More

    ಮಲೆನಾಡಲ್ಲಿ ಗಾಳಿ-ಮಳೆ ನಿರಂತರ

    ಶಿರಸಿ: ವಾರದಿಂದೀಚೆಗೆ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಟಿಸುತ್ತಿದ್ದು, ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ.
    ಗುರುವಾರ ರಾತ್ರಿ ಹಾಗೂ ಶುಕ್ರವಾರ ಸುರಿದ ಮಳೆಗೆ ಗ್ರಾಮೀಣ ಭಾಗದ ಹಲವೆಡೆ ರಸ್ತೆಗಳ ಮೇಲೆ ನೀರು ತುಂಬಿ ಹರಿದರೆ ಇನ್ನು ಕೆಲವೆಡೆ ಧರೆ ಕುಸಿತ, ಮನೆಗಳ ಮೇಲೆ ಮರಗಳು ಬಿದ್ದು ಅವಾಂತರ ಸೃಷ್ಟಿಯಾಗಿದೆ.
    ಗಾಳಿ ಮಳೆಗೆ ತಾಲೂಕಿನ ಸೊಣಗಿಮನೆಯ ಶರಾವತಿ ಗೌಡ ಅವರ ವಾಸದ ಮನೆಯ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಹುತ್ಗಾರದ ಗಿರಿಜಾ ಶಾಸ್ತ್ರಿ ಅವರ ಮನೆ ಹಾಗೂ ಕಂಪೌಂಡ್ ಮೇಲೆ ಮರ ಬಿದ್ದ ಪರಿಣಾಮ ಹಾನಿಯಾಗಿದೆ.
    ಅಬ್ಬರದ ಗಾಳಿಗೆ ತುಂಡಾದ ವಿದ್ಯುತ್ ತಂತಿ ತುಳಿದು ಕೊಪ್ಪದ ಪಾರ್ವತಿ ನಾಯ್ಕ ಅವರಿಗೆ ಸೇರಿದ 2 ಎತ್ತು ಹಾಗೂ ಒಂದು ಆಕಳು ಮೃತಪಟ್ಟಿವೆ. ನಗರದ ರಾಮನಬೈಲಿನ ಉಮೇಶ ವೆರ್ಣೆಕರ ಅವರಿಗೆ ಸೇರಿದ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಮಂಡೇಮನೆ ಬಳಿ ಅಲ್ಪ ಪ್ರಮಾಣದಲ್ಲಿ ಕೊಟ್ಟಿಗೆ ಹಿಂದಿನ ಧರೆ ಕುಸಿದಿದ್ದು, ಮಣ್ಣು ಕೊಟ್ಟಿಗೆಗೆ ನುಗ್ಗಿದೆ.
    ತಾಲೂಕಿನ ಮಶೀಗದ್ದೆಯ ಸುರೇಶ ಭಟ್ಟ ಅವರಿಗೆ ಸೇರಿದ ತೋಟಕ್ಕೆ ಸಿಡಿಲು ಬಡಿದ ಪರಿಣಾಮ 60 ಅಡಕೆ ಮರಗಳು ನಾಶವಾಗಿವೆ. ಅಜ್ಜಿಬಳದ ಗೋಪಾಲ ಹೆಗಡೆ ಅವರಿಗೆ ಸೇರಿದ ತೋಟದಲ್ಲಿ ಬೃಹದಾಕಾರದ ಮರ ಬಿದ್ದ ಕಾರಣ 25ರಿಂದ 30 ಅಡಕೆ ಮರಗಳು ಧರೆಗುರುಳಿವೆ.
    ಯಥಾ ಸ್ಥಿತಿ: ಗುರುವಾರ ಭೂಕುಸಿತ ಉಂಟಾಗಿದ್ದ ತಾಲೂಕಿನ ಜಾಜಿಗುಡ್ಡೆಯಲ್ಲಿ ಶುಕ್ರವಾರ ಯಾವುದೇ ಕುಸಿತ ಉಂಟಾಗಿಲ್ಲ. ಮಳೆಯ ಪ್ರಮಾಣದಲ್ಲಿ ಸ್ವಲ್ಪ ಇಳಿಕೆಯಾದ ಕಾರಣ ಕುಸಿತದ ಪ್ರಮಾಣ ನಿಂತಿದೆ. ಹೀಗಾಗಿ ಸ್ಥಳೀಯರು ಸ್ಥಳಾಂತರಗೊಳ್ಳದೆ ಹಾಲೀ ಬೆಟ್ಟದ ತಪ್ಪಲಿನ ಮನೆಗಳಲ್ಲಿ ವಾಸಿಸುತ್ತಿದ್ದಾರೆ.
    ಕೊಚ್ಚಿ ಹೋದ ಕಿರುಸೇತುವೆ
    ದಾಂಡೇಲಿ: ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಳೇ ದಾಂಡೇಲಿಯಿಂದ ಐಪಿಎಂ ಕಾಲನಿಗೆ ಸಂಪರ್ಕ ಕಲ್ಪಿಸುವ ಕಾಳಿನದಿಯ ಕಿರು ಸೇತುವೆ ಕೊಚ್ಚಿಹೋಗಿದೆ. ಕಳೆದ ವರ್ಷ ಮಳೆಗಾಲದಲ್ಲಿಯೇ ಸೇತುವೆ ಸ್ವಲ್ಪ ಪ್ರಮಾಣದಲ್ಲಿ ಹಾನಿಗೊಳಗಾಗಿತ್ತು. ಇದನ್ನು ನಗರಸಭೆ ದುರಸ್ತಿ ಮಾಡಿಸಿತ್ತು. ಈ ವರ್ಷ ಮಳೆಗಾಲದ ಆರಂಭದಲ್ಲಿಯೇ ಸೇತುವೆ ಕೊಚ್ಚಿಹೋಗಿರುವುದರಿಂದ ಜನರ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿದೆ.
    72.86 ಮಿಮೀ ಮಳೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ವಿವಿಧೆಡೆ ಉತ್ತಮ ಮಳೆ ಮುಂದುವರಿದಿದೆ. ಶುಕ್ರವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಸರಾಸರಿ 72.86 ಮಿಮೀ ಮಳೆಯಾಗಿದೆ. ಅಂಕೋಲಾದಲ್ಲಿ 39.4 ಮಿಮೀ, ಭಟ್ಕಳ-28, ಹಳಿಯಾಳ-18.6,ಹೊನ್ನಾವರ -124.1, ಕಾರವಾರ-37,ಕುಮಟಾ-107.2,ಮುಂಡಗೋಡ-47.2, ಸಿದ್ದಾ ಪುರ-142.4,ಶಿರಸಿ-90,ಜೊಯಿಡಾ-102.6, ಯಲ್ಲಾಪುರ-65 ಮಿಮೀ ಮಳೆಯಾಗಿದೆ. ಕದ್ರಾ ಜಲಾಶಯಕ್ಕೆ 17883 ಕ್ಯೂಸೆಕ್, ಸೂಪಾ ಜಲಾಶಯಕ್ಕೆ 12921 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts