More

    ಶಾಸಕ ಯತ್ನಾಳ ವಿರುದ್ಧ ತೀವ್ರ ವಾಗ್ದಾಳಿ, ಮುಖವಾಡ ಬಯಲಿಗೆಳೆಯದೆ ಬಿಡೆನೆಂದ ಬಿಜೆಪಿ ವಕ್ತಾರ ಸುರೇಶ ಬಿರಾದಾರ ಹೇಳಿದ್ದೇನು?

    ವಿಜಯಪುರ: ‘ಹೊಂದಾಣಿಕೆ ರಾಜಕಾರಣಿ, ತೃತೀಯ ದರ್ಜೆ ನಾಯಕ, ಡೋಂಗಿ ಹಿಂದುತ್ವವಾದಿ, ರಾತ್ರಿ 2 ಗಂಟೆಯ ಮುಸುಕುಧಾರಿ, ಅನಾಗರಿಕತ್ವದ ರೂವಾರಿ, ಹಾಸ್ಯ ನಟ, ಪುಕ್ಕಲು ಲೀಡರ್, ಕೈಗೆ ಮೈಕ್ ಸಿಕ್ಕರೆ ಸಾಕು ಮಿದುಳು ಮತ್ತು ನಾಲಿಗೆಯ ಸಂಪರ್ಕವೇ ಕಳೆದುಕೊಳ್ಳುವ ಸುಳ್ಳು ಭಾಷಣಕಾರ….’
    ಹೀಗೆ ಸಾಲು ಸಾಲು ಉಪಮೇಯಗಳ ಮೂಲಕ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ವಿರುದ್ಧ ಬಿಜೆಪಿ ಜಿಲ್ಲಾ ವಕ್ತಾರ ಸುರೇಶ ಬಿರಾದಾರ ಏಕವಚನದಲ್ಲಿಯೇ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.

    ಇತ್ತೀಚೆಗೆ ನಡೆದ ದಾನಮ್ಮದೇವಿ ಜಾತ್ರೋತ್ಸವದಲ್ಲಿ ತಮ್ಮ ಮೇಲಿನ ವೈಯಕ್ತಿಕ ಟೀಕೆ ಹಾಗೂ ಪಕ್ಷದ ವಿರುದ್ಧದ ವಾಗ್ದಾಳಿಗೆ ಸಂಬಂಧಿಸಿದಂತೆ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದ ವೈಯಕ್ತಿಕ ಟೀಕೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಬಗೆಗಿನ ವಾಗ್ದಾಳಿ ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ ಎಂದರು.

    ವಿಧಾನ ಸಭೆ ಚುನಾವಣೆ ಸಂದರ್ಭ ಬಿಎಲ್‌ಡಿಇ ಬಳಿ ಪಕ್ಷದ ವಿರುದ್ಧವಾಗಿ ರೊಕ್ಕ ಹಂಚುತ್ತಿದ್ದೆ ಎಂದು ಶಾಸಕ ಯತ್ನಾಳ ಆರೋಪಿಸಿದ್ದಾರೆ. ಹಾಗಿದ್ದರೆ ಆಗ ಸುಮ್ಮನೇ ಬಿಟ್ಟಿದ್ದೇಕೆ. ಬಬಲೇಶ್ವರ ಉಸ್ತುವಾರಿಯಾಗಿದ್ದ ನಾನು ಗುರುಲಿಂಗಪ್ಪ ಅಂಗಡಿಯವರ ಜೊತೆ ಸೇರಿ ಬಿಎಲ್‌ಡಿಇ ಕಾಲೇಜ್ ಬಳಿ ಬಂದಾಗ ಇದೇ ಶಾಸಕ ಯತ್ನಾಳ ತಮ್ಮ ಚೇಲಾಗಳನ್ನು ಕಳುಹಿಸಿ ನನ್ನ ವಿಚಾರಿಸಿದ್ದರು. ಯಾಕೆ, ಅವರೇ ಖುದ್ದಾಗಿ ಬಂದು ಕೇಳಬೇಕಿತ್ತಲ್ಲ? ಕಾರ್‌ನಲ್ಲಿ ಡೊಕ್ಕು ಹೊಡೆದು ಕುಳಿತಿದ್ದೇಕೆ? ಆಗ ಚುನಾವಣೆ ಸಂದರ್ಭ ನನ್ನ ಮನೆಗೆ ಬರುತ್ತೇನೆಂದು ಚೇಲಾಗಳ ಮೂಲಕ ಹೇಳಿದ್ದೇಕೆ? ಭೇಟಿಯಾಗುವ ಉದ್ದೇಶ ಏನಿತ್ತು? ಆಗ ಬಿಟ್ಟು ಈಗ ಬಹಿರಂಗವಾಗಿ ಮಾತನಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದರು.

    ಶಿಕ್ಷಣ ಸಂಸ್ಥೆ ಮೂಲಕ ಸಿಕ್ಕಾಪಟ್ಟೆ ಡೊನೇಶನ್ ತೆಗೆದುಕೊಳ್ಳುತ್ತೇನೆ ಎನ್ನುವ ಯತ್ನಾಳರು ತಮ್ಮ ಶಿಶಿನಿಕೇತನ, ಅಟಲ್‌ಬಿಹಾರಿ ವಾಜಪೇಯಿ ಮತ್ತಿತರ ಸಂಸ್ಥೆಗಳಲ್ಲಿ ಉಚಿತವಾಗಿ ಶಿಕ್ಷಣ ಕೊಡುತ್ತಿದ್ದಾರಾ? ನಾನೊಬ್ಬ ಸುಶಿಕ್ಷಿತ. ಸಂಸ್ಕಾರಯುತ ಮನುಷ್ಯ. ನಿಮ್ಮಂತೆ ಅಗೌರವಯುತವಾಗಿ ನಡೆದುಕೊಳ್ಳುವುದಿಲ್ಲ. ನಿಮ್ಮ ಸಂಸ್ಕಾರ ಬಿಜೆಪಿಯದ್ದೂ ಅಲ್ಲ, ಆರ್‌ಎಸ್‌ಎಸ್ ಮತ್ತು ಹಿಂದುತ್ವದ್ದೂ ಅಲ್ಲ. ಬಿಜೆಪಿಯ ನಿಷ್ಟಾವಂತನಾಗಿದ್ದರೆ ಜೆಡಿಎಸ್‌ಗೆ ಹೋಗುತ್ತಿರಲಿಲ್ಲ, ಹಿಂದುತ್ವವಾದಿಯಾಗಿದ್ದರೆ ಮುಸ್ಲಿಂ ಟೋಪಿ ಧರಿಸಿ ಸುರಕುಂಬಾ ಹಂಚುತ್ತಿರಲಿಲ್ಲ. ಹಿಂದುತ್ವದ ಚಾಂಪಿಯನ್ ಎನ್ನಿಸಿಕೊಳ್ಳುವ ನೀವು ಸ್ಟೇಶನ್ ರಸ್ತೆಯ ಗುತ್ತಿಗೆ ಯಾರಿಗೆ ನೀಡಿದ್ದೀರಿ? ಆತ್ಮಾವಲೋಕನ ಮಾಡಿಕೊಳ್ಳಿ ಎಂದರು.

    ಪ್ರಾಮಾಣಿಕನಾಗಿದ್ದರೆ, ಪಕ್ಷ ನಿಷ್ಟನಾಗಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ಆಯ್ಕೆಮಾಡಿದಾಗ ಒಪ್ಪಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ಚಹಾ ಕುಡಿದು ಬರುವುದಾಗಿ ತಿಳಿಸಿ ಪಲಾಯನಗೈದಿದ್ದೇಕೆ? ಇದೀಗ ನನಗೆ ಯಾವುದೇ ಹುದ್ದೆ ಬೇಕಿಲ್ಲ, ನಾನದರ ಆಕಾಂಕ್ಷಿಯಲ್ಲ ಎಂದು ಒಣ ಜಂಬ ಕೊಚ್ಚಿಕೊಳ್ಳುತ್ತಿರುವುದೇಕೆ? ಎಂದ ಸುರೇಶ ಬಿರಾದಾರ, ಯುವಕರು ಇಂಥವರ ಮಾತನ್ನು ನಂಬಿ ಮೋಸಹೋಗಬಾರದು. ಈ ಹಿಂದೆ ಮೋದಿ ವಿಜಯೋತ್ಸವ ವೇಳೆ ಗಲಭೆ ನಡೆದಾಗ ಕೊಲ್ಹಾಪುರದಲ್ಲಿ ಅಡಗಿ ಕುಳಿತು ನನಗೆ ಎದೆ ನೋವು, ಜಾಮೀನು ಕೊಡಿ ಎಂದು ಅಳುತ್ತಿದ್ದ ಇವರೆಂಥ ನಾಯಕ? ಅಂದು ಕಾರ್ಯಕರ್ತರಿಗೆ ಬೆನ್ನೆಲುಬಾಗಿದ್ದು ನಾನು. ನಾನೇ ಎ-1 ಆರೋಪಿಯಾಗಿ ಪ್ರಕರಣ ಎದುರಿಸಿದ್ದೇನೆ. ಯುವಕರ ದಾರಿ ತಪ್ಪಿಸುವ ಇಂಥ ನಾಯಕ ಬೇಡ ಎಂದು ಶೀಘ್ರದಲ್ಲಿಯೇ ಪಕ್ಷದ ಕಾರ್ಯಕರ್ತರು ಅಭಿಯಾನ ನಡೆಸಲಿದ್ದೇವೆ ಎಂದರು.

    ಪ್ರಾಮಾಣಿಕತೆ ಬಗ್ಗೆ ಮಾತನಾಡುವ ನೀವು, ನಿಮ್ಮ ಪಿಎಗಳು ಎಷ್ಟು ಆಸ್ತಿ ಮಾಡಿದ್ದಾರೆ ಹೇಳಿ. ಐಶ್ವರ್ಯ ನಗರ, ಕೆಎಚ್ ಕಾಲನಿ ಮುಂತಾದ ಮಹತ್ವದ ಸ್ಥಳಗಳಲ್ಲಿ ನಿಮ್ಮ ಪಿಎಗಳು ಕಟ್ಟಿರುವ ಮನೆ ಎಂಥವು? ಎಂದು ಪ್ರಶ್ನಿಸಿದರು.

    ಎಂಎಲ್‌ಎ, ಎಂಎಲ್‌ಸಿ, ಎಂಪಿ, ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಎಲ್ಲ ನಿನಗೇ ಬೇಕು ಎನ್ನುವವ ಎಷ್ಟು ಕಾರ್ಯಕರ್ತರನ್ನು ಬೆಳೆಸಿರುವೆ. ನಿಜಕ್ಕೂ ಲೀಡರ್ ಆಗಿದ್ದರೆ ಬಬಲೇಶ್ವರಕ್ಕೆ ಹೋಗಿ ನಿಂತು ಗೆಲ್ಲಬೇಕಿತ್ತು ನೋಡೋಣ. ದೇವಹಿಪ್ಪರಗಿಯಲ್ಲಿ ಸೋತಿದ್ದೇಕೆ? ವಿಜಯಪುರ ನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಣ್ಣ ಹುಡುಗ ನಿಂತರೂ ಗೆಲ್ಲುತ್ತಾನೆ. ಇಲ್ಲಿ ಪಕ್ಷದ ಕಾರ್ಯಕರ್ತರ ಬಲದಿಂದ ಗೆದ್ದು ಬೀಗುವವ ಬೇರೆ ಕಡೆಗೆ ಹೋಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಾಗಲಿಲ್ಲವೇಕೆ? ಪ್ರಚಾರಕ್ಕೆ ಹೋದಲ್ಲೆಲ್ಲ ಅಲ್ಲಿನ ಅಭ್ಯರ್ಥಿಗಳು ಸೋತಿದ್ದಾರೆ. ನೀನೆಂಥ ಪಂಚಮಸಾಲಿ ನಾಯಕ? ಬಬಲೇಶ್ವರದಲ್ಲಿ ನಿನ್ನ ಹೊಂದಾಣಿಕೆ ರಾಜಕಾರಣದಿಂದಾಗಿಯೇ ನಮ್ಮ ಪಕ್ಷದ ಅಭ್ಯರ್ಥಿ ಸೋಲಬೇಕಾಯಿತು ಎಂದ ಸುರೇಶ ಬಿರಾದಾರ, ವಿಧಾನ ಸಭೆ ಚುನಾವಣೆಯಲ್ಲಿ ನಗರ ಕ್ಷೇತ್ರದಿಂದ ಟಿಕೆಟ್ ಕೇಳಿದ್ದರಿಂದ ಯತ್ನಾಳ ನನ್ನ ಮೇಲೆ ವೈಯಕ್ತಿಕವಾಗಿ ಹಗೆ ತೀರಿಸಿಕೊಳ್ಳುತ್ತಿದ್ದಾರೆ. ಬಹುಶಃ ನನ್ನ ಶಿಕ್ಷಣ ಸಂಸ್ಥೆಯಿಂದ ‘ಜಲಸ್ಸಿ’ಯೂ ಉಂಟಾಗಿರಬಹುದೆಂದರು.

    ಇನ್ಮುಂದೆ ಬಹಿರಂಗವಾಗಿ ಟೀಕೆ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ನಿಮ್ಮ ಮುಖವಾಡ ಕಳಚಲು ನಾವು ಸರಣಿ ಅಭಿಯಾನ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಮಾಜಿ ಉಪಮೇಯರ್ ಗೋಪಾಲ ಘಟಕಾಂಬಳೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts