More

    ಆಗಸದ ಟ್ರಾಫಿಕ್ ಜಾಮ್​ಗೆ ಸಿಗಲಿದೆಯೇ ಉತ್ತರ?

    ಅದು 1979ರ ಜುಲೈ 11. ಪಶ್ಚಿಮ ಆಸ್ಟ್ರೇಲಿಯಾದ ಪುಟ್ಟ ಹಳ್ಳಿಯಾದ ಎಸ್ಪರೆನ್ಸ್​ನ 17 ವರ್ಷದ ಹುಡುಗ ಸ್ಟಾನ್ ಥಾರ್ನ್​ಟನ್ ತನ್ನ ಕಾರನ್ನು ಊರಿಂದಾಚೆಗೆ ವೇಗವಾಗಿ ಓಡಿಸಿಕೊಂಡು ಹೋಗುತ್ತಿದ್ದ. ಕಾರಿನಲ್ಲಿದ್ದ 24 ಲೋಹದ ತುಂಡುಗಳು ತನ್ನ ಭಾಗ್ಯದ ಬಾಗಿಲನ್ನು ತೆರೆಯುತ್ತವೆ ಎಂಬ ಅರಿವು ಆತನಿಗಿತ್ತು. ಅದ್ಹೇಗೋ ರಾತ್ರಿಪೂರ್ತಿ ಡ್ರೖೆವ್ ಮಾಡಿ ಏರ್​ಪೋರ್ಟ್ ತಲುಪಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಇಳಿದು ತಾನು ಹೋಗಬೇಕಾದ ಕೇಂದ್ರವನ್ನು ತಲುಪಿದ. ತಂದಿದ್ದ ಚೀಲವನ್ನು ಅಲ್ಲಿದ್ದ ವಿಜ್ಞಾನಿಗಳ ಕೈಗಿತ್ತ. ಆತನಿಗಿದ್ದ ಗಡಿಬಿಡಿ ಅವರಿಗಿರಲಿಲ್ಲ. ಆತ ತಂದ ವಸ್ತು ಅಸಲಿಯೇ ಎಂದು ಪರೀಕ್ಷಿಸಲು ಪೂರ್ತಿ ಒಂದು ವಾರ ತೆಗೆದುಕೊಂಡರು. ಸ್ಟಾನ್​ಗೆ ನಿದ್ರೆ ಬಾರದ ರಾತ್ರಿಗಳವು. ಕೊನೆಗೂ ವಿಜಯಮಾಲೆ ಸ್ಟಾನ್​ನನ್ನು ಹುಡುಕಿಕೊಂಡು ಬಂತು. ಹಲವು ದೇಶಗಳ ಸರದಾರರು ಕಣ್ಣಿಟ್ಟಿದ್ದ ಆ ಪ್ರಶಸ್ತಿಯನ್ನು ಗೆಲ್ಲುವುದರ ಜತೆಗೆ ಹತ್ತು ಸಾವಿರ ಅಮೆರಿಕನ್ ಡಾಲರ್​ಗಳನ್ನು ಜೇಬಿಗಿಳಿಸಿಕೊಂಡ.

    Chowkaಅವತ್ತು ಸ್ಟಾನ್ ತನ್ನ ಊರಿನಿಂದ ಹೊತ್ತುಕೊಂಡು ಹೋಗಿದ್ದು ಸ್ಕೈಲ್ಯಾಬ್ ಎಂಬ ಅಮೆರಿಕದ ಬಾಹ್ಯಾಕಾಶ ನಿಲ್ದಾಣದ ಅವಶೇಷಗಳು. 1973ರ ಮೇ ತಿಂಗಳಿನಲ್ಲಿ ಹಾರಿಸಿದ್ದ ಈ ನಿಲ್ದಾಣ 1979ರಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿತು. ಹೀಗೆ ಸೇವಾ ನಿವೃತ್ತಿ ಹೊಂದಿದ್ದ ಈ ನಿಲ್ದಾಣ, ಭೂಮಿಗೆ ವಾಪಸ್ ಬರುವುದೆಂಬ ಸುದ್ದಿ ಎಲ್ಲೆಡೆ ಸಂಚಲನ ಉಂಟುಮಾಡಿತು. ಅದನ್ನು ಅದರ ಮೂಲಕಕ್ಷೆಯಲ್ಲೇ ಉಳಿಸುವ ವಿಜ್ಞಾನಿಗಳ ಪ್ರಯತ್ನ ವಿಫಲವಾಯಿತು. ಕೊನೆಗೆ ಅದನ್ನು ಭೂಮಿಯಲ್ಲಿ ಇಳಿಸುವ ಪ್ರಯತ್ನಗಳು ನಡೆದವು. ಆದರೆ ಯಾವ ಸ್ಥಳದಲ್ಲಿ ಇಳಿಯುತ್ತದೆ ಎಂಬುದಕ್ಕೆ ಕರಾರುವಾಕ್ ಉತ್ತರ ಯಾರ ಬಳಿಯೂ ಇರಲಿಲ್ಲ. ಹೀಗಾಗಿ ಇದೊಂದು ಜಾಗತಿಕ ಆಪತ್ತಾಗಿ ಪರಿಣಮಿಸಿತು. ಸ್ಕೈಲ್ಯಾಬ್ ಎಲ್ಲಿ ಹೇಗೆ ಯಾವಾಗ ಅಂತ್ಯ ಕಾಣಲಿದೆ ಎಂಬುದರ ಕುರಿತು ಭಾರಿ ಬೆಟ್ಟಿಂಗ್ ನಡೆಯಿತು. ಅದರಲ್ಲಿ ಗಮನ ಸೆಳೆದದ್ದು ‘ಸ್ಯಾನ್​ಫ್ರಾನ್ಸಿಸ್ಕೋ ಎಕ್ಸಾಮಿನರ್’ ಎಂಬ ಪತ್ರಿಕೆ ಘೊಷಿಸಿದ್ದ ಬಹುಮಾನ. ಸ್ಕೈಲ್ಯಾಬ್ ಭೂಮಿಗೆ ಅಪ್ಪಳಿಸಿದ ನಂತರ ಅದರ ಅವಶೇಷಗಳನ್ನು ತನ್ನ ಕಛೇರಿಗೆ ಮೊದಲು ತಲುಪಿಸುವವರಿಗೆ 10000 ಡಾಲರ್ ಕೊಡುವುದಾಗಿ ಪತ್ರಿಕೆ ಘೊಷಿಸಿತು. ಇದೆಲ್ಲದರ ನಡುವೆ ವಿಜ್ಞಾನಿಗಳ ಪ್ರಯತ್ನದ ಫಲವಾಗಿ ಸ್ಕೈಲ್ಯಾಬ್ ಹಿಂದೂ ಮಹಾಸಾಗರ ಮತ್ತು ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಜನಜೀವನಕ್ಕೆ ಹೆಚ್ಚಿನ ಹಾನಿ ಮಾಡದೇ ಪತನಗೊಂಡಿತು. ಹೀಗೆ ಬಿದ್ದ ಅವಶೇಷಗಳು ಮೊದಲು ಸಿಕ್ಕಿದ್ದು ಸ್ಟಾನ್​ಗೆ.

    1997ರ ಜನವರಿ 22ರ ಒಂದು ಸಂಜೆ. ಅಮೆರಿಕದ ಒಕ್ಲಹಾಮಾದ ಪಾರ್ಕ್​ವೊಂದರಲ್ಲಿ ವಾಕಿಂಗ್ ಮಾಡುತ್ತಿದ್ದ ಲೊಟ್ಟಿ ವಿಲಿಯಮ್್ಸ ಎಂಬ ಮಹಿಳೆಗೆ ಆಗಸದಲ್ಲಿ ಬೆಳಕಿನ ಪುಂಜವೊಂದು ಕಂಡಿತು. ಅದನ್ನು ದಿಟ್ಟಿಸಿ ನೋಡುತ್ತ ಮುನ್ನಡೆದ ಆಕೆಗೆ ಬೆನ್ನ ಮೇಲೆ ಆರು ಇಂಚಿನಷ್ಟು ದೊಡ್ಡ ಲೋಹದ ತುಂಡೊಂದು ಟಪಕ್ಕನೆ ಬಿತ್ತು. ಅಷ್ಟಾಗಿದ್ದೇ ತಡ, ಮುಂದೊಂದು ವಾರ ಎಲ್ಲ ಪತ್ರಿಕೆಗಳಲ್ಲಿಯೂ ಈಕೆಯದ್ದೇ ಚಿತ್ರ, ಅದೇ ವಿಷಯ. ಯಾಕೆಂದರೆ, ಅವತ್ತು ಈಕೆಯ ಮೇಲೆ ಬಿದ್ದದ್ದು ಆಗಸದಲ್ಲಿ ಸುತ್ತುತ್ತ ಸುಸ್ತಾಗಿ ಭೂಮಿಗೆ ಬಂದು ಬಿದ್ದ ರಾಕೆಟ್​ವೊಂದರ ತುಂಡು. ಕೆಲ ದಿನಗಳ ನಂತರ ನಾಸಾ ಇದು ತಾನು ಹಾರಿಸಿದ ಉಪಗ್ರಹವೊಂದರ ಎರಡನೇ ಹಂತದ ರಾಕೆಟ್​ನ ತುಂಡು ಎಂಬುದನ್ನು ದೃಢಪಡಿಸಿತು. ಈ ತುಂಡಿನೇಟಿನಿಂದ ಲೊಟ್ಟಿ, ಮಾನವನಿರ್ವಿುತ ಆಕಾಶಕಾಯದಿಂದ ಏಟು ತಿಂದ ಪ್ರಥಮಳೆಂಬ ವಿಚಿತ್ರ ದಾಖಲೆಗೆ ಪಾತ್ರಳಾದಳು. ಆ ಘಟನೆಯ ಬೆಳ್ಳಿಹಬ್ಬ ಅದಾಗಲೇ ಮುಗಿದುಹೋಗಿದೆ. ಅದೆಷ್ಟೋ ಮಾನವನಿರ್ವಿುತ ಆಕಾಶಕಾಯಗಳು ನಭಕ್ಕೇರಿ ನಿವೃತ್ತಿಯನ್ನೂ ಪಡೆದಿವೆ. ತೊಂದರೆಯೆಂದರೆ ಈ ನಿಷ್ಪ್ರಯೋಜಕಗಳು ಆಗಸದಲ್ಲಿ ಸುಮ್ಮನೇ ಸುತ್ತುವ ವೇಸ್ಟ್ ಬಾಡಿಗಳಾಗಿ ಅಲ್ಲಿ ಟ್ರಾಫಿಕ್ ಜಾಮ್ ಮಾಡುತ್ತಿವೆ.

    2021ರ ಮೇ 21ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಪರಿಶೀಲನೆ ನಡೆಸುತ್ತಿದ್ದ ವಿಜ್ಞಾನಿಗಳಿಗೆ ಅದರ ಕಾನಡಾಮ್ರ್ ಎಂಬ ಉಪಕರಣದ ಮೇಲೆ ಜಜ್ಜಿದ ಗುರುತುಗಳು ಕಂಡುಬಂದವು. ಪರಿಶೀಲನೆ ನಡೆಸಲಾಗಿ ಅದು ಬಾಹ್ಯಾಕಾಶದಲ್ಲಿ ಸುಖಾಸುಮ್ಮನೆ ಸುತ್ತುತ್ತಿರುವ ಕೃತಕ ಉಪಗ್ರಹದ ತುಂಡು ಬಡಿದು ಆದ ಗುರುತು ಎಂಬುದು ಖಾತ್ರಿಯಾಯ್ತು. ಇದೊಂದು ಸಣ್ಣದರಲ್ಲಿಯೇ ಮುಕ್ತಾಯಗೊಂಡ, ದೊಡ್ಡ ಭಾನಗಡಿಯಾಗಬಲ್ಲ ಸಾಧ್ಯತೆಯಿದ್ದ ಘಟನೆ ಎಂಬುದನ್ನು ತಾಂತ್ರಿಕ ತಂಡ ಒಪ್ಪಿಕೊಂಡಿತು. ವಿಶೇಷವೆಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ವಿನ್ಯಾಸ ಇಂತಹುದೊಂದು ಪ್ರಕ್ರಿಯೆಗೆ ಸಜ್ಜಾಗಿದೆ ಕೂಡ. ಆಗಸದಲ್ಲಿ ಸುತ್ತುತ್ತಿರುವ ರದ್ದಿಯೊಡನೆ ಡಿಕ್ಕಿಯನ್ನು ತಪ್ಪಿಸಲು ಅಮೆರಿಕದ ಬಾಹ್ಯಾಕಾಶ ನಿಗರಾಣಿ ಜಾಲವು ಸುಮಾರು 45000 ನಿಷ್ಪ್ರಯೋಜಕ ಆಗಸ ರದ್ದಿಗಳ ಮೇಲೆ ಕಣ್ಣಿಟ್ಟಿದ್ದು, ಅವು ಡಿಕ್ಕಿ ಹೊಡೆಯುವ ಸಾಧ್ಯತೆಯ ಮೇರೆಗೆ ನಿಲ್ದಾಣದ ಸ್ಥಾನವನ್ನು ಸ್ವಯಂಚಾಲಿತವಾಗಿ ಹೊರಳಿಸುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಆದರೆ ಮೇ 21ರಂದು ನಡೆದ ಘಟನೆ ಈ ವ್ಯವಸ್ಥೆಯ ಲೋಪಗಳನ್ನು ಎತ್ತಿ ತೋರಿಸಿತು.

    ಅಂಕಿಅಂಶಗಳ ಪ್ರಕಾರ, ಈವರೆಗೆ ನಭಕ್ಕೆ ಚಿಮ್ಮಿದ ಮಾನವ ನಿರ್ವಿುತ ಉಪಗ್ರಹಗಳ ಸಂಖ್ಯೆ 12 ಸಾವಿರಕ್ಕೂ ಹೆಚ್ಚು. ಅವುಗಳಲ್ಲಿ ಏಳೂವರೆ ಸಾವಿರದಷ್ಟು ಉಪಗ್ರಹಗಳು ಇನ್ನೂ ತಮ್ಮ ಕಕ್ಷೆಯಲ್ಲಿ ಸುತ್ತುತ್ತಲೇ ಇವೆ. ಆ ಪೈಕಿ ನಾಲ್ಕೂವರೆ ಸಾವಿರದಷ್ಟು ಉಪಗ್ರಹಗಳು ಮಾತ್ರ ಇನ್ನೂ ಕಾರ್ಯ ನಿರ್ವಹಿಸುವಂಥವು. ಅಂದರೆ ಉಳಿದ 3 ಸಾವಿರದಷ್ಟು ಉಪಗ್ರಹಗಳು ಸುಮ್ಮನೆ ನಿಷ್ಪ್ರಯೋಜಕವಾಗಿ ಉಳಿದ ಉಪಗ್ರಹಗಳಿಗೆ ಡಿಕ್ಕಿ ಹೊಡೆಯುವ ಆತಂಕವನ್ನು ಹೆಚ್ಚಿಸುತ್ತಿವೆ. ಇಷ್ಟು ಸಾಲದ್ದಕ್ಕೆ ಒಂದು ಹಂತದವರೆಗೆ ಇವುಗಳ ಕಕ್ಷೆಯ ಪರಿಧಿ ಹೆಚ್ಚಿದಂತೆ ವೇಗವೂ ಹೆಚ್ಚಿ ಹಾನಿಯ ಪರಿಣಾಮ ಕೂಡ ಹೆಚ್ಚುತ್ತದೆ. ಉದಾಹರಣೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ತನ್ನ ಕಕ್ಷೆಯಲ್ಲಿ ಸೆಕೆಂಡಿಗೆ 8 ಕಿಮೀ ವೇಗದಲ್ಲಿ ಸುತ್ತುತ್ತದೆ. ಈ ವೇಗದಲ್ಲಿ ಸುತ್ತುತ್ತಿರುವ ವಸ್ತುವಿಗೆ ಪುಟ್ಟ ಮೊನಚಾದ ತುಂಡೊಂದು ಬಂದು ಬಡಿದರೆ ಆಗುವ ಆಘಾತವನ್ನೊಮ್ಮೆ ಊಹಿಸಿಕೊಳ್ಳಿ. ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಅಂದಾಜಿನ ಪ್ರಕಾರ 4 ಇಂಚು ಗಾತ್ರದ 36 ಸಾವಿರದಷ್ಟು, ಅರ್ಧದಿಂದ 4 ಇಂಚು ಗಾತ್ರದ 10 ಲಕ್ಷದಷ್ಟು ಮತ್ತು ಅರ್ಧ ಇಂಚ್​ಗಿಂತ ಕಡಿಮೆ ಗಾತ್ರದ 30 ಕೋಟಿಯಷ್ಟು ಲೋಹದ ತುಣುಕುಗಳು ಭೂಮಿಯ ಸುತ್ತ ತಿರುಗುತ್ತಿವೆ. ಇವೆಲ್ಲ ಬೇರೆ ಬೇರೆ ಕಾರಣಗಳಿಂದ ಆಗಸದಲ್ಲಿ ಮಾನವ ನಿರ್ವಿುತ ಉಪಗ್ರಹಗಳು ಅಥವಾ ಅವುಗಳ ಡಿಕ್ಕಿಯಿಂದ ಉಂಟಾದ ತಾಜ್ಯಗಳು. ಅತ್ತ ಕಡೆ ಮುಂದುವರೆದ, ಮುಂದುವರೆಯುತ್ತಿರುವ ದೇಶಗಳು ತಾಮುಂದು ನಾಮುಂದು ಎಂಬಂತೆ ಹಾರಿಸುತ್ತಿರುವ ಉಪಗ್ರಹಗಳು ಹೆಚ್ಚಾದಂತೆ ಆಗಸದಲ್ಲಿ ತಾಜ್ಯದ ಜತೆಗೆ ಅವು ಡಿಕ್ಕಿಯಾಗುವ ಸಂಭವನೀಯತೆ ಕೂಡ ಹೆಚ್ಚಾಗುತ್ತಿದೆ.

    ಇಂತಹ ಪರಿಸ್ಥಿತಿ ಸೃಷ್ಟಿಯಾದದ್ದು ಅಚಾನಕ್ಕಾಗಿ ಅಲ್ಲ. 1978ರಲ್ಲಿಯೇ ನಾಸಾ ವಿಜ್ಞಾನಿ ಡೊನಾಲ್ಡ್ ಕೆಸ್ಲರ್ ಈ ಪರಿಸ್ಥಿತಿಯನ್ನು ಊಹಿಸಿದ್ದರು. ಆ ವರ್ಷ ಅವರು ಮಂಡಿಸಿದ ಪ್ರಬಂಧದಲ್ಲಿ ‘ಆಗಸದಲ್ಲಿ ಮಾನವನಿರ್ವಿುತ ಉಪಗ್ರಹಗಳು ಹೆಚ್ಚಿದಂತೆ, ಅವುಗಳಿಂದ ಉತ್ಪತ್ತಿಯಾಗುವ ತಾಜ್ಯವೂ ಹೆಚ್ಚಾಗಿ ನೂತನ ಉಪಗ್ರಹಗಳಿಗೆ ತೊಂದರೆಯಾಗಲಿದೆ’ ಎಂದು ಪ್ರತಿಪಾದಿಸಿದ್ದರು. ಅದು ನಂತರ ಕೆಸ್ಲರ್ ಪರಿಣಾಮ (ಕೆಸ್ಲರ್ ಸಿಂಡ್ರೋಮ್ ಎಂದೇ ಖ್ಯಾತಿಯಾಯ್ತು. ಈಗಿನ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿದರೆ ನಾವು ಖಂಡಿತವಾಗಿಯೂ ಕೆಸ್ಲರ್ ಪರಿಣಾಮವನ್ನು ನೋಡುತ್ತಿದ್ದೇವೆ. ಸವಕಲಾದ ತಂತ್ರಜ್ಞಾನದ ಉಪಗ್ರಹಗಳಿಗೊಂದು ಗತಿ ಕಾಣಿಸಲು ಇರುವುದು ಎರಡೇ ಉಪಾಯ ಗಳು. ಒಂದು, ಅದನ್ನು ಮರಳಿ ಭೂಮಿಗೆ ತರುವುದು; ಎರಡನೆಯದು, ಅದರ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಿ ಆಯಸ್ಸನ್ನು ಹೆಚ್ಚಿಸುವುದು. ಇದಕ್ಕೆಲ್ಲ ಹೆಚ್ಚಿನ ಹಣ ಖರ್ಚಾಗುತ್ತದೆ. ಹಾಗಾಗಿ ಎಲ್ಲರೂ ‘ಹಾರಿಸಿ ಮರೆತುಬಿಡಿ’ ನೀತಿಗೆ ಜೈ ಎನ್ನುತ್ತಿದ್ದಾರೆ.

    ಹೊಸವರ್ಷಕ್ಕೆ ಎಲ್ಲ ದೇಶಗಳು ಒಂದಲ್ಲ ಒಂದು ಬಾಹ್ಯಾಕಾಶ ಉಪಗ್ರಹ ಉಡಾವಣಾ ಯೋಜನೆಗಳನ್ನು ಠರಾಯಿಸಿಕೊಂಡು ಕುಳಿತಿವೆ. ಇಂತಹ ಸನ್ನಿವೇಶದಲ್ಲಿ ಬಾಹ್ಯಾಕಾಶದಲ್ಲಿ ಉಪಗ್ರಹಗಳ ಸಂಖ್ಯೆ ಹೆಚ್ಚುತ್ತ ಮುಂದೊಂದು ದಿನ ನಮ್ಮ ಬೆಂಗಳೂರಿನ ಟ್ರಾಫಿಕ್ ಜಾಮ್ೆ ಟಕ್ಕರ್ ಕೊಡುವಷ್ಟು ದೊಡ್ಡ ಜಾಮ್ ಬಾಹ್ಯಾಕಾಶದಲ್ಲಿ ಉಂಟಾದರೆ ಆಶ್ಚರ್ಯವಿಲ್ಲ. ಹಿಂದೊಮ್ಮೆ ವಿಜ್ಞಾನಿಗಳು ಪ್ರತಿಪಾದಿಸಿದ ಸ್ಕೈಹುಕ್​ನಂತಹ ತಂತ್ರಜ್ಞಾನದ ಕುರಿತು ಪುನರ್ವಿಮಶಿಸುವ ಸಮಯ ಬಂದಿದೆ. ಈ ನಡುವೆ ಅಮೆರಿಕದ ನಾಸಾ ಮತ್ತು ಜಪಾನಿನ ಜಾಕ್ಸಾ ಜಂಟಿಯಾಗಿ ಈ ವರ್ಷದ ಮಧ್ಯದಲ್ಲಿ ಉಡಾಯಿಸಲಿರುವ ಜಗತ್ತಿನ ಪ್ರಥಮ ಕಟ್ಟಿಗೆಯ ಪುಟ್ಟ ಉಪಗ್ರಹ ಲಿಗ್ನೋಸ್ಯಾಟ್​ನತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಕಕ್ಷೆಯಲ್ಲಿದ್ದಾಗ ಅಲ್ಲಿನ ನಿರ್ವಾತದಲ್ಲಿ ಉರಿಯದ, ಬೇರೆ ಉಪಗ್ರಹಗಳಿಗೆ ಡಿಕ್ಕಿ ಹೊಡೆದರೂ ತೊಂದರೆ ಮಾಡದ ಹಾಗೂ ವಾಪಸ್ಸು ಭೂಮಿಗೆ ಬರುವಾಗ ಇಲ್ಲಿನ ವಾತಾವರಣದ ಸ್ಪರ್ಶವಾದೊಡನೆ ಭಸ್ಮವಾಗುವ ನೂತನ ತಂತ್ರಜ್ಞಾನ ಆಗಸದ ಟ್ರಾಫಿಕ್ ಜಾಮ್ೆ ಉತ್ತರ ನೀಡಬಲ್ಲದೇ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.

    (ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

    1 + 1 = 3 ಎಂದ ನಟಿ ಅಮಲಾ ಪೌಲ್​! ಅಭಿಮಾನಿಗಳಿಂದ ಹರಿದುಬಂತು ಅಭಿನಂದನೆಗಳ ಮಹಾಪೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts