More

    ಪಿಆರ್‌ಡಿ ಇಂಜಿನಿಯರ್ ಇಲ್ಲದೆ ಅಭಿವೃದ್ಧಿಗೆ ತೊಡಕು

    ಜಯಪುರ (ಕೊಪ್ಪ): ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕಿಗೆ ಒಬ್ಬ ಪಂಚಾಯತ್ ರಾಜ್ ಆ್ಯಂಡ್ ರೂರಲ್ ಡೆವಲಪ್‌ಮೆಂಟ್ (ಪಿಆರ್‌ಡಿ) ಇಂಜಿನಿಯರ್ ಇರುವುದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಕಷ್ಟವಾಗುತ್ತಿದೆ. ಪಿಆರ್‌ಡಿ ಹಿರಿಯ ಅಧಿಕಾರಿಗಳು ಇಂಜಿನಿಯರ್ ನೇಮಕಕ್ಕೆ ಕ್ರಮಕೈಗೊಳ್ಳಬೇಕು ಎಂದು ಹೇರೂರು ಗ್ರಾಪಂ ಸದಸ್ಯ ಅಶ್ವತ್ಥ್ ಹೇಳಿದರು.

    ಸೀಗೋಡು ಸರ್ಕಾರಿ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ದೇವಗೋಡು ವಾರ್ಡ್ ಸಭೆಯಲ್ಲಿ ಮಾತನಾಡಿ, ಕೊಪ್ಪ ತಾಲೂಕಿನ 22 ಗ್ರಾಪಂ, ಎನ್.ಆರ್.ಪುರ ತಾಲೂಕಿನ 14 ಗ್ರಾಪಂ, ಕೊಪ್ಪ ಹಾಗೂ ಎನ್.ಆರ್.ಪುರ ತಾಪಂ ಕೆಲಸಗಳಿಗೆ ಸಮಸ್ಯೆಯಾಗುತ್ತಿದೆ. ಗ್ರಾಪಂ 15ನೇ ಹಣಕಾಸು ಹಾಗೂ ಶಾಸನಬದ್ಧ ಅನುದಾನದ ಕಾಮಗಾರಿಗಳಿಗೆ ಸಕಾಲದಲ್ಲಿ ಅಂದಾಜು ಪಟ್ಟಿ ತಯಾರಿಸಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗಿ ಜನರಿಗೆ ತೊಂದರೆಯಾಗಿದೆ. ಕೊಪ್ಪ ತಾಲೂಕಿನಲ್ಲಿ ಖಾಲಿ ಇರುವ ಮೂರು ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
    ಪಿಡಿಒ ಮಹೇಶ್ ಮಾತನಾಡಿ, ನರೇಗಾ ಯೋಜನೆಯಲ್ಲಿ ಎಸ್ಸಿ, ಎಸ್ಟಿ, ಸಣ್ಣ, ಅತಿ ಸಣ್ಣ ರೈತರು, ಭೂ ಸುಧಾರಣ ಕಾಯ್ದೆಯಡಿ ಜಮೀನು ಹೊಂದಿರುವವರು ಹಾಗೂ ಬಿಪಿಎಲ್ ಕುಟುಂಬಗಳು 2.50 ಲಕ್ಷ ರೂಪಾಯಿವರೆಗಿನ ಕೃಷಿ ಹೊಂಡ, ಕೃಷಿಬಾವಿ, ಬಸಿ ಕಾಲುವೆ, ದನ, ಕುರಿ, ಕೋಳಿ, ಹಂದಿ ಸಾಕಣೆ ಶೆಡ್ ಹಾಗೂ ತೋಟಗಾರಿಕೆ ಬೆಳೆಗಳ ವೈಯಕ್ತಿಕ ಕಾಮಗಾರಿಗಳನ್ನು ಮಾಡಬಹುದು. ಸಾರ್ವಜನಿಕವಾಗಿ ಅಂತರ್ಜಲ ಹೆಚ್ಚಿಸುವ ಕಾಮಗಾರಿಗಳು, ಕೆರೆ ಹೂಳೆತ್ತುವುದು, ಅರಣ್ಯೀಕರಣ ಮುಂತಾದ ಕಾಮಗಾರಿಗಳನ್ನು ಮಾಡಬಹುದು ಎಂದು ಮಾಹಿತಿ ನೀಡಿದರು.
    ಹಾಡುಗಾರು ಬಸ್ ನಿಲ್ದಾಣ ದುರಸ್ತಿ, ರಸ್ತೆ ದುರಸ್ತಿ ಹಾಗೂ ಬಸರೀಕಟ್ಟೆ ಕೈಮರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆಗೆ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದರು.
    ಗ್ರಾಪಂ ಅಧ್ಯಕ್ಷೆ ಶೋಭಾ ರತ್ನಾಕರ, ಸದಸ್ಯರಾದ ಅನುಪಮಾ ದಿನೇಶ್, ಅಕ್ಷತಾ, ಸುರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts