More

    ಉಳ್ಳಾಲದಲ್ಲಿ ‘ಸ್ವಚ್ಛ ವಾಹಿನಿ’ಗೆ ಮಹಿಳಾ ಸಾರಥ್ಯ

    ಅನ್ಸಾರ್ ಇನೋಳಿ ಉಳ್ಳಾಲ

    ಟೈಲರಿಂಗ್ ವೃತ್ತಿಯಲ್ಲಿ ತಿಂಗಳಿಗೆ ಬರುತ್ತಿದ್ದ ಸಾವಿರಾರು ರೂ.ಗಳ ಆದಾಯ ತೊರೆದ ಮಹಿಳೆಯೊಬ್ಬರು ಪ್ರಸ್ತುತ ತ್ಯಾಜ್ಯ ಸಾಗಾಟದ ‘ಸ್ವಚ್ಛ ವಾಹಿನಿ’ಗೆ ಚಾಲಕಿಯಾಗಿದ್ದಾರೆ. ಅವರಿಗೆ ಮತ್ತೋರ್ವ ಮಹಿಳೆ ಸಾಥ್ ನೀಡಿದ್ದು, ಮಹಿಳೆಯರಿಬ್ಬರು ತ್ಯಾಜ್ಯ ವಿಲೇಯಲ್ಲಿ ತೊಡಗಿರುವುದು ಉಳ್ಳಾಲ ತಾಲೂಕಿನಲ್ಲಿ ಪ್ರಥಮ ಪ್ರಯೋಗ!

    ಬಾಳೆಪುಣಿ ಗ್ರಾಮದಲ್ಲಿ ಇಂಥದ್ದೊಂದು ಪ್ರಯೋಗ ನಡೆದಿದೆ. ಗರಡಿಪಳ್ಳ ನಿವಾಸಿ ವಿದ್ಯಾ ಚಾಲಕಿಯಾಗಿದ್ದರೆ ಲತಾ ಎಂಬುವರು ಕಸ ಸಂಗ್ರಾಹಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾ ಟೈಲರ್ ಆಗಿದ್ದು, ತಿಂಗಳಿಗೆ ಕನಿಷ್ಠ 30 ಸಾವಿರ ರೂ. ಆದಾಯ ದಾಟುತ್ತಿತ್ತು. ಜನಶಿಕ್ಷಣ ಟ್ರಸ್ಟ್‌ನ ಸಕ್ರಿಯ ಸದಸ್ಯೆಯಾಗಿದ್ದು ಸ್ವಚ್ಛತಾ ಪ್ರೇರಕಿಯೂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಸಿಕ್ಕ ಶಿಕ್ಷಣ ಸೆಳೆತದಿಂದ ಉತ್ತಮ ಆದಾಯ ನೀಡುತ್ತಿದ್ದ ಟೇಲರ್ ವೃತ್ತಿ ತೊರೆದು ಸ್ವಚ್ಛ ವಾಹಿನಿಯ ಸಾರಥಿಯಾಗಿದ್ದಾರೆ.

    ಫಲ ನೀಡಿದ ಚಾಲನಾ ತರಬೇತಿ

    ಮುಡಿಪುವಿನಲ್ಲಿರುವ ಜನಶಿಕ್ಷಣ ಟ್ರಸ್ಟ್ ಮಹಿಳಾ ಸ್ವಾವಲಂಬಿ ಬದುಕಿಗೆ ನಿರಂತರ ಪ್ರೇರಣೆ ನೀಡುತ್ತ ಬಂದಿದೆ. ಇಲ್ಲಿ ಶಿಕ್ಷಣ ಜ್ಞಾನ, ಯೋಗ, ಟೇಲರಿಂಗ್, ಮಲ್ಲಿಗೆ ಮತ್ತು ಇತರ ಕೃಷಿ ಹೀಗೆ ನಿರಂತರ ತರಬೇತಿ ನೀಡಿ ಸ್ವ ಉದ್ಯೋಗಕ್ಕೆ ಪ್ರೇರಣೆ ನೀಡಲಾಗುತ್ತಿದೆ. ಜತೆಗೆ ಸ್ವಚ್ಛತೆ ಸಂಬಂಧಿ ಜಾಗೃತಿ, ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಪ್ಲಾಸ್ಟಿಕ್‌ನಿಂದ ಆಗುವ ಅನಾಹುತಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸುತ್ತ ಬರಲಾಗಿದ್ದು ಸಾವಿರಾರು ಮಂದಿಯ ಜೀವನ ಶೈಲಿಯನ್ನೇ ಬದಲಾಯಿಸಿದೆ. ನೂರಾರು ಮಂದಿ ಸ್ವಚ್ಛತಾ ಪ್ರೇರಕರಾಗಿ ಸ್ವ ಇಚ್ಛೆಯಿಂದ ಕಾರ್ಯಕರ್ತರಾಗಿ ಜನತೆಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅವರ ಪೈಕಿ ವಿದ್ಯಾ ಮತ್ತು ಲತಾ ಕೂಡ ಸೇರಿದ್ದಾರೆ.

    ಬಾಳೆಪುಣಿ ಗ್ರಾಮದಲ್ಲಿ ಸ್ವಚ್ಛ ಸಂಕೀರ್ಣ ಆರಂಭಗೊಂಡ ಸಂದರ್ಭ ಉದ್ಯಮಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಘಟಕ ನಿರ್ವಹಣೆ ಆರಂಭಿಸಿದರೂ ಅಧಿಕಾರಿಗಳ ನಿರ್ಲಕ್ಷೃದ ಪರಿಣಾಮ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಇದರಿಂದ ಬೇಸತ್ತ ಸಮಿತಿ ಅಧ್ಯಕ್ಷ ಇಬ್ರಾಹಿಂ ತಪ್ಷಿಯಾ ಅವರು ರಾಜಿನಾಮೆ ನೀಡಿ ಹೊರಬಂದಿದ್ದು ಈಗ ಇತಿಹಾಸ.

    ನಂತರದ ದಿನಗಳಲ್ಲಿ ಘಟಕ ಸೊರಗಿದ್ದು ಮತ್ತೆ ಚಿಗಿತುಕೊಳ್ಳುವಂತೆ ಮಾಡುವಲ್ಲಿ ಜನಶಿಕ್ಷಣ ಟ್ರಸ್ಟ್ ಪಾತ್ರ ಮಹತ್ವದ್ದು. ಸ್ವ ಉದ್ಯೋಗ ತರಬೇತಿಯಲ್ಲಿ ವಾಹನ ಚಾಲನೆಯೂ ಇದ್ದು ಈ ಬಾರಿ ವಿದ್ಯಾ ಮತ್ತು ಲತಾ ನಾಲ್ಕು ತಿಂಗಳ ಹಿಂದೆ ತರಬೇತಿ ಪಡೆದರು. ಬಳಿಕ ವಿದ್ಯಾ ಅವರು ಕೆಲವು ದಿನ ಸ್ವಚ್ಛವಾಹಿನಿ ಚಲಾಯಿಸಿ ಪೂರ್ಣ ಪ್ರಮಾಣದ ಚಾಲಕಿಯಾದರು. ಲತಾ ಅವರಿಗೆ ಬೆಂಬಲವಾಗಿ ನಿಂತರು.

    ಮಾದರಿ ಮಹಿಳೆಯರು

    ಕಸ ಸಂಗ್ರಹ ವಾಹನ ಚಾಲಕ, ನಿರ್ವಾಹಕನಿಗೆ ಗ್ರಾಪಂ ನೀಡುವ ವೇತನ ಕಡಿಮೆ ಎನ್ನುವ ಅಪವಾದವಿದೆ. ಈ ಕಾರಣಕ್ಕೆ ಸಿಬ್ಬಂದಿ ಕೊರತೆ ಸಾಮಾನ್ಯ. ಅಲ್ಲದೆ ಈ ಕೆಲಸ ಪೌರ ಕಾರ್ಮಿಕರು ಮಾತ್ರ ಮಾಡುವವರು ಎನ್ನುವ ಭಾವನೆಯನ್ನು ವಿದ್ಯಾ ಮತ್ತು ಲತಾ ತೊಡೆದು ಹಾಕಿದ್ದಾರೆ. ಗ್ರಾಮದ ಮೂಲೆ ಮೂಲೆಗೂ ಅತ್ಯಂತ ಕಡಿದಾದ ರಸ್ತೆಯಲ್ಲೂ ಸ್ವಚ್ಛ ವಾಹಿನಿ ಲೀಲಾಜಾಲವಾಗಿ ಚಲಾಯಿಸುವಲ್ಲಿ ವಿದ್ಯಾ ನಿಪುಣರಾಗಿದ್ದಾರೆ. ಗ್ರಾಮದಲ್ಲಿ ವಾರಕ್ಕೆರಡು ದಿನ ಪ್ರತೀ ಮನೆಯ ಕಸ ಸಂಗ್ರಹ ಮಾಡುತ್ತಾರೆ. ಮಹಿಳೆಯರೇ ತಮ್ಮ ಮನೆ ಬಾಗಿಲಿಗೆ ಬರುವುದರಿಂದ ಕಸ ಬೇರ್ಪಡಿಸಿ ಇಡುವ ಮೂಲಕ ಗ್ರಾಮಸ್ಥರೂ ಸಹಕಾರ ನೀಡುತ್ತಿದ್ದಾರೆ.

    ಜಾಗೃತ ನಾರಿ ಪ್ರಗತಿಗೆ ದಾರಿ ಎಂಬುದನ್ನು ವಿದ್ಯಾ ಮತ್ತು ಲತಾ ಸಾಧಿಸಿ ತೋರಿಸಿದ್ದಾರೆ. ಇಬ್ಬರು ಮಹಿಳೆಯರು ತಾವು ಸಬಲೀಕರಣ, ಸುಸ್ಥಿರ ಅಭಿವೃದ್ಧಿಯೊಂದಿಗೆ ಸ್ವಯಂ ಪರಿವರ್ತನೆ ಆಗಿ ಸಮಾಜಕ್ಕೆ ದಾರಿ ತೋರಿಸಿದ್ದಾರೆ.
    – ಶೀನ ಶೆಟ್ಟಿ ನರೇಗಾ ಮಾಜಿ ಒಂಬುಡ್ಸ್ ಮೆನ್

    ಸ್ವಚ್ಛ ವಾಹನದಲ್ಲಿ ಚಾಲಕ ಮತ್ತು ನಿರ್ವಾಹಕರಾಗಿ ಮಹಿಳೆಯರೇ ಇರುವುದು ಇತರರಿಗೆ ಮಾದರಿ. ಇದರಿಂದಾಗಿ ಮನೆಯಲ್ಲೇ ಕಸ ವಿಂಗಡಣೆ ಮಾಡಲು ಪ್ರೇರಣೆಯೂ ಸಿಗಲಿದೆ. ಸ್ವಚ್ಛತಾ ಕಾರ್ಯ ಸಹಿತ ಯಾವುದೇ ಕೆಲಸ ಮಾಡಲು ಮಹಿಳೆಯರಿಂದಲೂ ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
    – ನಾಸಿರ್ ಎನ್.ಎಸ್.ನಡುಪದವು ಅಧ್ಯಕ್ಷ, ಅಲ್ ಉಮರ್ ಜುಮಾ ಮಸೀದಿ

    ಟೇಲರಿಂಗ್ ವೃತ್ತಿಯಲ್ಲಿ ಉತ್ತಮ ಆದಾಯ ಇದ್ದರೂ ಗ್ರಾಮ ಸ್ವಚ್ಛವಾಗಿಡಬೇಕು ಎನ್ನುವ ಕನಸಿನೊಂದಿಗೆ ಜನಶಿಕ್ಷಣ ಟ್ರಸ್ಟ್ ವತಿಯಿಂದ ನೀಡಲಾದ ವಾಹನ ಚಾಲನೆ ಕಲಿತೆ. ಈ ಕೆಲಸದಲ್ಲಿ ವೇತನ ಕಡಿಮೆಯಿದ್ದರೂ ಮನಸ್ಸಿಗೆ ತುಂಬ ಖುಷಿ ನೀಡಿದೆ.
    -ವಿದ್ಯಾ ಸ್ವಚ್ಛ ವಾಹಿನಿ ಚಾಲಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts