More

    ವೈದ್ಯರಿಲ್ಲದೆ ರೋಗಿಗಳ ನರಳಾಟ

    ರಾಯಬಾಗ: ಕರೊನಾ ವೈರಸ್‌ನಿಂದ ಬಹುತೇಕ ಖಾಸಗಿ ಆಸ್ಪತ್ರೆಗಳು ಬಾಗಿಲು ಮುಚ್ಚಿಕೊಂಡಿದ್ದರಿಂದ ರಾಯಬಾಗ ತಾಲೂಕಿನ ಜನರು ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲದೆ ಬಡರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ತಾಲೂಕಿನ ಕುಡಚಿಯಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗಿದ್ದರಿಂದ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಸೇವೆ ನೀಡಲು ಹಿಂದೇಟು ಹಾಕುತ್ತಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸಾರ್ವಜನಿಕರು ರಾಯಬಾಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿದೆ. ಆದರೆ, ಆಸ್ಪತ್ರೆಯಲ್ಲಿ ಮಂಜೂರಾದ 11 ತಜ್ಞ ವೈದ್ಯರ ಪೈಕಿ ಕೇವಲ 5 ತಜ್ಞ ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

    ಈ ಆಸ್ಪತ್ರೆಯಲ್ಲಿ 6 ತಜ್ಞ ವೈದ್ಯರ ಕೊರತೆ ಇದೆ. ಅದರಲ್ಲೂ ಪ್ರಸೂತಿ ಮತ್ತು ಚಿಕ್ಕಮಕ್ಕಳ ತಜ್ಞ ವೈದ್ಯರ ಅವಶ್ಯಕತೆ ಇದೆ. ನಿಯಮಾನುಸಾರ ಆಸ್ಪತ್ರೆಯಲ್ಲಿ 84 ಸಿಬ್ಬಂದಿ ಇರಬೇಕು. ಆದರೆ, ಸದ್ಯ ಕೇವಲ 35 ಜನ ಕಾರ್ಯನಿರ್ವಹಿಸುತ್ತಿದ್ದು, ಇನ್ನುಳಿದ 49 ಹುದ್ದೆಗಳು ಖಾಲಿ ಉಳಿದಿವೆ. ಡಿ ಗ್ರೂಪ್‌ನ 32 ಸಿಬ್ಬಂದಿ ಪೈಕಿ ಕೇವಲ ಓರ್ವ ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿದ್ದಾನೆ. ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ರಾಯಬಾಗ ತಾಲೂಕು ಆಸ್ಪತ್ರೆಯು ಎಲ್ಲ ವಿಭಾಗಗಳಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದೆ.

    ತಿಂಗಳಿಗೆ 90 ಹೆರಿಗೆ: ರಾಯಬಾಗ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 80ರಿಂದ 90 ಹೆರಿಗೆಯಾಗುತ್ತವೆ. ಆದರೆ, ಸ್ತ್ರೀರೋಗ ತಜ್ಞ (ಪ್ರಸೂತಿ ಪರಿಣತ) ವೈದ್ಯರೇ ಇಲ್ಲ. ಹಾಗಾಗಿ ಹೆರಿಗೆ ಸಮಯದಲ್ಲಿ ಇನ್ನುಳಿದ ಸಿಬ್ಬಂದಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಹಲವು ಬಾರಿ ಪರಿಸ್ಥಿತಿ ಕೈಮೀರಿ ಗರ್ಭಿಣಿಯರನ್ನು ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿದ ಉದಾಹರಣೆಗಳಿವೆ.

    ಸಿಜೇರಿಯನ್ ಮಾಡಲು ತಜ್ಞ ಪ್ರಸೂತಿ ವೈದ್ಯರು ಇಲ್ಲದೆ ಹೆರಿಗೆ ಸಮಯದಲ್ಲಿ ಗರ್ಭಿಣಿಯರು ನರಳುವಂತಾಗಿದೆ. ಕೆಲ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಮಿತಿಮೀರಿದ ಬಿಲ್ ಮಾಡುತ್ತಿರುವುದರಿಂದ ಬಡರೋಗಿಗಳು ಒದ್ದಾಡುವಂತಾಗಿದೆ. ಇತ್ತೀಚೆಗಷ್ಟೆ ರಾಯಬಾಗ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಆದರೆ, ತಜ್ಞ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ಬಡರೋಗಿಗಳು ಸೂಕ್ತ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ.

    ಸರ್ಕಾರ ಕೊಟ್ಯಂತರ ರೂಪಾಯಿ ಖರ್ಚು ಮಾಡಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿದರೂ, ಬಡರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರಯದಿರುವುದು ವಿಪರ್ಯಾಸ. ಕರೊನಾ ರೋಗದ ಭೀತಿ ಹಾಗೂ ಮಳೆಗಾಲದಲ್ಲಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ರೋಗಿಗಳಿಗೆ ಸೂಕ್ತ ಚಿಕತ್ಸೆ ನೀಡಲು ತಜ್ಞ ವೈದ್ಯರ ಅವಶ್ಯಕತೆ ಇದೆ. ಮುಖ್ಯವಾಗಿ ಚಿಕ್ಕಮಕ್ಕಳು ಮಳೆಗಾಲದಲ್ಲಿ ಹೆಚ್ಚು ತೊಂದರೆಗೆ ಒಳಗಾಗುವುದರಿಂದ ಚಿಕ್ಕಮಕ್ಕಳ ತಜ್ಞ ವೈದ್ಯರ ಅಗತ್ಯ ಬಹಳಷ್ಟಿದೆ.

    ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆ ಮೇಲಧಿಕಾರಿಗಳು ಗಮನಹರಿಸಿ ರಾಯಬಾಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇರುವ ತಜ್ಞ ವೈದ್ಯರು ಮತ್ತು ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕು ಎಂದು ತಾಲೂಕಿನ ಜನರು ಒತ್ತಾಯಿಸಿದ್ದಾರೆ.

    ಕೋವಿಡ್-19 ಹಿನ್ನೆಲೆಯಲ್ಲಿ ಸಿಜೇರಿಯನ್ ಹೆರಿಗೆ ಮಾಡಿಸಲು ಆನ್‌ಕಾಲ್ ಡ್ಯೂಟಿ ಮೇಲೆ ರಾಯಬಾಗ ಪಟ್ಟಣದ ತಜ್ಞ ಸ್ತ್ರೀ ರೋಗ ವೈದ್ಯರೊಬ್ಬರನ್ನು ನೇಮಿಸಲಾಗಿದೆ. ಖಾಲಿ ಇರುವ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ನೇಮಕಾತಿ ಮಾಡುವಂತೆ ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
    | ಆರ್.ಎಚ್.ರಂಗಣ್ಣವರ ಮುಖ್ಯ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ, ರಾಯಬಾಗ

    ಕಳೆದ 15 ದಿನಗಳ ಹಿಂದೆ ಹೆರಿಗೆಗಾಗಿ ರಾಯಬಾಗ ಸರ್ಕಾರಿ ಆಸ್ಪತ್ರೆಗೆ ಹೋದೆ. ಆದರೆ, ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞ ವೈದ್ಯರೇ ಇರಲಿಲ್ಲ. ಹಾಗಾಗಿ ಚಿಕ್ಕೋಡಿ ಖಾಸಗಿ ಆಸ್ಪತ್ರೆ ತೆರಳಿ 15-20 ಸಾವಿರ ರೂ. ಖರ್ಚು ಮಾಡಿ ಹೆರಿಗೆ ಮಾಡಿಸಿಕೊಂಡೆ.
    | ಹೆಸರು ಹೇಳಲಿಚ್ಛಿಸದ ಮಹಿಳೆ ರಾಯಬಾಗ ಪಟ್ಟಣ

    | ಸುಧೀರ ಎಂ. ಕಳ್ಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts