More

  ಕೊಹ್ಲಿ ಸುಳಿವು, ಟಿ20 ವಿಶ್ವಕಪ್ ತಂಡಕ್ಕೆ ಪ್ರಸಿದ್ಧ ಕೃಷ್ಣ? | ಕರ್ನಾಟಕ ವೇಗಿಯ ಬೌಲಿಂಗ್​ಗೆ ಶ್ಲಾಘನೆ

  ಇಂದೋರ್: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಶ್ರೀಲಂಕಾ ವಿರುದ್ಧ ಇಂದೋರ್ ಟಿ20 ಪಂದ್ಯದ ಗೆಲುವಿನ ಬಳಿಕ ಕರ್ನಾಟಕ ತಂಡದ ವೇಗಿ ಹಾಗೂ ಐಪಿಎಲ್​ನಲ್ಲಿ ಕೆಕೆಆರ್ ಪರವಾಗಿ ಆಡುತ್ತಿರುವ ಪ್ರಸಿದ್ಧ ಕೃಷ್ಣ ಮುಂಬರುವ ಟಿ20 ವಿಶ್ವಕಪ್​ನಲ್ಲಿ ತಂಡದ ಅಚ್ಚರಿಯ ಪ್ಯಾಕೇಜ್ ಆಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

  ತಂಡದ ಅಗ್ರ ವೇಗಿ ಜಸ್​ಪ್ರೀತ್ ಬುಮ್ರಾ ದೀರ್ಘ ಕಾಲದ ಗಾಯದಿಂದ ಚೇತರಿಸಿಕೊಂಡು ಮರಳಿದ ದಿನದಂದೆ, ಮುಂಬರುವ ಟಿ20 ವಿಶ್ವಕಪ್ ವೇಳೆ ತಂಡದ ಇತರ ಆಯ್ಕೆಗಳ ಬಗ್ಗೆ ಮಾತನಾಡಿದರು. ‘ನನ್ನ ಪ್ರಕಾರ ಒಬ್ಬ ಆಟಗಾರ ಅಚ್ಚರಿಯ ಪ್ಯಾಕೇಜ್ ಆಗಿರುವ ನಿರೀಕ್ಷೆ ನನಗಿದೆ. ಪ್ರಸಿದ್ಧ ಕೃಷ್ಣ ದೇಶೀಯ ಕ್ರಿಕೆಟ್​ನಲ್ಲಿ ಈವರೆಗೂ ಬಹಳ ಉತ್ತಮ ನಿರ್ವಹಣೆ ತೋರಿದ್ದಾರೆ’ ಎಂದು ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 7 ವಿಕೆಟ್ ಗೆಲುವಿನ ಬಳಿಕ ಮಾತನಾಡಿದರು.

  ಸ್ವತಃ ಕೊಹ್ಲಿಯಿಂದಲೇ ಈ ಹೆಸರು ಬಹಿರಂಗವಾಗಿರುವ ಕಾರಣ, 23 ವರ್ಷದ ವೇಗದ ಬೌಲರ್ ಮುಂಬರುವ ನ್ಯೂಜಿಲೆಂಡ್ ಪ್ರವಾಸದ ವೇಳೆಯಲ್ಲೂ ತಂಡದೊಂದಿಗೆ ಪ್ರಯಾಣಿಸುವ ಸಾಧ್ಯತೆ ಇದೆ. ದೇಶೀಯ ಕ್ರಿಕೆಟ್​ನಲ್ಲಿ ರಾಜ್ಯ ತಂಡದ ಪ್ರಮುಖ ವೇಗಿ ಎನಿಸಿರುವ ಪ್ರಸಿದ್ಧ ಕೃಷ್ಣ, ಕಳೆದ ವರ್ಷದ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯಶಸ್ವಿ ಸೂಪರ್ ಓವರ್ ಎಸೆದಿದ್ದರು.

  25 ರನ್ ಕಡಿಮೆಯಾದವು: ಶ್ರೀಲಂಕಾ ತಂಡದ ನಾಯಕ ಲಸಿತ್ ಮಾಲಿಂಗ, ಪಂದ್ಯದಲ್ಲಿ ನಮಗೆ 25 ರನ್ ಕಡಿಮೆಯಾದವು. 25 ರನ್ ಹೆಚ್ಚು ಬಾರಿಸಿದ್ದರೆ, ಸ್ಪರ್ಧಾತ್ಮಕ ಮೊತ್ತ ನಮಗೆ ಸಿಗುತ್ತಿತ್ತು. 160 ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತ ಬಾರಿಸಿದ್ದರೆ ಗೆಲುವಿನ ಅವಕಾಶವಿತ್ತು ಎಂದು ಹೇಳಿದರು.

  ಸೈನಿಗೆ ಕೊಹ್ಲಿ ಮೆಚ್ಚುಗೆ: ಇಂದೋರ್ ಟಿ20 ಪಂದ್ಯದಲ್ಲಿ ತಂಡದ ಒಟ್ಟಾರೆ ನಿರ್ವಹಣೆ ಬಗ್ಗೆ ಮೆಚ್ಚುಗೆ ಸೂಚಿಸಿದ ಕೊಹ್ಲಿ, ‘ಇದೊಂದು ಶಿಸ್ತಿನ ನಿರ್ವಹಣೆ, ಪ್ರತಿ ಸರಣಿಯಲ್ಲೂ ನಾವು ಇದೇ ರೀತಿಯ ಅಭ್ಯಾಸವನ್ನು ಎದುರು ನೋಡುತ್ತೇವೆ. ಈ ಬಾರಿ ಕೆಲವೊಂದು ಅಂಶವನ್ನು ನಾವು ಪಂದ್ಯದಲ್ಲಿ ಗಮನಿಸಿದ್ದೇವೆ. ಅದರಲ್ಲೂ ಸೈನಿ ಬೌಲಿಂಗ್ ಅದ್ಭುತವಾಗಿತ್ತು’ ಎಂದು ಹೇಳಿದರು. ಸೈನಿ ಏಕದಿನ ಮಾದರಿಯಲ್ಲಿ ಉತ್ತಮ ನಿರ್ವಹಣೆ ತೋರಿದ್ದಾರೆ. ಜಸ್​ಪ್ರೀತ್, ಭುವನೇಶ್ವರ್ ಹಾಗೂ ಶಾರ್ದೂಲ್​ರಂಥ ಬೌಲರ್​ಗಳು ಸುತ್ತಲು ಇರುವ ಕಾರಣ, ಒಂದು ತಂಡವಾಗಿ ಇದು ಉತ್ತಮ ಬೆಳವಣಿಗೆ ಎಂದು ಹೇಳಿದರು.

  3ನೇ ಟಿ20ಗೆ ಉದಾನ ಇಲ್ಲ: ಆತಿಥೇಯ ಭಾರತ ತಂಡದ ವಿರುದ್ಧ ಶುಕ್ರವಾರ ಪುಣೆಯಲ್ಲಿ ನಡೆಯಲಿರುವ 3ನೇ ಹಾಗೂ ನಿರ್ಣಾಯಕ ಟಿ20 ಪಂದ್ಯಕ್ಕೆ ಪ್ರವಾಸಿ ಶ್ರೀಲಂಕಾ ತಂಡ ಆಲ್ರೌಂಡರ್ ಇಸುರು ಉದಾನ ಸೇವೆಯನ್ನು ಕಳೆದುಕೊಂಡಿದೆ. ಇಂದೋರ್ ಟಿ20 ಪಂದ್ಯದ ವೇಳೆ ಫೀಲ್ಡಿಂಗ್ ನಡೆಸುವಾಗ ಉದಾನ ಗಾಯಗೊಂಡಿದ್ದರು. ತಕ್ಷಣವೇ ಮೈದಾನವನ್ನು ತೊರೆದಿದ್ದ ಉದಾನ ಬೌಲಿಂಗ್ ಕೂಡ ಮಾಡಲಿಲ್ಲ. ಉದಾನ ಬೆನ್ನಿಗೆ ಬಲವಾದ ಏಟು ತಿಂದಿದ್ದು ಅತಿಯಾದ ನೋವಿಗೆ ಒಳಗಾಗಿದ್ದಾರೆ. ಸರಣಿಯಿಂದ ಅವರು ಹೊರಬಿದ್ದಿದ್ದರೂ, ಪುಣೆಯಲ್ಲಿ ಅವರು ತಂಡದೊಂದಿಗೆ ಉಳಿದುಕೊಳ್ಳಲಿದ್ದು, ಫಿಸಿಯೋ ಮೂಲಕ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಲಂಕಾ ತಂಡದ ಕೋಚ್ ಮಿಕಿ ಆರ್ಥರ್ ಹೇಳಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts