More

    ಕಮಲದೊಳು ಉದಯಿಸಿದಳು ತೆನೆ ಹೊತ್ತ ಮಹಿಳೆ !

    ಬೆಂಗಳೂರು: ಲೋಕಸಭೆ ಚುನಾವಣೆ ಪ್ರಚಾರವು ನಿಧಾನವಾಗಿ ರಂಗೇರುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಪೂರ್ವ ತಯಾರಿ ಚುರುಕಾಗಿದೆ. ಈ ನಡುವೆ ಕಮಲದೊಳು ತೆನೆ ಹೊತ್ತ ಮಹಿಳೆ ಉದಯಿಸಿದ್ದಾಳೆ !

    ಮತದಾರ ಪ್ರಭುಗಳ ಮನಸೂರೆಗೊಳ್ಳಲು ಬಿಜೆಪಿ ಸಜ್ಜಾಗಿದೆ. ಅದಕ್ಕಾಗಿ ಅಣಿಗೊಳಿಸಿರುವ ಪ್ರಚಾರದ ವಾಹನಗಳ ಹೈಲೈಟ್ ಇದು. ಜೆಡಿಎಸ್ ಜತೆಗೆ ಬೆಸುಗೆ ದೃಢ, ಪ್ರತಿ ಹಂತದಲ್ಲಿ ಮೈತ್ರಿ ಧರ್ಮ ಪಾಲನೆಯ ಸಂದೇಶವನ್ನು ಹೊತ್ತು ನಾಲ್ಕು ವಾಹನಗಳು ರಾಜ್ಯದ 28 ಲೋಕಸಭೆ ಕ್ಷೇತ್ರಗಳನ್ನು ಸಂಚರಿಸಲಿವೆ.

    ಗಮನಸೆಳೆಯುವ ವಾಹನಗಳು

    ಕೇಸರಿಮಯವಾಗಿರುತ್ತಿದ್ದ ಪ್ರಚಾರ ವಾಹನಗಳು ಕೇಸರಿ ಜತೆಗೆ ಹಸಿರು, ಕಮಲ ಜತೆಗೆ ತೆನೆ ಹೊತ್ತ ಮಹಿಳೆ ಚಿಹ್ನೆಗಳು ರಾರಾಜಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಭಾವಚಿತ್ರಗಳು ವಾಹನಗಳ ಎರಡೂ ಬದಿಗೆ ಮುದ್ರಿತವಾಗಿವೆ‌

    ಭಾವಚಿತ್ರಗಳ ಕೆಳಗೆ ‘ ಮತ್ತೊಮ್ಮೆ ಮೋದಿ ಸರ್ಕಾರ’ ಘೋಷ ವಾಕ್ಯವಿದೆ. ಪಕ್ಕದಲ್ಲಿ ಮೋದಿಯವರು ನಿಂತು, ಕೈಬೀಸುತ್ತಿರುವ ಭಂಗಿಯ ಫೋಟೊಯಿದೆ. ವಾಹನಗಳ ಹಿಂಬದಿ, ಮುಂಬದಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಗುರುತು ಮುದ್ರಿಸಿದ್ದು, ಉಭಯ ಪಕ್ಷಗಳ ಕಾರ್ಯಕರ್ತರ ಹಾಗೂ ಸಾಮಾನ್ಯ ಜನರ ಗಮನಸೆಳೆಯುತ್ತವೆ.

    ವಾಹನದೊಳಗೆ ನಾಲ್ಕು ಜನರ ಒಟ್ಟಿಗೆ ನಿಲ್ಲಬಹುದಾದ ವೇದಿಕೆ, ಧ್ವನಿವರ್ಧಕ ವ್ಯವಸ್ಥೆಯಿದೆ. ಹಾಗೆಯೇ ವಾತಾನುಕೂಲಿತ ಕೊಠಡಿ, ಸೋಫಾ, ಟೀಪಾಯ್, ಎರಡು ಬದಿ ಆರಾಮವಾಗಿ ಕುಳಿತುಕೊಳ್ಳಬಹುದಾದ ತಲಾ ಎರಡು ಆಸನಗಳು, ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದು, ಮಾರ್ಗ ಮಧ್ಯೆ ನಾಯಕರೊಂದಿಗೆ ಮಾತುಕತೆ ಅಥವಾ ಅಲ್ಪ ವಿರಾಮ ಪಡೆಯಲು ಈ ಅನುಕೂಲತೆಗಳನ್ನು ಕಲ್ಪಿಸಲಾಗಿದೆ.

    ಯಾವುದಕ್ಕೆಲ್ಲ ಬಳಕೆ

    ಮೈಸೂರು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ವಿಭಾಗಗಳಿಗೆ ತಲಾ ಒಂದು ಸುಸಜ್ಜಿತ ವಾಹನಗಳು ಸಂಚರಿಸಲಿವೆ. ಚುನಾವಣಾ ಪ್ರಚಾರಕ್ಕಾಗಿ ರಾಜ್ಯ ಪ್ರವಾಸದ ವೇಳೆ ರಾಷ್ಟ್ರೀಯ, ರಾಜ್ಯ ನಾಯಕರು ಇದೇ ವಾಹನಗಳನ್ನು ಬಳಸಲಿದ್ದಾರೆ. ಬಿಜೆಪಿ, ಜೆಡಿಎಸ್ ನಾಯಕರಿಬ್ಬರು ಉಪಯೋಗಿಸುವ ರೀತಿಯಲ್ಲಿ ವಾಹನ ವಿನ್ಯಾಸಗೊಳಿದ್ದು, ತಾರತಮ್ಯ ಇಲ್ಲವೇ ಕಡೆಗಣನೆ ಸ್ವರ ಕೇಳಿಬರದಂತೆ ಕಮಲಪಡೆ ಎಚ್ಚರಿಕೆವಹಿಸಿದೆ.

    ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋಗೆ ಪ್ರತ್ಯೇಕವಾಗಿ ಬುಲಟ್ ಪ್ರೂಫ್ ಮಿನಿ ವಾಹನವು ಸಜ್ಜಾಗಿದೆ. ಒಬ್ಬರು ನಿಂತುಕೊಳ್ಳಬಹುದಾದ ಎತ್ತರದ ವೇದಿಕೆಯಿದೆ. ಈ ವಾಹನಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಮುದ್ರಿಸಿದ್ದು, ರಾಜ್ಯದಲ್ಲಿ ಮೋದಿಯವರ ರೋಡ್ ಶೋಗೆ ಈ ವಾಹನ ಮೀಸಲಿದೆ. ಮತ್ತೊಂದು ವಾಹನವನ್ನು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಪ್ರಚಾರ ಕಾರ್ಯಕ್ಕೆ ಕಳುಹಿಸಲಾಗಿದೆ.

    ರಾಜ್ಯಾದ್ಯಂತ ಸಂಚಾರ

    ಬಿಜೆಪಿ ರಾಜ್ಯ ಕಚೇರಿ ಮುಂದೆ ಪ್ರಚಾರ ವಾಹನಗಳಿಗೆ ಶಾಸಕ ಎಸ್.ಮುನಿರಾಜು ಸೋಮವಾರ ಚಾಲನೆ ನೀಡಿದರು. ನಂತರ ಮಾತನಾಡಿ ನಾಲ್ಕು ವಾಹನಗಳು ರಾಜ್ಯಾದ್ಯಂತ ಸಂಚರಿಸಲಿವೆ. ರಾಷ್ಟ್ರ, ರಾಜ್ಯ ನಾಯಕರು ಪ್ರವಾಸದ ವೇಳೆ ಬಳಸುವರು. ಪ್ರಧಾನಿ ಮೋದಿಯವರ ರೋಡ್ ಶೋಗೆ ಪ್ರತ್ಯೇಕ ಬುಲೆಟ್ ಪ್ರೂಫ್ ಮಿನಿ ವಾಹನ ಸಜ್ಜುಗೊಳಿಸಲಾಗಿದೆ ಎಂದು ಹೇಳಿದರು.

    ವಿಧಾನ ಪರಿಷತ್ ಸದಸ್ಯ ಕೇಶವಪ್ರಸಾದ್, ಪಕ್ಷದ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್.ಹರೀಶ್, ಮುಖಂಡರಾದ ಸಪ್ತಗಿರಿಗೌಡ, ಲೋಕೇಶ್ ಅಂಬೇಕಲ್ಲು ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts