More

    ವೈದ್ಯರಿಲ್ಲದೆ ದನಗಳ ಮೂಕರೋದನೆ: ಕೂಡ್ಲಿಗಿ ತಾಲೂಕಿನ 14 ಪಶು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ

    ಕೂಡ್ಲಿಗಿ: ತಾಲೂಕಿನ ಪಶುಪಾಲನಾ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಮೂಕರೋದನೆ ಅನುಭವಿಸುತ್ತಿವೆ.

    ಜಾನುವಾರುಗಳನ್ನು ಸಾಕುವ ರೈತರಿಗೆ ಸಮಸ್ಯೆ

    ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 14 ಕಡೆ ಪಶು ಆಸ್ಪತ್ರೆಗಳಿವೆ. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ಜಾನುವಾರುಗಳನ್ನು ಸಾಕುವ ರೈತರಿಗೆ ಸಮಸ್ಯೆಯಾಗಿದೆ. ಬೆರಳೆಣಿಕೆ ಸಿಬ್ಬಂದಿಯೇ ಎಲ್ಲವನ್ನೂ ನಿಭಾಯಿಸಬೇಕಾಗಿದೆ. ಕೆಲ ಸಂದರ್ಭಗಳಲ್ಲಿ ಸರಿಯಾದ ಸಮಯಕ್ಕೆ ವೆದ್ಯರು ತೆರಳಲು ಆಗದಿದ್ದಾಗ ದನಕರುಗಳು ಸತ್ತ ಉದಾಹರಣೆಗಳೂ ಇವೆ. ಗುಡೇಕೋಟೆ, ಚಂದ್ರಶೇಖರಪುರ ಪಶು ಆಸ್ಪತ್ರೆಯಲ್ಲಿ ವ್ಯೆದ್ಯರು ಹಾಗೂ ಸಿಬ್ಬಂದಿ ಇಲ್ಲ. ನರಸಿಂಹನಗಿರಿ, ಎಂ.ಬಿ.ಅಯ್ಯನಹಳ್ಳಿ, ಹೊಸಹಳ್ಳಿ, ಸೂಲದಹಳ್ಳಿ ಆಸ್ಪತ್ರೆಗಳಲ್ಲಿ ಜವಾನರೇ ವೈದ್ಯರ ಕಾರ್ಯನಿರ್ವಹಿಸುವಂತಾಗಿದೆ.

    67 ಡಿ.ದರ್ಜೆ ಹುದ್ದೆಗಳು ಮಂಜೂರಾದರೂ, 31 ಜನ ಕರ್ತವ್ಯ

    14 ಆಸ್ಪತ್ರೆಗಳಲ್ಲಿ ಕೇವಲ ಏಳು ವೈದ್ಯರಿದ್ದಾರೆ. 67 ಡಿ.ದರ್ಜೆ ಹುದ್ದೆಗಳು ಮಂಜೂರಾದರೂ, ಕೇವಲ 31 ಜನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೇ ಅಂತ್ಯಕ್ಕೆ ಮೂವರು ನಿವೃತ್ತಿಯಾಗುತ್ತಿದ್ದಾರೆ. ಕೆಲವೆಡೆ ಪರಿಚಾರಕರು ಬಿಟ್ಟರೆ ಯಾರೂ ಇಲ್ಲ. ಇನ್ನೊಂದೆಡೆ ಆಸ್ಪತ್ರೆ ಬಾಗಿಲು ತೆರೆಯುವುದೇ ಅಪರೂಪವಾಗಿದೆ. ಕುರಿ, ಎಮ್ಮೆ, ಆಕಳು ಸೇರಿ ಜಾನುವಾರು ಸಾಕುವವರು ತುರ್ತು ಸಮಯದಲ್ಲಿ ಚಿಕಿತ್ಸೆ ಅವಶ್ಯ ಇದ್ದಾಗ, ವೈದ್ಯರನ್ನು ಹುಡುಕಿಕೊಂಡು ಹೋಗಬೇಕಾಗಿದೆ.

    ದೂರದ ಪಶು ಚಿಕಿತ್ಸಾಲಯಗಳಿಗೆ ತೆರಳಿ ಜಾನುವಾರುಗಳ ತಪಾಸಣೆ

    ಹಾಲಿ ಸಿಬ್ಬಂದಿಯೇ ಮೂರ್ನಾಲ್ಕು ಆಸ್ಪತ್ರೆಗಳಲ್ಲಿ ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ. ವೈದ್ಯರನ್ನೂ ನಿಯೋಜನೆ ಮೇಲೆ ಬೇರೆಡೆ ಕಳುಹಿಸಿ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ಮತ್ತೆ ಕೆಲ ಗ್ರಾಮಗಳ ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳು ಇಲ್ಲದ ಕಾರಣ ಸ್ಥಳೀಯ ರೈತರು ತಮ್ಮ ಕೃಷಿ ಕೆಲಸ ಬಿಟ್ಟು ದೂರದ ಪಶು ಚಿಕಿತ್ಸಾಲಯಗಳಿಗೆ ತೆರಳಿ ಜಾನುವಾರುಗಳ ತಪಾಸಣೆ ಮಾಡಿಸುವ ಪರಿಸ್ಥಿತಿ ಇದೆ.

    ತಾಲೂಕು ಕೇಂದ್ರದ ಕೂಡ್ಲಿಗಿ ಪಟ್ಟಣದಲ್ಲಿ ಮೂವರು ಪಶು ವೈದ್ಯರ ಹುದ್ದೆ ಇರಬೇಕು. ಆದರೆ, ಸಹಾಯಕ ನಿರ್ದೇಶಕರೇ ಕಚೇರಿ ಕೆಲಸ ಬಿಟ್ಟು ತಪಾಸಣೆ ಮಾಡಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಸಹಾಯಕ ನಿರ್ದೇಶಕರು ಸಹ ಪದೋನ್ನತಿ ಹಿನ್ನೆಲೆಯಲ್ಲಿ ವರ್ಗಾವಣೆ ಯಾಗಿದ್ದು, ತಾಲೂಕು ಕೇಂದ್ರ ಸ್ಥಾನದಲ್ಲಿಯೇ ವೈದ್ಯರಿಲ್ಲವಾಗಿದೆ.

    ಹೈನುಗಾರಿಕೆಯೇ ಮುಖ್ಯ ಕಸುಬು

    ಕೂಡ್ಲಿಗಿ ಮಳೆಯಾಶ್ರಿತ ತಾಲೂಕಾಗಿದ್ದು, ಬರವೇ ಹೆಚ್ಚು. ಸಕಾಲದಲ್ಲಿ ಮಳೆಯಾಗದಿದ್ದರೆ ರೈತರು ಕೈ ಸುಟ್ಟುಕೊಳ್ಳಬೇಕಾದ ಪರಿಸ್ಥಿತಿ. ಕೆಲ ರೈತರು ಇರುವ ಅಲ್ಪಸ್ವಲ್ಪ ಕೊಳವೆ ಬಾವಿ ನೀರು ಬಳಸಿ ಬೆಳೆ ಬೆಳೆಯುತ್ತ ಜತೆಗೆ ಹಸಿ ಹುಲ್ಲಿನ ಬೀಜಗಳನ್ನು ಹಾಕಿ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ.

    ಯಶ ಕಂಡವರು ಮುಖ್ಯ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ತಾಲೂಕಿನಲ್ಲಿ 106 ಹಾಲು ಉತ್ಪಾದಕ ಸಂಘಗಳಿವೆ. ಜಿಲ್ಲೆಯಲ್ಲಿಯೇ ಕೂಡ್ಲಿಗಿ ಅತಿ ಹೆಚ್ಚು ಹಾಲು ಉತ್ಪಾದಿಸಲಾಗುತ್ತಿದೆ. ಆದರೆ ಜಾನುವಾರುಗಳು ಅನಾರೋಗ್ಯಕ್ಕೀಡಾದರೆ ಸೂಕ್ತ ವೈದ್ಯಕೀಯ ಸೇವೆ ಇಲ್ಲವಾಗಿದೆ. ರೈತರು ಸಂಕಷ್ಟ ಎದುರಿಸುವಂತಾಗಿದೆ.

    ಪೂರೈಕೆ ಆಗದ ಜಂತುನಾಶಕ

    ಕೂಡ್ಲಿಗಿ ತಾಲೂಕಿನಲ್ಲಿ 60 ಸಾವಿರ ಜಾನುವಾರುಗಳಿವೆ. ಎರಡು ಲಕ್ಷಕ್ಕೂ ಅಧಿಕ ಕುರಿ, ಮೇಕೆಗಳಿವೆ. ಪಶು ಆಸ್ಪತ್ರೆಗಳಿಗೆ ಕಳೆದ ಮೂರು ವರ್ಷಗಳಿಂದ ಕುರಿಗಳಿಗೆ ಅತಿ ಅವಶ್ಯವಾದ ಜಂತುನಾಶಕ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಕುರಿಗಾಹಿಗಳು ಖಾಸಗಿ ಔಷಧಾಲಯಗಳಲ್ಲಿ ದುಬಾರಿ ಹಣ ನೀಡಿ ಖರೀದಿ ಮಾಡಬೇಕಿದೆ. ಲಸಿಕೆ ಮಾತ್ರ ಪೂರೈಕೆ ಆಗುತ್ತಿದ್ದು, ಉಳಿದಂತೆ ಯಾವುದೇ ಔಷಧ ಹಾಗೂ ಮಾತ್ರೆಗಳು ಬರುತ್ತಿಲ್ಲ. ಇದರಿಂದ ರೈತರು ಉಪಜೀವನಕ್ಕೆ ಆಸರೆಯಾದ ಜಾನುವಾರುಗಳನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದೆ.

    ಇರುವ ಸಿಬ್ಬಂದಿಯನ್ನೇ ಬಳಸಿಕೊಂಡು ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಹುತೇಕ ಕಡೆ ಕೆಳ ಸಿಬ್ಬಂದಿಯೇ ಸೇವೆ ನೀಡುತ್ತಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಬಗ್ಗೆ ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.
    ಡಾ.ವಿನೋದ್ ಕುಮಾರ್,ಎಡಿ, ಪಶುಪಾಲನಾ, ಪಶು ವೈದ್ಯಕೀಯ ಇಲಾಖೆ, ಕೂಡ್ಲಿಗಿ

    ಮಳೆ ಇಲ್ಲದ ಕಾರಣ ರೈತರು ಜೀವನೋಪಾಯಕ್ಕಾಗಿ ಹೈನುಗಾರಿಕೆ ನೆಚ್ಚಿಕೊಂಡು ಲಕ್ಷಾಂತರ ರೂ.ಬೆಲೆ ಬಾಳುವ ರಾಸುಗಳನ್ನು ತಂದಿದ್ದಾರೆ. ಆದರೆ ಅನಾರೋಗ್ಯಕ್ಕೀಡಾದರೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಇಲ್ಲದೆ ಆಕಳುಗಳು ಸತ್ತಿವೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಪಶುಪಾಲನಾ ಆಸ್ಪತ್ರೆಗಳಿಗೆ ಅಗತ್ಯ ವೈದ್ಯರು, ಸಿಬ್ಬಂದಿ ಹಾಗೂ ಔಷಧ ವ್ಯವಸ್ಥೆ ಕಲ್ಪಿಸಬೇಕು.
    ಕೆ.ಬಿ.ಶಿವಣ್ಣ, ಹೈನೋದ್ಯಮಿ, ಕೂಡ್ಲಿಗಿ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts