More

    ವರ್ಗಾವಣೆ ವಿರುದ್ಧ ಗೆದ್ದ ರವಿಚಂದ್ರ

    ಮಂಗಳೂರು: ಉಪವಿಭಾಗಾಧಿಕಾರಿ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಪೈಪೋಟಿ ನಡೆದು ಕೊನೆಗೂ ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಹಿಂದೆ ಎಸಿ ಆಗಿದ್ದ ರವಿಚಂದ್ರ ನಾಯಕ್ ಅವರೇ ಕೊನೆಗೂ ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ.

    ಕೆಎಎಸ್ ದರ್ಜೆಯ ಇಬ್ಬರು ಅಧಿಕಾರಿಗಳು ಈ ಹುದ್ದೆಗಾಗಿ 2019ರ ಡಿಸೆಂಬರ್‌ನಿಂದಲೇ ಕಾನೂನು ಹೋರಾಟದಲ್ಲಿದ್ದಾರೆ. ಈ ಮೊದಲು ಸಹಾಯಕ ಕಮಿಷನರ್ ಹುದ್ದೆಯಲ್ಲಿದ್ದ ರವಿಚಂದ್ರ ನಾಯಕ್‌ರನ್ನು 2019ರ ಡಿ.11ರಂದು ಏಕಾಏಕಿ ವರ್ಗಾವಣೆಗೊಳಿಸಿ ಮದನ್ ಮೋಹನ್ ಅವರನ್ನು ನೇಮಿಸಲಾಗಿತ್ತು.

    ಇದನ್ನು ಪ್ರಶ್ನಿಸಿ ರವಿಚಂದ್ರ ಕೆಎಟಿಗೆ ದೂರು ಸಲ್ಲಿಸಿದ್ದರು. ತೀರ್ಪು ಅವರ ಪರವಾಗಿ ಬಂದಿತ್ತು. ಕೆಎಟಿ ತೀರ್ಪನ್ನು ಪ್ರಶ್ನಿಸಿ ಮದನ್ ಮೋಹನ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಅದು ಇತ್ತೀಚೆಗಷ್ಟೇ ತಿರಸ್ಕೃತಗೊಂಡಿದ್ದು ರವಿಚಂದ್ರ ನಾಯಕ್ ಅವರನ್ನು ಮತ್ತೆ ಮಂಗಳೂರು ಉಪವಿಭಾಗಾಧಿಕಾರಿಯಾಗಿ ನೇಮಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ಅದರ ಭಾಗವಾಗಿ ಸರ್ಕಾರ ಮಂಗಳವಾರ ಆದೇಶ ನೀಡಿದ್ದು, ಮಂಗಳೂರು ಸ್ಮಾರ್ಟ್ ಸಿಟಿಯಲ್ಲಿ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ರವಿಚಂದ್ರ ಅವರನ್ನು ತಕ್ಷಣದಿಂದ ಅನ್ವಯವಾಗುವಂತೆ ಮಂಗಳೂರು ಎಸಿ ಆಗಿ ವರ್ಗಾಯಿಸಿದೆ. ಮದನ್ ಮೋಹನ್ ಅವರಿಗೆ ಯಾವುದೇ ಜಾಗ ತೋರಿಸಿಲ್ಲ.

    ಇದರ ನಡುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದಲ್ಲಿ ಭೂಸ್ವಾಧೀನಾಧಿಕಾರಿಯಾಗಿರುವ ರವಿಚಂದ್ರ ನಾಯಕ್ ಪತ್ನಿ ಮೇಘನಾ ಅವರನ್ನು ಕಲಬುರ್ಗಿಗೆ ವರ್ಗಾಯಿಸಲಾಯಿತ್ತು, ಬುಧವಾರ ಈ ವರ್ಗಾವಣೆಯನ್ನು ಶಿವಮೊಗ್ಗಕ್ಕೆ ಬದಲಾಯಿಸಲಾಗಿದೆ.
    2018ರ ಆ.17ರಂದು ಮಂಗಳೂರು ಎಸಿ ಆಗಿ ರವಿಚಂದ್ರ ಆಗಮಿಸಿದ್ದರು. ಆದರೆ ಕೇವಲ ಒಂದು ವರ್ಷದಲ್ಲಿ ಸಕಾರಣವಿಲ್ಲದೆ ವರ್ಗಾವಣೆ ಮಾರ್ಗಸೂಚಿಗೆ ವಿರುದ್ಧವಾಗಿ ತಮ್ಮನ್ನು ವರ್ಗಾಯಿಸಲಾಗಿದೆ ಎಂಬ ಅಂಶದ ಮೇಲೆ ಅವರು ಕೆಎಟಿ ಮೊರೆ ಹೋಗಿದ್ದರು. ಮದನ್ ಮೋಹನ್ ಮೋಹನ್ ಮಂಗಳೂರಿನಲ್ಲಿ ಅಧಿಕಾರ ವಹಿಸಿಕೊಳ್ಳುವ ವೇಳೆ ಇಬ್ಬರೂ ಅಧಿಕಾರಿಗಳಿಗೆ ಮಾತಿನ ಚಕಮಕಿಯೂ ನಡೆದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts