More

    ನಗರಕ್ಕೆ ಬಂದು ಜೀವ ಕಳೆದುಕೊಂಡ ಕಾಡುಕೋಣ, ಅರಣ್ಯ ಇಲಾಖೆ ನಿರ್ವಹಣೆಯಲ್ಲಿ ಎಡವಿತೇ?

    ಮಂಗಳೂರು: ಪಶ್ಚಿಮಘಟ್ಟದಲ್ಲಿ ವಿಹರಿಸುತ್ತಿರಬೇಕಾದ ಕಾಡುಕೋಣವೊಂದು ಮಂಗಳವಾರ ಮುಂಜಾನೆ ನಗರ ಮಧ್ಯೆ ಪ್ರತ್ಯಕ್ಷವಾಗಿದ್ದು, ಅರಣ್ಯ ಇಲಾಖೆ ಸೆರೆಹಿಡಿದು ಕಾಡಿಗೆ ಬಿಟ್ಟರೂ ಅದು ಮೃತಪಟ್ಟಿದೆ. ಕಾಡುಕೋಣವನ್ನು ಉಳಿಸಿಕೊಳ್ಳುವುದರಲ್ಲಿ ವ್ಯವಸ್ಥೆ ವಿಫಲಗೊಂಡಿದೆ.

    ಬೆಳಗ್ಗೆಯಿಂದ ನಗರದ ಹಲವೆಡೆ ಕಾಡುಕೋಣ ಅಲೆದಾಡಿದ್ದು, ದಿಗಿಲುಗೊಂಡು ಎಲ್ಲೆಂದರಲ್ಲಿ ಓಡುತ್ತಿತ್ತು. ಇದನ್ನು ಕಂಡ ನಾಗರಿಕರೂ ಅಚ್ಚರಿ- ಆತಂಕಗೊಂಡಿದ್ದರು. ಸುಮಾರು ನಾಲ್ಕು ಗಂಟೆಗಳ ಕಾಲ ನಗರದ ಅಳಕೆ, ಹ್ಯಾಟ್‌ಹಿಲ್, ಲಾಲ್‌ಭಾಗ್, ಬಿಜೈ, ಮಣ್ಣಗುಡ್ಡ ಮುಂತಾದೆಡೆ ಓಡಾಡಿದ ಬಳಿಕ ಅರಣ್ಯ ಇಲಾಖೆ ಪ್ರಯೋಗಿಸಿದ ಅರಿವಳಿಕೆ ಔಷಧದಿಂದ ಪ್ರಜ್ಞೆ ಕಳೆದುಕೊಂಡ ಕಾಡುಕೋಣವನ್ನು ಕ್ರೇನ್‌ನಲ್ಲಿ ಎತ್ತಿ ಟೆಂಪೋದಲ್ಲಿ ಸಾಗಿಸಲಾಯಿತು.

    ಬೆಳ್ಳಂಬೆಳಗ್ಗೆ ಪ್ರತ್ಯಕ್ಷ: ನಗರದ ಅಳಕೆಯ ವಿಶಾಲ್ ನರ್ಸಿಂಗ್ ಹೋಂ ಬಳಿಯ ಗದ್ದೆಯೊಂದರಲ್ಲಿ ಮಂಗಳವಾರ ಮುಂಜಾನೆ ಕಾಡುಕೋಣ ಕಂಡುಬಂತು. ಜನರು ಬೆಳಗ್ಗೆ ಈ ಅಪರೂಪದ ವನ್ಯಜೀವಿಯನ್ನು ಕಂಡು ದಂಗಾದರು. ಅರಣ್ಯ ಇಲಾಖೆಗೆ ಮಾಹಿತಿ ತಿಳಿದು ಸಿಬ್ಬಂದಿ ಆಗಮಿಸಿದರು. ವಲಯ ಅರಣ್ಯಾಧಿಕಾರಿ ಶ್ರೀಧರ್ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಲಾಯಿತು.

    ಕುತೂಹಲಿ ಜನರು ಸುತ್ತುವರಿದು ಮೊಬೈಲ್‌ನಲ್ಲಿ ಫೋಟೊ, ವಿಡಿಯೋ ಮಾಡುತ್ತಿರುವ ನಡುವೆಯೇ ಕಾಡುಕೋಣ ಗಾಬರಿಗೊಂಡು ಅತ್ತಿಂದಿತ್ತ ಓಡತೊಡಗಿದ್ದು ಕಾರ್ಯಾಚರಣೆಗೆ ಸವಾಲಾಯಿತು.
    ಹ್ಯಾಟ್‌ಹಿಲ್‌ನಿಂದ ಪಬ್ಬಾಸ್, ಮಂಗಳಾ ಸ್ಟೇಡಿಯಂ ಹಿಂಭಾಗ ಓಡುತ್ತಾ ವೇರ್‌ಹೌಸ್‌ನತ್ತ ಹೋದಾಗ ಇಲಾಖೆಯ ಟ್ರಾಂಕ್ವಿಲೈಸಿಂಗ್ ತಜ್ಞರು ಅರಿವಳಿಕೆಯುಕ್ತ ಬುಲೆಟ್ ಸಿಡಿಸಿ ಕಾಡುಕೋಣವನ್ನು ಮೂರ್ಛಾಗತಗೊಳಿಸಿದರು. ಶಾಸಕ ವೇದವ್ಯಾಸ ಕಾಮತ್ ಸಲಹೆ ಸೂಚನೆಯಿತ್ತರು.

    ಆಗಿರುವುದೇನು?: ಬೆಳಗ್ಗೆ 11.30ರ ವೇಳೆಗೆ ಟ್ರಾಂಕ್ವಿಲೈಸರ್ ಡೋಸ್ ಕೊಟ್ಟು ಪ್ರಜ್ಞೆ ತಪ್ಪಿದ್ದ ಕೋಣ ಮತ್ತೆ ಎದ್ದಿಲ್ಲ. ಕಾಡುಕೋಣವನ್ನು ಚಾರ್ಮಾಡಿ ಘಾಟ್‌ಗೆ ಕೊಂಡೊಯ್ಯಲಾಗಿದ್ದು, ಅಲ್ಲಿಂದ ಇಳಿಸುವಾಗ ಒಮ್ಮೆ ಎದ್ದು ನಿಂತಿದ್ದು, ಮತ್ತೆ ಬಿದ್ದು ಮೃತಪಟ್ಟಿದೆ, ಇದಕ್ಕೆ ಹೃದಯಸ್ತಂಭನ ಕಾರಣವಿರಬಹುದು ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ಹೇಳಿಕೆ.
    ಕೆಲವೊಂದು ಮೂಲಗಳ ಪ್ರಕಾರ ಎರಡೆರಡು ಡೋಸ್ ಟ್ರಾಂಕ್ವಿಲೈಸರ್ ನೀಡಲಾಗಿದ್ದು ಓವರ್‌ಡೋಸ್ ಆಯಿತೆನ್ನುವ ವಾದವೂ ಇದೆ. ಕೋಣವನ್ನು ಟೆಂಪೋಗೆ ಲೋಡ್ ಮಾಡುವ ವೇಳೆ ಒಮ್ಮೆ ಅದು ಕೆಳಗೆ ಬಿದ್ದಿತ್ತು. ಅದರಿಂದ ತಲೆಗೆ ಪೆಟ್ಟಾಗಿರಲೂ ಬಹುದು, ಅಥವಾ ಓವರ್‌ಡೋಸ್ ಟ್ರಾಂಕ್ವಿಲೈಸರ್ ಇರಬಹುದು, ಅಥವಾ ಹೃದಯ ಸ್ತಂಭನ ಈ ಮೂರು ಕಾರಣವಿರಬಹುದು ಎಂದು ಹೇಳಲಾಗುತ್ತಿದೆ. ಪ್ರಾಣಿ ನಗರ ಪ್ರವೇಶಿಸಿದಾಗ ಸಾರ್ವಜನಿಕರು ವರ್ತಿಸಿದ ರೀತಿಯಿಂದ ಪ್ರಾಣಿ ಗಲಿಬಿಲಿಗೊಂಡು ಅಡ್ಡಾದಿಡ್ಡಿ ಓಡಿದ್ದರಿಂದ ಗಾಯವಾಗಿರಬಹುದು ಎಂದೂ ಹೇಳಲಾಗುತ್ತಿದೆ. ಒಟ್ಟು ಪ್ರಕರಣವನ್ನು ಅರಣ್ಯ ಇಲಾಖೆ ನಿರ್ವಹಿಸಿದ ರೀತಿಯ ಬಗ್ಗೆ ಪ್ರಾಣಿ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಟ್ಟಾಗಿದ್ದಾರೆ. ನಗರಕ್ಕೆ ಬಂದ ಪ್ರಾಣಿಯನ್ನೇ ಬದುಕಿಸಲಾಗದವರು ಕಾಡಿನಲ್ಲಿ ವನ್ಯಜೀವಿಗಳ ಮೇಲಾಗುವ ಆಕ್ರಮಣವನ್ನು ತಡೆಯುವುದನ್ನು ಹೇಗೆ ನಿರೀಕ್ಷಿಸಬಹುದು ಎಂದು ಪ್ರಶ್ನಿಸುತ್ತಿದ್ದಾರೆ.

    ಎರಡಿದ್ದವೇ ಕಾಡುಕೋಣ?: ಕಾಡುಕೋಣದ ಓಡಾಟದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದರಲ್ಲೊಂದು ವಿಡಿಯೋದಲ್ಲಿ ಎರಡು ಕಾಡುಕೋಣಗಳು ರಾತ್ರಿ ವೇಳೆ ಸಂಚರಿಸುತ್ತಿದ್ದು, ಅದು ಕುಂಟಿಕಾನ ಪ್ರದೇಶ ಎಂದು ಹೇಳಲಾಗಿತ್ತು. ಆದರೆ ಅರಣ್ಯ ಅಧಿಕಾರಿಗಳ ಪ್ರಕಾರ ಇಡೀ ನಗರದಲ್ಲಿ ಶೋಧಿಸಲಾಗಿದ್ದು, ಒಂದು ಕಾಡುಕೋಣ ಮಾತ್ರವೇ ಸಿಕ್ಕಿದೆ.

    ಪಶ್ಚಿಮ ಘಟ್ಟದಲ್ಲಿ ಕಾಡುಕೋಣಗಳು ಸಾಮಾನ್ಯ. ಆದರೆ ನಗರದಲ್ಲಿ ಕಾಣುವುದು ಅಪರೂಪ. ಬಜ್ಪೆ ಭಾಗದಲ್ಲಿ ಕಾಡುಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾತ್ರಿ ಅಲ್ಲಿಂದಲೇ ಕಾಡುಕೋಣ ಬಂದಿರುವ ಸಾಧ್ಯತೆ ಇದೆ.
    – ಕರಿಕಾಳನ್, ಡಿಸಿಎಫ್, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts