More

    ಮಹಿಳಾ ನಾಯಕತ್ವ ಒಪ್ಪುವುದೇ ಪುರುಷ ಪ್ರಧಾನ ಸಮಾಜ? ಕಿಮ್​ ಯೋ ಜಾಂಗ್​ಗೆ ಒಲಿಯುವುದೇ ಉ.ಕೊರಿಯಾ ಪಟ್ಟ?

    ನವದೆಹಲಿ: ಉತ್ತರ ಕೊರಿಯಾದ್ದು ಪುರುಷ ಪ್ರಧಾನ ಸಮಾಜ. ಹಾಗಾಗಿ ಅಲ್ಲಿ ಇದುವರೆಗೂ ಆಡಳಿತ ನಡೆಸಿದವರೆಲ್ಲರೂ ಪುರುಷರೇ ಆಗಿದ್ದಾರೆ. ಆದರೆ ಸದ್ಯ ಆಡಳಿತದ ಹೊಣೆ ಹೊತ್ತಿರುವ ಕಿಮ್​ ಜಾಂಗ್​ ಉನ್​ ಅವರ ಆರೋಗ್ಯದ ಬಗ್ಗೆ ಊಹಾಪೋಹಗಳು ಮುಂದುವರಿದಿರುವಂತೆ, ಅವರ ಸಹೋದರಿ ಮುಂದಿನ ಆಡಳಿತ ವಹಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗುತ್ತಿವೆ.

    ಆದರೆ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳಾ ನಾಯಕತ್ವ ಒಪ್ಪಿಕೊಳ್ಳುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಕಿಮ್​ ಜಾಂಗ್​ ಉನ್​ ಅವರ ಸಹೋದರಿ ಕಿಮ್​ ಯೋ ಜಾಂಗ್​ ಆಡಳಿತ ವಲಯದಲ್ಲಿ ಹಂತಹಂತವಾಗಿ ಮೇಲಕ್ಕೆ ಬಂದಿದ್ದಾರೆ. ಸದ್ಯ 31-32 ವರ್ಷ ವಯಸ್ಸಿನರಾಗಿರುವ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜತೆಗಿನ ಎರಡು ಶೃಂಗಗಳು, ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಭೇಟಿಯ ಸಂದರ್ಭದಲ್ಲಿ ಕಿಮ್​ ಜಾಂಗ್​ ಉನ್​ ಅವರನ್ನು ನೆರಳಿನಂತೆ ಹಿಂಬಾಲಿಸಿದ್ದರು. ತಮ್ಮೊಂದಿಗೆ ಶೃಂಗ ಸಭೆಗೆ ಆಗಮಿಸುವಂತೆ ಕೋರಿ ಕಿಮ್​ ಜಾಂಗ್​ ಉನ್​ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್​ ಜೇ ಅವರಿಗೆ ಕಳುಹಿಸಿದ್ದ ಸಂದೇಶವನ್ನು ಅಲ್ಲಿಗೇ ಹೋಗಿ ವೈಯಕ್ತಿಕವಾಗಿ ತಲುಪಿಸಿದ್ದರು.

    ಕಿಮ್​ ಯೋ ಜಾಂಗ್​ ಅಧಿಕಾರಕ್ಕೆ ಬರುತ್ತಾರೆ ಎಂದು ಹೇಳಲು ಇನ್ನೂ ಎರಡು ಕಾರಣಗಳಿವೆ. ಕಿಮ್​ ಜಾಂಗ್​ ಉನ್​ ನಂತರದಲ್ಲಿ ಉತ್ತರ ಕೊರಿಯಾದ ಆಡಳಿತ ಚುಕ್ಕಾಣಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲ ಪುರುಷರು ಯಾರೂ ಇಲ್ಲ. ಇರುವ ಇಬ್ಬರು ಸಹೋದರರ ಪೈಕಿ ಕಿಮ್​ ಜಾಂಗ್​ ಚೋಲ್​ ಎಂಬುವರಿಗೆ ರಾಜಕೀಯಕ್ಕಿಂತಲೂ ಗಿಟಾರ್​ ನುಡಿಸುವುದರಲ್ಲೇ ಹೆಚ್ಚು ಆಸಕ್ತಿ. ಮತ್ತೊಬ್ಬ ಸಹೋದರ ಕಿಮ್​ ಹ್ಯಾನ್​ ಸೋಲ್​ ಆಡಳಿತದ ಉಸಾಬರಿಯೇ ಬೇಡ ಎಂದು ಹೇಳಿ ವಿದೇಶದಲ್ಲಿ ನೆಲೆಸಿದ್ದಾರೆ. ಹೀಗಾಗಿ, ಕಿಮ್​ ಜಾಂಗ್​ ಉನ್​ ಕುಟುಂಬದಲ್ಲಿ ಅವರ ನಂತರ ಉತ್ತರ ಕೊರಿಯಾದ ಆಡಳಿತ ವಹಿಸಿಕೊಳ್ಳಲು ಸಮರ್ಥರಾದವರು ಎಂದರೆ ಕಿಮ್​ ಯೋ ಜಾಂಗ್​ ಒಬ್ಬರೇ ಆಗಿದ್ದಾರೆ.

    ಕಿಮ್​ ಕುಟುಂಬಸ್ಥರೇ ಮೊದಲಿನಿಂದಲೂ ಉತ್ತರ ಕೊರಿಯಾವನ್ನು ಆಳುತ್ತಾ ಬಂದಿರುವ ಹಿನ್ನೆಲೆಯಲ್ಲಿ ಆ ಕುಟುಂಬದವರೇ ಆಗಿರುವ ಕಿಮ್​ ಯೋ ಜಾಂಗ್​ ಅವರೇ ದೇಶದ ಆಡಳಿತ ಹಿಡಿಯಲಿ ಎಂದು ಬಯಸುವವರು ಬಹಳಷ್ಟು ಜನರಿದ್ದಾರೆ. ಆದರೆ, ಪುರುಷ ಪ್ರಧಾನ ಸಮಾಜವಾಗಿರುವ ಕಾರಣ ಇವರ ನಾಯಕತ್ವವನ್ನು ವಿರೋಧಿಸುವವರ ಸಂಖ್ಯೆಯೂ ದೊಡ್ಡದಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕೊರಿಯಾದ ಮುಂದಿನ ಬೆಳವಣಿಗೆಗಳು ಭಾರಿ ಕುತೂಹಲ ಮೂಡಿಸಿವೆ.

    ಕೋವಿಡ್​ 19 ಚಿಕಿತ್ಸೆಗೆ ಅಗತ್ಯವಾದ ಪಿಪಿಇಯ ಶೇ.50 ಈ ನಗರದಲ್ಲೇ ತಯಾರಾಗುತ್ತದೆ… ಕೇಂದ್ರ ಸರ್ಕಾರದ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts