More

    Web Exclusive |ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಮೈಸೂರು ಮೃಗಾಲಯ : ಚೇತರಿಕೆ ಕಾಣದ ಪ್ರವಾಸೋದ್ಯಮ

    ಸದೇಶ್ ಕಾರ್ಮಾಡ್ ಮೈಸೂರು

    ಕರೊನಾ ಸೋಂಕು ನಿಯಂತ್ರಿಸಲು ಜಾರಿಗೊಳಿಸಿದ ಲಾಕ್​ಡೌನ್ ಹಿಂಪಡೆದರೂ ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮೈಸೂರಿನತ್ತ ಪ್ರವಾಸಿಗರು ಮುಖ ಮಾಡುತ್ತಿಲ್ಲ. ಪ್ರವಾಸಿಗರ ಪ್ರವೇಶ ಶುಲ್ಕದಿಂದ ನಿರ್ವಹಣೆಯಾಗುತ್ತಿದ್ದ ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದ ಆರ್ಥಿಕ ಸಂಕಷ್ಟ ಬಗೆಹರಿಯುವ ಲಕ್ಷಣ ಇನ್ನೂ ಕಾಣುತ್ತಿಲ್ಲ.

    ಕರೊನಾ ವೈರಸ್ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ಮೃಗಾಲಯವನ್ನು ಬಂದ್ ಮಾಡಲಾಗಿತ್ತು. ಲಾಕ್​ಡೌನ್ ಸಡಿಲಗೊಂಡ ನಂತರ ಕೆಲವೊಂದು ಷರತ್ತುಗಳನ್ನು ವಿಧಿಸಿ ಜೂನ್ ತಿಂಗಳಿಂದ ಮೃಗಾಲಯ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಯಿತು. ಮೃಗಾಲಯ ಪುನರಾರಂಭಗೊಂಡ ಸಂದರ್ಭ ದಿನಕ್ಕೆ 150 ರಿಂದ 200 ಜನರು ಭೇಟಿ ನೀಡುತ್ತಿದ್ದರು. ಆದರೆ, ಈ ಸಂಖ್ಯೆ ಇದೀಗ 1,500ಕ್ಕೆ ಏರಿಕೆಯಾದರೂ ಇದು ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.

    ಮೃಗಾಲಯಕ್ಕೆ ಈ ಹಿಂದೆ ಪ್ರತಿನಿತ್ಯ 10 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ, ಇದೀಗ ಮೃಗಾಲಯಕ್ಕೆ ಭೇಟಿ ನೀಡುತ್ತಿರá-ವ ಪ್ರವಾಸಿಗರ ಸಂಖ್ಯೆ ಶೇ.90ರಷ್ಟು ಕಡಿಮೆಯಾಗಿದೆ. ಹೀಗಾಗಿ ಮೃಗಾಲಯ ನಿರ್ವಹಣೆಗೆ ಆರ್ಥಿಕ ಸಮಸ್ಯೆ ಎದುರಾಗಿದೆ.

    ನಿರ್ವಹಣೆಗೆ 2 ಕೋಟಿ ರೂ.: ಮೈಸೂರು ಮೃಗಾಲಯದ ನಿರ್ವಹಣೆಗೆ ತಿಂಗಳಿಗೆ 2 ಕೋಟಿ ರೂ. ಅಗತ್ಯವಿದೆ. ಆದರೆ, ಆದಾಯ ಲಕ್ಷ ರೂ. ಕೂಡ ದಾಟುತ್ತಿಲ್ಲ. ಪ್ರಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ವಿಶೇಷ ಮುತುವರ್ಜಿ ವಹಿಸಿ ಮೃಗಾಲಯಕ್ಕೆ 3.50 ಕೋಟಿ ರೂ.ಗಳನ್ನು ದಾನಿಗಳ ಮೂಲಕ ಕೊಡಿಸಿದ್ದರು. ಅಲ್ಲದೆ ಸುತ್ತೂರು ಮಠ, ಇನ್ಪೋಸಿಸ್ ಪ್ರತಿಷ್ಠಾನ ಸೇರಿ ಹಲವರು ಮೃಗಾಲಯಕ್ಕೆ ಆರ್ಥಿಕ ನೆರವು ನೀಡಿದ್ದಾರೆ.

    ಆದರೆ, ದತ್ತು ಸ್ವೀಕಾರ ಪ್ರಮಾಣ ಕಡಿಮೆಯಾಗಿರುವುದು ಮೃಗಾಲಯ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ. ಈ ಹಿನ್ನೆಲೆಯಲ್ಲಿ ಮೃಗಾಲಯ ನಿರ್ವಹಣೆಗೆ ನೆರವು ನೀಡಬೇಕೆಂದು ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ, ರಾಜ್ಯ ಸರ್ಕಾರದ ಬಳಿಯಲ್ಲೂ ಹಣ ಇಲ್ಲದ ಹಿನ್ನೆಲೆಯಲ್ಲಿ ಇದುವರೆಗೆ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಮೃಗಾಲಯದಲ್ಲಿರುವ ನಿಧಿಯನ್ನೇ ಬಳಕೆ ಮಾಡಿಕೊಂಡು ನಿರ್ವಹಣೆ ಮಾಡುವ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ.

    ರಾಜ್ಯದಲ್ಲಿ ಒಟ್ಟು 10 ಮೃಗಾಲಯಗಳು ಇವೆ. ಈ ಪೈಕಿ ಮೈಸೂರು ಮತ್ತು ಬೆಂಗಳೂರು ಮೃಗಾಲಯಗಳು ಮಾತ್ರ ಆರ್ಥಿಕ ಸ್ವಾವಲಂಬಿಗಳಾಗಿದ್ದು, ಉಳಿದೆಲ್ಲ ಮೃಗಾಲಯಗಳು ಕರ್ನಾಟಕ ಮೃಗಾಲಯ ಪ್ರಾಧಿಕಾರ, ಅರಣ್ಯ ಇಲಾಖೆಯ ಆರ್ಥಿಕ ನೆರವಿನೊಂದಿಗೆ ಮುನ್ನಡೆಯುತ್ತಿವೆ. ಕರೊನಾ ಬರುವುದಕ್ಕೂ ಮುಂಚೆ ಮೈಸೂರು ಹಾಗೂ ಬೆಂಗಳೂರು ಮೃಗಾಲಯದಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿದ್ದ ಆದಾಯವನ್ನು ಇತರ ಮೃಗಾಲಯಗಳಿಗೆ ಹಂಚಿಕೆ ಮಾಡಲಾಗುತಿತ್ತು. ಆದರೆ, ಇದೀಗ ಆ ಎರಡು ಮೃಗಾಲಯಗಳು ಕೂಡ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದು, ಸರ್ಕಾರದ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಇವೆ.

    ಕೋಟ್ಯಾಂತರ ರೂ. ನಷ್ಟ : ಮೃಗಾಲಯದಲ್ಲಿ 152 ವಿವಿಧ ಪ್ರಭೇದದ 1500 ಕ್ಕೂ ಹೆಚ್ಚಿನ ಪ್ರಾಣಿಗಳಿವೆ. 300ಕ್ಕೂ ಹೆಚ್ಚಿನ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೃಗಾಲಯಕ್ಕೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ದಸರಾ ಉತ್ಸವ ಹಾಗೂ ಬೇಸಿಗೆ ರಜೆ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಈ ಬಾರಿಯ ದಸರಾ ಉತ್ಸವದಲ್ಲೂ ಮೃಗಾಲಯ ನಿರೀಕ್ಷಿತ ಆದಾಯ ಗಳಿಸಲು ಸಾಧ್ಯವಾಗಿಲ್ಲ.

    ಪ್ರಸ್ತುತ ಮೃಗಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿಲ್ಲ. ಪ್ರಾಣಿಗಳ ದತ್ತು ಸ್ವೀಕಾರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿಲ್ಲ. ಕರೊನಾ ವೈರಸ್ ಭೀತಿಯಿಂದ ಜನರು ಮೃಗಾಲಯ ಭೇಟಿಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಪ್ರಸ್ತುತ ಇರುವ ನಿಧಿಯನ್ನು ಬಳಕೆ ಮಾಡಿಕೊಂಡು ಮೃಗಾಲಯವನ್ನು ಮುನ್ನಡೆಸಲಾಗುತ್ತಿದ್ದು, ಸರ್ಕಾರದ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದೇವೆ.
    | ಅಜಿತ್ ಕುಲಕರ್ಣಿ, ಕಾರ್ಯನಿರ್ವಾಹಕ ನಿರ್ದೇಶಕ,
    ಶ್ರೀಚಾಮರಾಜೇಂದ್ರ ಮೃಗಾಲಯ ಮೈಸೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts