More

    Web Exclusive | ರಾಜ್ಯದ 5 ಲ್ಯಾಬ್​ಗೆ ಡೆಡ್​ಲೈನ್; ಆಹಾರ ಪರೀಕ್ಷಾ ಪ್ರಯೋಗಾಲಯ ಸ್ಥಗಿತಕ್ಕೆ ಎಫ್​ಎಸ್​ಎಸ್​ಎ ನಿರ್ದೇಶನ

    | ವಿಜಯವಾಣಿ ವಿಶೇಷ ಕಲಬುರಗಿ

    ರಾಜ್ಯದ ಐದು ಸೇರಿ ದೇಶದ 36 ಆಹಾರ ಪರೀಕ್ಷಾ ಪ್ರಯೋಗಾಲಯ (ಫುಡ್ ಟೆಸ್ಟಿಂಗ್ ಲ್ಯಾಬ್) ಚಟುವಟಿಕೆ ಸ್ಥಗಿತಗೊಳಿಸಲು ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿರ್ದೇಶನ ನೀಡಿದ್ದು, 31ರೊಳಗೆ ಪ್ರಯೋಗಾಲಯದಲ್ಲಿ ಬಾಕಿ ಇರುವ ಚಟುವಟಿಕೆ ಪೂರ್ಣಗೊಳಿಸಲು ಸೂಚಿಸಿದೆ.

    ಬೆಂಗಳೂರಿನ ಸ್ಟೇಟ್ ಫುಡ್ ಲ್ಯಾಬೊರೇಟರಿ ಪಬ್ಲಿಕ್ ಹೆಲ್ತ್ ಇನ್​ಸ್ಟಿಟ್ಯೂಟ್, ಮೈಸೂರು, ಬೆಂಗಳೂರು ಮತ್ತು ಕಲಬುರಗಿ ವಿಭಾಗೀಯ ಲ್ಯಾಬ್ ಹಾಗೂ ಬೆಂಗಳೂರು ಬಿಬಿಎಂಪಿ ಲ್ಯಾಬ್​ಗಳಿಗೆ 31ರೊಳಗೆ ಬಾಕಿ ಕೆಲಸ ಪೂರ್ಣಗೊಳಿಸಿ ಜನವರಿ 1ರಿಂದ ಫುಡ್ ಟೆಸ್ಟಿಂಗ್​ಗೆ ಸಂಬಂಧಿಸಿದ ಯಾವುದೇ ಚಟುವಟಿಕೆ ಕೈಗೊಳ್ಳದಂತೆ ತಾಕೀತು ಮಾಡಿದೆ.

    31 ಡೆಡ್​ಲೈನ್: ಕೇಂದ್ರ ಎಫ್​ಎಸ್​ಎಸ್​ಎ ಡಿ.7ರಂದು ಆದೇಶ ಹೊರಡಿಸಿ ಎನ್​ಎಬಿಎಲ್ ಅಕ್ರಿಡೇಶನ್ ಪಡೆಯಲು ಸೂಚಿಸಿದೆ. ಫುಡ್ ಲ್ಯಾಬ್​ಗೆ ಎಫ್​ಎಸ್​ಎಸ್ ಕಾಯ್ದೆ 2006 ಅಡಿ ಅಕ್ರಿಡೇಶನ್ ಕಡ್ಡಾಯ. ಆದರೆ ರಾಜ್ಯದ ಐದು ಲ್ಯಾಬ್​ಗಳಿಂದ 10 ವರ್ಷಗಳಿಂದ ಅಕ್ರಿಡೇಶನ್ ಪಡೆದುಕೊಳ್ಳುವ ಪ್ರಯತ್ನ ನಡೆದಿಲ್ಲ. ಈ ಕುರಿತು ಅನೇಕ ಬಾರಿ ಜ್ಞಾಪನಾ ಪತ್ರ ಕಳುಹಿಸಿದರೂ ಸ್ಪಂದಿಸಿಲ್ಲ. ಹೀಗಾಗಿ ಎಫ್​ಎಸ್​ಎಸ್ ಕಾಯ್ದೆ 2006, 98 ವಿಧಿ ಅಡಿ ಡಿ.31ರಿಂದ ಡಿಸ್ಕಂಟಿನ್ಯೂ ಮಾಡಲು ತೀರ್ವನಿಸಿದೆ.

    ಕಲಬುರಗಿ ವಿಭಾಗೀಯ ಲ್ಯಾಬ್ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಲ್ಯಾಬ್ ಯಂತ್ರೋಪಕರಣಗಳನ್ನು ಬೆಳಗಾವಿ ಲ್ಯಾಬ್​ಗೆ ಸ್ಥಳಾಂತರಿಸಲು ಬೆಂಗಳೂರಿನ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸೂಚಿಸಿದೆ. ಕಲಬುರಗಿ ಡಿಎಚ್​ಒ ಕಚೇರಿ ಆವರಣದಲ್ಲಿ ಈ ಲ್ಯಾಬ್ ಕಾರ್ಯನಿರ್ವಹಿಸುತ್ತಿತ್ತು. ಆದರೆ ಈ ಸ್ಥಳವನ್ನು ಜಯದೇವ ಆಸ್ಪತ್ರೆ ಕಟ್ಟಡ ನಿರ್ವಣಕ್ಕೆ ಹಸ್ತಾಂತರ ಮಾಡಲಾಗಿದೆ. ಹೀಗಾಗಿ ಸ್ಥಳಾವಕಾಶ ಲಭ್ಯವಿದ್ದ ಬೆಳಗಾವಿ ಲ್ಯಾಬ್​ಗೆ ಯಂತ್ರೋಪಕರಣ ಸ್ಥಳಾಂತರಿಸಬೇಕು ಎಂದು ಸೂಚಿಸಿದೆ.

    ಖಾಸಗಿ ಸ್ಯಾಂಪಲ್ಸ್ ಟೆಸ್ಟ್: ಕಲಬುರಗಿ ಲ್ಯಾಬ್​ನಲ್ಲಿ ತಿಂಗಳಿಗೆ 500ಕ್ಕೂ ಹೆಚ್ಚು ಸ್ಯಾಂಪಲ್ಸ್ ಟೆಸ್ಟ್ ಮಾಡಲಾಗುತ್ತಿತ್ತು. ಜತೆಗೆ ಖಾಸಗಿ ವಲಯದಿಂದ ಬರುವ ಸ್ಯಾಂಪಲ್ಸ್​ಗಳನ್ನೂ ಟೆಸ್ಟ್ ಮಾಡುವ ಮೂಲಕ ನಿಗದಿತ ಶುಲ್ಕ ಪಡೆಯಲಾಗುತ್ತಿತ್ತು. ಈ ಮೂಲಕ ತಿಂಗಳಿಗೆ 7-8 ಲಕ್ಷ ರೂ. ಇಲಾಖೆಗೆ ಆದಾಯವೂ ಬರುತ್ತಿತ್ತು.

    ಲ್ಯಾಬ್ ಡಿನೋಟಿಫೈ: ಡಿನೋಟಿಫೈ ಆಗಿರುವ ಲ್ಯಾಬ್ ಮರಳಿ ನೋಟಿಫೈ ಮಾಡಿಕೊಳ್ಳಲು ಕನಿಷ್ಠ ಒಂದು ವರ್ಷ ಕಾಲಾವಕಾಶ ಬೇಕು. ಹೀಗಾಗಿ ಇಲ್ಲಿನ ಲ್ಯಾಬ್ ಬೆಳಗಾವಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ ಎಂದು ರಾಜ್ಯದ ಫುಡ್ ಸೇಫ್ಟಿ ಆಂಡ್ ಕ್ವಾಲಿಟಿ ಕಂಟ್ರೋಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಬೆಳಗಾವಿಗೆ ಸ್ಥಳಾಂತರಿಸುವ ಬದಲಿಗೆ ಕಲಬುರಗಿಯಲ್ಲಿ ಬೇರೆ ಕಟ್ಟಡ ಗುರುತಿಸಿ ಅಲ್ಲಿ ಲ್ಯಾಬ್ ಶುರು ಮಾಡಬಹುದಾಗಿದೆ. ಇದನ್ನು ಸ್ಥಳಾಂತರಿಸುವ ಅಗತ್ಯ ಇರಲಿಲ್ಲ ಎಂಬುದು ಸಾರ್ವತ್ರಿಕ ಅಭಿಪ್ರಾಯ.

    ಯಾಕೆ ಹೀಗೆ?

    ಅವಧಿ ಪೂರ್ಣಗೊಳ್ಳುವ ಮುನ್ನ ಹತ್ತಾರು ಬಾರಿ ಜ್ಞಾಪನಾ ಪತ್ರದ ಮೂಲಕ ಅಕ್ರಿಡೇಶನ್ ಮಾಡಿಕೊಳ್ಳಬೇಕೆಂಬ ಸೂಚನೆ ಬಂದರೂ ರಾಜ್ಯ ಸರ್ಕಾರ ಯಾಕೆ ಹಿಂದೇಟು ಹಾಕಿದೆ? ರಾಜ್ಯದ ಐದು ಲ್ಯಾಬ್​ಗಳ ಕಾರ್ಯಚಟುವಟಿಕೆ ಕೆಲವೇ ದಿನಗಳಲ್ಲಿ ಸ್ಥಗಿತಗೊಳ್ಳಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆಹಾರ ಟೆಸ್ಟಿಂಗ್ ಎಲ್ಲಿ ಮಾಡುವುದು ಎಂಬ ಪ್ರಶ್ನೆ ಉದ್ಭವಿಸಿದೆ.

    Web Exclusive | ರಾಜ್ಯದ 5 ಲ್ಯಾಬ್​ಗೆ ಡೆಡ್​ಲೈನ್; ಆಹಾರ ಪರೀಕ್ಷಾ ಪ್ರಯೋಗಾಲಯ ಸ್ಥಗಿತಕ್ಕೆ ಎಫ್​ಎಸ್​ಎಸ್​ಎ ನಿರ್ದೇಶನಫುಡ್​ಲ್ಯಾಬ್ ಸಮಸ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ವಿಶೇಷವಾಗಿ ಕಲಬುರಗಿ ಲ್ಯಾಬ್ ಯಾವುದೇ ಕಾರಣಕ್ಕೂ ಬೆಳಗಾವಿಗೆ ಸ್ಥಳಾಂತರಿಸುವುದು ಬೇಡ ಎಂದು ಮನವಿ ಮಾಡಲಾಗಿದ್ದು, ಕಲಬುರಗಿಯಲ್ಲೇ ಬೇರೆಡೆ ಕಟ್ಟಡ ಗುರುತಿಸಿ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಉಳಿಸಿಕೊಳ್ಳಲು ಸಿಎಂಗೆ ಮನವರಿಕೆ ಮಾಡಿಕೊಡಲಾಗುವುದು.

    | ಸುನೀಲ್ ವಲ್ಲ್ಯಾಪುರೆ ವಿಧಾನ ಪರಿಷತ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts