More

    Web Exclusive | 4 ದಶಕದಿಂದ ಈಕೆಗೆ ಠಾಣೆಯೇ ಮನೆ!; ಪೊಲೀಸರೇ ಬಂಧುಗಳು, ಆಧಾರ್ ಕಾರ್ಡಲ್ಲಿ ಠಾಣೆಯೇ ವಿಳಾಸ!

    | ಹರೀಶ್ ಮೊಟುಕಾನ ಮಂಗಳೂರು

    ನಾಲ್ಕು ದಶಕದ ಹಿಂದೆ ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿದ್ದ ಮಾತು ಬಾರದ, ಕಿವಿ ಕೇಳಿಸದ ಅನಾಥ ಯುವತಿ ಈಗ 60ರ ಅಜ್ಜಿ. ಈಕೆಗೆ ಅಂದಿನಿಂದ ಇಂದಿನವರೆಗೂ ಪೊಲೀಸ್ ಠಾಣೆಯೇ ಮನೆ. ಆಧಾರ್ ಕಾರ್ಡ್​ನಲ್ಲಿ ಪೊಲೀಸ್ ಠಾಣೆಯದೇ ವಿಳಾಸ! ಪೊಲೀಸ್ ಸಿಬ್ಬಂದಿಗಳೇ ಬಂಧುಗಳು. ಇದೊಂದು ಅಪರೂಪದ ಮಮತೆಯ ಮಿಡಿತದ ಕಥೆ.

    ಈ ಮಹಿಳೆಗೆ ಪೊಲೀಸರೇ ಇಟ್ಟ ಹೆಸರು ಹೊನ್ನಮ್ಮ. 20ನೇ ವಯಸ್ಸಿನಲ್ಲಿ ಅನಾಥೆಯಾಗಿ ಬೀದಿಪಾಲಾಗಿದ್ದಾಗ ಆಗಿನ ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆಯಿಂದ ಬಂದರು ಪೊಲೀಸ್ ಠಾಣೆಯಲ್ಲಿ ಆಶ್ರಯ ನೀಡಿದ್ದರು. ಆರಂಭದಲ್ಲಿ ಈಕೆಗೆ ಚಿಕಿತ್ಸೆ ನೀಡಿ, ಕುಟುಂಬಸ್ಥರ ಪತ್ತೆಗೆ ನಡೆಸಿದ ಪ್ರಯತ್ನ ಸಫಲವಾಗಿಲ್ಲ. ಹಾಗಾಗಿ 40 ವರ್ಷಗಳಿಂದ ಠಾಣೆಯೇ ಮನೆಯಾಗಿದೆ.

    ಮೂಗಿ, ಕಿವುಡಿಯಾದರೂ ಹೊನ್ನಮ್ಮನದು ಚುರುಕಿನ ವ್ಯಕ್ತಿತ್ವ. ಠಾಣೆಯನ್ನು ಶುಚಿಗೊಳಿಸುವ, ಪೊಲೀಸರಿಗೆ ಸಹಾಯ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಮಾನವೀಯ ನೆಲೆಯಲ್ಲಿ ಉಳಿದುಕೊಳ್ಳಲು ಠಾಣೆಯ ಹಿಂಭಾಗದಲ್ಲಿ ಪ್ರತ್ಯೇಕ ಕೊಠಡಿ ನೀಡಲಾಗಿದೆ. ಅಲ್ಲಿಯೇ ಅಡುಗೆ ತಯಾರಿಸಿ, ಕೆಲವೊಮ್ಮೆ ಹೊಟೇಲ್​ಗೆ ಹೋಗಿ ಊಟ ಮಾಡುವುದನ್ನು ರೂಢಿಸಿಕೊಂಡಿದ್ದಾರೆ.

    ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ, ಗೃಹಪ್ರವೇಶ, ಮದುವೆ, ಇಲಾಖೆಯ ಕ್ರೀಡೋತ್ಸವ ಸೇರಿ ಯಾವುದೇ ಕಾರ್ಯಕ್ರಮವಿದ್ದರೂ ಹೊನ್ನಮ್ಮನಿಗೆ ಗೊತ್ತಾಗುತ್ತದೆ. ಮಧ್ಯಾಹ್ನ ಸಿಬ್ಬಂದಿ ಕಾರ್ಯಕ್ರಮಕ್ಕೆ ಹೊರಡುವಾಗ ಹೊನ್ನಮ್ಮ ಕೂಡಾ ಹೊಸ ಸೀರೆ ಉಟ್ಟು ಸಿದ್ಧರಾಗುತ್ತಾರೆ. ಮನೆ ಅಥವಾ ಸಭಾಂಗಣಗಳಲ್ಲಿ ತಮ್ಮ ಯಾವುದೇ ಕಾರ್ಯಕ್ರಮ ಇದ್ದರೂ ಪೊಲೀಸರು ಹೊನ್ನಮ್ಮರನ್ನು ಬಿಟ್ಟು ಹೋಗುವುದಿಲ್ಲ. ಬಿಟ್ಟು ಹೋದರೆ ಅವರು ತನ್ನ ಮೂಕ ಭಾಷೆಯಲ್ಲಿ ಪ್ರಶ್ನೆ ಮಾಡುತ್ತಾರೆ ಎಂದು ಠಾಣೆಯ ಇನ್​ಸ್ಟೆಕ್ಟರ್ ಗೋವಿಂದರಾಜು ತಿಳಿಸಿದ್ದಾರೆ.

    ಆಧಾರ್ ಕಾರ್ಡ್​ನಲ್ಲಿ ಸ್ಟೇಷನ್ ವಿಳಾಸ: ಹೊನ್ನಮ್ಮ ಬ್ಯಾಂಕ್ ಖಾತೆ, ಮತದಾರ ಚೀಟಿ, ಆಧಾರ್ ಕಾರ್ಡ್ ಹೊಂದಿದ್ದಾರೆ. ಪೊಲೀಸರೇ ಅವರನ್ನು ಕರೆದೊಯ್ದು ಅಗತ್ಯ ದಾಖಲೆ ಮಾಡಿಸಿಕೊಟ್ಟಿದ್ದಾರೆ. ಎಲ್ಲ ದಾಖಲೆಗಳಲ್ಲಿ ಬಂದರು ಪೊಲೀಸ್ ಠಾಣೆಯದ್ದೇ ಕಾಯಂ ವಿಳಾಸ ದಾಖಲಾಗಿದೆ. ವಿಶೇಷ ಸಂದರ್ಭಗಳಲ್ಲಿ ಪೊಲೀಸರು ಆಕೆಗೆ ಹಣ ನೀಡುತ್ತಾರೆ. ಠಾಣೆಯಲ್ಲಿ ಕೆಲಸ ಮಾಡಿದ್ದಕ್ಕೂ ವೇತನ ನೀಡುತ್ತಿದ್ದರು. ದುಂದು ವೆಚ್ಚ ಮಾಡದೆ ಎಲ್ಲವನ್ನೂ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಮತದಾನ ದಿನದಂದು ಉತ್ಸಾಹದಿಂದ ಬೆಳಗ್ಗೆಯೇ ತಮ್ಮ ಹಕ್ಕನ್ನು ಚಲಾಯಿಸಿ ಬರುತ್ತಾರೆ. ಈ ಮೂಲಕ ಮತ ಚಲಾಯಿಸದ ವಿದ್ಯಾವಂತರಿಗೆ ಮಾದರಿಯಾಗಿದ್ದಾರೆ. ಸರ್ಕಾರದಿಂದ ವೃದ್ಧಾಪ್ಯ ವೇತನ ಸೇರಿದಂತೆ ಹಿರಿಯ ನಾಗರಿಕರಿಗೆ ಸಿಗುವ ಸೌಲಭ್ಯಗಳನ್ನು ದೊರಕಿಸಿ ಕೊಡುವಲ್ಲಿ ಪೊಲೀಸರು ಪ್ರಯತ್ನ ಮುಂದುವರಿಸಿದ್ದಾರೆ.

    Web Exclusive | 4 ದಶಕದಿಂದ ಈಕೆಗೆ ಠಾಣೆಯೇ ಮನೆ!; ಪೊಲೀಸರೇ ಬಂಧುಗಳು, ಆಧಾರ್ ಕಾರ್ಡಲ್ಲಿ ಠಾಣೆಯೇ ವಿಳಾಸ!
    ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆದಿರುವ ಹೊನ್ನಮ್ಮ.

    ಕರೊನಾ ಗೆದ್ದರು!: ಹೊನ್ನಮ್ಮ ಕೆಲ ತಿಂಗಳ ಹಿಂದೆ ಕರೊನಾ ಸೋಂಕಿಗೆ ಒಳಗಾಗಿದ್ದರು. ಇಲ್ಲಿನ ಪೊಲೀಸರು ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆ ಬಳಿಕ ಅವರಿಗೆ ಸಕಾಲದಲ್ಲಿ ಆಹಾರ, ಔಷಧ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇಲ್ಲಿನ ಮಹಿಳಾ ಪೊಲೀಸರು ಮುತುವರ್ಜಿ ವಹಿಸಿ ಆಕೆಗೆ ಸ್ನಾನ ಮಾಡಲು ಬಿಸಿ ನೀರು ಮಾಡಿಕೊಟ್ಟಿದ್ದಾರೆ. ಕೆಲವೇ ದಿನಗಳಲ್ಲಿ ಹೊನ್ನಮ್ಮ ಕರೊನಾ ಗೆದ್ದು ಬಂದು ಠಾಣೆಯಲ್ಲಿ ಸಕ್ರಿಯರಾಗಿದ್ದಾರೆ ಎನ್ನುತ್ತಾರೆ ಪೊಲೀಸರು.

    ಕಮಿಷನರ್ ಜತೆಗೆ ಡ್ಯಾನ್ಸ್: ಮಂಗಳೂರು ನಗರ ಪೊಲೀಸರ ಕ್ರೀಡೋತ್ಸವ ಸಂದರ್ಭ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಯುಕ್ತ ಎನ್.ಶಶಿಕುಮಾರ್ ಹಾಡಿದಾಗ ಹೊನ್ನಮ್ಮ ಕೆಳಗೆ ಡ್ಯಾನ್ಸ್ ಮಾಡುತ್ತಿದ್ದರು. ಇದನ್ನು ನೋಡಿದ ಆಯುಕ್ತರು ವೇದಿಕೆಗೆ ಆಹ್ವಾನಿಸಿ ಅವರೊಂದಿಗೆ ಹೆಜ್ಜೆ ಹಾಕಿದ್ದರು.

    ಹೊನ್ನಮ್ಮ ತಮಿಳುನಾಡಿನ ಅನಾಥ ಬಾಲಕಿಯಾಗಿದ್ದರು. ನಾನು ಕರ್ತವ್ಯದಲ್ಲಿದ್ದಾಗ ಚುರುಕಿನಿಂದ ಕೆಲಸ ಮಾಡುತ್ತಿದ್ದುದನ್ನು ಕಂಡು ಠಾಣೆಯಲ್ಲಿ ಕೆಲಸ ನೀಡಲಾಗಿತ್ತು. ಈಗಲೂ ಮಾನವೀಯ ನೆಲೆಯಲ್ಲಿ ಅಲ್ಲಿಯೇ ಇರಲು ಆಕೆಗೆ ಅವಕಾಶ ನೀಡಲಾಗಿದೆ. ಪೊಲೀಸರಿಂದ ಆಕೆಗೆ ದೊರಕಿದ್ದು ದೊಡ್ಡಮಟ್ಟದ ಆಶ್ರಯ.

    | ಜಯಂತ ಶೆಟ್ಟಿ ನಿವೃತ್ತ ಡಿವೈಎಸ್​​ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts