More

    ಈ ಪಂಚ ಕನ್ಯೆಯರು ಏಕೆ ಪ್ರಾತಃಸ್ಮರಣೀಯರಾದರು?

    ಪ್ರೇರಣೆಅಹಲ್ಯಾ, ದ್ರೌಪದಿ, ಸೀತಾ, ತಾರಾ, ಮಂಡೋದರಿ- ಸ್ಮರೇನಿತ್ಯಂ ಮಹಾಪಾತಕ ನಾಶನಂ ಎಂಬ ಮಾತಿದೆ. ಚರಿತ್ರೆಯಲ್ಲಿ ಕೆಟ್ಟವರ ಸಂಸರ್ಗದಲ್ಲಿದ್ದರೂ, ತಮ್ಮ ಚಾರಿತ್ರ್ಯದಲ್ಲಿ ಕಳಂಕಿತರಾಗಿದ್ದರೂ, ಮುಂದೆ, ಅಪೂರ್ವ ಆದರ್ಶ ಮಹಿಳೆಯರಾಗಿ ಬಾಳಿ ಬದುಕಿದ ಸ್ತ್ರೀಯರನ್ನು ಪ್ರಾತಃಸ್ಮರಣೀಯರನ್ನಾಗಿ ಮಾಡಿದ ಭವ್ಯ ಭಾರತೀಯ ಸಂಸ್ಕೃತಿ ನಮ್ಮದು.

    ಅಹಲ್ಯೆ: ಗೌತಮ ಮಹರ್ಷಿಗಳ ಪತ್ನಿ ಅಹಲ್ಯೆ. ಮಹಾಪತಿವ್ರತೆ. ಆಕೆ ಸುರಸುಂದರಿಯಾಗಿದ್ದಳು. ಅವಳ ರೂಪ ಲಾವಣ್ಯಗಳು ಜಗತ್ತಿನಲ್ಲೇ ಪ್ರಸಿದ್ಧವಾಗಿದ್ದವು. ಅದನ್ನು ತಿಳಿದ ಇಂದ್ರ ಅವಳನ್ನು ಪಡೆಯುವ ಆಸೆಯಿಂದ ಒಮ್ಮೆ ಗೌತಮನಿಲ್ಲದ ವೇಳೆ ಅವರ ವೇಷವನ್ನು ಧರಿಸಿಕೊಂಡು ಅವರ ಆಶ್ರಮಕ್ಕೆ ಬರುತ್ತಾನೆ ಹಾಗೂ ತನ್ನ ಆಗ್ರಹವನ್ನು ವ್ಯಕ್ತಪಡಿಸುತ್ತಾನೆ. ಅಹಲ್ಯೆಗೆ ಈತ ಗೌತಮನಲ್ಲ, ಇಂದ್ರನೆಂದು ಗೊತ್ತಾದರೂ, ಅವಳು ಇಂದ್ರನಿಗೆ ಮನಸೊತು ಒಂದು ಕ್ಷಣ ಕಾಮಪಾಶಕ್ಕೆ ಬಲಿಯಾಗಿ, ತನ್ನ ಪಾವಿತ್ರ್ಯವನ್ನು ಕಳೆದುಕೊಳ್ಳುತ್ತಾಳೆ. ಅಷ್ಟರಲ್ಲಿ ಆಶ್ರಮಕ್ಕೆ ಹಿಂತಿರುಗಿದ ಗೌತಮರು, ಇವರಿಬ್ಬರನ್ನೂ ಶಪಿಸುತ್ತಾರೆ. ಅಹಲ್ಯೆಗೆ ನೀನು ನೀರು-ಆಹಾರ-ನಿದ್ರೆಗಳಿಲ್ಲದೆ ಯಾರ ಕಣ್ಣಿಗೂ ಕಾಣದಂತೆ ಈ ಆಶ್ರಮದಲ್ಲಿ ಬಿದ್ದಿರು ಎಂದು ಶಪಿಸಲು, ತನ್ನ ತಪ್ಪನ್ನು ಒಪ್ಪಿಕೊಂಡ ಅಹಲ್ಯೆ ಕೊಟ್ಟ ಶಿಕ್ಷೆಯನ್ನು ಅನುಭವಿಸಲು ಅಣಿಯಾಗುತ್ತಾಳೆ. ಗೌತಮರು ಮುಂದೆ ಒಂದು ದಿನ ಆಶ್ರಮಕ್ಕೆ ಆಗಮಿಸುವ ಶ್ರೀರಾಮಚಂದ್ರನ ಅನುಗ್ರಹದಿಂದ ನಿನ್ನ ಶಾಪ ವಿಮೋಚನೆಯಾಗುತ್ತದೆ ಎಂದು ಹೇಳಿ ಹಿಮಾಲಯದತ್ತ ತಪಸ್ಸಿಗೆ ಹೊರಡುತ್ತಾರೆ. ಅಂತೆಯೇ ಎಷ್ಟೋ ಕಾಲದ ನಂತರ ಶ್ರೀರಾಮನ ಪ್ರವೇಶದಿಂದ, ಅಹಲ್ಯೆಯ ಶಾಪ ವಿಮೋಚನೆಯಾಗಿ ಮತ್ತೆ ಪುನಃ ತನ್ನ ಪತಿ ಗೌತಮರ ಜತೆ, ಆದರ್ಶ ಪತ್ನಿಯಾಗಿ, ಸಹಧರ್ವಿುಣಿಯಾಗಿ ಬಾಳುತ್ತಾಳೆ. ಅಹಲ್ಯೆಯು ಕ್ಷಣಿಕ ಕಾಮದಾಸೆಯನ್ನು ಪೂರೈಸಿಕೊಳ್ಳಲು ತಪ್ಪು ಮಾಡಿದ್ದು ನಿಜ. ಆದರೆ ಅದನ್ನು ಒಪ್ಪಿಕೊಂಡು, ಗೈದ ತಪ್ಪಿಗಾಗಿ ಕಡು ಕಠೋರವಾದ ಶಿಕ್ಷೆಯನ್ನು ಅನುಭವಿಸಿ, ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುತ್ತಾಳೆ. ಈ ಕಾರಣದಿಂದಲೇ ಅಕೆ ಪ್ರಾತಃಸ್ಮರಣೀಯಳಾದಳು.

    ದ್ರೌಪದಿ: ಪಾಂಚಾಲ ದೇಶದ ರಾಜ ದ್ರುಪದನ ಮಗಳು ದ್ರೌಪದಿ. ತ್ರಿಲೋಕ ಸುಂದರಿ. ಅಕೆಯ ಸ್ವಯಂವರಕ್ಕಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಅರ್ಜುನನು ಗೆದ್ದು ಆಕೆಯನ್ನು ವರಿಸಿದ್ದರೂ ಮಾತೆ ಕುಂತಿಯ ಆದೇಶದಂತೆ, ಪಂಚ ಪಾಂಡವರ ಪತ್ನಿಯಾಗುತ್ತಾಳೆ. ಇದರಿಂದಾಗಿ ಅನೇಕ ಟೀಕೆಗಳನ್ನು, ಕಷ್ಟಗಳನ್ನು ಅನುಭವಿಸಿದಳು. ತುಂಬಿದ ರಾಜಸಭೆಯಲ್ಲಿ ಅವಳ ವಸ್ತ್ರಾಪಹರಣವಾಯಿತು. ಮತ್ತೆ ಗಂಡಂದಿರ ಜೊತೆ ವನವಾಸ, ಅಜ್ಞಾತವಾಸಗಳನ್ನು ಅನುಭವಿಸಬೇಕಾಯಿತು. ಇಷ್ಟಾದರೂ, ಅಕೆಪ್ರಾತಸ್ಮರಣೀಯಳಾದಳು. ಕಾರಣ, ಅಕೆ ಮಹಾಪತಿವ್ರತೆಯಾಗಿದ್ದಳು. ಪಂಚಪಾಂಡವರಿಗೂ ಸಮಾನ ಸಹಧರ್ವಿುಣಿಯಾಗಿ ಬಾಳಿದಳು. ಸಹನ ಶೀಲೆಯೂ, ಬುದ್ದಿವಂತಳೂ ಆಗಿದ್ದ ದ್ರೌಪದಿ ತನ್ನ ಧೀರ ನಿಲುವಿನಿಂದ, ಆದರ್ಶ ನಾರಿ ಎನಿಸಿದಳು.

    ಸೀತೆ: ಜನಕ ಮಹಾರಾಜನ ಸಾಕು ಮಗಳಾಗಿದ್ದ ಸೀತೆ, ಚೆಲುವೆಯೂ, ಸೌಮ್ಯ ಸ್ವಭಾವದ ವಳೂ ಆಗಿದ್ದಳು. ಶಿವಧನಸ್ಸನ್ನು ಮುರಿದ ರಾಮನನ್ನು ವರಿಸುತ್ತಾಳೆ. ಆದರೆ. ಕೈಕೇಯಿಯ ಆಶಯ ದಂತೆ ವನವಾಸದತ್ತ ಹೊರಟ ಪತಿ ರಾಮಚಂದ್ರನನ್ನು ಅನುಸರಿಸುತ್ತಾಳೆ. ಅರಮನೆಯ ಸುಖವನ್ನು ತ್ಯಜಿಸಿ, ಕಾಡಿಗೆ ಹೊರಟ ಸೀತೆಯ ಪತಿವ್ರತಾ ಧರ್ಮವು ಪ್ರಶಂಸನೀಯವಾದುದು. ಮುಂದೆ, ಮೈದುನ ಲಕ್ಷಣ ಹಾಕಿದ್ದ ಲಕ್ಷಣ ರೇಖೆಯನ್ನು ದಾಟಿದ ತಪ್ಪಿಗಾಗಿ ರಾವಣನಿಂದ ಅಪಹರಿಸಲ್ಪಡುತ್ತಾಳೆ. ಪರದೇಶದಲ್ಲಿ ಪರಪುರುಷನ ಬಂಧನದಲ್ಲಿದ್ದರೂ, ತನ್ನ ಪಾವಿತ್ರ್ಯವನ್ನು ಕಾಪಾಡಿಕೊಳ್ಳುತ್ತಾಳೆ. ಶ್ರೀರಾಮ, ರಾವಣನ ಮೇಲೆ ಯುದ್ಧ ಮಾಡಿ ಆಕೆಯನ್ನು ತನ್ನ ಜತೆ ಕರೆತಂದರೂ, ಒಬ್ಬ ಅಗಸನ ಅಡ್ಡ ಮಾತಿಗೆ ಬಲಿಪಶುವಾಗಿ, ತುಂಬು ಗರ್ಬೀಣಿಯಾಗಿದ್ದರೂ, ಮತ್ತೆ ಕಾಡಿಗೆ ಹೋಗಬೇಕಾಯಿತು. ತನ್ನ ಪಾವಿತ್ರ್ಯವನ್ನು ಸಾಬೀತುಪಡಿಸಲು ಅಗ್ನಿ ಪ್ರವೇಶವನ್ನು ಮಾಡಬೇಕಾಯಿತು. ಇಂತಹ ಪತಿವ್ರತಾ ಶಿರೋಮಣಿ ಪ್ರಾತಃಸ್ಮರಣೀಯಳೇ ಸರಿ.

    ತಾರಾ: ವಾನರ ರಾಜ ವಾಲಿಯ ಪತ್ನಿ ತಾರಾ. ಶಾಸ್ತ್ರಜ್ಞಳೂ, ನೀತಿಜ್ಞಳೂ ಆಗಿದ್ದಳು. ಮಡದಿಯ ಮಾತುಗಳನ್ನು ಕೇಳದ ಅಣ್ಣ ವಾಲಿಯನ್ನು ಪರಾಭವಗೊಳಿಸಿ, ತಮ್ಮ ಸುಗ್ರೀವ ಕಿಷ್ಕಿಂಧಾ ರಾಜ್ಯದ ರಾಜನಾಗುತ್ತಾನೆ. ಬುದ್ಧಿಮತಿ, ವ್ಯವಹಾರ ಚತುರೆ, ಕುಶಲಮತಿ, ರಾಜನೀತಿಜ್ಞೆಯೂ ಆಗಿದ್ದ ತಾರಾ, ಮುಂದೆ ಸುಗ್ರೀವನ ಮಡದಿಯಾಗಿ ವಾನರ ಸಾಮ್ರಾಜ್ಯವನ್ನು ಆಳುತ್ತಾಳೆ. ವೀರ ಚತುರ ನಾರಿಯರೂ ಸಾಮ್ರಾಜ್ಯಗಳನ್ನು ನಡೆಸಬಲ್ಲರು ಎಂಬುದನ್ನು ತೋರಿಸುತ್ತಾ, ಪ್ರಾತಃಸ್ಮರಣೀಯ ಕನ್ಯೆಯರ ಪಟ್ಟವನ್ನು ಏರುತ್ತಾಳೆ.

    ಮಂಡೋದರಿ: ರಾವಣನ ಪಟ್ಟ ಮಹಿಷಿ ಮಂಡೋದರಿ, ರಾವಣನ ದುಷ್ಕೃತ್ಯಗಳನ್ನು ವಿರೋಧಿಸಿದ ದಿಟ್ಟ ಮಹಿಳೆ. ಕಪಟದಿಂದ, ಸೀತೆಯನ್ನು ಅಪಹರಿಸಿ ತಂದಾಗಲೂ ಪತಿ ರಾವಣನ ಈ ನಿಂದನೀಯ ಲಜ್ಜಾಸ್ಪದ ಕೃತ್ಯವನ್ನು ಪ್ರತಿಭಟಿಸಿದಾಕೆ. ರಾವಣನಂತಹ ಮಹಾ ಬಲಶಾಲಿ, ಹಠವಾದಿ, ದುರಹಂಕಾರಿ, ದುಷ್ಟನಿಗೂ ಕಾಲಕಾಲಕ್ಕೆ ಬುದ್ದಿಮಾತುಗಳನ್ನು ಹೇಳಿ, ಮಾರ್ಗದರ್ಶನ ಮಾಡಲು ಪ್ರಯತ್ನಿಸಿದ ಮಂಡೋದರಿ ನಿಜಕ್ಕೂ ಪ್ರಾತಃಸ್ಮರಣೀಯಳೇ ಸರಿ.

    ಕಿವುಡುತನಕ್ಕೆ ಕಾರಣವಾಗಬಹುದು ಕಿವಿಯಲ್ಲಿ ಸಂಗ್ರಹವಾದ ಕೊಳೆ…ಈ ಸುಲಭ ವಿಧಾನಗಳಿಂದ ಸ್ವಚ್ಛಗೊಳಿಸಿ

    ರಾಮಲಲ್ಲಾ ಪ್ರಾಣಪ್ರತಿಷ್ಠೆ ಸಂಭ್ರಮದ ವೇಳೆ ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿದ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts