More

    ಲೈಫ್ ರಿವೈಂಡ್ ಮಾಡಿದಾಗ ಸಿಗೋದು ನಾಳೆಗಳಿಗೆ ಸ್ಪೂರ್ತಿ! ಜರೂರ್​ ಮಾತಲ್ಲಿ ರವೀಂದ್ರ ಎಸ್​. ದೇಶಮುಖ್​

    ಲೈಫ್ ರಿವೈಂಡ್ ಮಾಡಿದಾಗ ಸಿಗೋದು ನಾಳೆಗಳಿಗೆ ಸ್ಪೂರ್ತಿ! ಜರೂರ್​ ಮಾತಲ್ಲಿ ರವೀಂದ್ರ ಎಸ್​. ದೇಶಮುಖ್​

    ಲೈಫ್ ರಿವೈಂಡ್ ಆದಾಗ ಧೋ ಎಂದು ಸುರಿಯುವುದು ನೆನಪುಗಳ ಮಳೆಯೇ!

    ಮನಸ್ಸು ಪೂರ್ತಿ ಚಂಡಿ(ಒದ್ದೆ)ಯಾಗಿ, ನಿನ್ನೆಗಳೆಲ್ಲ ಥಕಥೈ ಅಂತ ಕುಣಿಯಲು ಆರಂಭಿಸಿದರೆ ನೆನಪುಗಳ ಮೆರವಣಿಗೆ ಕೈಹಿಡಕೊಂಡು ಎಲ್ಲೆಲ್ಲೋ ಕರೆದುಕೊಂಡು ಹೋಗುತ್ತದೆ. ಹಳೆಯ ಗಲ್ಲಿಗಳನ್ನು ಹಾದು ಆತ್ಮೀಯ ಮುಖಗಳನ್ನು, ಬಾಲ್ಯ ಕಳೆದ ತಾಣಗಳನ್ನು, ಪ್ರೀತಿ ಸುರಿಸುತ್ತಿದ್ದ ನಮ್ಮವರನ್ನು, ಮರೆತೇ ಹೋಗಿದ್ದ ಹಳೇ ಗೆಳೆಯರನ್ನು, ಆಡುತ್ತ ಮೈಮರೆಯುತ್ತಿದ್ದ ಅಂಗಳಗಳನ್ನು, ಬಿದ್ದಾಗ ಗಾಯಕ್ಕೆ ಮುಲಾಮು ಸವರುತ್ತಿದ್ದ ಕಾಳಜಿಯ ಜೀವಗಳನ್ನು, ಹುಸಿಕೋಪ ತೋರುತ್ತಿದ್ದ ಹುಡುಗಿಯನ್ನು, ಹೈಸ್ಕೂಲ್ ಪ್ರೇಮದ ಮಧುರಯಾತನೆಯನ್ನು, ಕಾಲೇಜು ಕ್ಯಾಂಪಸುಗಳಲ್ಲಿನ ನಗು, ತಮಾಷೆ, ಜಗಳ, ಮುನಿಸುಗಳನ್ನು, ನಾವು ಊರು ಬಿಟ್ಟು ಹೊರಟಾಗ ಗಳಗಳನೇ ಅತ್ತು ಅಕಾಲಿಕ ಪ್ರವಾಹ ಸೃಷ್ಟಿಸಿದ ಕಣ್ಣುಗಳನ್ನು, ಹೊಸಊರಲ್ಲಿ ಸ್ಮೈಲ್ ಕೊಟ್ಟು ಪರಿಚಯ ಮಾಡಿಕೊಂಡ ಸಹೋದ್ಯೋಗಿಯನ್ನು… ಅಬ್ಬಬ್ಬಾ ಈ ಮಳೆ ನಿಲ್ಲುವುದೇ ಇಲ್ಲ! ಬಹುತೇಕ ಎಲ್ಲರ ‘ಜ್ಞಾಪಕ ಚಿತ್ರಶಾಲೆ’ಯಲ್ಲಿ ಇವೆಲ್ಲವೂ ಅಚ್ಚೊತ್ತಿದಂತೆ ಫಳ-ಫಳ ಅಂತ ಹೊಳೆಯುತ್ತಲೇ ಇರುತ್ತವೆ.

    ಅಷ್ಟಕ್ಕೂ, ಹಳೆಯ ದಿನಗಳೆಲ್ಲ ವ್ಹಾ ವ್ಹಾ ಅನಿಸೋದು ಏಕೆ? ಏಕೆಂದರೆ, ನೆನಪುಗಳಿಗೆ ಅಷ್ಟೊಂದು ಶಕ್ತಿಯಿದೆ. ನೆನಪುಗಳೆಂದರೆ ಬರೀ ಭಾವನೆಗಳಲ್ಲ, ಹಳಹಳಿಕೆಯ ಅಧ್ಯಾಯವಲ್ಲ! ನೆನಪುಗಳ ಮೆರವಣಿಗೆ ಭವಿಷ್ಯದ ಪಯಣಕ್ಕೂ ಪಥ ನಿರ್ವಿುಸಿ ಕೊಡುತ್ತದೆ. ಅದು ಹೊಸ ಆಹ್ಲಾದ, ಮನೋಚೈತನ್ಯವನ್ನು ನೀಡುತ್ತದೆ. ಅದಕ್ಕೆ ಕಳೆದು ಹೋದ ದಿನಗಳು ಹಿತವೆನಿಸುತ್ತವೆ. ಆಗ ನಿಜಕ್ಕೂ ಬದುಕೇ ಅಷ್ಟು ಸುಂದರವಾಗಿತ್ತಾ ಅಥವಾ ಎಲ್ಲವನ್ನೂ ಭಾವನೆಗಳ ಬಣ್ಣದಲ್ಲಿ ಅದ್ದು ಖುಷಿಪಡುತ್ತಿದ್ದೆವಾ? ಉತ್ತರ ಸುಲಭವಲ್ಲ. ಆದರೆ, ನಮ್ಮನ್ನು ಹೊಸ ಮನುಷ್ಯರಂತೆ ಮಾಡುವ ಶಕ್ತಿ ಅದಕ್ಕಿದೆ. ಎಷ್ಟೋ ಜನರು ಎತ್ತರಕ್ಕೇರಿದರೂ ಹಳೆಯದನ್ನೆಲ್ಲ ನೆನಪಿಸಿಕೊಂಡೇ ಅದರ ಆಧಾರದಲ್ಲಿ ವಿನಯತೆಯ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಾರೆ.

    ನೆನಪುಗಳ ಖಜಾನೆಗೆ ಕೈಹಾಕಿದರೆ ಏನೆಲ್ಲ ಸಿಗುತ್ತದೆ ನೋಡಿ! ಯಾವುದೋ ಕಷ್ಟದ ಕ್ಷಣದಲ್ಲಿ ನೆರವಾಗಿ ನಿಂತವರು, ರಕ್ತಸಂಬಂಧ ಇಲ್ಲದಿದ್ದರೂ ಭಾವನಾತ್ಮಕ ಬೆಂಬಲ ನೀಡಿದವರು, ನಮ್ಮವರೇ ಎಂದುಕೊಂಡವರು ಸಮಸ್ಯೆ ಬಂದಾಗ ದೂರವಾಗಿದ್ದು, ಮಾನವೀಯ ಸಂಬಂಧಗಳಿಗೆ ಹೊಸ ಬಣ್ಣ ತುಂಬಿದವರು, ಬಾಳಿನ ಪ್ರತಿ ಹಂತದಲ್ಲೂ ಬೆಂಬಲವಾಗಿ ನಿಂತ ಜೀವನಸಂಗಾತಿಯ ಸ್ಥೈರ್ಯ, ಅವಮಾನ ಮಾಡಿದವರ ಮಾತುಗಳ ಇರಿತ, ಸಾಧನೆ ಮಾಡಿದಾಗ ಸಿಕ್ಕ ಆಶೀರ್ವಾದ… ಹೀಗೆ ಅದೆಷ್ಟೋ ಬಿಂಬಗಳು ಒಂದಾಗಿ ಜೀವನಚಿತ್ರವನ್ನು ಚೆಂದವಾಗಿಸುತ್ತವೆ. ಎಲ್ಲರಿಗೂ, ಮಧುರ ನೆನಪುಗಳೇ ಇರುತ್ತವೆಯೇ? ಕಷ್ಟದಿಂದ ಜೀವನ ಸಾಗಿಸಿದವರು ಹಿಂದಿನದ್ದನ್ನು ನೆನಪಿಸಿಕೊಂಡರೆ ಹಿಂಸೆಯಾಗುತ್ತದೆ ಎನ್ನುವವರೂ ಇದ್ದಾರೆ. ನಿಜ, ಆದರೆ, ಈ ಹೊತ್ತಿನಲ್ಲಿ ತಿಳಿಮನಸ್ಸಿನಿಂದ ಅವರೇ ಹೆಜ್ಜೆಗುರುತುಗಳನ್ನು ಗಮನಿಸಿಕೊಂಡರೆ ಆ ಕಷ್ಟಗಳನ್ನೆಲ್ಲ ಮೀರಿ ನಿಂತು ಬದುಕು ಕಟ್ಟಿಕೊಂಡ ಪರಿಗೆ ಹೆಮ್ಮೆ ಎನಿಸುತ್ತದೆಯಲ್ಲವೇ? ಹಿಂದಿನ ಕಷ್ಟಗಳಂತೆಯೇ ಈಗಿನ ಕಷ್ಟವೂ ಮರೆಗೆ ಸರಿಯುತ್ತದೆ ಎಂಬ ವಿಶ್ವಾಸ ಮೂಡುತ್ತದೆ ಅಲ್ಲವೇ?

    ಹೀಗೆ ಬದುಕಿಗೆ ನೆರವಾದವರ ಬಗ್ಗೆ ಕೃತಜ್ಞತೆಯ ಭಾವ ಮೂಡುತ್ತದೆ, ಕೆಲ ವ್ಯಕ್ತಿತ್ವಗಳ ಬಗೆಗಿನ ಗೌರವ ಹೆಚ್ಚಾಗುತ್ತದೆ. ಅವರು ಪಡುತ್ತಿದ್ದ ಕಷ್ಟಗಳನ್ನು ಅವಲೋಕಿಸಿದಾಗ ನಮ್ಮ ಬದುಕು ನೆಮ್ಮದಿಯ ನಿಲ್ದಾಣಕ್ಕೆ ಕಚ್ಚಿಕೊಂಡಿದೆ ಎಂಬ ಸಮಾಧಾನ ಮೂಡುತ್ತದೆ. ಸಣ್ಣ ಕಾರಣಕ್ಕೆ ಜಗಳ ಮಾಡಿ ಸಂಬಂಧಗಳನ್ನು ಕಳೆದುಕೊಂಡವರ ಬಗ್ಗೆ ಮರುಕ ಎನಿಸುತ್ತದೆ. ಯಾರಿಗೋ ಧನ್ಯವಾದ ಹೇಳಬೇಕು, ಅಥವಾ ಕ್ಷಮೆ ಕೇಳಬೇಕು ಎನಿಸುತ್ತದೆ. ಇದನ್ನೆಲ್ಲ ಒಟ್ಟಾರೆ ಪೋಣಿಸಿದಾಗ ಜೀವನಸಂದೇಶವೂ ಸಿಗುತ್ತದೆ. ನೆನಪುಗಳ ಕೈಹಿಡಿದು ಸಾಗುವಾಗ ಜೀವನಪಥದಲ್ಲಿ ನಾವು ಎಡವಿದ್ದೆಲ್ಲಿ, ಸವಾಲು ಎದುರಿಸಿದ್ದು ಹೇಗೆ, ಹತಾಶರಾಗಿದ್ದು ಏಕೆ ಎಂಬೆಲ್ಲ ಸಂಗತಿಗಳು ಸ್ಪಷ್ಟಗೊಳ್ಳುತ್ತ ಹೋಗಿ ನಾಳೆಗಳ ಬಗ್ಗೆ ಸ್ಪಷ್ಟತೆ ಮೂಡುತ್ತದೆ.

    ಇವತ್ತಿನ ಅಂಕಣ ಸವಾರಿ ನೆನಪಿನ ಓಣಿಯಲ್ಲಿ ಏಕೆ ಸುತ್ತುತ್ತಿದೆ ಎಂದು ಅಚ್ಚರಿಯಾಯಿತೇ? ಜಗತ್ತು ಲಾಕ್​ಡೌನ್​ನಲ್ಲಿ ಇರುವಾಗ ತುಂಬ ಜನರು ನೆನಪುಗಳಿಗೆ ಹಾಕಿಟ್ಟಿದ್ದ ಲಾಕ್ ಅನ್ನು ಓಪನ್ ಮಾಡುತ್ತಿದ್ದಾರೆ. ಹೀಗೆ ನೆನಪುಗಳನ್ನು ಹರಿವಿಟ್ಟು ಆ ದಿನಗಳು ಎಷ್ಟು ಚೆಂದವಾಗಿದ್ದವಲ್ಲ ಎಂದು ಪಿಸುಗುಡುತ್ತಿದ್ದಾರೆ. ಹಾಗಾಗಿ, ಹಳೆಯ ದಿನಗಳು ಹಿತಾನುಭವ ನೀಡುತ್ತಿವೆ.

    ತುಂಬ ವರ್ಷಗಳ ನಂತರ ಹಳ್ಳಿಗಳ ನೆನಪಾಗಿದೆ, ಅಲ್ಲಿಯ ಬದುಕೇ ನೆಮ್ಮದಿದಾಯಕ ಎಂಬ ‘ಜ್ಞಾನೋದಯ’ ಆಗುತ್ತಿದೆ. ಹಳೆಯ ಆಟಗಳು ಖುಷಿ ನೀಡುತ್ತಿವೆ. ರಾಷ್ಟ್ರೀಯ ವಾಹಿನಿ ದೂರದರ್ಶನ ರಾಮಾಯಣ, ಮಹಾಭಾರತ ಧಾರಾವಾಹಿಗಳ ಪುನರ್ ಪ್ರಸಾರ ಆರಂಭಿಸಿ ಜನಪ್ರಿಯತೆಯ ಓಟದಲ್ಲಿ ಲಾಂಗ್ ಜಂಪ್ ಮಾಡಿದೆ. ರಾಮಾಯಣ, ಮಹಾಭಾರತ ನೋಡುತ್ತ ಎಷ್ಟೋ ಕಣ್ಣುಗಳು ಒದ್ದೆಯಾಗುತ್ತಿವೆ. ಭಾವುಕ ಜೀವಗಳು, ‘ಅಯ್ಯೋ, ಸೀತೆಯ ಕಷ್ಟ ನೋಡಲಾಗುತ್ತಿಲ್ಲ’ ಎಂದು ಅಮ್ಮನ ಸೆರಗು ಹಿಡಿದು ಮಗುವಿನಂತೆ ಬಿಕ್ಕುತ್ತಿವೆ. ಎಷ್ಟೋ ಜನ ಹಿಂದೆ, ಯಾರದೋ ಮನೆಗೆ ಕಷ್ಟಪಟ್ಟು ನುಗ್ಗಿ ರಾಮಾಯಣ ನೋಡುವಾಗಿನ ಖುಷಿಯನ್ನು ಬಣ್ಣಿಸಿಯೇ, ಮಂತ್ರಮುಗ್ಧರಾಗುತ್ತಿದ್ದಾರೆ. ಟಿ.ವಿ. ಬ್ಲಾಕ್ ಆಂಡ್ ವೈಟ್ ಆಗಿದ್ದರೂ ಕನಸುಗಳು ಕಲರ್​ಫುಲ್ ಆಗಿಯೇ ಇರುತ್ತಿದ್ದವು. ಇಂದು ಆ ಖುಷಿ, ಸಂತೃಪ್ತಿ, ನೆಮ್ಮದಿ ಎಲ್ಲಿ ಹೋಯಿತು ಎಂದು ಹುಡುಕಾಡಲು ಆರಂಭಿಸಿದ್ದಾರೆ. ಯಾವುದೇ ಸಮಸ್ಯೆ ಬಂದರೂ ‘ಶಕ್ತಿಮಾನ್’ನಂತೆ ಅಂಜದೆ, ಅಳುಕದೆ ಇರಲು ಸಾಧ್ಯವೇ ಎಂದು ಅವಲೋಕಿಸಿಕೊಳ್ಳುತ್ತಿದ್ದಾರೆ. ಮಾತುಗಳೇ ನಿಂತುಹೋಗಿದ್ದ ಮನೆಗಳಲ್ಲಿ ಪಟ್ಟಾಂಗ ರಂಗೇರಿದೆ. ಅಪ್ಪ-ಅಮ್ಮ ಅಥವಾ ಅಜ್ಜ-ಅಜ್ಜಿ ಬದುಕನ್ನು ರಿವೈಂಡ್ ಮಾಡಿಕೊಂಡು, ನೆನಪಿನ ಬುತ್ತಿ ಬಿಚ್ಚಿಟ್ಟರೆ ಹೊಸ ಪೀಳಿಗೆ ಕುತೂಹಲದಿಂದ ಕಣ್ಣು ಅರಳಿಸುತ್ತಿದೆ. ಸೋಷಿಯಲ್ ಮೀಡಿಯಾದ ಕರೊನಾ ಜೋಕು ಕೇಳಿ ಬೊಚ್ಚುಬಾಯಿಯಲ್ಲೇ ಅಜ್ಜ-ಅಜ್ಜಿಯಂದಿರು ನಗು ಅರಳಿಸುತ್ತಿದ್ದಾರೆ. ಧೂಳು ಕೊಡವಿಕೊಂಡ ಹಳೆಯ ಆಲ್ಬಂಗಳು ಭಾವಪಯಣದ ಸಂಭ್ರಮ ಮೂಡಿಸುತ್ತಿವೆ. ಅಷ್ಟೇ ಅಲ್ಲ, ಸಂಬಂಧಿಕರೆಲ್ಲ ನೆನಪಾಗಿದ್ದಾರೆ. ‘ನೀವು ಸೌಖ್ಯಾನಾ, ಕಾಳಜಿ ತಗೋರಿ. ಹೊರಗೆ ಹೋದರೆ ಕರೊನಾ, ಮನೆಯಲ್ಲೇ ಆರಾಮಾಗಿ ಇರೋಣ’ ಎಂದು ಒಬ್ಬರಿಗೊಬ್ಬರು ಹೇಳುತ್ತಿದ್ದಾರೆ. ಹಪ್ಪಳ, ಸಂಡಿಗೆಗಳೆಲ್ಲ ಬಹಳ ವರ್ಷಗಳ ನಂತರ ಅಂಗಳದ ಬಿಸಿಲಲ್ಲಿ ಹರಡಿಕೊಂಡಿವೆ.

    ಹೀಗೆ ಧುತ್ತನೇ, ಕಳೆದು ಹೋಗಿದ್ದ ಹಳೆಯ ಜೀವನವೇ ವರ್ತಮಾನದ ರೂಪದಲ್ಲಿ ಪ್ರತ್ಯಕ್ಷವಾಗಿದೆ. ಅಂತರಾಳವನ್ನು ಹೊಕ್ಕಿದರೆ ಗರಿಗೆದರಿ ಕುಣಿಯುವ ನೆನಪುಗಳು ಗಿಜುಗುಟ್ಟುವ ಮನಸ್ಸಿನಲ್ಲಿ ಹೊಸ ಆಹ್ಲಾದವನ್ನೇ ಸೃಷ್ಟಿಸಿವೆ.

    ‘ಆಜ್ ಬಚ್​ಪನ್ ಕಾ ಟುಟಾ ಹುವಾ ಖಿಲೌನಾ ಮಿಲಾ!

    ಉಸ್ನೇ ಮುಝೆ ತಬ್ ಭೀ ರುಲಾಯಾ ಥಾ,

    ಉಸ್ನೇ ಮುಝೆ ಆಜ್ ಭೀ ರುಲಾಯಾ ಹೈ’ (ಕವಿ ಗುಲ್ಜಾರ್)

    (ಇವತ್ತು ಬಾಲ್ಯದ ಮುರಿದುಹೋದ ಆಟಿಕೆ ಸಿಕ್ಕಿತು. ಅದು ನನಗೆ ಅಂದೂ ಅಳಿಸಿತ್ತು, ಅದು ನನಗೆ ಇಂದು ಕೂಡ ಅಳಿಸಿದೆ)

    ನೆನಪುಗಳು ಎದುರಾದಾಗ ಅದು ಭಾವಗಳ ದೊಡ್ಡಜಾತ್ರೆಯೇ. ಖುಷಿ ಆಗುತ್ತದೆ, ಕಣ್ಣೀರು ಬರುತ್ತದೆ, ಕೊಂಚ ಕೋಪ ತರಿಸುತ್ತದೆ, ನಮ್ಮ ಪೆದ್ದುತನಕ್ಕೆ ನಾವೇ ನಗುವಂತಾಗುತ್ತದೆ. ಸಂಬಂಧಗಳ ಮೌಲ್ಯ ಅರ್ಥವಾಗುತ್ತದೆ. ಯಾರೊಂದಿಗಾದರೂ ಕೆಟ್ಟದ್ದಾಗಿ ನಡೆದುಕೊಂಡಿದ್ದರೆ ಮನಸ್ಸಿಗೆ ಚುಚ್ಚುತ್ತದೆ, ಇತರರ ಕಣ್ಣೀರು ಒರೆಸಿದ್ದರೆ ನಮ್ಮ ಕಣ್ಣಂಚು ಸಂತೋಷದಿಂದ ಒದ್ದೆಯಾಗುತ್ತದೆ. ಲಾಕ್​ಡೌನ್ ಪರಿಣಾಮ ಪರಿಸರ ಮಾಲಿನ್ಯ ಕಡಿಮೆಯಾಗಿದೆಯಂತೆ! ಆದರೆ, ಮನಮಾಲಿನ್ಯ…? ಇದನ್ನು ನಿವಾರಿಸಿಕೊಳ್ಳಲು ಮನಸಿನ, ಭಾವನೆಗಳ ಬೀಗ ತೆರೆಯಬೇಕು. ನೆನಪುಗಳನ್ನು ಮುದ್ದಿಸಬೇಕು, ಅವುಗಳೊಂದಿಗೆ ಸಂವಾದಿಸಬೇಕು. ಇದಕ್ಕೆಲ್ಲ ಈಗ ಲಾಕ್​ಡೌನ್ ನೆಪದಲ್ಲಿ ಭಗವಂತನೇ ಸಮಯ ಒದಗಿಸಿಕೊಟ್ಟಿದ್ದಾನೆ!

    ಸಾಮಾಜಿಕ ಮಾಧ್ಯಮಗಳಲ್ಲಿ ಸೀರೆ ಚಾಲೆಂಜ್, ಪಂಚೆ ಚಾಲೆಂಜ್ ಏನೇನೋ ನಡೆಯುತ್ತಿವೆ. ಅದೇನೆ ಇರಲಿ. ನಮಗೊಂದು ಚಾಲೆಂಜ್ ನಾವೇ ಹಾಕಿಕೊಳ್ಳಬಹುದಲ್ಲವೇ? ಬಹುತೇಕರು ಹಿಂದಿನ ದಿನಗಳು ಚೆನ್ನಾಗಿದ್ದವು ಎಂದು ಮಾತಿನ ಮಂಟಪದಲ್ಲಿ ಕೂತು ಪ್ರಶಂಸೆಯ ಹೂಮಳೆಗೈಯುತ್ತಿದ್ದಾರೆ. ಹಾಗೇ ಬದುಕು ರೂಪಿಸಿಕೊಟ್ಟ ಅಥವಾ ಅದಕ್ಕೆ ನೆರವಾದ, ನಮ್ಮನ್ನು ತಿದ್ದಿ ತೀಡಿದ, ಹಸಿವಾದಾಗ ಊಟ ನೀಡಿದ, ‘ಯಾರಿಲ್ಲದಿದ್ದರೇನಂತೆ, ಚಿಂತೆ ಬೇಡ, ನಾನು ನಿನ್ನ ಜತೆ ಇರುತ್ತೇನೆ’ ಎಂದು ಧೈರ್ಯ ತುಂಬಿ ಹುರಿದುಂಬಿಸಿದ, ಜ್ವರ ಬಂದು ಮಲಗಿದಾಗ ಕಾಳಜಿ ತೋರಿದ, ಪರೀಕ್ಷಾ ಶುಲ್ಕ ತುಂಬಲು ಸಾಧ್ಯವಿಲ್ಲದಿದ್ದಾಗ ದೇವರಂತೆ ಬಂದು ಸಹಾಯ ಮಾಡಿದ, ಒಟ್ಟಾರೆ ಜೀವನ ಸ್ಟ್ರಕ್ ಆದಾಗ ಭರವಸೆಯ ಟಾನಿಕ್ ನೀಡಿ ಮುಂದೆ ಸಾಗುವಂತೆ ಮಾಡಿದ ಎಲ್ಲರನ್ನೂ ಒಮ್ಮೆ ನೆನಪಿಸಿಕೊಂಡು ಅವರಿಗೆ ಕೃತಜ್ಞತೆ ಅರ್ಪಿಸಿದರೆ ಎಷ್ಟು ಚೆಂದ! ಅವರಿಗೊಂದು ಫೋನ್ ಮಾಡಿ/ಪತ್ರ ಬರೆದು ‘ಥ್ಯಾಂಕ್ ಯೂ’ ಹೇಳಿದರೆ ಆ ಸಂಬಂಧಗಳಿಗೆಲ್ಲ ಮತ್ತೆ ಎಷ್ಟು ಜೀವ ಬರುತ್ತದೆ ನೋಡಿ! ಯಾರಾದರೂ ಹರ್ಟ್ ಮಾಡಿದ್ರೂ ಸರಿಯೇ. ಅವರನ್ನೂ ಒಮ್ಮೆ ನಗುನಗುತ್ತ ಮಾತಾಡಿಸಿ. ಬಾಂಧವ್ಯ ಚಿಗುರಬಹುದು.

    ಸಾಮಾನ್ಯರೇ ಅಸಾಮಾನ್ಯರಾಗಿ ಎಷ್ಟೋ ಜನರ ಬದುಕಿಗೆ ಹತ್ತಿರವಾಗಿರುತ್ತಾರೆ. ಗದ್ದೆಯ ಆಳು, ಮನೆ ಕೆಲಸದವರು, ಪೇಪರ್ ಹಾಕೋರು, ತರಕಾರಿ ತೆಗೆದುಕೊಂಡು ಬರುವವರು, ಹಾಲು ಹಾಕೋರು-ಇವರನ್ನೆಲ್ಲ ಒಮ್ಮೆ ಮಾತನಾಡಿಸಿ, ಅವರು ಮಾಡಿದ ಸಹಾಯವನ್ನು ಸ್ಮರಿಸಿ. ಎಷ್ಟೋ ಸಲ ಹೇಳಬೇಕಾದ್ದನ್ನು ಹೇಳಲು ಆಗಿರುವುದಿಲ್ಲ. ಅದಕ್ಕೆ ಅಹಂ, ಪ್ರತಿಷ್ಠೆಯೋ ಏನೋ ಅಡ್ಡಿ ಬಂದಿರುತ್ತದೆ. ‘ಬಾಂಧವ್ಯದ ಓಣಿಗಳು ಏಕೆ ಸ್ತಬ್ಧವಾಗಿವೆ, ಯಾರು ಮೊದಲು ಆರಂಭಿಸಬೇಕು ಎಂದು ಯೋಚಿಸುತ್ತ ಮಾತುಗಳು ಮೌನವಾಗಿವೆ’ (ಗುಲ್ಜಾರ್)-ಇದು ಬಹುತೇಕರ ಸ್ಥಿತಿ. ಮನುಷ್ಯ ಖುಷಿಯಾಗಿರಬೇಕು ಎಂದರೆ ಮನಸ್ಸನ್ನು ಆಗಾಗ ರೀಫ್ರೆಷ್ ಮಾಡುತ್ತಿರಬೇಕು. ಅಂಥದ್ದೊಂದು ಅವಕಾಶ ಈಗ ಬಂದಿದೆ. ನೆನಪುಗಳ ಯಾತ್ರೆ ಬರೀ ಭಾವನೆಗಳಲ್ಲಿ ಕೊನೆಗೊಳ್ಳದೆ ಇಂದಿನ ದಿನಗಳನ್ನೂ ಚೆಂದವಾಗಿಸುವ, ನೈರಾಶ್ಯವನ್ನು ನಿವಾರಿಸಿಕೊಳ್ಳುವ ಆತ್ಮವಿಶ್ವಾಸ ಮೂಡಿಸಲಿ. ನಾಳೆಗಳ ಬಗ್ಗೆ ಹೊಸ ಸಂಭ್ರಮ ಸೃಷ್ಟಿಯಾಗಲಿ. ಯಾರಿಗೆ ಗೊತ್ತು, ಆ ನಿಮ್ಮ ನೆನಪಿಸಿಕೊಳ್ಳುವಿಕೆಯಿಂದ ಎಷ್ಟೋ ಮನಸುಗಳ ಖುಷಿ ಅರಳಬಹುದು, ಸಂಬಂಧಗಳಿಗೊಂದು ಹೊಸ ಸಾರ್ಥಕತೆ ಒದಗಬಹುದು! ಮತ್ತೇಕೆ ತಡ, ನೆನಪುಗಳ ದೋಣಿಗೆ ನಾವೇ ನಾವಿಕರಾಗೋಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts