More

    ಬಿಜೆಪಿ, ಜೆಡಿಎಸ್ ಎದೆ ಬಡಿದುಕೊಂಡು ಆರೋಪ ಮಾಡುತ್ತಿರುವುದೇಕೆ?; ಸಿದ್ದರಾಮಯ್ಯ ವ್ಯಘ್ರ

    ಬೆಂಗಳೂರು: ತನ್ನ ದುರುದ್ದೇಶ ಮತ್ತು ಭ್ರಷ್ಟತೆ ಮುಚ್ಚಿಕೊಳ್ಳುವುದಕ್ಕಾಗಿಯೇ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ನಡೆಸಲಾಗುತ್ತಿರುವ ಐಟಿ ದಾಳಿಗಳು ಮತ್ತು ಕಾಂಗ್ರೆಸ್‌ಗೆ ಯಾವುದೇ ಸಂಬಂಧ ಇಲ್ಲ, ಈ ಬಗ್ಗೆ ಯಾವುದಾದರೂ ಪುರಾವೆಗಳಿದ್ದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳಲು ಅವರು ಸ್ವತಂತ್ರರಿದ್ದಾರೆ. ತೆರಿಗೆ ವಂಚಕರ ವಿರುದ್ಧದ ಕ್ರಮಗಳನ್ನು ನಾವು ಸ್ವಾಗತಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
    ರಾಜ್ಯದಲ್ಲಿ ನಡೆದಿರುವ ಐಟಿ ದಾಳಿ ಹಾಗೂ ಪ್ರತಿಪಕ್ಷದ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಪಂಚರಾಜ್ಯಗಳಲ್ಲಿನ ಚುನಾವಣೆ ಸೋಲಿನ ಭಯ ಮತ್ತು ಶ್ರೀಮಂತ ಉದ್ಯಮಿ- ಗುತ್ತಿಗೆದಾರರನ್ನು ಬ್ಲಾಕ್ ಮೇಲ್ ಮಾಡುವ ದುರುದ್ದೇಶದ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಐಟಿ- ಇಡಿ ದಾಳಿಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
    ಗುತ್ತಿಗೆದಾರರು ಖೊಟ್ಟಿ ಖರೀದಿ ರಸೀದಿಗಳು ಮತ್ತು ಉಪಗುತ್ತಿಗೆದಾರರಿಂದ ಅಪ್ರಾಮಾಣಿಕವಾದ ಖರ್ಚುವೆಚ್ಚದ ದಾಖಲೆಗಳ ಮೂಲಕ ಆದಾಯ ಕಡಿಮೆಗೊಳಿಸಿ ತೆರಿಗೆ ವಂಚನೆ ಮಾಡಿರುವುದು ದಾಳಿಯಲ್ಲಿ ಪತ್ತೆಯಾಗಿದೆ ಎಂದು ಐಟಿ ಇಲಾಖೆಯೇ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಯಾವುದೇ ರಾಜಕೀಯ ಪಕ್ಷದ ಜೊತೆಗಿನ ವ್ಯವಹಾರದ ಬಗ್ಗೆ ಉಲ್ಲೇಖವನ್ನು ಇಲಾಖೆಯೇ ಮಾಡದೆ ಇರುವಾಗ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಎದೆ ಬಡಿದುಕೊಂಡು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿರುವುದು ಏಕೆ? ಇವರದ್ದೇ ಸರ್ಕಾರದ ವರಮಾನ ತೆರಿಗೆ ಇಲಾಖೆಯ ಮೇಲೆಯೂ ಇವರಿಗೆ ನಂಬಿಕೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
    ಪಂಚರಾಜ್ಯಗಳಲ್ಲಿ ಮಾತ್ರವಲ್ಲ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಯ ಸೋಲು ಬಹುತೇಕ ಖಾತರಿಯಾಗಿರುವ ಕಾರಣ ಬಿಜೆಪಿಗೆ ಹಿಂದಿನಂತೆ ಹಣ ಸಂಗ್ರಹವಾಗುತ್ತಿಲ್ಲ, ಇದಕ್ಕಾಗಿ ಶ್ರೀಮಂತ ಉದ್ಯಮಿಗಳು ಮತ್ತು ಗುತ್ತಿಗದಾರರನ್ನು ಬ್ಲಾಕ್ ಮೇಲ್ ಮಾಡಿ ಬೆದರಿಸಿ ಹಣ ವಸೂಲಿ ಮಾಡಲು ಐಟಿ-ಇಡಿ ದಾಳಿ ನಡೆಸಲಾಗುತ್ತಿದೆ ಎಂದು ಗುರುತರ ಆರೋಪ ಮಾಡಿದ್ದಾರೆ.
    ಕೋಟ್ಯಂತರ ರೂಪಾಯಿ ಲಂಚ ಹೊಡೆಯುತ್ತಿದ್ದಾಗಲೆ ಸಿಕ್ಕಿಬಿದ್ದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಜಾಮೀನು ಮೇಲೆ ಜೈಲಿನಿಂದ ಬಿಡುಗಡೆಯಾದಾಗ ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ನಡೆಸಿದ್ದ ಬಿಜೆಪಿ ನಾಯಕರು ಈಗ ಯಾವುದೋ ಖಾಸಗಿ ಗುತ್ತಿಗೆದಾರನ ಮನೆಯಲ್ಲಿ ಸಿಕ್ಕ ಹಣಕ್ಕಾಗಿ ನಮ್ಮ ರಾಜೀನಾಮೆ ಕೇಳುತ್ತಿದ್ದಾರೆ. ಈ ನೈತಿಕತೆ ಬಿಜೆಪಿಗೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.
    ಬಿ.ಎಸ್ ಯಡಿಯೂರಪ್ಪ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಮಾಜಿ ಶಾಸಕ ಸಂಪಂಗಿಯಿಂದ ಹಿಡಿದು ಇತ್ತೀಚಿನ ಮಾಡಾಳು ವಿರೂಪಾಕ್ಷಪ್ಪನವರ ವರೆಗೆ ಬಿಜೆಪಿ ನಾಯಕರೆಲ್ಲರೂ ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಸೇರಿದವರಾಗಿದ್ದಾರೆ. ಇವರು ನಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ, ನಗೆಪಾಟಲಿಗೀಡಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
    ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಮುನಿರತ್ನ, ಡಾ.ಸುಧಾಕರ್ ಮತ್ತು ಬಿ.ಸಿ.ಪಾಟೀಲ್ ಮೇಲೆ ಶೇ.40 ಕಮಿಷನ್ ಆರೋಪ ಇದೆ. ಬಿಟ್ ಕಾಯಿನ್ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು ಕೇಳಿಬಂದಿದೆ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಡಾ.ಅಶ್ವತನಾರಾಯಣ, ಬಿ.ವೈ.ವಿಜಯೇಂದ್ರ ಮತ್ತು ಆರಗ ಜ್ಞಾನೇಂದ್ರ ಷಾಮೀಲಾಗಿರುವ ಆರೋಪ ಎದುರಿಸುತ್ತಿದ್ದಾರೆ. ಚುನಾವಣಾ ಟಿಕೆಟ್ ವಂಚನೆ ಪ್ರಕರಣದಲ್ಲಿ ಬಿ.ಎಲ್.ಸಂತೋಷ್, ಸುನೀಲ್ ಕುಮಾರ್ ಮತ್ತು ಸಿ,ಟಿ.ರವಿ ಅವರ ಹೆಸರುಗಳನ್ನು ಆರೋಪಿಗಳೇ ಉಲ್ಲೇಖಿಸಿದ್ದಾರೆ. ಇವರೆಲ್ಲರೂ ಸೇರಿ ನಮ್ಮ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts