More

    ಬೇಕಾಗಿರುವುದು ಜೀವಂತ ಪ್ರೀತಿಯೇ ಹೊರತೂ ಅನುಕಂಪವಲ್ಲ!

    ಬೇಕಾಗಿರುವುದು ಜೀವಂತ ಪ್ರೀತಿಯೇ ಹೊರತೂ ಅನುಕಂಪವಲ್ಲ! ಮದುವೆಗೆ ಮೊದಲು ಹುಡುಗ- ಹುಡುಗಿ ಒಬ್ಬರಿನ್ನೊಬ್ಬರ ಕೈಹಿಡಿದರೆ ಅದು ಪ್ರೀತಿ. ಮದುವೆಯ ಅನಂತರವೂ ಹಿಡಿದ ಕೈ ಬಿಡದಿದ್ದರೆ ಅದು ಬದ್ಧತೆ. ಕೇವಲ ಮದುವೆ ಅದ್ಧೂರಿ ಆದರೆ ಸಾಲದು; ದಾಂಪತ್ಯ ಜೀವನವೂ ಅದ್ಧೂರಿಯಾಗಿರಬೇಕು. ಒಮ್ಮತವಿರುವ ವಿಷಯಗಳನ್ನಲ್ಲ; ಸಮ್ಮತವಿಲ್ಲದ ವಿಷಯಗಳನ್ನು ಒಬ್ಬರಿನ್ನೊಬ್ಬರು ಹೇಗೆ ನಿಭಾಯಿಸುತ್ತಾರೆ ಅನ್ನುವುದರಲ್ಲಿಯೇ ಅಡಗಿದೆ ಯಶಸ್ವೀ ದಾಂಪತ್ಯದ ಗುಟ್ಟು. ‘ಯಾರಿರಲಿ, ಇರದಿರಲಿ, ನಾನಿಲ್ಲವೇ?’ ಎಂದು ಮಡದಿ ಹೇಳಿದರೆ ‘ನೀನಿಲ್ಲದೆ ಕ್ಷಣವೊಂದೂ ಇರಲಾರೆ’ ಎಂದು ಗಂಡ ಹೇಳಿದರೆ ಅದುವೇ ಅನುರಾಗ ದಾಂಪತ್ಯ.

    ಒಂದು ಮನೆಯಲ್ಲಿ ದಂಪತಿಗಳಿಬ್ಬರು ಅನ್ಯೋನ್ಯವಾಗಿ ದಾಂಪತ್ಯ ಜೀವನವನ್ನು ನಡೆಸುತ್ತಿದ್ದರು. ವರ್ಷಗಳು ಕಳೆದಂತೆ ಸಹಜವಾಗಿಯೇ ಇಬ್ಬರ ಮನಸ್ಸಿನಲ್ಲಿಯೂ ತಮ್ಮ ಮರಣ ಮತ್ತು ಮರಣಾನಂತರದ ಯೋಚನೆಗಳು ಬರಲಾರಂಭಿಸಿದವು. ಇಬ್ಬರೂ ವರ್ಷಗಳಿಂದ ಜತೆಗೂಡಿ ಬಾಳಿದರೂ ಜತೆಯಾಗಿ ಸಾಯುವುದು ಸಾಧ್ಯವಿಲ್ಲವಾದಾಗ ಬದುಕಿ ಉಳಿದವರ ಕೆಲಸ ಕರ್ತವ್ಯಗಳ ಕುರಿತು ಅತ್ಯಂತ ದುಃಖಭಾವದಿಂದಲೇ ರ್ಚಚಿಸಲಾರಂಭಿಸಿದರು. ನಾನಾ ಕಾರಣಗಳಿಂದ ದೂರವಾಗಿರುವ ತಮ್ಮ ಮಕ್ಕಳು ತಮ್ಮಿಂದಾಗಿ ಜನಿಸಿದರು ವಿನಃ ತಮಗಾಗಿ ಜನಿಸಿಲ್ಲವೆಂಬ ಕಟುಸತ್ಯದ ಅರಿವು ಇಬ್ಬರಿಗೂ ಆಗಿತ್ತು. ಮುದುಕ ಗಂಡ ತನ್ನ ಮುದುಕಿ ಮಡದಿಗೆ ತನ್ನ ಕಾಲಾನಂತರ ವಹಿಸಬೇಕಾದ ಜವಾಬ್ದಾರಿ, ಜಾಗರೂಕತೆ ಹಾಗೂ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಒಂದೊಂದಾಗಿಯೇ ತಿಳಿ ಹೇಳುತ್ತಿದ್ದ. ಅಂತೆಯೇ ಮಡದಿಯು ತನ್ನ ಗಂಡನಿಗೆ ಕೆಲವು ಕಿವಿ ಮಾತುಗಳನ್ನು ಹೇಳುತ್ತಿದ್ದಳು. ಆಕೆ, ಗಂಡನಿಗೆ ಅಕಸ್ಮಾತ್ ತಾನು ಮುಂಚಿತವಾಗಿ ಸತ್ತರೆ ನನ್ನ ಅಂತ್ಯ ಕಾರ್ಯಗಳನ್ನು ಹೇಗೆ ನಡೆಸುವಿರಿ? ಎಂಬ ಪ್ರಶ್ನೆಯನ್ನು ಕೇಳುತ್ತಾಳೆ. ಇಂತಹ ಅಪಶಕುನದ ಪ್ರಶ್ನೆಯನ್ನು ಕೇಳಬಾರದೆಂದು ಗಂಡ ಪರಿಪರಿಯಾಗಿ ಹೇಳಿದರೂ ಒಲ್ಲದ ಹೆಂಡತಿ ಗಂಡನಿಂದ ಉತ್ತರವೊಂದನ್ನು ನಿರೀಕ್ಷಿಸುತ್ತಾಳೆ. ಮಡದಿಯನ್ನು ಸಂತೋಷಪಡಿಸಲು ಮುದುಕ ಹೇಳುತ್ತಾನೆ: ಒಂದು ಹೂವಿನ ಪಲ್ಲಕ್ಕಿಯನ್ನು ಮಾಡಿಸಿ ಅದರಲ್ಲಿ ನಿನ್ನ ಶವವನ್ನಿಟ್ಟು ಹಾರ ತುರಾಯಿಗಳಿಂದ ಸಿಂಗರಿಸಿ, ಸ್ಮಶಾನದ ತನಕ ಮೆರವಣಿಗೆ ಮಾಡಿಸಿ, ಅಲ್ಲಿ ಸಕಲ ಮರ್ಯಾದೆಗಳೊಂದಿಗೆ ಶವಸಂಸ್ಕಾರವನ್ನು ಮಾಡಿಸಿ ನಿನ್ನ ಅಂತ್ಯ ಸಂಸ್ಕಾರವನ್ನು ಅದ್ಧೂರಿಯಾಗಿ ಮಾಡಿಸುವೆ. ಇವೆಲ್ಲವನ್ನು ಸಾವಧಾನದಿಂದ ಕೇಳಿದ ಮುದುಕಿಗೆ ಸಂತೋಷವಾಗಲಿಲ್ಲ. ಆಕೆ ತನ್ನ ಆಲೋಚನೆಯನ್ನು ಮೆಚ್ಚಿ ಹೊಗಳಿಯಾಳು ಎಂದುಕೊಂಡಿದ್ದ ಗಂಡನಿಗೆ ಅದ್ಭುತವಾದ ಮಾತೊಂದನ್ನು ಹೇಳುತ್ತಾಳೆ ನೋಡಿ: ನೀವು ನನ್ನ ಹೆಣವನ್ನು ಹೊರಲು ಮಾಡಿಸುವ ಹೂವಿನ ಪಲ್ಲಕ್ಕಿಯನ್ನಾಗಲಿ ಅದಕ್ಕೆ ಸಿಂಗರಿಸುವ ಹೂವಿನ ಹಾರವನ್ನಾಗಲಿ ನೋಡಲು ನಾನಿರುವುದಿಲ್ಲ. ಇದಕ್ಕೆ ಬದಲಾಗಿ ನಾನು ಬದುಕಿರುವಾಗಲೇ ದಿನಕ್ಕೊಂದು ಮೊಳ ಹೂವು ತಂದು ನೀವೇ ನನ್ನ ಮುಡಿಗೆ ಮುಡಿಸಿ. ನನಗೆ ಅಷ್ಟೇ ಸಾಕು.

    ಎಂತಹ ಅದ್ಭುತವಾದ ಸಂದೇಶ! ಜೀವನದಲ್ಲಿದ್ದಾಗ ತುತ್ತು ಅನ್ನ ಕೊಡದ ಮಕ್ಕಳು ಹೆತ್ತವರು ಸತ್ತಮೇಲೆ ಊರಿಗೆ ಮೃಷ್ಟಾನ್ನ ಭೋಜನ ನೀಡಿದರೆ ಏನು ಪ್ರಯೋಜನ? ಜೀವದಿಂದ ಇದ್ದಾಗ ತಿರುಗಿ ನೋಡದ ಮಕ್ಕಳು ಹೆತ್ತವರು ಕಾಲವಾದ ಮೇಲೆ ನಿತ್ಯ ಅವರ ಫೋಟೋಗಳಿಗೆ ಹಾರ ಹಾಕಿ ದೀಪ ಬೆಳಗಿದರೆ ಏನು ಬಂತು? ಅಂತೆಯೇ ಜೀವದಿಂದಿರುವಾಗ ಒಂದು ಪ್ರೀತಿಯ ನುಡಿ ಆಡದ, ಏನನ್ನೂ ತಂದುಕೊಡದ ಗಂಡ, ಮಡದಿ ಸತ್ತ ಮೇಲೆ ಹಾಡಿ ಹೊಗಳಿದರೆ, ಏನು ಪುರುಷಾರ್ಥ?

    ಈ ಪ್ರಪಂಚದಲ್ಲಿ ಒಳ್ಳೆಯದನ್ನೆಲ್ಲ ಹೇಳಿ ಆಗಿದೆ; ಕೇಳಿಯೂ ಆಗಿದೆ. ಈಗ ಉಳಿದಿರುವುದು ಬರಿ ಆಚರಣೆ ಒಂದೇ. ಜೀವನದಲ್ಲಿ ಯಾರು ನಮಗಿಂತ ಮುಂದೆ ಇದ್ದಾರೆ ಹಿಂದೆ ಇದ್ದಾರೆ ಅನ್ನುವುದು ಮುಖ್ಯವಲ್ಲ. ಯಾರು ನಮ್ಮ ಜೊತೆ ಇದ್ದಾರೆ ಎನ್ನುವುದು ಮುಖ್ಯ.

    ನೆನಪಿರಲಿ ಗಂಡಂದಿರೇ, ನೀವು ಕಾಯಿಲೆ ಬಿದ್ದಾಗ ನಿಮ್ಮ ಜೇಬು ಖಾಲಿಯಾದಾಗ, ನಿಮಗೆ ಅವಮಾನ ಅಪಜಯಗಳಾದಾಗ, ನೀವು ಏಕಾಂಗಿಯಾದಾಗ ನಿಮ್ಮ ದುಃಖ ದುಮ್ಮಾನಗಳಲ್ಲಿ, ಕಷ್ಟ ನಷ್ಟಗಳಲ್ಲಿ ನಿಮ್ಮ ಜೊತೆ ನಿಲ್ಲುವವಳು ನಿಮ್ಮ ಮಡದಿಯೇ ಹೊರತು, ಇನ್ನಾವ ಅಪ್ಸರೆಯೂ ಅಲ್ಲ. ಅವಳಿಗೆ ಬೇಕಾದದ್ದು ‘ಜೀವಂತ ಪ್ರೀತಿ’ಯೇ ಹೊರತು ಸಾವಿನ ನಂತರದ ಅನುಕಂಪವಲ್ಲ. ಅದ್ಧೂರಿ ಅಂತ್ಯ ಸಂಸ್ಕಾರಗಳಲ್ಲ! 

    | ಡಾ. ಕೆ.ಪಿ. ಪುತ್ತೂರಾಯ

     

    ನಟ ಶಿವರಾಜ್​ಕುಮಾರ್​ ಆಸ್ತಿ ಮೊತ್ತ ಇಷ್ಟೊಂದಾ? ಸ್ಟಾರ್ ನಟನ ಆಸ್ತಿ ಮೌಲ್ಯ, ಸಾಲದ ಬಗ್ಗೆ ಇಲ್ಲಿದೆ ಮಾಹಿತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts