More

    ಎಲ್ಲೆಂದರೆ ಹಸಿರು ಧ್ವಜ ಹಾರಾಡುತ್ತಿದೆ, ತೆರವು ಮಾಡುವ ಕ್ರಮ ಮಾಡ್ತೀರಾ?; ಸಿಎಂಗೆ ಪ್ರಶ್ನೆ

    ಬೆಂಗಳೂರು: ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ನಿನ್ನೆ ರಾತ್ರಿ ಹನುಮಧ್ವಜ ಹಾರಿಸಿದ್ದು, ಪೊಲೀಸರನ್ನು ಬಳಸಿ ಕೆಳಗೆ ಇಳಿಸಿದ್ದನ್ನು ಖಂಡಿಸುತ್ತೇನೆ. ಒಂದು ಧ್ವಜ ಇಳಿಸಿದರೆ ಸಾವಿರಾರು ಧ್ವಜ ಹಾರಿಸಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸುನೀಲ್‍ಕುಮಾರ್ ಸರ್ಕಾರವನ್ನು ಎಚ್ಚರಿಸಿದರು.
    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇದಕ್ಕೆ ಗೃಹ ಇಲಾಖೆ ನೇರ ಹೊಣೆ ಆಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಸುತ್ತೇವೆ. ಸ್ಥಳೀಯ ಅಧಿಕಾರಿಗಳು ದೊಡ್ಡ ವಿವಾದ ಮಾಡಲು ಹೊರಟಿದ್ದಾರೆ. ಇದು ಆಕ್ಷೇಪಾರ್ಹ ಎಂದು ತಿಳಿಸಿದರು.
    ಗ್ರಾಮದ ಜನ ಒಗ್ಗಟ್ಟಾಗಿ ಹನುಮ ಧ್ವಜ ಹಾರಿಸಲು ಮುಂದಾಗಿದ್ದಾರೆ. ಅಲ್ಲದೆ, ಸ್ಥಳೀಯರ ಮೇಲೆ ಲಾಠಿ ಪ್ರಹಾರ ನಡೆದಿದೆ. ಯಾಕೆ ಇಳಿಸಲಾಗುತ್ತಿದೆ ಎಂದು ಕೇಸರಿ ವಿರೋಧಿ ಸರ್ಕಾರ ಸ್ಪಷ್ಟಪಡಿಸಬೇಕು. ಸ್ವತಃ ಸಿದ್ದರಾಮಯ್ಯ ನನಗೆ ಕೇಸರಿ ಕಂಡ್ರೆ ಆಗಲ್ಲ ಅಂದಿದ್ದರು ಎಂದು ವಿವರಿಸಿದರು.
    ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ದಿನ ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡಿದ್ದಾರೆ. ಸಹಜವಾಗಿ ಎಲ್ಲರ ಮನೆ ಮೇಲೆ ಕೇಸರಿ ಧ್ವಜ ಹಾರಿಸಿದ್ದಾರೆ. ಜತೆಗೇ ನಂದಾ ದೀಪ ಹಚ್ಚಿದ್ದಾರೆ. ಆ ಗ್ರಾಮದಲ್ಲಿ ಕೂಡ ಧ್ವಜ ಹಾರಿಸಿ, ರಾಮನ ಫೋಟೋ ಹಾಕಿ ಪೂಜೆ ಮಾಡಿದ್ದಾರೆ. ಇದನ್ನು ಸರ್ಕಾರ ಸಹಿಸುತ್ತಿಲ್ಲ, ಇನ್ಯಾವುದನ್ನು ಸಹಿಸುತ್ತೀರಾ? ಎಂದು ಕೇಳಿದರು.
    ಹಿಂದೂ ಧ್ವಜ ಹಾರಿಸೋದನ್ನು ತಡೆಯುತ್ತೀರ? ರಾಜ್ಯದ ಎಲ್ಲೆಂದರೆ ಅಲ್ಲಿ ಘೋರಿ ಇದೆ. ಹಸಿರು ಧ್ವಜ ಹಾರಾಡುತ್ತಿದೆ. ಅದನ್ನು ನಾವು ತೋರಿಸುತ್ತೇವೆ. ತೆರವು ಮಾಡುವ ಕ್ರಮ ಮಾಡ್ತೀರಾ.? ಎಂದು ಪ್ರಶ್ನೆಯನ್ನು ಮುಂದಿಟ್ಟರು. ಅನಧಿಕೃತ ಧ್ವಜ ತೆರವಿಗೆ ಸರ್ಕಾರದ ನಿರ್ದೇಶನ, ಕ್ರಮ ಏನಿದೆ ಎಂದು ಸ್ಪಷ್ಟಪಡಿಸಲು ಆಗ್ರಹಿಸಿದರು.
    ಒಂದು ಕಡೆ ಕಾಂಗ್ರೆಸ್ ನಾಯಕರು ಅಯೋಧ್ಯೆಗೆ ಹೋಗಲ್ಲ ಅಂತಾರೆ. ಮತ್ತೊಂದು ಕಡೆ ಪೊಲೀಸರನ್ನು ಬಳಸಿ ಕೇಸರಿ ಧ್ವಜ ಇಳಿಸುವ ಕೆಲಸ ಮಾಡ್ತಿದೆ ಎಂದು ಆಕ್ಷೇಪಿಸಿದ ಅವರು, ನಮ್ಮ ನಾಯಕರು ಮಂಡ್ಯ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.
    ಊರಿನ ಜನ ಸ್ವಯಂಪ್ರೇರಿತರಾಗಿ ಹಾಕಿದ್ದಾರೆ ಎಂದು ತಿಳಿಸಿದರಲ್ಲದೆ, ಸರ್ಕಾರ ಕೇಸರಿ ವಿರೋಧಿ ನೀತಿಯಿಂದ ಹೊರಗೆ ಬರಬೇಕು. ಕಾಂಗ್ರೆಸ್ಸಿಗರು ತಮ್ಮ ನಿಲುವನ್ನ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts