More

    ನರೇಗಾ ಕೆಲಸಕ್ಕಿಲ್ಲ ತೊಡಕು, ಉದ್ಯೋಗ ಖಾತ್ರಿ ಕೆಲಸದತ್ತ ಗ್ರಾಮೀಣ ಮಹಿಳೆಯರ ಒಲವು

    ಗಣೇಶ್ ಮಾವಂಜಿ ಸುಳ್ಯ
    ಇಲ್ಲಿ ಮಹಿಳೆಯರೇ ಹಾರೆ, ಪಿಕ್ಕಾಸು ಹಿಡಿದು ಗಂಡಸರಿಗೆ ಸರಿಸಮಾನವಾಗಿ ಕೆಲಸ ಮಾಡುತ್ತಾರೆ.. ರಸ್ತೆ ಅಭಿವೃದ್ಧಿ ಇರಲಿ, ತೋಡಿನ ಹೂಳೆತ್ತುವ ಕೆಲಸವಿರಲಿ ಅಥವಾ ತೋಟದ ಕೆಲಸವೇ ಇರಲಿ ಇಲ್ಲಿ ಮಹಿಳೆಯರು ಲವಲವಿಕೆಯಿಂದ ಕೆಲಸ ಮಾಡುತ್ತಾರೆ… ಬೆಳಗ್ಗೆ ತಮ್ಮ ಮನೆಯ ನಿತ್ಯದ ಕೆಲಸಗಳನ್ನು ಪೂರೈಸಿ ಸರಿಯಾಗಿ ಒಂಬತ್ತು ಗಂಟೆಯ ವೇಳೆಗೆ ನಿಗದಿಪಡಿಸಿದ ಕೆಲಸದ ಸ್ಥಳದಲ್ಲಿ ಹಾಜರಿದ್ದು ಎಡೆಬಿಡದೆ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.

    – ಇದು ಪ್ರಸ್ತುತ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಮಹಿಳೆಯರು ತಮ್ಮನ್ನು ತಾವು ತೊಡಗಿಸಿಕೊಂಡಿರುವ ಚಿತ್ರಣ. ಇತ್ತೀಚಿನ ವರ್ಷಗಳವರೆಗೆ ಈ ನರೇಗಾ ಯೋಜನೆಯಡಿ ಮಹಿಳೆಯರು ಕೆಲಸ ಮಾಡುತ್ತಿದ್ದುದು ತೀರಾ ಕಡಿಮೆ. ಆದರೆ, ಕಳೆದ ಬಾರಿ ಲಾಕ್‌ಡೌನ್ ಆದ ಸಂದರ್ಭ ಈ ಯೋಜನೆಯಡಿ ಪೂರೈಕೆಯಾಗುವ ಉದ್ಯೋಗ ಚೀಟಿಗೆ ಬೇಡಿಕೆ ಹೆಚ್ಚಾಗಿತ್ತು. ಈಗ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಮೂಡಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರುತ್ತಿದ್ದಾರೆ.

    ಈ ಯೋಜನೆಯಡಿ ಕೆಲಸ ಮಾಡುವವರು ಕೂಲಿ ಕಾರ್ಮಿಕರು ಮಾತ್ರ ಎಂದುಕೊಂಡರೆ ತಪ್ಪು. ಇಲ್ಲಿ ಕೆಲಸ ಮಾಡುವ ಮಹಿಳೆಯರು ಒಂದೊಮ್ಮೆ ಕಚೇರಿಯಲ್ಲಿ ಕೆಲಸ ಮಾಡಿದವರೂ ಆಗಿದ್ದಾರೆ. ಪಿಯುಸಿ, ಪದವಿ ಪೂರೈಸಿದವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಪೂರೈಸಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದವರೂ ಇದ್ದಾರೆ. ಲಾಕ್‌ಡೌನ್ ವೇಳೆ ಸುಮ್ಮನೆ ಮನೆಯಲ್ಲಿ ಕುಳಿತು ವಿನಾ ಕಾರಣ ಸಮಯ ಹಾಳು ಮಾಡುವುದು ಏಕೆಂದು ಹಾರೆ, ಪಿಕ್ಕಾಸು ಹಿಡಿಯಲು ಮನ ಮಾಡಿದವರೂ ಇಲ್ಲಿದ್ದಾರೆ.

    ಕರೊನಾ ಸೋಂಕು ತಡೆಯಲು ಲಾಕ್‌ಡೌನ್‌ನಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದ್ದರೂ ಕೃಷಿ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದ್ದು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಳ್ಳುವ ಕೆಲಸಗಳು ಕೃಷಿ ಚಟುವಟಿಕೆಗಳಿಗೆ ಪೂರಕವಾದ ಹಿನ್ನೆಲೆ ಉದ್ಯೋಗ ಖಾತ್ರಿ ಯೋಜನೆಯ ಕೆಲಸಗಳನ್ನು ಮಾಡಬಹುದು. ಈ ಕಾರಣದಿಂದ ಗ್ರಾಮೀಣ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೆಸರು ನೋಂದಣಿ ಮಾಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ.

    ಈ ಯೋಜನೆಯಡಿ ಪ್ರಸ್ತುತ ಮಂಡೆಕೋಲು ಗ್ರಾಮದ ಪಾತಿಕಲ್ಲು ಎಂಬಲ್ಲಿ ತೋಡಿನ ಹೂಳೆತ್ತುವ ಕಾರ್ಯದಲ್ಲಿ ನಿರತರಾಗಿದ್ದ ಮಹಿಳೆಯರ ಗುಂಪಲ್ಲಿ ಭವ್ಯಶ್ರೀ ಎಂಬಾಕೆ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪೂರೈಸಿದ್ದರೆ, ಸುಶ್ಮಿತಾ ಎಂಬುವರು ಎಂ.ಕಾಂ ವಿದ್ಯಾರ್ಥಿನಿ. ಲಾವಣ್ಯ ಬಿ.ಕಾಂ ಪೂರೈಸಿ ಕೆಲಸ ಹುಡುಕಾಟದಲ್ಲಿದ್ದಾರೆ. ದುಡಿದು ತಿನ್ನಲು ಯಾವ ಕೆಲಸವಾದರೇನು? ಗಳಿಕೆಯ ಮಾರ್ಗ ನ್ಯಾಯಯುತವಾಗಿದ್ದರೆ ಸಾಕು ಎಂಬುದು ಈ ಮಹಿಳೆಯರ ಅಭಿಪ್ರಾಯ.

    ನ್ಯಾಯಯುತವಾಗಿ ಮಾಡುವ ಯಾವುದೇ ಕೆಲಸ ಮಾಡಲು ಹಿಂಜರಿಕೆ ಇರಬಾರದು. ಕಲಿಕೆ ಎಂಬುದು ಕೇವಲ ಉದ್ಯೋಗ ಪಡೆದುಕೊಳ್ಳಲು ಮಾತ್ರ ಸೀಮಿತವಾದ ಪ್ರಕ್ರಿಯೆಯಾಗಿರದೆ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ದಾರಿಯೂ ಹೌದು. ನಿಗದಿತ ಗುರಿ ಮುಟ್ಟುವವರೆಗೆ ನ್ಯಾಯ ಮಾರ್ಗದಿಂದ ಕೈಗೊಳ್ಳುವ ಯಾವ ಕೆಲಸವನ್ನು ಅಪ್ಪಿಕೊಂಡರೂ ಅದರಿಂದ ಕೆಡುಕಿಲ್ಲ. ಕಷ್ಟದ ಕೆಲಸಗಳ ಅರಿವಿಲ್ಲದಿದ್ದರೆ, ಮುಂದೆ ಜೀವನದಲ್ಲಿ ಕಷ್ಟಗಳು ಬಂದಾಗ ಅದನ್ನು ಎದುರಿಸುವ ಎದೆಗಾರಿಕೆ ಬರಲಾರದು. ಹಾಗಾಗಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾಡುವ ಯಾವ ಕೆಲಸವನ್ನು ಮಾಡಲು ನನಗೆ ಯಾವುದೇ ಮುಜುಗರ ಇಲ್ಲ.
    -ಭವ್ಯಶ್ರೀ, ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾ

    ಕಳೆದ ಬಾರಿ ಮಂಡೆಕೋಲು ಗ್ರಾಮದ ಪೇರಾಲು ಎಂಬಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳೆಯರ ಗುಂಪೊಂದು ತೋಡಿನ ಹೂಳೆತ್ತುವ ಕಾಯಕದಲ್ಲಿ ತೊಡಗಿ ಯಶಸ್ಸು ಗಳಿಸಿತ್ತು. ಮಂಡೆಕೋಲು ಗ್ರಾಮದಲ್ಲಿ ಇದೇ ರೀತಿ ಐದು ಗುಂಪುಗಳು ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಿವಿಧ ಬಗೆಯ ಕೆಲಸಗಳಲ್ಲಿ ನಿರತವಾಗಿವೆ. ಸರ್ಕಾರ ನೂರು ದಿನಗಳ ಕೆಲಸದ ಬದಲು ಕನಿಷ್ಠ ವರ್ಷವೊಂದಕ್ಕೆ ಇನ್ನೂರು ದಿನಗಳ ಕೆಲಸಗಳನ್ನಾದರೂ ನೀಡಬೇಕು. ರಸ್ತೆ ಬದಿಯ ಚರಂಡಿ ಸ್ವಚ್ಛತೆ, ತೋಡು ಬದಿಗೆ ತಡೆಗೋಡೆ ನಿರ್ಮಾಣ ಮಾಡುವ ಕೆಲಸಗಳನ್ನು ಮಾಡಲು ಅವಕಾಶ ನೀಡಬೇಕು.
    -ವಿನುತಾ ಪಾತಿಕಲ್ಲು, ಅಧ್ಯಕ್ಷರು, ಮಂಡೆಕೋಲು ಗ್ರಾಮ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts