More

    ದರಿದ್ರ ಸರ್ಕಾರ ಇದ್ದರೆಷ್ಟು? ಬಿದ್ದರೆಷ್ಟು? ಅಂತಿದಾರೆ ಜನ; ಬಿ.ವೈ.ವಿಜಯೇಂದ್ರ ಕಿಡಿ

    ಬೆಂಗಳೂರು: ರಾಜ್ಯಾದ್ಯಂತ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಬೆಂಗಳೂರು ಮಹಾನಗರದಲ್ಲಿ ಪರಿಸ್ಥಿತಿ ಮೇರೆ ಮೀರಿದೆ. ಉತ್ತರಕರ್ನಾಟಕದ ಗ್ರಾಮೀಣ ಪ್ರದೇಶದ ಜನರು ಗುಳೆ ಹೋಗುತ್ತಿದ್ದಾರೆ. ನಷ್ಟದ ಬಾಧೆ ತಾಳಲಾರದೆ ಕಳೆದ ಒಂಭತ್ತು ತಿಂಗಳಲ್ಲಿ 800 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದರಿದ್ರ ಕಾಂಗ್ರೆಸ್ ಸರ್ಕಾರ ಇದ್ದರೆಷ್ಟು ? ಬಿದ್ದರೆಷ್ಟು ? ಎಂದು ರೋಸಿ ಹೋಗಿರುವ ಸಾಮಾನ್ಯ ಜನರು ಶಾಪ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.

    ಬೆಂಗಳೂರಿನ ಮಲ್ಲೇಶ್ವರದ ಭಾವುರಾವ್ ದೇಶಪಾಂಡೆ ಭವನದ ಬಳಿ ಲೋಕಸಭೆ ಚುನಾವಣೆ ಎಲ್ ಇಡಿ ಪ್ರಚಾರ ವಾಹನಗಳಿಗೆ ಶನಿವಾರ ಚಾಲನೆ ನೀಡುವ ಮುನ್ನ ಮಾತನಾಡಿದ ಅವರು, ರಾಜ್ಯದ 1.20 ಕೋಟಿ‌ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬೆನ್ನು ತಾವೇ ಚಪ್ಪರಿಸಿಕೊಂಡಿದ್ದಾರೆ. ಸಂಕಷ್ಟಕ್ಕೆ ತುತ್ತಾದ ರೈತರು ಪರಿಹಾರವಿಲ್ಲದೆ ತತ್ತರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಒಕ್ಕೂಟ ವ್ಯವಸ್ಥೆಗೆ ಅಪಚಾರ

    ಪರಿಹಾರ ವಿಷಯದಲ್ಲಿ ಪದೇ ಪದೆ ಕೇಂದ್ರ ಸರ್ಕಾರದ ಕಡೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬೊಟ್ಟು ಮಾಡುತ್ತಿದ್ದು, ಒಕ್ಕೂಟ ವ್ಯವಸ್ಥೆಗೆ ಅಪಚಾರವೆಸಗಿದೆ. ದೇಶದ ಏಳೆಂಟು ರಾಜ್ಯಗಳನ್ನು ಬರ ಬಾಧಿಸುತ್ತಿದೆ. ಆದರೆ ಅಲ್ಲಿನ ಸರ್ಕಾರಗಳು ಕೇಂದ್ರ ನೆರವಿಗೆ ಕಾಯದೆ ಕಷ್ಟದಲ್ಲಿರುವ ಜನರಿಗೆ ಸ್ಪಂದಿಸಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿವೆ. ಸಿಎಂ ಸಿದ್ದರಾಮಯ್ಯ ಮತ್ತವರ ಮಂತ್ರಿ ಮಂಡಲಕ್ಕೆ ಪ್ರಧಾನಿ ಮೋದಿಯವರ ವಿರುದ್ಧ ಆರೋಪ ಹೊರಿಸುವುದು ಬಿಟ್ಟರೆ ಬೇರೆ ಕೆಲಸವಿಲ್ಲವೆಂದು ತಿಳಿದುಕೊಂಡಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದರು.

    ಬೆಂಗಳೂರು ಮಹಾನಗರದಲ್ಲಿ ಕುಡಿಯುವ ನೀರಿನ ಅಭಾವ ಉಲ್ಬಣಿಸಿದೆ. ಸಮಸ್ಯೆಯನ್ನು ನಿರ್ವಹಿಸಲು 14 ಜನ ನೋಡಲ್ ಅಧಿಕಾರಿಗಳನ್ನು ಪ್ರತಿ ಮಂಡಲಕ್ಕೆ ಒಬ್ಬರಂತೆ ನಿಯೋಜಿಸಲಾಗಿದೆ. ಈ ಎಲ್ಲ ಅಧಿಕಾರಿಗಳು ಬೆಂಗಳೂರು ಗ್ರಾಮೀಣ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ನಿಯುಕ್ತರಾಗಿದ್ದಾರೆ‌. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಕ್ಷಪಾತ ಧೋರಣೆಗೆ ಕೈಗನ್ನಡಿಯಾಗಿದೆ. ನೀರಿನ ಟ್ಯಾಂಕರ್ ಮೇಲೆ ಸಂಸದ ಡಿ.ಕೆ‌.ಸುರೇಶ್ ಫ್ಲೆಕ್ಸ್ ಹಾಕಿಕೊಂಡಿದ್ದಾರೆ. ಜನರ ಬವಣೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಛೇಡಿಸಿದರು.

    ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ಚಾಟಿ ಬೀಸುವುದು ಪ್ರತಿಪಕ್ಷವಾಗಿ ಬಿಜೆಪಿಗೆ ಅನಿವಾರ್ಯವಾಗಿದೆ. ಸಮಸ್ಯೆ‌ ಬಗೆಹರಿಸಲೆಂದು ಕಾಲಾವಕಾಶ ನೀಡಿದರೂ ಪ್ರಯೋಜನವಾಗಿಲ್ಲ. ಪಕ್ಷದ ಬೆಂಗಳೂರು ದಕ್ಷಿಣ, ಉತ್ತರ, ಕೇಂದ್ರ ಜಿಲ್ಲಾ ಘಟಕಗಳಿಗೆ ಸೋಮವಾರ ಹೋರಾಟ ನಡೆಸಲು ಸೂಚಿಸಿರುವೆ. ಬಿಬಿಎಂಪಿ ಹಾಗೂ ಬಿಡಬ್ಲ್ಯು ಎಸ್ ಎಸ್ ಬಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿವೆ ಎಂದು ಎಚ್ಚರಿಸಿದರು.

    28 ಕ್ಷೇತ್ರಗಳಲ್ಲಿ ಸಂಚಾರ

    ಲೋಕಸಭೆ ಚುನಾವಣೆಗೆ ಪ್ರಣಾಳಿಕೆ ತಯಾರಿಸಲು ಜನರಿಂದಲೇ ಅಭಿಪ್ರಾಯ ಸಂಗ್ರಹಿಸಲಾಗುವುದು. ವಿಕಸಿತ ಭಾರತ ಸಂಕಲ್ಪ ಪತ್ರದ ಮುಖೇನ ಎಲ್ಲ ವರ್ಗದ ಜನರು ನೀಡುವ ಸಲಹೆಗಳು ನೇರವಾಗಿ ಮೋದಿಯವರಿಗೆ ತಲುಪಲಿವೆ. 52 ಪ್ರಚಾರ ವಾಹನಗಳು 28 ಲೋಕಸಭೆ ಕ್ಷೇತ್ರಗಳಲ್ಲಿ ಸಂಚರಿಸಲಿವೆ. ಕೇಂದ್ರ ಸರ್ಕಾರದ ಸಾಧನೆ ತಿಳಿಸುವ ಜತೆಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಲಿವೆ ಎಂದು ಬಿ.ವೈ.ವಿಜಯೇಂದ್ರ ಮಾಹಿತಿ ನೀಡಿದರು.

    ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಡಿ.ವಿ‌.ಸದಾನಂದಗೌಡ, ಮಾಜಿ ಸಚಿವರಾದ ಬೈರತಿ ಬಸವರಾಜ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಶಾಸಕ ಸಿ.ಕೆ.ರಾಮಮೂರ್ತಿ, ನಂದೀಶ್ ರೆಡ್ಡಿ, ಮಾಳವಿಕಾ ಅವಿನಾಶ್ ಇನ್ನಿತರರು ಇದ್ದರು‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts