More

    ಕ್ರಿಯಾಯೋಜನೆಯಂತೆ ನಡೆಯದ ಕಾಮಗಾರಿ – ಸಂಗಮ-ಸಂಕೇಶ್ವರ ರಾಜ್ಯ ಹೆದ್ದಾರಿ ನಿರ್ಮಾಣ

    ಲೋಕಾಪುರ: ಸಂಗಮ-ಸಂಕೇಶ್ವರ ರಾಜ್ಯ ಹೆದ್ದಾರಿ 44ರಲ್ಲಿ ಲೋಕಾಪುರದಿಂದ ಯಾದವಾಡ ಮಾರ್ಗದ ಮುಧೋಳ ತಾಲೂಕಿನ ಹದ್ದಿನವರೆಗಿನ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರು ಕ್ರಿಯಾಯೋಜನೆಯಂತೆ ನಿರ್ಮಿಸುತ್ತಿಲ್ಲ ಎಂದು ಬಿಜೆಪಿ ಮುಖಂಡ ಲೋಕಣ್ಣ ಕತ್ತಿ ಆರೋಪಿಸಿದರು.

    ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಮುಧೋಳ ಮತಕ್ಷೇತ್ರಕ್ಕೆ ನೂರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿಪಡಿಸಲು ಶ್ರಮಿಸುತ್ತಿದ್ದಾರೆ. ಆದರೆ ಗುತ್ತಿಗೆದಾರರು ಸರಿಯಾಗಿ ಕಾಮಗಾರಿ ಮಾಡದೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ದೂರಿದರು.

    14.8 ಕಿ.ಮೀ. ರಸ್ತೆಯನ್ನು 33 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಭಾಗದಲ್ಲಿ ದಾಲ್ಮಿಯಾ ಸಿಮೆಂಟ್ ಮತ್ತು ಜೆ.ಕೆ.ಸಿಮೆಂಟ್ ಗಣಿಗಾರಿಕೆ ಇರುವುದರಿಂದ ಇಲ್ಲಿ ಪ್ರತಿದಿನ ಬೃಹತ್ ಗಾತ್ರದ ವಾಹನಗಳು ಓಡಾಡುತ್ತವೆ. ಕಾಮಗಾರಿಯಲ್ಲಿ ದೊಡ್ಡ ಗಾತ್ರದ ಕಲ್ಲುಗಳನ್ನು ಬಳಸಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ರಸ್ತೆ ಬೇಗ ಹದಗೆಟ್ಟು ಹೋಗುತ್ತದೆ. ಕೈಗೆತ್ತಿಕೊಂಡ ಕಾಮಗಾರಿಯೂ ಕ್ರಿಯಾ ಯೋಜನೆಯಂತೆ ನಡೆಯುತ್ತಿಲ್ಲ. ಕಾಮಗಾರಿ ಪ್ರಾರಂಭಿಸುವ ಮೊದಲು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಗುತ್ತಿಗೆದಾರರು ಮನಬಂದಂತೆ ಕಾಮಗಾರಿ ಪ್ರಾರಂಭಿಸಿದ್ದಾರೆ ಎಂದರು.

    ಹಲವು ಬಾರಿ ಸಂಚಾರಕ್ಕೆ ತೊಡಕಾಗಿ ಜನಸಾಮಾನ್ಯರು ರಸ್ತೆ ದಾಟಲು ಹರಸಾಹಸ ಪಡಬೇಕಾಗಿದೆ. ವಾಹನ ಸವಾರರ ಸಮಸ್ಯೆ ಹೇಳತೀರದು. ಹೆಚ್ಚು ವಾಹನಗಳು ಸಂಚರಿಸುತ್ತವೆ. ರಸ್ತೆ ದಾಟುವಾಗ ಹಲವರಿಗೆ ವಾಹನಗಳು ಡಿಕ್ಕಿ ಹೊಡೆದಿರುವ ಉದಾಹರಣೆಯೂ ಇದೆ. ರಸ್ತೆ ಕಾಮಗಾರಿ ಕುರಿತು ವಾಹನ ಚಾಲಕರಿಗೆ ಯಾವುದೇ ಸೂಚನಾ ಲಕಗಳನ್ನು ಅಳವಡಿಸದ ಕಾರಣ ಅಪಘಾತಗಳು ಸಂಭವಿಸಿವೆ. ರಸ್ತೆಯ ಎರಡೂ ಬದಿಗೆ ಯಾವುದೇ ಸೂಚನಾ ಲಕ ಅಳವಡಿಸಿಲ್ಲ. ವಾಹನ ಚಾಲಕರು ವೇಗವಾಗಿ ಬರುವುದರಿಂದ ಅಪಘಾತ ಸಂಭವಿಸುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

    ಮುಖಂಡರಾದ ಹನುಮಂತ ಕುಡಚಿ, ಶಂಕರ ರುದ್ರಾಕ್ಷಿ, ಶೇಖರ ಮಲಾಬದಿಮಠ, ಸಗರೆಪ್ಪ ಯಾದವಾಡ ಇತರರಿದ್ದರು.

    ಸಂಗಮ-ಸಂಕೇಶ್ವರ ರಾಜ್ಯ ಹೆದ್ದಾರಿ ಕಾಮಗಾರಿಯಲ್ಲಿ ಮುರಂ ಹಾಕುವಲ್ಲಿ ದೊಡ್ಡ ಗಾತ್ರದ ಕಲ್ಲುಗಳನ್ನು ಹಾಕಿ ಕಾಮಗಾರಿ ಪ್ರಾರಂಭಿಸಿರುವ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಮೌನ ವಹಿಸಿರುವುದು ವಿಷಾದನೀಯ. ಕೂಡಲೇ ಕಾಮಗಾರಿ ತಡೆಹಿಡಿದು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಲೋಕಣ್ಣ ಕತ್ತಿ, 
    ಬಿಜೆಪಿ ಮುಖಂಡ, ಲೋಕಾಪುರ
    ರಸ್ತೆ ಕಾಮಗಾರಿಯಲ್ಲಿ ಮುರಂ ಹಾಕಿದ ದೊಡ್ಡ ಕಲ್ಲುಗಳನ್ನು ತೆಗೆದು ಸಣ್ಣ ಗಾತ್ರದ ಖಡಿಗಳನ್ನು ಬಳಸಲು ಸೂಚಿಸಲಾಗುವುದು. ಗುತ್ತಿಗೆದಾರರಿಗೆ ಕ್ರಿಯಾಯೋಜನೆ ಪ್ರಕಾರ ಗುಣಮಟ್ಟದ ಕಾಮಗಾರಿ ಮಾಡಲು ತಿಳಿಸಲಾಗುವುದು. 
    ಎಸ್.ಎಸ್.ಸಾವನ್, 
    ಪಿಡಬ್ಲೂಡಿ, ಬಾಗಲಕೋಟೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts