More

    ವಾಣಿಜ್ಯ ಮಳಿಗೆ ಹರಾಜು ಯಾವಾಗ?

    ರಾಣೆಬೆನ್ನೂರ: ಎಂ.ಜಿ. ರಸ್ತೆಯಲ್ಲಿನ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬುದನ್ನು ದಾಖಲೆ ಸಮೇತ ಮಾಹಿತಿ ನೀಡಬೇಕು. ಪ್ರತಿಪಕ್ಷದ ಸದಸ್ಯರಿಗೆ ನಗರಸಭೆ ಕಟ್ಟಡದಲ್ಲಿ ಪ್ರತ್ಯೇಕ ಕೊಠಡಿ ನೀಡಬೇಕು ಎಂದು ನಗರಸಭೆಯಲ್ಲಿ ಗುರುವಾರ ಏರ್ಪಡಿಸಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ನಿಂಗರಾಜ ಕೋಡಿಹಳ್ಳಿ ಆಗ್ರಹಿಸಿದರು.

    ನಗರಸಭೆ ಮಳಿಗೆ ಹರಾಜು ಆಗದ ಕಾರಣ ಕೋಟ್ಯಂತರ ರೂ. ನಷ್ಟವಾಗಿದೆ. ಆದರೂ ಅಧಿಕಾರಿಗಳು ನ್ಯಾಯಾಲಯದ ಹೆಸರು ಹೇಳಿ, ಹರಾಜು ಪ್ರಕ್ರಿಯೆ ಕೈ ಬಿಟ್ಟಿದ್ದಾರೆ. ಯಾರೊಬ್ಬರೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

    ಪ್ರತಿಪಕ್ಷದ ಸದಸ್ಯರಿಗೆ ಪ್ರತ್ಯೇಕ ಕೊಠಡಿ ನೀಡಬೇಕು ಎಂದು ಬೇಡಿಕೆಯಿಟ್ಟು ತಿಂಗಳುಗಳೇ ಕಳೆದಿವೆ. ಈ ಬಗ್ಗೆ ಯಾರೂ ಉತ್ತರ ನೀಡುತ್ತಿಲ್ಲ. ಅಲ್ಲದೆ ನಿಯಮಾವಳಿ ಪ್ರಕಾರ, ತಿಂಗಳಿಗೊಮ್ಮೆ ಸಾಮಾನ್ಯ ಸಭೆ ಕರೆಯಬೇಕು. ಆದರೆ, ಎರಡು ತಿಂಗಳಾದರೂ ಕರೆದಿಲ್ಲ. ಇದೀಗ ಏಕಾಏಕಿ ವಿಶೇಷ ಸಾಮಾನ್ಯ ಸಭೆ ಕರೆದಿರುವ ಉದ್ದೇಶವೇನು? ಎಂದು ಪ್ರಶ್ನಿಸಿದರು. ಇದೆಲ್ಲದಕ್ಕೂ ಉತ್ತರ ಕೊಟ್ಟು ಸಭೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

    ಆಯುಕ್ತ ಡಾ. ಎನ್. ಮಹಾಂತೇಶ ಪ್ರತಿಕ್ರಿಯಿಸಿ, ಕೆಲ ಟೆಂಡರ್​ಗಳು ಮಂಜೂರಾಗಿವೆ. ಅವುಗಳನ್ನು ಆದಷ್ಟು ಬೇಗ ಮಾಡಬೇಕಿದೆ. ಇಲ್ಲವಾದರೆ ಕಾಮಗಾರಿಗೆ ಅನುಮೋದನೆ ನೀಡಲು ಬರುವುದಿಲ್ಲ. ಆದ್ದರಿಂದ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿದೆ ಎಂದರು.

    ಮಧ್ಯ ಪ್ರವೇಶಿಸಿದ ನಿಂಗರಾಜ ಕೋಡಿಹಳ್ಳಿ ಹಾಗೂ ಪುಟ್ಟಪ್ಪ ಮರಿಯಮ್ಮನವರ, ‘ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಟ್ಟು ನಂತರ ಸಭೆ ಮುಂದುವರಿಸಿ’ ಎಂದು ಪಟ್ಟುಹಿಡಿದರು.

    ಆಡಳಿತ ಪಕ್ಷದ ಪ್ರಕಾಶ ಬುರಡಿಕಟ್ಟಿ ಮಾತನಾಡಿ, ಸದ್ಯ ಟೆಂಡರ್ ಮಂಜೂರಾತಿಗಾಗಿ ವಿಶೇಷ ಸಭೆ ಕರೆಯಲಾಗಿದೆ. ಆದ್ದರಿಂದ ಬೇರೆ ಬೇರೆ ವಿಚಾರ ಬಿಟ್ಟು ವಿಷಯ ಮಂಡಿಸಲು ಅವಕಾಶ ನೀಡಿ ಎಂದು ಒತ್ತಾಯಿಸಿದರು. ಆಗ ಎರಡೂ ಪಕ್ಷದ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆಯಿತು.

    ನಂತರ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಮಾತನಾಡಿ, ವಿಶೇಷ ಸಾಮಾನ್ಯ ಸಭೆ ಕರೆಯಲು ನಮಗೆ ಅಧಿಕಾರವಿದೆ. ನಗರಸಭೆ ಮಳಿಗೆ ಹರಾಜು ಪ್ರಕ್ರಿಯೆ ನ್ಯಾಯಾಲಯದಲ್ಲಿಲ್ಲ. ಸರ್ಕಾರದ ಹಂತದಲ್ಲಿದೆ. ಅಲ್ಲಿಂದ ಅನುಮೋದನೆ ಬರಬೇಕಿದೆ. ವಿರೋಧ ಪಕ್ಷದವರಿಗೆ ಕೊಠಡಿ ನೀಡುವ ಕುರಿತು ಮುಂದಿನ ಸಭೆಯಲ್ಲಿ ರ್ಚಚಿಸೋಣ ಎಂದು ಎಲ್ಲರನ್ನೂ ಸಮಾಧಾನಪಡಿಸಿದರು. ಬಳಿಕ 8 ಟೆಂಡರ್ ಪ್ರಕ್ರಿಯೆಗಳಿಗೆ ಅನುಮೋದನೆ ನೀಡಲಾಯಿತು.

    ಅವೈಜ್ಞಾನಿಕ ಸಿಡಿ ತೆರವುಗೊಳಿಸಿ: ನಗರದ ಬಹುತೇಕ ರಸ್ತೆಗಳಲ್ಲಿ ಚರಂಡಿಗೆ ನಿರ್ವಿುಸಿದ ಸಿಡಿಗಳು ಅವೈಜ್ಞಾನಿಕವಾಗಿವೆ. ಇದರಿಂದ ವಾಹನ ಸಂಚಾರಕ್ಕೆ ಹಾಗೂ ತ್ಯಾಜ್ಯ ತೆಗೆಯಲು ಅಡ್ಡಿಯಾಗುತ್ತಿದೆ. ಆದ್ದರಿಂದ ಅವುಗಳನ್ನು ಸರಿಪಡಿಸಬೇಕು. 247 ಕುಡಿಯುವ ನೀರಿನ ಕಾಮಗಾರಿ ಹೆಸರು ಹೇಳಿಕೊಂಡು ಸದ್ಯ ಏಳೆಂಟು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಜನ ಬೇಸತ್ತಿದ್ದಾರೆ. ಕೂಡಲೆ ಇದನ್ನು ಸರಿಪಡಿಸಬೇಕು ಎಂದು ಪುಟ್ಟಪ್ಪ ಮರಿಯಮ್ಮನವರ ಒತ್ತಾಯಿಸಿದರು. ಇದಕ್ಕೆ ಪ್ರತಿಪಕ್ಷದ ಎಲ್ಲ ಸದಸ್ಯರೂ ಧ್ವನಿಗೂಡಿಸಿದರು. ಆಯುಕ್ತ ಡಾ. ಮಹಾಂತೇಶ ಮಾತನಾಡಿ, ಕೂಡಲೆ ಈ ಬಗ್ಗೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು ಎಂದರು.

    ಉಪಾಧ್ಯಕ್ಷೆ ಕಸ್ತೂರಮ್ಮ ಚಿಕ್ಕಬಿದರಿ, ಸಿಪಿಐ ಗೌಡಪ್ಪಗೌಡ್ರ ಹಾಗೂ ಎಲ್ಲ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿದ್ದರು.

    ಸಂಚಾರ ನಿಯಮ ಪಾಲಿಸಿ: ಸಭೆಯಲ್ಲಿ ಡಿವೈಎಸ್ಪಿ ಟಿ.ವಿ. ಸುರೇಶ ಮಾತನಾಡಿ, ರಾಣೆಬೆನ್ನೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಕೆಲ ರಸ್ತೆಗಳನ್ನು ಏಕಮುಖ ಹಾಗೂ ಕೆಲ ರಸ್ತೆಗಳಲ್ಲಿ ವಾಹನಗಳ ರ್ಪಾಂಗ್​ಗೆ ಪ್ರತ್ಯೇಕ ವ್ಯವಸ್ಥೆ ಮಾಡುವ ಕುರಿತು ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ. ಆದ್ದರಿಂದ ಇನ್ಮುಂದೆ ಅಪಘಾತ ವಲಯ, ಕಿರಿದಾದ ರಸ್ತೆಗಳನ್ನು ಏಕಮುಖ ಮಾಡುವುದು ಸೇರಿ ಹಲವಾರು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts