More

    ಏಕೀಕರಣಕ್ಕೆ ಹೋರಾಡಿದವರ ಸ್ಮರಣೆ ಅಗತ್ಯ

    ಭಾಲ್ಕಿ: ಹರಿದು ಹಂಚಿ ಹೋಗಿದ್ದ ರಾಜ್ಯವನ್ನು ಒಂದುಗೂಡಿಸಿ ಅಖಂಡ ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

    ಪುರಭವನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ತಾಲೂಕು ಆಡಳಿತ ಸಹಯೋಗದಡಿ ಗುರುವಾರ ಆಯೋಜಿಸಿದ್ದ ಕನ್ನಡ ಜ್ಯೋತಿ ರಥಯಾತ್ರೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಅವರು, ಕರ್ನಾಟಕ ಏಕೀಕರಣ, ಹೈಕ ವಿಮೋಚನೆಗಾಗಿ ಅನೇಕರು ತಮ್ಮ ಪ್ರಾಣ ಲೆಕ್ಕಿಸದೆ ನಿರಂತರ ಚಳವಳಿ, ಹೋರಾಟ ನಡೆಸಿದ್ದರಿಂದ ನಾವೆಲ್ಲರೂ ಅಖಂಡ ಕರ್ನಾಟಕದಲ್ಲಿ ನೆಲೆಸಿದ್ದೇವೆ. ಕನ್ನಡ ನೆಲದ ರಕ್ಷಣೆಗೆ ನಿಂತ ಪ್ರತಿಯೊಬ್ಬರನ್ನು ನೆನೆಯುವುದರ ಜತೆಗೆ ಯುವ ಸಮುದಾಯಕ್ಕೆ ಹಿಂದಿನ ಇತಿಹಾಸ ತಿಳಿಸಿ ಕೊಡುವ ಪ್ರಯತ್ನ ಮಾಡಬೇಕಾಗಿದೆ. ಇಲ್ಲದಿದ್ದರೆ ಯುವ ಪೀಳಿಗೆಗೆ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದರು.

    ಸಾನ್ನಿಧ್ಯ ವಹಿಸಿದ್ದ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ರಥ ಎಲ್ಲ ಕಡೆ ಸಂಚಲನ ಉಂಟು ಮಾಡಿದೆ. ಕನ್ನಡದ ಸಮಗ್ರ ಅಭಿವೃದ್ಧಿಗಾಗಿ ನಾವೆಲ್ಲರೂ ಶ್ರಮಿಸಬೇಕಿದೆ. ನಮ್ಮ ರಕ್ತದ ಕಣಕಣದಲ್ಲಿ ಕನ್ನಡತನವನ್ನು ಸೇರಿಸಿಕೊಳ್ಳಬೇಕಿದೆ ಎಂದು ಹೇಳಿದರು.

    ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರೆ, ಬಿಇಒ ಮಜಹರ್ ಹುಸೇನ್, ತಾಪಂ ಇಒ ಸೂರ್ಯಕಾಂತ ಪಾಟೀಲ್, ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಪುರಸಭೆ ಮುಖ್ಯಾಧಿಕಾರಿ ನಾಗಣ್ಣ ಪರೀಟ್, ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ, ಅಧಿಕಾರಿಗಳಾದ ಸತೀಶಕುಮಾರ ಸಂಗನ್, ಮಲ್ಲಿನಾಥ ಸಜ್ಜನ್, ಮನೋಹರ ಹೋಳಕರ್, ಮಹ್ಮದ್ ಸಾಧಿಕ್ ಜಾಫರ್, ಕಲಾವಿದ ವಿಜಯಕುಮಾರ ಸೋನಾರೆ, ಸತೀಶಕುಮಾರ ಸಂಗನ್, ಪುರಸಭೆ ಸದಸ್ಯ ಅಶೋಕ ಗಾಯಕವಾಡ, ಕಾಶೀನಾಥ ಲದ್ದೆ, ಸಂತೋಷ ಬಿಜಿ ಪಾಟೀಲ್, ಉದಯಕುಮಾರ ಕಲ್ಯಾಣೆ, ಸಂಗಮೇಶ ಗುಮ್ಮೆ, ಸಂಜುಕುಮಾರ ನಾವದಗಿ, ರಾಜಕುಮಾರ ಡಾವರಗಾವೆ, ಜಯರಾಜ ದಾಬಶೆಟ್ಟಿ, ಮಾರುತಿರಾವ ವಾಘೆ, ಆನಂದ ಹಳೆಂಬರೆ, ಡಾ.ಮಠಪತಿ ಇತರರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಣೆ ಮಾಡಿದರು.

    ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ: ಬಿಕೆಐಟಿ ಕಾಲೇಜು ಎದುರು ಕನ್ನಡ ಜ್ಯೋತಿ ರಥಯಾತ್ರೆ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಬಲೂನ್ ಮತ್ತು ಪಾರಿವಾಳ ಹಾರಿಬಿಡುವ ಮೂಲಕ ಚಾಲನೆ ನೀಡಿದರು. ಬೊಮ್ಮಗೊಂಡೇಶ್ವರ ವೃತ್ತ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತದ ಮೂಲಕ ಪುರಭವನ ತಲುಪಿತು. ಕನ್ನಡ ಗೀತೆಗಳಿಗೆ ಸಚಿವರು ಹೆಜ್ಜೆ ಹಾಕಿದರು. ಕನ್ನಡಪರ ಸಂಘಟನೆ ಪ್ರಮುಖರು, ವಿದ್ಯಾರ್ಥಿಗಳು ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದರು. ಡೊಳ್ಳು ಕುಣಿತ, ಲಂಬಾಣಿ ನೃತ್ಯ, ವಿವಿಧ ಕಲಾ ತಂಡಗಳ ಪ್ರದರ್ಶನ ಮೆರವಣಿಗೆಗೆ ಮೆರುಗು ನೀಡಿದು. ಒಂದು ಕಿಲೋಮೀಟರ್ ಉದ್ದದ ಕನ್ನಡ ಬಾವುಟ ಹಿಡಿದು ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.

    ಜನ್ಮಕೊಟ್ಟ ತಾಯಿ ಆರಾಧನೆಯಂತೆಯೇ ಮಾತೃಭಾಷೆ ಬಗ್ಗೆ ಅಭಿಮಾನ ಇಟ್ಟುಕೊಳ್ಳಬೇಕು. ಕನ್ನಡ ಉಳಿಸಿ ಬೆಳೆಸಲು ನಾವೆಲ್ಲರೂ ಶ್ರಮಿಸಬೇಕಿದೆ. ಕರ್ನಾಟಕ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ.
    | ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts