More

    ಉದ್ವೇಗ ಹೆಚ್ಚಾಗಿದೆಯೇ – ಹೀಗೆ ಮಾಡಿ ನೋಡಿ ಕಡಿಮೆ ಆಗುತ್ತೆ…

    ಯೋಗಪಿತಾಮಹ ಮಹರ್ಷಿ ಪತಂಜಲಿ ತನ್ನ ಯೋಗಸೂತ್ರದ ಸಾಧನಾಪಾದ ಸೂತ್ರ 52ರಲ್ಲಿ ಪ್ರಾಣಾಯಾಮ ಅಭ್ಯಾಸದ ಅವಶ್ಯಕತೆ ಹಾಗೂ ಮಹತ್ವವನ್ನು, ‘ಆಗ ಪ್ರಕಾಶದ ಆವರಣವು ನಾಶವಾಗುತ್ತದೆ’ (ತತಃ ಕ್ಷೀಯತೇ ಪ್ರಕಾಶಾವರಣಮ್ ಎಂದು ಸೂತ್ರೀಕರಿಸಿದ್ದಾರೆ. ರಜಸ್ಸು ತಮಸ್ಸು ಎಂಬೆರಡು ಗುಣಗಳು ನಮ್ಮ ವ್ಯಕ್ತಿತ್ವವನ್ನು ಆವರಿಸಿದೆ. ಪ್ರಾಣಾಯಾಮ ಆಚರಣೆಯಿಂದ ಈ ಮುಸುಕು ಸರಿಸಬಹುದಾಗಿದೆ. ಈ ಮುಸುಕು ಕಳಚಿದ ನಂತರ ಆತ್ಮದ ನಿಜವಾದ ಅರಿವಾಗುವುದು.

    ಚಿತ್ತವು ನೈಸರ್ಗಿಕವಾಗಿ ಸಾತ್ವಿಕ ಗುಣದಿಂದ ನಿರ್ವಣವಾಗುತ್ತದೆ. ಆದರೆ ರಾಜಸತಮಸುಗಳ ಆವರಣವು ಬೆಂಕಿಗೆ ಬೂದಿಯು ಆವರಿಸಿದಂತೆ ಆವರಿಸಿದೆ. ಇದನ್ನು ಸ್ವಚ್ಛ ಮಾಡಲು ಪ್ರಾಣಾಯಾಮಕ್ಕಿಂತಲೂ ಮಹತ್ತರವಾದ ಮತ್ತೊಂದು ಸಾಧನವಿಲ್ಲ. ಪ್ರಾಣಾಯಾಮವು ಸಾಧಕನನ್ನು ಶುದ್ಧ ಮಾಡಿ ಜ್ಞಾನವನ್ನು ಬೆಳಗಿಸುತ್ತದೆ. ನೈಸರ್ಗಿಕವಾಗಿ ತೇಜೋಮಯವಾದ ಆತ್ಮವು ಆಸೆಯೆಂಬ ಹೊದಿಕೆಯಿಂದ ಮುಚ್ಚಿ ದೋಷಗೊಂಡಿರುತ್ತದೆ. ಮಾಯೆಯ ಬಂಧನದಿಂದ ಆವರಿಸಿದ ಸಾಧಕನು ಜನನ ಮರಣಗಳ ಕರ್ಮ ಬಂಧನದಿಂದ ಮುಕ್ತನಾಗಲು ನಿರಂತರ ಪ್ರಾಣಾಯಾಮ ಅಭ್ಯಾಸನಿರತನಾಗಿರಬೇಕು.

    ಪ್ರಾಣಾಯಾಮ ಯೋಗದ ಒಂದು ಅಂಗ. ಪ್ರಾಣಾಯಾಮದ ಅಭ್ಯಾಸದಿಂದ ಮನಸ್ಸಿನ ಉದ್ವೇಗ ಸಾವಕಾಶವಾಗಿ ಕಡಿಮೆಯಾಗುತ್ತ ವೈರಾಗ್ಯದತ್ತ ಮನಸ್ಸು ಹರಿಯುವುದು.

    ಉದ್ವೇಗ ಹೆಚ್ಚಾಗಿದೆಯೇ - ಹೀಗೆ ಮಾಡಿ ನೋಡಿ ಕಡಿಮೆ ಆಗುತ್ತೆ...ಭಸ್ತ್ರಿಕಾ ಪ್ರಾಣಾಯಾಮ: ಚಾಪೆ ಅಥವಾ ಕಂಬಳಿ ಹಾಸಿಕೊಂಡು ಯಾವುದಾದರೂ ಪ್ರಾಣಾಯಾಮ ಪೂರಕ ಆಸನದಲ್ಲಿ ಕುಳಿತುಕೊಳ್ಳಿ. ತಲೆ ನೆಟ್ಟಗಿರಲಿ, ಕೈಯ ಬೆರಳುಗಳನ್ನು ಚಿನ್ಮುದ್ರೆಯಲ್ಲಿ ಇರಿಸಿಕೊಳ್ಳಿ. ಮೊದಲಿಗೆ ದೀರ್ಘ ರೇಚಕ ಮಾಡಿಕೊಂಡು ಮೂಗಿನ ಎರಡೂ ಹೊಳ್ಳೆಗಳಿಂದ ಉಸಿರೆಳೆದುಕೊಳ್ಳಿ. ಮೂಗಿನ ಎರಡೂ ಹೊಳ್ಳೆಗಳಿಂದ ನಿಧಾನವಾಗಿ ಉಸಿರನ್ನು ಹೊರಚೆಲ್ಲುತ್ತ ಮೂಲಬಂಧ ಹಾಗೂ ಉಡ್ಡೀಯಾನ ಬಂಧಗಳನ್ನು ಹಾಕಿಕೊಳ್ಳಿ. ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ, ಶಬ್ದಸಹಿತವಾಗಿ ಉಸಿರನ್ನು ಒಳಗೆ ಎಳೆದುಕೊಳ್ಳಿ. ಅಷ್ಟೇ ವೇಗವಾಗಿ ಶಬ್ದಸಹಿತವಾಗಿ ಹೊರಗೆ ಬಿಡಿ. ಕಮ್ಮಾರ ತನ್ನ ಕುಲುಮೆಯಲ್ಲಿ ಬೆಂಕಿಯನ್ನು ಜೋರಾಗಿಸಲು ತಿದಿಯನ್ನು (ಚರ್ಮದ ಚೀಲ) ಒತ್ತಿ ಒತ್ತಿ ಗಾಳಿ ಹಾಕುವಂತೆ ಈ ಸಶಬ್ದ ಪೂರಕ ಮತ್ತು ರೇಚಕ (ಅದು ಅವಧಿಯ ವೇಗದ ಪೂರಕ ಮತ್ತು ಕ್ಷಿಪ್ರ ವೇಗದ ರೇಚಕ). ಈ ರೀತಿಯ ವೇಗವಾದ ಉಸಿರಾಟವನ್ನು ಹಲವು ಬಾರಿ ಮಾಡಿ (ಕಡಿಮೆ ಅಂದರೆ ಹತ್ತು ಬಾರಿಯಾದರೂ). ಈಗ ಮೂಗಿನ ಎಡ ಹೊಳ್ಳೆಯನ್ನು ಮುಚ್ಚಿ ಬಲ ಹೊಳ್ಳೆಯಲ್ಲಿ ಉಸಿರು ತೆಗೆದುಕೊಂಡು ಜಾಲಂಧರಬಂಧ ಹಾಕಿ ಉಸಿರನ್ನು ಬಿಗಿಹಿಡಿಯಿರಿ (ಅಂತಃಕುಂಭಕ). ಗದ್ದವನ್ನು ಕತ್ತಿನ ಮೂಳೆಯಿಂದ ಹಿಂದೆಗೆದುಕೊಂಡು ತಲೆ ಎತ್ತಿ (ಜಾಲಂಧರಬಂಧವನ್ನು ಸಡಿಲಿಸಿಕೊಂಡು) ಮೂಗಿನ ಎಡ ಹೊಳ್ಳೆಯಿಂದ ಉಸಿರನ್ನು ಹೊರಬಿಡಿ. ಇದು ಭಸ್ತ್ರಿಕಾ ಪ್ರಾಣಾಯಾಮದ ಒಂದು ಸುತ್ತು. ಕನಿಷ್ಠ ಹತ್ತು ತಿದಿಯುಸಿರಾಟದ ಮೂರು ಸುತ್ತುಗಳಷ್ಟು ಅಭ್ಯಾಸ ಮಾಡಿ. ಕ್ರಮೇಣ ತಿದಿಯುಸಿರಾಟದ ಸಂಖ್ಯೆಯನ್ನು ನೂರರವರೆಗೆ ಏರಿಸಿಕೊಂಡು ಇಂತಹ ಎಂಟು ಸುತ್ತುಗಳನ್ನು ಅಭ್ಯಾಸ ಮಾಡಿ.

    ಐದು ಮತ್ತು ಆರನೆಯ ಸೂಚನೆಯಲ್ಲಿ ಹೇಳಿರುವಂತೆ ಎಡ ಮೂಗಿನಿಂದ ರೇಚಕವನ್ನು ಕೆಲವು ಪ್ರಾಣಾಯಾಮ ಪಟುಗಳು ಅನುಸರಿಸುವುದೇನೋ ನಿಜ. ಆದರೆ ಸ್ವಾಮಿ ಶಿವಾನಂದರು ಮತ್ತವರ ಶಿಷ್ಯರು ಹಾಗೂ ಬಿ.ಕೆ.ಎಸ್.ಅಯ್ಯಂಗಾರ್​ರಂತಹವರು ಬಲಮೂಗಿನಿಂದಲೇ ರೇಚಕ ಮಾಡಬೇಕೆನ್ನುತ್ತಾರೆ. ಇದು ದೇಹದಲ್ಲಿ ಉಷ್ಣತೆ ಹೆಚ್ಚಿಸುವ ಪ್ರಾಣಾಯಾಮ ವಿಧಿಯಾಗಿರುವುದರಿಂದ ಬಲಮೂಗಿನಿಂದ ರೇಚಕ ಮಾಡತಕ್ಕದ್ದೆಂಬುದು ಇವರ ಅಭಿಮತ. ಈ ಪ್ರಾಣಾಯಾಮದ ಅಭ್ಯಾಸದಿಂದ ನಮ್ಮ ಶ್ವಾಸಕೋಶಕ್ಕೆ ಅಧಿಕ ಆಮ್ಲಜನಕ ಲಭಿಸುತ್ತದೆ. ಇದು ವಾತ, ಪಿತ್ತ, ಕಫಗಳ, ಆಧಿಕ್ಯವನ್ನು ಕಳೆದು, ಜಠರಾಗ್ನಿಯನ್ನು ಉದ್ದೀಪಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts