆಲಸ ಮಾಡಿಸಿಕೊಳ್ಳಬೇಕು, ಕಾರ್ವಿುಕರಿಗೆ ನೇಮಕಾತಿ ಪತ್ರ, ವಾಹನ ಸೌಕರ್ಯ, ಗುರುತಿನ ಚೀಟಿ ಇನ್ನಿತರ ಸವಲತ್ತು ಕಲ್ಪಿಸಬೇಕೆನ್ನುವುದು ಕಾರ್ವಿುಕರ ಬೇಡಿಕೆಯಾಗಿತ್ತು. ಅದನ್ನು ಈಡೇರಿಸಿಲ್ಲವೆಂಬ ಕೋಪದಿಂದ ಶುಕ್ರವಾರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದ್ದ ಕಾರ್ವಿುಕರು ಶನಿವಾರ ಕೆಲಸಕ್ಕೆ ಹಾಜರಾದ ಬೆಳಗ್ಗೆ ಪಾಳಿಯ ಸಹಪಾಠಿಗಳನ್ನು ಕೆಲಸಕ್ಕೆ ಇಳಿಯದಂತೆ ಸೂಚಿಸಿ ಏಕಾಏಕಿ ಹಿಂಸಾಚಾರಕ್ಕಿಳಿದರು. ಸ್ವಾಗತ ಕಚೇರಿ, ಐಫೋನ್ ಉತ್ಪಾದಿಸುವ ವಿವಿಧ ಘಟಕ, ಸ್ಟೋರ್ ರೂಮ್ ಆಡಳಿತ ಕಚೇರಿ ಮೇಲೆ ದಾಳಿ ಮಾಡಿ ಯಂತ್ರೋಪಕರಣ, ಪೀಠೋಪಕರಣ, ಕಟ್ಟಡದ ಗಾಜುಗಳನ್ನು ದೊಣ್ಣೆ, ಕಬ್ಬಿಣ ರಾಡುಗಳಿಂದ ಒಡೆದು ನಾಶಪಡಿಸಿದರು. ವಾಹನಗಳಿಗೆ ಬೆಂಕಿ ಹಚ್ಚಿದರು. ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಕೆಜಿಎಫ್ ಮತ್ತು ಚಿಕ್ಕಬಳ್ಳಾಪುರದಿಂದ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡು ಗುಂಪು ಚದುರಿಸಲು ಅಖಾಡಕ್ಕೆ ಇಳಿದರು. ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ಕಾರ್ವಿುಕರು ಅಕ್ಕ-ಪಕ್ಕದ ನೀಲಗಿರಿ ತೋಪು, ಪೊದೆಯಲ್ಲಿ ಅವಿತುಕೊಂಡರು.

    ಧಿಡೀರ್ ಘಟನೆಯಿಂದ ಮಹಿಳಾ ಕಾರ್ವಿುಕರು ಮನೆಗೆ ವಾಪಸ್ ಹೋಗಲು ವಾಹನಗಳಿಲ್ಲದೆ ಪರದಾಡಿದರು. ಇಡೀ ಘಟಕದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ವಣವಾಗಿದೆ.

    ಐಜಿಪಿಯಿಂದ ಪರಿಶೀಲನೆ: ಕೇಂದ್ರ ವಲಯ ಐಜಿಪಿ ಸೀಮಂತ ಕುಮಾರ್ ಸಿಂಗ್ ಕಂಪನಿಗೆ ಭೇಟಿ ನೀಡಿ ಪರಿಶೀಲಿಸಿದರು. ತಪ್ಪಿತಸ್ಥರು ಯಾರೇ ಇರಲಿ ಕ್ರಮ ಕೈಗೊಳ್ಳುತ್ತೇವೆ, ಹೊರಗಿನವರ ಪಿತೂರಿ ಬಗ್ಗೆಯೂ ತನಿಖೆ ನಡೆಯಲಿದೆ, ಪೊಲೀಸರ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ, 10 ತಂಡ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದೆ ಎಂದು ತಿಳಿಸಿದ್ದಾರೆ.

    110ಕ್ಕೂ ಹೆಚ್ಚು ಜನ ವಶಕ್ಕೆ: ಪ್ರಥಮ ಮಾಹಿತಿ ಆಧರಿಸಿ 110ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೆಲವರು ಕೈಗೆ ಸಿಕ್ಕಷ್ಟು ಫೋನ್​ಗಳನ್ನು ದೋಚಿದ್ದಾರೆಂದು ತಿಳಿದು ಬಂದಿದೆ.

    ಮೇಕ್ ಇನ್ ಇಂಡಿಯಾದಡಿ ಕಂಪನಿ ಸ್ಥಾಪನೆ: ಕೈಗಾರಿಕಾ ಪ್ರವೇಶದ 43 ಎಕರೆಯಲ್ಲಿ 2900 ಕೋಟಿ ರೂ. ವೆಚ್ಚದಲ್ಲಿ ಐಫೋನ್ ಎಸ್​ಇ ಉತ್ಪನ್ನ ತಯಾರಿಸಲು ಘಟಕ ಸ್ಥಾಪಿಸಲಾಗಿದೆ. ಸ್ಮಾರ್ಟ್​ಫೋನ್, ಅಂತರ್ಜಾಲ, ಜೈವಿಕ ತಂತ್ರಜ್ಞಾನ ಸಂಬಂಧಿ ಉಪಕರಣ ಉತ್ಪಾದಿಸಲಾಗುತ್ತದೆ. 10,000 ಉದ್ಯೋಗ ಸೃಷ್ಟಿಸುವುದು ಕಂಪನಿ ಉದ್ದೇಶ. ಮೊದಲ ಹಂತದಲ್ಲಿ 5000 ನೌಕರರನ್ನು ನೇಮಿಸಿಕೊಳ್ಳಲು ಮುಂದಾಗಿ, ಈಗಾಗಲೆ ಡಿ ಗ್ರೂಪ್, ಡಿಪ್ಲೊಮಾ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ಹಂತದಲ್ಲಿ 2700 ಮಂದಿಯನ್ನು ನೇಮಕ ಮಾಡಿಕೊಂಡು ಉದ್ಯೋಗಿಗಳಿಗೆ ಪೂರ್ವ ತರಬೇತಿ ನೀಡುತ್ತಿದೆ.

    ಆಡಳಿತ ಮಂಡಳಿ ಎಡವಟ್ಟು: 

    ಕಂಪನಿ ಆಡಳಿತ ಮಂಡಳಿ ತಾಂತ್ರಿಕ ಮತ್ತು ಇನ್ನಿತರ ಸಿಬ್ಬಂದಿಯನ್ನು ಅನುಕೂಲಕ್ಕೆ ತಕ್ಕಂತೆ ಕಡಿಮೆ ಸಂಖ್ಯೆಯಲ್ಲಿ ನೇಮಿಸಿಕೊಂಡು ಉಳಿದ ನೇಮಕಾತಿಯನ್ನು ಮ್ಯಾನ್ ಪವರ್ ಪರವಾನಗಿ ಹೊಂದಿರುವ ಎರಡು ಏಜೆನ್ಸಿಗಳಿಗೆ ವಹಿಸಿದ್ದೇ ಈ ಪರಿಸ್ಥಿತಿಗೆ ಕಾರಣವೆಂಬುದು ಕಾರ್ವಿುಕ ಸಂಘಟನೆಗಳ ಆರೋಪವಾಗಿದೆ. ಈ ಏಜೆನ್ಸಿಗಳು ಈಗಾಗಲೆ 2 ಸಾವಿರಕ್ಕೂ ಅಧಿಕ ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್ ಮಾಡಿರುವ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ನೇಮಿಸಿಕೊಂಡಿವೆ. ಅಭ್ಯರ್ಥಿಗಳು ಏಜೆನ್ಸಿ ಕಡೆಯವರ ಷರತ್ತು ಪಾಲಿಸಲಾಗದೆ ಬೇರೆಡೆ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಕೆಲಸದ ಅನಿವಾರ್ಯತೆಯಿಂದ ದಿನಗೂಲಿ ಆಧಾರದ ಮೇಲೆ ಸೇರಿರುವ 18 ವರ್ಷ ಮೇಲ್ಪಟ್ಟವರು ದಿನಕ್ಕೆ 12 ಗಂಟೆ ರೀತಿಯಲ್ಲಿ ವಾರಕ್ಕೆ 5 ದಿನ ಕೆಲಸ ಮಾಡುತ್ತಿದ್ದಾರೆ.

    ಬಹುತೇಕರಿಗೆ ನೇಮಕಾತಿ ಪತ್ರ, ಗುರುತಿನ ಚೀಟಿ, ಸಾರಿಗೆ ವ್ಯವಸ್ಥೆ ಕಲ್ಪಿಸಿಲ್ಲ. ಆದರೆ ಕೆಲಸಕ್ಕೆ ಸೇರಿಸಿಕೊಂಡ ಗುತ್ತಿಗೆದಾರರು ಸಕಾಲಕ್ಕೆ ವೇತನ ನೀಡದೆ ಸತಾಯಿಸಿ ಶೋಷಣೆ ಮಾಡುತ್ತಿರುವುದರಿಂದ ಕಾನೂನು ಕೈಗೆತ್ತಿಕೊಂಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.

    ಜಿಲ್ಲೆಗೆ ಕಪು್ಪ ಚುಕ್ಕೆ: ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಕೈಗಾರಿಕೆ ಸ್ಥಾಪಿಸಲಾಗಿದೆ. ಘಟನೆ ಜಿಲ್ಲೆಗೆ ಮಾತ್ರವಲ್ಲ ರಾಜ್ಯಕ್ಕೇ ಕಪ್ಪು ಚುಕ್ಕೆ. ಕಾರ್ವಿುಕರು ಸಮಸ್ಯೆ ಹೇಳಿಕೊಳ್ಳಲು ಅನೇಕ ಮಾರ್ಗವಿತ್ತು. ಸಂಬಳ ನೀಡಿಲ್ಲವೆಂಬ ಕಾರಣಕ್ಕೆ ಈ ರೀತಿ ಮಾಡಿದ್ದು ತಪ್ಪು, ಜಿಲ್ಲೆಯ ಕೈಗಾರಿಕೆಗಳಲ್ಲಿ ಆಡಳಿತ ವರ್ಗ ಮತ್ತು ಕಾರ್ವಿುಕರ ನಡುವೆ ಸಮನ್ವಯತೆ ಕಾಪಾಡಲು ಸಂಬಂಧಪಟ್ಟವರು ಸಭೆ ನಡೆಸಿ ಮುಂದೆ ಹೀಗಾಗದಂತೆ ಎಚ್ಚರವಹಿಸಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಸೂಚಿಸಿದ್ದಾರೆ.

    ಭದ್ರತಾ ಸಿಬ್ಬಂದಿ ವೈಫಲ್ಯ: ಕಂಪನಿ ಭದ್ರತಾ ಸಿಬ್ಬಂದಿ ಕಾರ್ವಿುಕರ ಚಲನವಲನದ ಮೇಲೆ ನಿಗಾವಹಿಸಿದ್ದರೆ ಕೃತ್ಯ ತಪ್ಪಿಸಬಹುದಿತ್ತು. ಜತೆಗೆ ಕೆಲ ವಿಭಾಗದ ಅಧಿಕಾರಿಗಳು ತಮ್ಮ ತಮ್ಮಲ್ಲಿನ ಭಿನ್ನಾಭಿಪ್ರಾಯದಿಂದ ಘಟನೆ ನಡೆಯುತ್ತಿದ್ದರೂ ಕಾರ್ವಿುಕರನ್ನು ಸಮಾಧಾನಪಡಿಸದೆ ಮೌನಕ್ಕೆ ಜಾರಿದ್ದರು ಎನ್ನಲಾಗಿದೆ.

    ಅಧಿಕಾರಿಗಳ ಭೇಟಿ: ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭೇಟಿ ನೀಡಿ ಏನೇ ಸಮಸ್ಯೆ ಇದ್ದರೂ ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಅವಕಾಶವಿತ್ತು. ಕೆಲವರು ಮಾಡಿದ ತಪ್ಪಿಗೆ ಅಮಾಯಕರು ಬಲಿಯಾಗುತ್ತಾರೆ, ಕಂಪನಿ ಆಡಳಿತ ಮಂಡಳಿ ಇಷ್ಟು ದೊಡ್ಡ ಘಟನೆ ನಡೆಯುವುದಕ್ಕೆ ಆಸ್ಪದ ನೀಡಬೇಕಿರಲಿಲ್ಲ, ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೆ ನಷ್ಟ ತಪ್ಪಿಸಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೋಲಾರ ತಹಸೀಲ್ದಾರ್ ಶೋಭಿತಾ ಭೇಟಿ ನೀಡಿ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳಿಂದ ಕೆಲ ಪ್ರಮುಖ ಮಾಹಿತಿ ಕಲೆ ಹಾಕಿದರು.

    ಪಿಎಂ ಕಚೇರಿಯಿಂದ ಸೂಚನೆ: ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ, ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಕೇಳಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ಜಿಲ್ಲಾಧಿಕಾರಿ ಸತ್ಯಭಾಮ ಅವರಿಗೆ ಕರೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದಾರೆ. ಸ್ಥಳಕ್ಕೆ ಶಾಸಕರಾದ ಶ್ರೀನಿವಾಸಗೌಡ, ಕೆ.ವೈ ನಂಜೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts