More

    ಇಡಿಗೆ ಸಿಕ್ತು 16ಲಕ್ಷ ರೂ.ನಗದು, ಮಹತ್ತರ ದಾಖಲೆ: ಕಾಂಗ್ರೆಸ್​ ಶಾಸಕ ನಂಜೇಗೌಡ ಲಾಕ್​ ಆಗುವರೇ?

    ಬೆಂಗಳೂರು: ಕೋಲಾರ -ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(ಕೋಚಿಮುಲ್)ದಲ್ಲಿ ಉದ್ಯೋಗಿಗಳ ನೇಮಕಾತಿಯಲ್ಲಿ ಅಕ್ರಮ, ವಿದೇಶಿ ಕರೆನ್ಸಿ ಬದಲಾವಣೆ ಹಾಗೂ ಕಾನೂನು ಗಾಳಿಗೆ ತೂರಿ ನೂರಾರು ಕೋಟಿ ರೂ. ಬೆಲೆಬಾಳುವ ಸರ್ಕಾರಿ ಭೂಮಿ ಮಂಜೂರಾತಿ, ಅಕ್ರಮ ಕಲ್ಲುಗಣಿಗಾರಿಕೆ ಸೇರಿ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜ.8 ಮತ್ತು 9ರಂದು ಕಾಂಗ್ರೆಸ್​ ಶಾಸಕ ನಂಜೇಗೌಡ ಅವರಿಗೆ ಸೇರಿದ ಮನೆ, ಕೋಚಿಮುಲ್​ ಕಚೇರಿ ಮತ್ತಿತರ 14 ಕಡೆ ಏಕಕಾಲಕ್ಕೆ ದಾಳಿ ನಡೆಸಿದ ಇಡಿ ಅಧಿಕಾರಿಗಳ ತಂಡ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಇದೇ ಸಂದರ್ಭ ನಂಜೇಗೌಡರ ಕೊಮ್ಮನಹಳ್ಳಿಯ ಮನೆಯಲ್ಲಿ 16ಲಕ್ಷ ರೂ.ಸಿಕ್ಕಿರುವುದಾಗಿ ವರದಿಯಾಗಿದೆ.

    ಇದನ್ನೂ ಓದಿ: ಮೋದಿ ಸಂಪುಟಕ್ಕೆ ಕುಮಾರಸ್ವಾಮಿ ಜತೆ ಇನ್ನೂ ಮೂವರು ಸಿಎಂಗಳು: ಚುನಾವಣೆಗೆ ಮುನ್ನ ಬಿಜೆಪಿಯ ಬಿಗ್ ಸ್ಟ್ರಾಟಜಿ..!

    ಸೋಮವಾರ ಬೆಳ್ಳಂಬೆಳಿಗ್ಗೆ ಇಡಿ ಅಧಿಕಾರಿಗಳು ಕೊಮ್ಮನಹಳ್ಳಿಯ ನಂಜೇಗೌಡರ ಮನೆ ಸೇರಿ ಹತ್ತಾರು ಕಡೆ ದಾಳಿ ನಡೆಸಿದ್ದ ಅಧಿಕಾರಿಗಳು ಮಂಗಳವಾರ ರಾತ್ರಿ ಪರಿಶೀಲನೆ ಮುಕ್ತಾಯಗೊಳಿಸಿದರು. ಶಾಸಕರು ತನ್ನ ಕೋಟ್ಯಂತರ ರೂಪಾಯಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಆಡಿಟ್​ ಮಾಡಿಸುತ್ತಿದ್ದ ಆಟಿಡರ್ ಕಚೇರಿ ಮೇಲೆ ಸಹ ದಾಳಿ ನಡೆಸಿದ್ದು ಬ್ಯಾಲೆನ್ಸ್ ಶೀಟ್ ಹಾಗೂ ಅದಕ್ಕೆ ಒದಗಿಸಿರುವ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಭೂ ಮಂಜೂರಾತಿ ವಿಚಾರವಾಗಿ ಹಿಂದಿನ ತಹಸೀಲ್ದಾರ್ ನಾಗರಾಜ್ ಅವರ ಮನೆ ಮೇಲೆ ಸಹ ದಾಳಿ ಮಾಡಿದ್ದ ಅಧಿಕಾರಿಗಳು ಶಾಸಕರ ಸಂಬಂಧಿಗಳು ಮತ್ತು ಬೇಕಾದವರಿಗೆ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿರುವುದಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

    ಇನ್ನು ಬೆಂಗಳೂರಿನ ಮಂಡೂರಿನ ಮಿಕ್ಸಿಂಗ್ ಯೂನಿಟ್, ಶಾಸಕರ ಪಿಎ ಹರೀಶ್, ಅಬ್ಬೇನಹಳ್ಳಿ ಗೋಪಾಲ್ ಅವರ ಮನೆ ಮೇಲೆ ಸಹ ದಾಳಿ ಮಾಡಿದ್ದು, ಅಲ್ಲಿಯೂ ದಾಖಲೆಗಳಿಗೆ ಅಧಿಕಾರಿಗಳು ಜಾಲಾಡಿದ್ದರು.

    ಕೋಚಿಮುಲ್ ಅಧ್ಯಕ್ಷರೂ ಆಗಿರುವ ನಂಜೇಗೌಡರು ಇತ್ತೀಚೆಗೆ ನಿಯಮಗಳನ್ನು ಗಾಳಿಗೆ ತೂರಿ ನೂರಕ್ಕೂ ಹೆಚ್ಚು ಉದ್ಯೋಗಿಗಳನ್ನು ಪ್ರತಿಯೊಬ್ಬರಿಂದ 50-60ಲಕ್ಷ ರೂ.ಪಡೆದು ನೇಮಕಾತಿ ಮಾಡಿಕೊಳ್ಳಲಾಗಿದೆ ಎಂಬ ದೂರುಗಳು ಸಾರ್ವಜನಿಕರಿಂದ ವ್ಯಾಪಕವಾಗಿ ಕೇಳಿ ಬಂದಿದ್ದು, ಕೋಚಿಮುಲ್​ ಕಚೇರಿ, ವ್ಯವಸ್ಥಾಪಕ ಗೋಪಾಲ ಮೂರ್ತಿ ಮನೆ, ಅಧಿಕಾರಿ ನಾಗೇಶ್​ ಮನೆ ಸೇರಿ ವಿವಿಧೆಡೆ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಸುಮಾರು 14 ಕಡೆ ಸೋಮವಾರ ಮತ್ತು ಮಂಗಳವಾರ ಹಗಲಿರುಳು ಪರಿಶೀಲಿಸಿದ್ದರು.
    ಮಂಗಳವಾರ ಮಧ್ಯಾಹ್ನ ಮೂರು ಗಂಟೆಯವರೆಗೆ ನಂಜೇಗೌಡರ ಮನೆಯಲ್ಲಿ ಶೋಧ ನಡೆಸಿದ ಅಧಿಕಾರಿಗಳು ನಂತರ ನಂಜೇಗೌಡ ಪುತ್ರ ಹರೀಶ್ ಹಾಗೂ ಆಪ್ತ ಸಹಾಯಕ ಹರೀಶ್ ಗೌಡನನ್ನು ಕರೆದೊಯ್ದಿದ್ದಾರೆ. ನಂಜೇಗೌಡ ಮನೆಯಿಂದ ಎರಡು ಬ್ಯಾಗ್ ಗಳಲ್ಲಿ ದಾಖಲೆಗಳನ್ನ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

    ಮೂರು ಕಾರುಗಳಲ್ಲಿ ನಂಜೇಗೌಡ ಮನೆ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು ಭರ್ತಿ ಒಂದು ಕಾರಿನ ತುಂಬಾ ದಾಖಲಾತಿಗಳನ್ನು ತೆಗೆದುಕೊಂಡು ಹಿಂತಿರುಗಿದ್ದಾರೆ. ೩೬ ಗಂಟೆಗಳಿಂದ ನಿರಂತರವಾಗಿ ಇಡಿ ಅಧಿಕಾರಿಗಳಿಂದ ಶೋಧ ಕಾರ್ಯ ನಡೆದಿದ್ದು, ಕೋಲಾರ ಜಿಲ್ಲೆಯ ಇತಿಹಾಸದಲ್ಲಿ ಶಾಸಕರೊಬ್ಬರ ಮನೆ ಮೇಲೆ ಇಡಿ ದಾಳಿ ನಡೆಸಿರುವುದು ಇದೇ ಮೊದಲಾಗಿದೆ.
    ಇನ್ನು ಶಾಸಕರ ಮನೆ ಬಳಿ‌ ಮಂಗಳವಾರ ಸಂಜೆ ಕಾಂಗ್ರೆಸ್​ ಕಾರ್ಯಕರ್ತರು ಜಮಾಯಿಸಿದ್ದು, ಸಂಜೆ ೬ ಗಂಟೆಗೆ ಮನೆಯ ಮಹಡಿ ಮೇಲೆ‌ ಕಾಣಿಸಿಕೊಂಡ ಶಾಸಕ ನಂಜೇಗೌಡ ಕೈ ಮುಗಿದು ಬಾವುಕರಾಗಿದ್ದಾರೆ.

    ಬಿಜೆಪಿ ಕೈವಾಡವೆಂದ ಕಾಂಗ್ರೆಸ್​: ಇನ್ನು ಶಾಸಕ ಕೆ.ವೈ.ನಂಜೇಗೌಡ ಮನೆ ಮೇಲೆ ಇಡಿ ಅಧಿಕಾರಿಗಳು ನಡೆಸಿರುವ ದಾಳಿಯನ್ನು ರಾಜಕೀಯ ಪ್ರೇರಿತವೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ್​ ಆರೋಪಿಸಿದ್ದಾರೆ. ಮೋದಿ ಮತ್ತು ಅಮಿತ್ ಷಾ ನೇತೃತ್ವದ ಸರ್ಕಾರ ಕಾಂಗ್ರೇಸ್ ನಾಯಕರ ಮೇಲೆ ಮುಗಿ ಬಿದ್ದಿದ್ದು, ಬಿಜೆಪಿ ಸರ್ಕಾರ ಇದ್ದಾಗ ವಿರುಪಾಕ್ಷಪ್ಪ ಮಗನ ಹತ್ತಿರ ಕೋಟಿ ಕೋಟಿ ಸಿಕ್ತು, ಆಗ ಇಡಿ ಏನಾಗಿತ್ತು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನ ದುರುಪಯೋಗಪಡಿಸಿಕೊಳ್ಳುತ್ತಿದೆ. ಕೋಚಿಮುಲ್ ಅಧ್ಯಕ್ಷರಾಗಿ ಕೆ.ವೈ.ನಂಜೇಗೌಡರು ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದ್ದಾರೆ. ಆದರೆ ಬಿಜೆಪಿ ಸಂಸದ ಮುನಿಸ್ವಾಮಿ ಮತ್ತು ಕೆಲವರು ವೈಯಕ್ತಿಯ ದ್ವೇಷವಾಗಿ ತೆಗೆದುಕೊಂಡು ಈ ರೀತಿಯ ಕುತಂತ್ರ ಮಾಡಿದ್ದಾರೆ. ಶಾಸಕರ ಅಭಿವೃದ್ಧಿ ಸಹಿಸದೆ ಇಡಿ ತನಿಖೆ ಮಾಡಿಸಿದ್ದಾರೆ. ಮುಂದೆ ಅವರಿಗೆ ರಾಜಕೀಯದಲ್ಲಿ ದೊಡ್ಡ ಹುದ್ದೆ ಲಭಿಸುತ್ತಿತ್ತು. ಇದನ್ನು ತಪ್ಪಿಸಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

    ಹಣ ಹೊತ್ತೊಯ್ಯಬೇಡಿ ಎಂದ್ರು: ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರ ಮನೆಯಲ್ಲಿ ಇಡಿ ಅಧಿಕಾರಿಗಳು ವಶಕ್ಕೆ ಪಡೆದ 16ಲಕ್ಷ ರೂ.ನಗದು ತಮ್ಮನ ಮಗಳ ಮದುವೆಗೆ ಇಟ್ಟಿದ್ದು, ಅದನ್ನು ಇಲ್ಲೇ ಬಿಟ್ಟು ಹೋಗಿ ಎಂದು ನಂಜೇಗೌಡ ಮತ್ತು ಅವರ ಪತ್ನಿ ಜಿಪಂ ಮಾಜಿ ಅಧ್ಯಕ್ಷೆ ರತ್ನಮ್ಮ ಬೇಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಇಡಿ ಅಧಿಕಾರಿಗಳ ಕೇಳಿದ ಎಲ್ಲಾ ಮಾಹಿತಿ ಕೊಟ್ಟಿದ್ದೇನೆ. ಮುಂದೆ ಸಹ ಏನೂ ಆಗಲ್ಲ ಅನ್ನೋ ನಂಬಿಕೆ ಇದೆ. ಕೋಚಿಮುಲ್ ನೇಮಕಾತಿ, ಭೂ ಮಂಜೂರಾತಿ ಹಾಗೂ ನನ್ನ ಬಿಸಿನೆಸ್ ಬಗ್ಗೆ ಮಾಹಿತಿ ಕೇಳಿದರು. ನನ್ನ ಮುಗಿಸಲು ಸಾಕಷ್ಟು ಜನ ಸಂಚು ರೂಪಿಸಿದ್ದಾರೆ.ಹಣ ಹಾಗೂ ದಾಖಲೆಗಳನ್ನ ವಶಕ್ಕೆ ಪಢದಿದ್ದಾರೆ.ಮತ್ತೆ ವಿಚಾರಣೆಗೆ ಕರೆದಿದ್ದಾರೆ ಹೋಗುವೆ ಎಂದು ನಂಜೇಗೌಡ ತಿಳಿಸಿದರು.

    ಕೇರಳದಲ್ಲಿ ಜ.16ಕ್ಕೆ ಪ್ರಧಾನಿ ಮೋದಿ ಬೃಹತ್ ರೋಡ್​ ಶೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts