More

    ಕೆಲಸ ಮಾಡದೆ ಸಮಯ ವ್ಯರ್ಥವಾದರೆ ಸಹಿಸಲಾರೆ

    ಹುಕ್ಕೇರಿ: ಕ್ಷೇತ್ರದ ಜನರ ಕಷ್ಟಗಳಿಗೆ ಪರಿಹಾರ ಒದಗಿಸುವ ಮೂಲಕ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇನೆ. ಹಾಗಾಗಿಯೇ ಮತದಾರರು ನನ್ನನ್ನು 8 ಬಾರಿ ಚುನಾವಣೆಯಲ್ಲಿ ಆಯ್ಕೆ ಮಾಡಿದ್ದಾರೆ. ಆದರೆ, ಕೆಲಸ ಮಾಡದೇ ಕಚೇರಿಯಲ್ಲಿ ಸಮಯ ವ್ಯರ್ಥ ಮಾಡುವ ಅಧಿಕಾರಿಗಳನ್ನು ಕಂಡರೆ ನಾನು ಸಹಿಸುವುದಿಲ್ಲ ಎಂದು ಶಾಸಕ ಉಮೇಶ ಕತ್ತಿ ಹೇಳಿದ್ದಾರೆ.

    ಸೋಮವಾರ ಸ್ಥಳೀಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
    ಪಟ್ಟಣದ ಹೊರವಲಯದ ಕ್ಯಾರಗುಡ್ಡದ 108 ಎಕರೆ ಪ್ರದೇಶದಲ್ಲಿ ಶಾಲಾ-ಕಾಲೇಜು, ಅಗ್ನಿಶಾಮಕ ದಳದ ಕಚೇರಿ ಆರಂಭಿಸಲಾಗಿದೆ. ಬಸ್ ಡಿಪೋ ಕಾಮಗಾರಿ ಚಾಲ್ತಿಯಲ್ಲಿದೆ ಎಂದರು.

    ಅಲ್ಲಿ ಸಸ್ಯಕಾಶಿ ನಿರ್ಮಾಣ ಮಾಡುವ ಕನಸು ನನ್ನದಾಗಿತ್ತು. ಆದರೆ, ಇದೇ ತಾಲೂಕಿನವರಾದ ವಲಯ ಅರಣ್ಯಾಧಿಕಾರಿ ಆರ್.ವಿ. ಕಾಂಬಳೆ ಕರ್ತವ್ಯ ವಿಮುಖರಾಗಿರುವುದು ಬೇಸರದ ಸಂಗತಿ. ಇದೇ ರೀತಿ ಕೆಲ ಅಧಿಕಾರಿಗಳು ಆಲಸಿಗಳಾಗಿರುವುದನ್ನು ಗಮನಿಸಿದ್ದೇನೆ. ಅಧಿಕಾರಿಗಳು ಈ ವರ್ತನೆಯಿಂದ ಹೊರಬರಬೇಕು. ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಕಳೆದ ವರ್ಷ ಮಳೆ ಹಾಗೂ ಪ್ರವಾಹದಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ಆರ್ಥಿಕ ನೆರವು ನೀಡಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಬಿದ್ದ ಮನೆಗಳ ಮರು ನಿರ್ಮಾಣ ಕಾರ್ಯ ಆಗುತ್ತಿಲ್ಲ. ತಾಲೂಕಾಡಳಿತ ತಕ್ಷಣವೇ ಬಿದ್ದ ಮನೆಗಳನ್ನು ನಿರ್ಮಿಸಿಕೊಳ್ಳಲು ಸಂತ್ರಸ್ತರಿಗೆ ಎಚ್ಚರಿಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದರು.

    ಮಾರ್ಚ್ ಒಳಗೆ ಪೂರ್ಣಗೊಳಿಸಿ

    ಮಾರ್ಚ್ ಅಂತ್ಯದೊಳಗೆ ಕಳೆದ ವರ್ಷ ನಿಗದಿಯಾಗಿದ್ದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಮುಂಬರುವ ವರ್ಷ ಕ್ಷೇತ್ರದ 70 ಗ್ರಾಮಗಳಲ್ಲಿ ಆಗಬೇಕಾದ ಜನಪರ ಮತ್ತು ಅಭಿವೃದ್ಧಿ ಕಾರ್ಯಗಳ ಪಟ್ಟಿ ಸಿದ್ಧ ಮಾಡಿಕೊಂಡು ಮುಂದಿನ ಸೋಮವಾರ ನಡೆಯುವ ಸಭೆಯಲ್ಲಿ ನನಗೆ ಒಪ್ಪಿಸಬೇಕು ಎಂದು ತಿಳಿಸಿದರು. ತಾಲೂಕು ಪಂಚಾಯಿತಿ ಇಒ ಮಹಾದೇವ ಬಿರಾದಾರ ಪಾಟೀಲ, ಗ್ರೇಡ್-2 ತಹಸೀಲ್ದಾರ್ ಕಿರಣ ಬೆಳವಿ, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts