More

    ಮಹಿಳೆ ಪುರುಷನಷ್ಟೇ ಸಬಲೆ

    ಚಿಕ್ಕೋಡಿ : ಮಹಿಳೆಯು ಪ್ರತಿ ರಂಗದಲ್ಲಿಯೂ ಪುರುಷರಷ್ಟೇ ಸಮಾನವಾಗಿ ಕೆಲಸ ಮಾಡುವ ಶಕ್ತಿ ಹೊಂದಿದ್ದಾಳೆ. ಹಾಗಾಗಿ ಮಹಿಳೆಯರಿಗೆ ಅನುಕಂಪದ ಬದಲು ಅವಕಾಶ ನೀಡಬೇಕು ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು. ಪಟ್ಟಣದ ಲೋಕೋಪಯೋಗಿ ಸಭಾಭವನದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಮತ್ತು ತಾಲೂಕು ಸಂಘದ ಸಹಕಾರದೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಮಹಿಳೆಯು ತನ್ನ ಮನೆತನದ ಜವಾಬ್ದಾರಿ ನಿಭಾಯಿಸುವುದರ ಜತೆಗೆ ಆರ್ಥಿಕವಾಗಿ ಸಬಲೆಯಾಗಲು ಅವಳಿಗೆ ಸೂಕ್ತವಾದ ಅವಕಾಶಗಳನ್ನು ಕಲ್ಪಿಸಿಕೊಡಬೇಕಾದ ಅವಶ್ಯಕತೆ ಇದೆ ಎಂದರು.

    ಪದ್ಮಶ್ರೀ ಪುರಸ್ಕೃತೆ ಶೀತವ್ವ ಜೋಡಟ್ಟಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಹಿಳೆಯರನ್ನು ಕೀಳಾಗಿ ನೋಡುವ ಪ್ರವೃತ್ತಿ ಇದೆ. ಬಾಲ್ಯವಿವಾಹ ತಡೆಯಲು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಪ್ರತಿಯೊಬ್ಬ ಮಹಿಳೆ ಎದೆಗೊಟ್ಟು ಹೋರಾಡಬೇಕಿದೆ. ಶಿಕ್ಷಣ ಕಡಿಮೆ ಇದ್ದರೂ ಸಂಸ್ಕಾರ ಇರುವುದು ಮುಖ್ಯ ಎಂದರು. ಲೋಕಾರೂಢಿಯಲ್ಲಿ ಹೆಣ್ಣನ್ನು ಎಷ್ಟೇ ಕೀಳಾಗಿ ಕಂಡರೂ ಅದೆಲ್ಲವನ್ನೂ ಎದುರಿಸಿ ನಿಲ್ಲುವ ಶಕ್ತಿ ಮಹಿಳೆಗಿದೆ. ಮಹಿಳೆಯರನ್ನು ಜಗತ್ತು ನೋಡುವ ದೃಷ್ಟಿಕೋನ ಬದಲಾಗಬೇಕಿದೆ ಎಂದರು.

    ನಿಪ್ಪಾಣಿ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ ಮಾತನಾಡಿ, ಮಹಿಳೆಯುರು ಕೀಳರಿಮೆ ಬಿಟ್ಟು ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ತಮ್ಮ ಹೆಜ್ಜೆಗುರುತು ಮೂಡಿಸಲು ಎಲ್ಲ ದಿಕ್ಕುಗಳಿಂದಲೂ ಪ್ರಯತ್ನಿಸಬೇಕು ಎಂದರು. ಅನುಪಮ ಸೇವಾ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕಿಯರನ್ನು ಸತ್ಕರಿಸಲಾಯಿತು. ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ.ಮೇಕನಮರಡಿ, ಜಿ.ಎಂ.ಹಿರೇಮಠ, ವೈ.ಎಸ್.ಬುಡ್ಡಗೋಳ, ಎಂ.ಜಿ.ಸಂಕಪಾಳ, ವಿ.ಬಿ.ಅರಗಿ, ಎಸ್.ಎ.ಖಡ್ಡ, ಎಸ್.ಎಸ್.ದುಫದಾಳ, ಎಸ್.ಎನ್.ಬೆಳಗಾವಿ, ಜಿ.ಎಂ.ಕಾಂಬಳೆ, ಎನ್.ಜಿ.ಪಾಟೀಲ, ಸುರೇಖಾ ಮೇಲಗಿರಿ ಹಾಗೂ ತಾಲೂಕು ಸಂಘದ ಪದಾಧಿಕಾರಿಗಳು ಇತರರು ಇದ್ದರು. ಸಿದ್ರಾಮ ಲೋಕಣ್ಣವರ ಸ್ವಾಗತಿಸಿದರು.

    ಸುನಂದಾ ಡಬರಿ ನಿರೂಪಿಸಿದರು. ಚಂದ್ರಶೇಖರ ಅರಬಾವಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts