More

    ಇಂದು 2ನೇ ಏಕದಿನ ಪಂದ್ಯ, ಸರಣಿ ಜೀವಂತವಿಡಲು ಭಾರತ ಹೋರಾಟ

    ಸಿಡ್ನಿ: ಬೌಲಿಂಗ್ ವಿಭಾಗ ಮತ್ತು ಅಗ್ರ ಕ್ರಮಾಂಕದ ವೈಫಲ್ಯದಿಂದಾಗಿ ಆಸ್ಟ್ರೇಲಿಯಾ ಪ್ರವಾಸದ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿರುವ ಭಾರತ ತಂಡ ಭಾನುವಾರ ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲಿ ಪುಟಿದೇಳುವ ತವಕದಲ್ಲಿದೆ. 3 ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆ ಕಂಡಿರುವ ವಿರಾಟ್ ಕೊಹ್ಲಿ ಬಳಗ, ಸರಣಿ ಜೀವಂತವಿಡಲು ಗೆಲುವು ದಾಖಲಿಸುವ ಅನಿವಾರ‌್ಯತೆ ಎದುರಿಸುತ್ತಿದೆ.

    ಮೊದಲ ಪಂದ್ಯದಲ್ಲಿ ಕಂಡ 66 ರನ್‌ಗಳ ಸೋಲು ಭಾರತ ತಂಡದ ಕೆಲ ಲೋಪದೋಷಗಳನ್ನೂ ಬಹಿರಂಗಪಡಿಸಿದೆ. ಆಲ್ರೌಂಡರ್ ಕೊರತೆಯಿಂದಾಗಿ ಭಾರತ ತಂಡ 6ನೇ ಬೌಲಿಂಗ್ ಆಯ್ಕೆಯೇ ಇಲ್ಲದೆ ಪರದಾಡಿದೆ. ಜತೆಗೆ ಫೀಲ್ಡಿಂಗ್ ವಿಭಾಗದ ವೈಫಲ್ಯವೂ ಭಾರತ ತಂಡಕ್ಕೆ ದೊಡ್ಡ ಮಟ್ಟದ ಹಿನ್ನಡೆ ತಂದಿದೆ. ಬ್ಯಾಟ್ಸ್‌ಮನ್‌ಗಳು ಬೌಲಿಂಗ್ ಮಾಡದಿರುವುದು, ಬೌಲರ್‌ಗಳಿಗೆ ಬ್ಯಾಟಿಂಗ್ ಬಾರದಿರುವುದು ಭಾರತಕ್ಕೆ ದೊಡ್ಡ ತಲೆನೋವಾಗಿದೆ.

    ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆ ಹಾರ್ದಿಕ್ ಪಾಂಡ್ಯ 76 ರನ್‌ಗಳಲ್ಲಿ 90 ರನ್ ಸಿಡಿಸಿ ಭಾರತ ತಂಡದ ಹೋರಾಟವನ್ನು ಕೆಲಕಾಲ ಜೀವಂತವಿಡುವಲ್ಲಿ ಸಫಲರಾಗಿದ್ದರು. ಆದರೆ ಅವರಿನ್ನೂ ಸಂಪೂರ್ಣ ಫಿಟ್ ಆಗದಿರುವುದರಿಂದ ಬೌಲಿಂಗ್ ಮಾಡುತ್ತಿಲ್ಲ. ಹೀಗಾಗಿ ಅವರು ತಂಡದಲ್ಲಿದ್ದರೂ, ಆಲ್ರೌಂಡರ್ ಕೊರತೆ ಭಾರತ ತಂಡವನ್ನು ಕಾಡುತ್ತಿದೆ. ರವೀಂದ್ರ ಜಡೇಜಾ ಬಿಟ್ಟರೆ ಭಾರತ ತಂಡದಲ್ಲಿ ಆಲ್ರೌಂಡರ್ ಎನಿಸುವ ಅಥವಾ ಅರೆಕಾಲಿಕ ಬೌಲರ್ ಆಗಿ ಉಪಯುಕ್ತರಾಗುವ ಬೇರೆ ಆಟಗಾರರೂ ಇಲ್ಲ. ಹೀಗಾಗಿ ಈ ಪ್ಲ್ಯಾನ್ ಬಿ ಇಲ್ಲಿದಿರುವುದರಿಂದಾಗಿ ಭಾರತ ತಂಡ ತನ್ನ ಪ್ಲ್ಯಾನ್ ಎ ಅನ್ನೇ ಸಮರ್ಥವಾಗಿ ಕಾರ್ಯರೂಪಕ್ಕೆ ತಂದರಷ್ಟೇ ಗೆಲುವಿನ ಲಯ ಕಾಣಲು ಸಾಧ್ಯವಿದೆ.

    ಕಳೆದ 2 ತಿಂಗಳಿನಿಂದ ಸತತ ಟಿ20 ಪಂದ್ಯಗಳನ್ನು (ಐಪಿಎಲ್) ಆಡಿದ್ದರಿಂದ ಅದೇ ಗುಂಗಿನಲ್ಲಿದ್ದ ಆಟಗಾರರು, ಏಕದಿನ ಕ್ರಿಕೆಟ್‌ಗೆ ಹೊಂದಿಕೊಳ್ಳಲು ಕಷ್ಟಪಟ್ಟರು ಎಂದು ಕೊಹ್ಲಿ ಮೊದಲ ಪಂದ್ಯದ ಸೋಲಿನ ಬಳಿಕ ನೆಪ ನೀಡಿದ್ದರು. ಆದರೆ 2ನೇ ಪಂದ್ಯದಲ್ಲಿ ಭಾರತ ತಂಡ ಆ ರೀತಿಯ ತಪ್ಪೆಸಗದೆ ವೃತ್ತಿಪರತೆ ತೋರಿಸಬೇಕಾಗಿದೆ. ಆಸೀಸ್ ತಂಡದಲ್ಲೂ ಐಪಿಎಲ್‌ನಲ್ಲಿ ಆಡಿದ್ದ ಆರನ್ ಫಿಂಚ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಆಡಂ ಜಂಪಾ ಅವರಂಥ ಆಟಗಾರರು ಏಕದಿನ ಪ್ರಕಾರಕ್ಕೆ ಹೊಂದಿಕೊಂಡ ರೀತಿ ಕೊಹ್ಲಿ ಪಡೆಗೆ ಮಾದರಿಯಾಗಬೇಕಿದೆ.

    ಟೀಮ್ ನ್ಯೂಸ್:
    ಭಾರತ: ಮೊದಲ ಪಂದ್ಯದಲ್ಲಿ 6ನೇ ಬೌಲರ್ ಕೊರತೆ ಕಾಡಿದರೂ, ತಂಡದ ಕಾಂಬಿನೇಷನ್ ಬದಲಾಗುವ ಸಾಧ್ಯತೆ ಕಡಿಮೆ ಇದೆ. ಆದರೆ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ವೇಗಿ ನವದೀಪ್ ಸೈನಿ ತಕ್ಕಮಟ್ಟಿಗೆ ಫಿಟ್ನೆಸ್ ಸಮಸ್ಯೆ ಎದುರಿಸಿದ್ದು, ಅವರು ಫಿಟ್ ಆಗದಿದ್ದರೆ ಹೊರಗುಳಿಯಬಹುದು. ಆಗ ಚಾಹಲ್ ಬದಲಿಗೆ ಕುಲದೀಪ್ ಯಾದವ್ ಮತ್ತು ಸೈನಿ ಬದಲಿಗೆ ಶಾರ್ದೂಲ್ ಠಾಕೂರ್ ಅಥವಾ ಟಿ. ನಟರಾಜನ್ ಕಣಕ್ಕಿಳಿಯಬಹುದು.

    ಆಸ್ಟ್ರೇಲಿಯಾ: ಮೊದಲ ಪಂದ್ಯದಲ್ಲಿ ಬೌಲಿಂಗ್ ವೇಳೆ ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಗಾಯಗೊಂಡಿದ್ದು, ಓವರ್ ಪೂರ್ಣಗೊಳಿಸದೆ ಮೈದಾನ ತೊರೆದಿದ್ದರು. ಅವರು 2ನೇ ಪಂದ್ಯಕ್ಕೆ ಫಿಟ್ ಆಗುವ ಸಾಧ್ಯತೆ ಕಡಿಮೆ ಇದ್ದು, ಯುವ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆಯ ಅವಕಾಶ ಪಡೆಯುವ ನಿರೀಕ್ಷೆ ಇದೆ. ಮತ್ತೋರ್ವ ಆಲ್ರೌಂಡರ್ ಮೊಯ್ಸೆಸ್ ಹೆನ್ರಿಕ್ಸ್ ಕೂಡ ಆಯ್ಕೆಗೆ ಲಭ್ಯರಿದ್ದಾರೆ.

    ಭಾರತಕ್ಕೆ ಬ್ಯಾಟಿಂಗ್ ಕಳವಳ
    ಬ್ಯಾಟಿಂಗ್‌ಸ್ನೇಹಿ ಪಿಚ್‌ನಲ್ಲಿ ಭಾರತ ತಂಡದ ಬೌಲರ್‌ಗಳು ಆತಿಥೇಯ ಬ್ಯಾಟ್ಸ್‌ಮನ್‌ಗಳಿಂದ ದಂಡನೆಗೆ ಒಳಗಾಗಿದ್ದು ಅಚ್ಚರಿಯಲ್ಲ. ಆದರೆ ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಕೆಟ್ಟ ಹೊಡೆತಗಳ ಆಯ್ಕೆಯಿಂದ ಔಟಾಗಿದ್ದು ನಿರಾಶಾದಾಯಕ. ಮಯಾಂಕ್ ಅಗರ್ವಾಲ್ ಹೆಚ್ಚುವರಿ ಬೌನ್ಸ್ ಅಂದಾಜಿಸುವಲ್ಲಿ ವಿಲರಾಗಿದ್ದರೆ, ಶ್ರೇಯಸ್ ಅಯ್ಯರ್ ಬೌನ್ಸರ್‌ಗೆ ವಿಕೆಟ್ ಒಪ್ಪಿಸಿದ್ದರು. ಆಸೀಸ್ ಕ್ರಿಕೆಟಿಗರು ಮತ್ತು ಮಾಧ್ಯಮಗಳಿಂದ ಭಾರಿ ಹೊಗಳಿಕೆ ಪಡೆದಿರುವ ಕೊಹ್ಲಿ, ಕೆಲ ಆಕರ್ಷಕ ಹೊಡೆತಗಳ ಮೂಲಕ ಮಿಂಚಿದರೂ, ದೊಡ್ಡ ಇನಿಂಗ್ಸ್ ಆಡುವಲ್ಲಿ ಎಡವಿದರು. ಕೆಎಲ್ ರಾಹುಲ್ 50 ಓವರ್ ವಿಕೆಟ್ ಕೀಪಿಂಗ್ ಮಾಡಿದ ಬಳಿಕ 2ನೇ ಇನಿಂಗ್ಸ್‌ನ 10ನೇ ಓವರ್‌ನಲ್ಲೇ ಬ್ಯಾಟಿಂಗ್‌ಗೆ ಇಳಿಯುವ ಸವಾಲನ್ನು ಸಮರ್ಥವಾಗಿ ನಿಭಾಯಿಸಲು ಶಕ್ತರಾಗಲಿಲ್ಲ.

    ಪಂದ್ಯ ಆರಂಭ: ಬೆಳಗ್ಗೆ 9.10
    ನೇರಪ್ರಸಾರ: ಸೋನಿ ನೆಟ್‌ವರ್ಕ್, ಡಿಡಿ.

    ಪಿಚ್ ರಿಪೋರ್ಟ್
    ನಿರೀಕ್ಷೆಯಂತೆಯೇ ಎಸ್‌ಸಿಜಿ ಪಿಚ್ ಮೊದಲ ಪಂದ್ಯದ ವೇಳೆ ರನ್‌ಪ್ರವಾಹಕ್ಕೆ ವೇದಿಕೆಯಾಗಿತ್ತು. 3 ದಿನಗಳ ಅಂತರದಲ್ಲಿ 2ನೇ ಪಂದ್ಯ ನಡೆಯುತ್ತಿರುವುದರಿಂದ ಮತ್ತು ಭಾನುವಾರ ಮಧ್ಯಾಹ್ನದ ವೇಳೆಗೆ ತಾಪಮಾನ 40 ಡಿಗ್ರಿ ಸೆಂಟಿಗ್ರೇಡ್ ಇರಲಿರುವುದರಿಂದ ಈ ಬಾರಿ ಪಿಚ್ ವರ್ತನೆ ಅಂದಾಜಿಸುವುದು ಸ್ಪಲ್ಪ ಕಷ್ಟ. ಮೊದಲ ಪಂದ್ಯದ 2ನೇ ಸರದಿಯಲ್ಲಿ ಸ್ಪಿನ್ನರ್‌ಗಳಿಗೆ ಪಿಚ್ ಸ್ವಲ್ಪ ನೆರವಾಗಿತ್ತು. ಅದರ ಹೊರತಾಗಿ ಪಿಚ್ ಬೌಲರ್‌ಗಳಿಗೆ ಯಾವುದೇ ನೆರವು ನೀಡಿರಲಿಲ್ಲ.

    11: ಸಿಡ್ನಿ ಮೈದಾನದ ಏಕದಿನ ಪಂದ್ಯದಲ್ಲಿ ಕೊಹ್ಲಿ ರನ್ ಸರಾಸರಿ 11.40. ಇದು ವಿಶ್ವದೆಲ್ಲೆಡೆ ಅವರು ಕನಿಷ್ಠ 5 ಪಂದ್ಯವಾಡಿರುವ ಮೈದಾನಗಳ ಪೈಕಿ ಕನಿಷ್ಠವಾಗಿದೆ.

    112: ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಇನ್ನು 112 ರನ್ ಗಳಿಸಿದರೆ 12 ಸಾವಿರ ರನ್ ಪೂರೈಸಿದ ಸಾಧನೆ ಮಾಡಲಿದ್ದಾರೆ. ಸದ್ಯ 249 ಪಂದ್ಯಗಳ 240 ಇನಿಂಗ್ಸ್‌ಗಳಿಂದ 11,888 ರನ್ ಗಳಿಸಿದ್ದು, 300 ಇನಿಂಗ್ಸ್‌ಗಳಲ್ಲಿ 12 ಸಾವಿರ ರನ್ ಗಳಿಸಿರುವ ಸಚಿನ್ ತೆಂಡುಲ್ಕರ್‌ರನ್ನು ಹಿಂದಿಕ್ಕಿ ಅತಿವೇಗದ ಸಾಧನೆ ಮಾಡುವ ಅವಕಾಶ ಹೊಂದಿದ್ದಾರೆ.

    2019ರ ಸರಣಿ ಸ್ಫೂರ್ತಿ!
    ಸರಣಿಯ ಮೊದಲ ಪಂದ್ಯ ಸೋತರೂ ಭಾರತಕ್ಕೆ ತಿರುಗೇಟು ನೀಡಲು 2019ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಸರಣಿಯೇ ಸ್ಫೂರ್ತಿಯಾಗಬೇಕಿದೆ. 2019ರ ಜನವರಿಯಲ್ಲಿ ನಡೆದ 3 ಪಂದ್ಯಗಳ ಏಕದಿನ ಸರಣಿಯಲ್ಲೂ ಭಾರತ ತಂಡ ಸಿಡ್ನಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೋಲು ಕಂಡಿತ್ತು. ಆದರೆ ಬಳಿಕ ಅಡಿಲೇಡ್ ಮತ್ತು ಮೆಲ್ಬೋರ್ನ್‌ಗಳಲ್ಲಿ ಗೆದ್ದು ಸರಣಿ ವಶಪಡಿಸಿಕೊಂಡಿತ್ತು.

    ನಿಧಾನಗತಿ ಓವರ್‌ಗಾಗಿ ಭಾರತಕ್ಕೆ ದಂಡ
    ಮೊದಲ ಪಂದ್ಯದ ನಿಧಾನಗತಿ ಓವರ್‌ಗಾಗಿ ಭಾರತ ತಂಡಕ್ಕೆ ಪಂದ್ಯದ ಸಂಭಾವನೆಯ ಶೇ. 20 ದಂಡ ವಿಧಿಸಲಾಗಿದೆ. ಭಾರತ ತಂಡ 50 ಓವರ್ ಪೂರ್ಣಗೊಳಿಸಲು 4 ಗಂಟೆ ಮತ್ತು 6 ನಿಮಿಷ ತೆಗೆದುಕೊಂಡಿತ್ತು. ಐಸಿಸಿ ಮ್ಯಾಚ್ ರೆಫ್ರಿ ಡೇವಿಡ್ ಬೂನ್ ಪ್ರಕಾರ, ಭಾರತ ತಂಡ ನಿಗದಿತ ಸಮಯದ ವೇಳೆ 1 ಓವರ್ ಹಿಂದುಳಿದಿತ್ತು. ಮೈದಾನದ ಅಂಪೈರ್‌ಗಳ ಭಾರತ ತಂಡದ ನಿಧಾನಗತಿ ಓವರ್ ಬಗ್ಗೆ ದೂರು ನೀಡಿದ್ದರೆ, ನಾಯಕ ವಿರಾಟ್ ಕೊಹ್ಲಿ ಈ ತಪ್ಪನ್ನು ಒಪ್ಪಿಕೊಂಡಿದ್ದರು. ದಿನವಿಡೀ ಪಂದ್ಯ ಆಡಿದಂತೆ ಅನಿಸಿತು. ಇದು ನಾನು ಆಡಿದ ಅತಿ ಸುದೀರ್ಘ ಏಕದಿನ ಪಂದ್ಯ ಎಂದು ಪಂದ್ಯಶ್ರೇಷ್ಠ ಸ್ಟೀವನ್ ಸ್ಮಿತ್ ಪಂದ್ಯದ ಬಳಿಕ ಹೇಳಿದ್ದರು. ಪಂದ್ಯದ ನಡುವೆ ಪ್ರೇಕ್ಷಕರಿಬ್ಬರು ಮೈದಾನಕ್ಕೆ ನುಗ್ಗಿದ್ದರಿಂದ, ಡಿಆರ್‌ಎಸ್‌ನಿಂದ, ಗಾಯದ ಸಮಸ್ಯೆಗಳಿಂದ ಮತ್ತು ಆಸೀಸ್ ಕೂಡ ಸ್ವಲ್ಪ ನಿಧಾನಗತಿ ಬೌಲಿಂಗ್ ಮಾಡಿದ್ದರಿಂದ ಪಂದ್ಯ ಸುಮಾರು ಎಂಟೂವರೆ ಗಂಟೆಗಳ ಕಾಲ ನಡೆಯಿತು. ಆಸೀಸ್ ಕಾಲಮಾನ ರಾತ್ರಿ 11.10ರವರೆಗೂ ಪಂದ್ಯ ಸಾಗಿತ್ತು.

    ಈ ವಿಷಯದಲ್ಲಿ ನಾನು ಕೊಹ್ಲಿ ಪರ ನಿಲ್ಲುವೆ ಎಂದ ಗಂಭೀರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts