More

    ಸರ್ಕಾರಿ ಇಲಾಖೆಗಳಿಗೆ ಬಾಡಿಗೆ ಆಧಾರದಲ್ಲಿ ವಾಹನಗಳನ್ನು ನೀಡಿರೋ ಮಾಲೀಕರಿಗೆ ಸಂಕಷ್ಟ!

    ಹುಬ್ಬಳ್ಳಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಬಡ ಮತ್ತು ಮಧ್ಯಮ ವರ್ಗದ ಜನರಷ್ಟೇ ತತ್ತರಿಸಿಲ್ಲ. ಸರ್ಕಾರಿ ಇಲಾಖೆಗಳಿಗೆ ಬಾಡಿಗೆ ಆಧಾರದಲ್ಲಿ ವಾಹನಗಳನ್ನು ನೀಡಿರುವ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಕಚೇರಿ ಕೆಲಸ ಕಾರ್ಯಗಳಿಗೆ ಖಾಸಗಿ ವಾಹನಗಳನ್ನು ಪಡೆಯುವ ಇಲಾಖೆಗಳು ನೀಡಬೇಕಾಗಿರುವ ಮಾಸಿಕ ಬಾಡಿಗೆ ದರ ಕಳೆದ 9 ವರ್ಷಗಳಿಂದ ಪರಿಷ್ಕರಣೆಯಾಗಿಲ್ಲ. ಈ 9 ವರ್ಷಗಳಲ್ಲಿ ಡೀಸೆಲ್ ಬೆಲೆ ದುಪ್ಪಟ್ಟಾಗಿದ್ದು, ಇದನ್ನೇ ನಂಬಿಕೊಂಡಿರುವ ಖಾಸಗಿ ವಾಹನಗಳ ಮಾಲೀಕರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಸರ್ಕಾರಿ ಇಲಾಖೆಗಳು ಬಹುತೇಕ 4 ಪ್ಲಸ್ 1 ಆಸನಗಳ ಡೀಸೆಲ್ ವಾಹನ (ಕಾರು)ಗಳನ್ನೇ ಮಾಸಿಕ ಬಾಡಿಗೆ ಆಧಾರದಲ್ಲಿ ನಿಗದಿತ ಅವಧಿಗೆ ಪಡೆಯುತ್ತವೆ.

    ಮಾಸಿಕ ಬಾಡಿಗೆ ದರ ಹಾಗೂ ಕಾಲ ಮಿತಿಯನ್ನು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್ ಬೆಂಗಳೂರು) ನಿಗದಿಪಡಿಸುತ್ತದೆ. 2012 ಆಗಸ್ಟ್ ಬಳಿಕ ಬಾಡಿಗೆ ದರ ಹಾಗೂ ಕಾಲ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 2012ರಲ್ಲಿ ಡೀಸೆಲ್ ದರ ಪ್ರತಿ ಲೀಟರ್​ಗೆ 45ರಿಂದ 52 ರೂ. ಇತ್ತು. ಇಂದು 85 ರೂ. ಗಡಿ ದಾಟಿದೆ.

    ನಿಗದಿಪಡಿಸಿರುವ ದರ: ಹವಾ ನಿಯಂತ್ರಣ ರಹಿತ (ನಾನ್ ಎಸಿ) ವಾಹನಗಳಿಗೆ ಮಾಸಿಕ 2500 ಕಿ.ಮೀ. ಅಥವಾ 300 ಗಂಟೆಗಳ ಅವಧಿಗೆ 25,000 ರೂ ಬಾಡಿಗೆ ದರ ನಿಗದಿಪಡಿಸಲಾಗಿದೆ. 2500 ಕಿ.ಮೀ. ಮೀರಿದಾಗ ಪ್ರತಿ ಕಿ.ಮೀ.ಗೆ 5.50 ರೂ. ಹಾಗೂ 300 ಗಂಟೆಗಳ ಅವಧಿ ಮೀರಿದರೆ ಪ್ರತಿ ಗಂಟೆಗೆ 40 ರೂ. ದರ ಇದೆ. ಹವಾ ನಿಯಂತ್ರಿತ (ಎಸಿ) ವಾಹನಗಳಿಗೆ ಮಾಸಿಕ 2500 ಕಿ.ಮೀ. ಅಥವಾ 300 ಗಂಟೆಗಳ ಅವಧಿಗೆ ಮಾಸಿಕ 30,000 ರೂ., 2500 ಕಿ.ಮೀ. ಮೀರಿದಾಗ ಪ್ರತಿ ಕಿ.ಮೀ.ಗೆ 6.50 ರೂ. ಹಾಗೂ 300 ಗಂಟೆಗಳ ಅವಧಿ ಮೀರಿದರೆ ಪ್ರತಿ ಗಂಟೆಗೆ 55 ರೂ. ದರ ನಿಗದಿ ಪಡಿಸಲಾಗಿದೆ. ನಿಗದಿಪಡಿಸಿದಕ್ಕಿಂತ ಕಡಿಮೆ ಮೊತ್ತ ದಾಖಲಿಸಿದರೆ ಟೆಂಡರ್ ಮಾನ್ಯ ಮಾಡಲಾಗುತ್ತದೆ. ಮಾಸಿಕ ಬಿಲ್​ನಲ್ಲಿ ಶೇ. 5 ರಷ್ಟು ಹೆಚ್ಚುವರಿ ನೀಡಲು ಕೆಲವು ಇಲಾಖೆಗಳ ಮುಖ್ಯಸ್ಥರಿಗೆ ಅಧಿಕಾರ ನೀಡಲಾಗಿದೆ.

    ಒಂದು ಸಾಮಾನ್ಯ ದರ್ಜೆಯ ಕಾರು (4 ಪ್ಲಸ್ 1 ಆಸನಗಳ) ಪ್ರತಿ ಲೀ. ಡೀಸೆಲ್​ಗೆ 17 ರಿಂದ 20 ಕಿ.ಮೀ. ಮೈಲೇಜ್ ನೀಡುತ್ತದೆ. ಈ ಲೆಕ್ಕದಲ್ಲಿ 2500 ಕಿ.ಮೀ. ಕ್ರಮಿಸಲು 125ರಿಂದ 150 ಲೀಟರ್ ಡಿಸೇಲ್ ಬೇಕು. ಇಂದಿನ ದರದಲ್ಲಿ ಡೀಸೆಲ್​ಗಾಗಿ 11ರಿಂದ 13 ಸಾವಿರ ರೂ. ವ್ಯಯಿಸಬೇಕಾಗುತ್ತದೆ. ಚಾಲಕನಿಗೆ ಮಾಸಿಕ 8ರಿಂದ 10 ಸಾವಿರ ರೂ. ಸಂಬಳ ನೀಡಿದರೆ ಕಾರ್ ಮಾಲೀಕನಿಗೆ ಉಳಿಯುವುದು 2-3 ಸಾವಿರ ರೂ. ಮಾತ್ರ. ಇದೇ, 2012ರ ಡೀಸೆಲ್ ಬೆಲೆ ಹಾಗೂ ಚಾಲಕನ ಸಂಬಳ ಲೆಕ್ಕಕ್ಕೆ ತೆಗೆದುಕೊಂಡರೆ ಕಾರ್ ಮಾಲೀಕರು ಮಾಸಿಕ 12ರಿಂದ 18 ಸಾವಿರ ರೂ. ಉಳಿತಾಯ ಸಾಧಿಸುತ್ತಿದ್ದರು.

    ಉಳಿತಾಯದ ಹಣದಲ್ಲಿಯೇ ಕಾರ್ ಮೆಂಟೆನನ್ಸ್, ರಿಪೇರಿ, ಸಾಲದ ಕಂತು ಸರಿದೂಗಿಸಬೇಕು. ಶೇ. 2ರಷ್ಟು ಟಿಡಿಎಸ್ ಹಾಗೂ ಶೇ. 5ರಷ್ಟು ಜಿಎಸ್​ಟಿ ಪಾವತಿಸಬೇಕು. ವಿಮೆ, ಮೋಟಾರ್ ವಾಹನ ತೆರಿಗೆ ಪಾವತಿಸಲು ವಾರ್ಷಿಕವಾಗಿ 26ರಿಂದ 30 ಸಾವಿರ ರೂ. ಖರ್ಚಾಗುತ್ತದೆ. ಇಷ್ಟಾದ ಮೇಲೆ ಉಳಿಯುವುದು ಏನು ಎಂಬುದು ವಾಹನ ಮಾಲೀಕರ ಪ್ರಶ್ನೆ.

    ಖಾಸಗಿ ವಾಹನಗಳನ್ನು ಪಡೆಯುವ ಇಲಾಖೆಗಳಿಗೆ ಸರ್ಕಾರ ನಿಗದಿಪಡಿಸಿರುವ ಮಾಸಿಕ ಬಾಡಿಗೆ ದರದಲ್ಲಿ ಶೇ. 50ರಷ್ಟು ಏರಿಕೆ ಮಾಡುವ ತುರ್ತು ಅಗತ್ಯವಿದೆ. ಈ ಕುರಿತು ತಕ್ಷಣ ಕ್ರಮವಾಗದಿದ್ದರೆ ಸರ್ಕಾರದ ಗಮನ ಸೆಳೆಯಲಾಗುವುದು.
    | ಪ್ರೇಮನಾಥ ಚಿಕ್ಕತುಂಬಳ

    ಧಾರವಾಡ ಜಿಲ್ಲಾ ಕಾರು ಚಾಲಕ-ಮಾಲೀಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ

    ಇಂದು ಡೀಸೆಲ್ ಬೆಲೆ ದಿನೇ ದಿನೆ ಏರಿಕೆಯಾಗುತ್ತಿರುವುದರಿಂದ ಖಾಸಗಿ ವಾಹನಗಳಿಗೆ ಸರ್ಕಾರ ನಿಗದಿಪಡಿಸಿರುವ ಮಾಸಿಕ ಬಾಡಿಗೆ ದರದಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ.
    | ಅವಿನಾಶ ಪಿ., ಖಾಸಗಿ ವಾಹನ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts