More

    ವೆನ್ಲಾಕ್‌ನ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಸಜ್ಜು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಿ ಈಗಿರುವ ಆಯುಷ್ ಆಸ್ಪತ್ರೆ ಸೌಲಭ್ಯ ಸಾಲದಿದ್ದಲ್ಲಿ ವೆನ್ಲಾಕ್‌ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಎಲ್ಲ ಮೂರು ಮಹಡಿಗಳನ್ನು ಬಳಸಲು ಸುಸಜ್ಜಿತಗೊಳಿಸಿ ಇರಿಸಲಾಗಿದೆ.

    ಸೂಪರ್ ಸ್ಪೆಷಾಲಿಟಿ ಬ್ಲಾಕ್‌ನ 3ನೇ ಮಹಡಿಯನ್ನು ಸಂಪೂರ್ಣವಾಗಿ ಕರೊನಾ ಶಂಕಿತ ರೋಗಿಗಳಿಗೆ ಮೀಸಲಿರಿಸಲಾಗಿದೆ. ಇಲ್ಲಿ ನಾಲ್ಕು ವಿಭಾಗಗಳಲ್ಲಿ ಒಟ್ಟು 79 ಬೆಡ್ ವ್ಯವಸ್ಥೆ ಮಾಡಲಾಗಿದೆ. ಮಹಿಳಾ ಶಂಕಿತ ರೋಗಿಗಳಿಗೆ ಪ್ರತ್ಯೇಕ ವಿಭಾಗವಿದೆ. ಪ್ರತೀ ವಿಭಾಗದಲ್ಲೂ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಸಿಬ್ಬಂದಿಗೆ ಸುರಕ್ಷತಾ ದಿರಿಸು ಹಾಕುವುದಕ್ಕೆ ಡಾನ್ನಿಂಗ್ ರೂಂ ಹಾಗೂ ತೆಗೆದು ಪ್ರತ್ಯೇಕವಾಗಿರಿಸುವುದಕ್ಕೆ ಡಾಫಿಂಗ್ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಶಂಕಿತರ ಗಂಟಲು ಕೋಶ ಮಾದರಿ ಸಂಗ್ರಹಿಸಿ ಇರಿಸುವುದಕ್ಕೆ ಕೊಠಡಿಯೂ ಸಿದ್ಧವಿದೆ.

    ಆಸ್ಪತ್ರೆಗೆ ಶಂಕಿತ ಕೊವಿಡ್ ರೋಗಿ ಬಂದಾಗ ಹೇಗೆ ನಿರ್ವಹಣೆ ಮಾಡಲಾಗುತ್ತದೆ ಎನ್ನುವುದನ್ನು ಸೋಮವಾರ ಮಾಧ್ಯಮದ ಪ್ರತಿನಿಧಿಗಳಿಗೆ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ವೆನ್ಲಾಕ್ ಆಸ್ಪತ್ರೆ ಹಿರಿಯ ವೈದ್ಯರು ಹಾಗೂ ದಾದಿಯರು ಪ್ರಾತ್ಯಕ್ಷಿಕೆ ಸಹಿತ ವಿವರಿಸಿದರು.

    ಪ್ರತ್ಯೇಕ ಮಹಡಿ: ಶಂಕಿತ ರೋಗಿಗಳ ವರದಿ ಪಾಸಿಟಿವ್ ಬಂದಲ್ಲಿ ಅವರನ್ನು 2ನೇ ಮಹಡಿಯಲ್ಲಿರುವ ಪಾಸಿಟಿವ್ ರೋಗಿಗಳ ವಿಭಾಗಕ್ಕೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿ ಒಟ್ಟು 99 ಹಾಸಿಗೆಗಳಿವೆ. ಇನ್ನು ಈ ಸೋಂಕಿತರಲ್ಲಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು 1ನೇ ಮಹಡಿಗೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿ 49 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ದ್ವಿತೀಯ ಮತ್ತು ತೃತೀಯ ಮಹಡಿ(ಶಂಕಿತರು ಹಾಗೂ ಪಾಸಿಟಿವ್ ರೋಗಿಗಳನ್ನು ಇರಿಸಲಾಗಿರುವ ವಿಭಾಗ)ಗಳಿಗೆ ತೆರಳುವುದಕ್ಕೆ ಪ್ರತ್ಯೇಕ ಲಿಫ್ಟ್‌ಗಳನ್ನು ಮೀಸಲಿಡಲಾಗಿದೆ.

    ವೆನ್ಲಾಕ್ ಆಸ್ಪತ್ರೆಯಲ್ಲಿ ಕೆಎಂಸಿಯ 50 ಮಂದಿ, ಎನ್‌ಎಚ್‌ಎಂನ 44 ಹಾಗೂ 136 ಸರ್ಕಾರಿ ದಾದಿಯರು ಕರ್ತವ್ಯದಲ್ಲಿದ್ದು, ಅವರೆಲ್ಲರ ಸೇವೆಯನ್ನು ಕರೊನಾ ರೋಗಿಗಳ ಚಿಕಿತ್ಸೆಗೆ ಪಡೆಯಲಾಗುತ್ತದೆ ಎಂದು ಆಸ್ಪತ್ರೆ ಹಿರಿಯ ದಾದಿಯೊಬ್ಬರು ಮಾಹಿತಿ ನೀಡಿದರು.

    ಕಾಯಲು ಪ್ರತ್ಯೇಕ ವ್ಯವಸ್ಥೆ: ಆಸ್ಪತ್ರೆ ಹೊರ ಆವರಣದಲ್ಲಿ ಶಾಮಿಯಾನ ಹಾಕಿ ಶಂಕಿತ ಅಥವಾ ಸೋಂಕಿತರು ಬಂದಾಗ ಅವರು ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ಆಸನ ಹಾಕಲಾಗಿದೆ. ಆಸ್ಪತ್ರೆ ಆವರಣಕ್ಕೆ ಪ್ರವೇಶಿಸುವ ರೋಗಿಗೆ ಸ್ಯಾನಿಟೈಸರ್, ಮಾಸ್ಕ್ ಒದಗಿಸಲಾಗುತ್ತದೆ. ಬಳಿಕ ನೋಂದಣಿ ಕಚೇರಿಯಲ್ಲಿ ಆತನ ಸಂಪೂರ್ಣ ವಿವರ ಪಡೆಯಲಾಗುತ್ತದೆ. ಬಳಿಕ ಆತ ಕಾಯುವ ಸ್ಥಳದಲ್ಲಿ ಕುಳಿತುಕೊಳ್ಳಬೇಕು. ಟೋಕನ್ ಪಡೆದ ಬಳಿಕ ಆತನ ಸಂಖ್ಯೆಯನ್ನು ನೋಂದಣಿ ಕೌಂಟರ್‌ನಲ್ಲಿ ಕರೆದಾಗ ಹೋಗಿ ನೋಂದಣಿ ಮಾಡಿಕೊಳ್ಳಬೇಕು.
    ಆಸ್ಪತ್ರೆಯ ಒಳಗಿನಿಂದ ಸಹಾಯಕರು ಬಂದು ರೋಗಿಯನ್ನು ಆತನ ವಿವರಗಳುಳ್ಳ ದಾಖಲಾತಿಯೊಂದಿಗೆ ಆಸ್ಪತ್ರೆ ಒಳಗಿನ ಪ್ರತ್ಯೇಕ ಫ್ಲೂ ಕ್ಲಿನಿಕ್‌ಗೆ ಕರೆದೊಯ್ಯುತ್ತಾರೆ. ಅಲ್ಲಿ ರೋಗಿಯನ್ನು ಸ್ಕ್ರೀನಿಂಗ್‌ಗೊಳಪಡಿಸಿ 3ನೇ ಮಹಡಿಗೆ ಕೊಂಡೊಯ್ಯಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ವಿವರಿಸಿದರು.

    ಪ್ರಸ್ತುತ ಕರೊನಾ ಪಾಸಿಟಿವ್ ಇದ್ದ 12 ರೋಗಿಗಳಲ್ಲಿ ನಾಲ್ವರು ಸೋಮವಾರ ಗುಣಮುಖರಾಗಿ ತೆರಳಿದ್ದಾರೆ. ಇಬ್ಬರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 6 ಮಂದಿ ಪಾಸಿಟಿವ್ ರೋಗಿಗಳು ಹಾಗೂ 3 ಮಂದಿ ಶಂಕಿತರು ಆಯುಷ್ ಬ್ಲಾಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts