More

    Web Exclusive | ಬಹಮನಿ ಕೋಟೆಯೊಳಗೊಂದು ಭವ್ಯ ದೇಗುಲ; ಪುರಾತತ್ವ, ಪ್ರವಾಸೋದ್ಯಮ ಇಲಾಖೆ ದಿವ್ಯ ನಿರ್ಲಕ್ಷ್ಯ

    | ರಮೇಶ ಮೇಳಕುಂದಾ/ಕೃಷ್ಣ ಕುಲಕರ್ಣಿ ಕಲಬುರಗಿ

    ಅನೇಕ ಐತಿಹಾಸಿಕ ಕುರುಹುಗಳನ್ನು ತನ್ನ ಮಡಿಲಲ್ಲಿ ಹುದುಗಿಸಿ ಇಟ್ಟುಕೊಂಡಿರುವ ಬಹಮನಿ ಕೋಟೆಯೊಳಗೊಂದು ಭವ್ಯ ದೇಗುಲ ಇದೆ ಎಂಬುದೇ ಬಹುತೇಕರಿಗೆ ಗೊತ್ತಿಲ್ಲ. ಹೌದು.. ನಗರದ ಹೃದಯ ಭಾಗದಲ್ಲಿರುವ ಕೋಟೆಯೊಳಗೆ ಇರುವ ಅದ್ಭುತ ಕುಸುರಿ ಕಲೆಯ ಐತಿಹಾಸಿಕ ದೇಗುಲ ಕೇಳುಗರಿಲ್ಲದೆ ಅವಸಾನದ ಅಂಚಿಗೆ ತಲುಪಿದ್ದು, ಸೂಕ್ತ ರಕ್ಷಣೆ ಇಲ್ಲದೆ ಅನಾಥಪ್ರಜ್ಞೆ ಎದುರಿಸುತ್ತಿದೆ.

    ಕರ್ನಾಟಕಕ್ಕೆ ಪುರಾತನ ಶಿಲ್ಪಕಲೆಗಳ ತವರು ಎಂಬ ಖ್ಯಾತಿ ಇದೆ. ಕಲಬುರಗಿ ಜಿಲ್ಲೆಯಲ್ಲೂ ಮಳಖೇಡ, ನಾಗಾವಿ, ಚಿನ್ನಮಳ್ಳಿ, ಕಾಳಗಿ ಸೇರಿ ವಿವಿಧೆಡೆ ವಿಶಿಷ್ಟ, ಅತ್ಯಾಕರ್ಷಕ ಶಿಲ್ಪಕಲೆಗಳ ದೇಗುಲ, ಮಂದಿರಗಳಿವೆ. ಆದರೆ ಕಲಬುರಗಿ ಕೇಂದ್ರ ಸ್ಥಾನದಲ್ಲಿರುವ ಕೋಟೆಯೊಳಗಿನ ಈ ದೇಗುಲ ಯಾರ ಕಣ್ಣಿಗೂ ಕಾಣದಂತೆ ಮುಳ್ಳು-ಕಂಟಿಗಳ ಮಧ್ಯೆ ಮುಚ್ಚಿ ಹೋಗಿದೆ.

    ಕೋಟೆಯಲ್ಲಿರುವ ದೇಶದ ಅತಿ ದೊಡ್ಡದಾದ ಜಾಮಿಯಾ ಮಸೀದಿ, ಬಾರಾಗಾಜಿ ತೋಪು, ವೀಕ್ಷಣಾ ಗೋಪುರಗಳು, ಮದ್ದುಗುಂಡು ಸಂಗ್ರಹ ಕೋಣೆ, ಬೃಹತ್ ಗುಂಬಜ್​ಗಳು ಸೇರಿ ಹಲವು ಕಟ್ಟಡಗಳ ಸಂರಕ್ಷಣೆ ತಕ್ಕ ಮಟ್ಟಿಗೆ ಆಗಿದೆ. ರಾಷ್ಟ್ರೀಯ ಸ್ಮಾರಕ ಎಂದು ಪುರಾತತ್ವ ಇಲಾಖೆ ಬೋರ್ಡ್​ಗಳನ್ನು ಸಹ ಹಾಕಿದೆ. ಆದರೆ ಈ ಮಾನದಂಡ ದೇಗುಲಕ್ಕೇಕೆ ಅನುಸರಿಸಿಲ್ಲ ಎಂಬುದಕ್ಕೆ ಆಡಳಿತವೇ ಉತ್ತರಿಸಬೇಕಿದೆ.

    ಇನ್ನು ಈ ದೇಗುಲಕ್ಕೆ ತಲುಪಲು ಹರಸಾಹಸ ಮತ್ತು ಭಯ ಪಡುವಂತಹ ಸ್ಥಿತಿ ಇದೆ. ಸುಮಾರು ಒಂದು ಕಿಮೀ ಮುಳ್ಳು-ಕಂಟಿ ಮಧ್ಯೆ ಹೆಜ್ಜೆ ಹಾಕಿದರೆ ದೇಗುಲದ ಸಭಾ ಮಂಟಪ ಕಾಣುತ್ತದೆ. ತತ್​ಕ್ಷಣ ಸೂಕ್ತ ಮಾರ್ಗ ಮಾಡಿ ಕಣ್ಮರೆಯಾಗಿರುವ ಶಿಲೆಗಳನ್ನು ಹೊರತೆಗೆದು ಮರು ನಿರ್ವಣದ ಮೂಲಕ ಮುಂದಿನ ಪೀಳಿಗೆಗೆ ಐತಿಹ್ಯ ತಿಳಿಸಿಕೊಡುವ ಕೆಲಸ ಆಗಬೇಕಾಗಿದೆ.

    Web Exclusive | ಬಹಮನಿ ಕೋಟೆಯೊಳಗೊಂದು ಭವ್ಯ ದೇಗುಲ; ಪುರಾತತ್ವ, ಪ್ರವಾಸೋದ್ಯಮ ಇಲಾಖೆ ದಿವ್ಯ ನಿರ್ಲಕ್ಷ್ಯ
    ಕಲಬುರಗಿ ಕೋಟೆಯಲ್ಲಿ ಮುಳ್ಳು-ಕಂಟಿಗಳ ಮಧ್ಯೆ ಮುಚ್ಚಿಕೊಂಡಿರುವ ಐತಿಹಾಸಿಕ ದೇಗುಲ.

    ಕಣ್ಮನ ಸೆಳೆಯುವ ಕೆತ್ತನೆಗಳು: ಕೋಟೆ ಆವರಣದಲ್ಲಿರುವ ಈ ದೇವಾಲಯ ಸಾಕಷ್ಟು ಇತಿಹಾಸವನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ. ಇದೊಂದು ಪುರಾತನ ಹಿಂದು ದೇಗುಲವಿದ್ದು, ವಿವಿಧ ದೇವರ ಕೆತ್ತನೆಯನ್ನು ಕಾಣಬಹುದಾಗಿದೆ. ಕಂಬಗಳ ಮೇಲಿನ ಸುಂದರ ಕೆತ್ತನೆ ಕಣ್ಮನ ಸೆಳೆಯುತ್ತದೆ. ಇನ್ನು ದೇವತೆಗಳು ಬಳಸುತ್ತಿದ್ದ ವಾಹನಗಳನ್ನು ಸಹ ಕಂಬಗಳ ಮೇಲೆ ಕೆತ್ತಿದ್ದು ವಿಶೇಷ. ಒಂದಿಷ್ಟು ಕಂಬಗಳು ಉರುಳಿದ್ದು, ಗಿಡ-ಗಂಟಿಗಳ ಮಧ್ಯೆ ಕಣ್ಮರೆಯಾಗಿವೆ. ದೇಗುಲದ ಪಳೆಯುಳಿಕೆಗಳು ಸದ್ಯ ಕಂಡು ಬರುತ್ತಿದ್ದು, ಒಂದಿಷ್ಟು ಸ್ವಚ್ಛತಾ ಕಾರ್ಯ ಮತ್ತು ಉತ್ಖನನ ನಡೆದರೆ ಸಂಪೂರ್ಣ ದೇವಾಲಯದ ಚಿತ್ರಣ ಹೊರಬರಲಿದೆ. ಪ್ರಸ್ತುತ ಸಭಾ ಮಂಟಪ, ದೇವಾಲಯ ಪ್ರವೇಶ ದ್ವಾರಗಳು ಕಾಣಿಸುತ್ತಿದ್ದು, ಸರ್ಕಾರದಿಂದ ಸಮರ್ಪಕ ಉತ್ಖನನ ನಡೆದರೆ ಸಾಕಷ್ಟು ಇತಿಹಾಸ ಜಗತ್ತಿಗೆ ತಿಳಿಸಿಕೊಟ್ಟಂತಾಗಲಿದೆ.

    ಕಲಬುರಗಿ ಗೆಜೆಟಿಯರ್​ನಲ್ಲೂ ಉಲ್ಲೇಖ: ಕಲಬುರಗಿ ಕೋಟೆಯ ಆಗ್ನೇಯ ದಿಕ್ಕಿನಲ್ಲಿರುವ ಹಿಂದು ದೇವಾಲಯ ಸ್ವಯಂಭೂ ಸೋಮನಾಥ ದೇವಸ್ಥಾನ ಆಗಿರಬಹುದು ಎಂದು ಜಿಲ್ಲೆಯ ಸಮಗ್ರ ಇತಿಹಾಸ ಸಾರುವ ‘ಕಲಬುರಗಿ ಗೆಜೆಟಿಯರ್’ನಲ್ಲಿ ಉಲ್ಲೇಖಿಸಲಾಗಿದೆ. 3 ಕಿಮೀ ದೂರದ ನಾಗನಹಳ್ಳಿಯ ನಾಗಲಿಂಗೇಶ್ವರ ದೇವಾಲಯ ಎದುರಿನ 14ನೇ ಶತಮಾನದ ತ್ರುಟಿತ ಶಾಸನದಲ್ಲಿ ಕಲಂಬರಿಗೆಯ ಸ್ವಯಂಭೂ ಸೋಮನಾಥ ದೇವಾಲಯ ಇರುವ ಉಲ್ಲೇಖವಿದೆ. ಈ ಶಾಸನದಲ್ಲಿ ಹೇಳಿರುವ ಸೋಮನಾಥ ದೇಗುಲವೇ ಕೋಟೆಯ ಆಗ್ನೇಯ ದಿಕ್ಕಿನಲ್ಲಿರುವ ದೇವಾಲಯ ಆಗಿರಬಹುದು ಎನ್ನಲಾಗುತ್ತಿದೆ. ಇದೀಗ ದೇಗುಲ ಸಂಪೂರ್ಣ ಹಾಳಾಗಿದ್ದು, 24 ಕಂಬಗಳ ಚಿತ್ತಾಕರ್ಷಕ ಕೆತ್ತನೆ ಛಾವಣಿ ಹೊಂದಿರುವ ವಿಶಾಲ ಸಭಾ ಮಂಟಪವಷ್ಟೇ ಉಳಿದಿದೆ. ಇದೊಂದು ತ್ರಿಕೂಟ ದೇವಾಲಯ ಎಂದು ಊಹಿಸಲಾಗುತ್ತಿದೆ.

    Web Exclusive | ಬಹಮನಿ ಕೋಟೆಯೊಳಗೊಂದು ಭವ್ಯ ದೇಗುಲ; ಪುರಾತತ್ವ, ಪ್ರವಾಸೋದ್ಯಮ ಇಲಾಖೆ ದಿವ್ಯ ನಿರ್ಲಕ್ಷ್ಯ
    ಕಲಬುರಗಿ ಕೋಟೆಯಲ್ಲಿ ಮುಳ್ಳು-ಕಂಟಿಗಳ ಮಧ್ಯೆ ಮುಚ್ಚಿಕೊಂಡಿರುವ ಐತಿಹಾಸಿಕ ದೇಗುಲ.

    ದೇಗುಲದ ಮುಂದಿದೆ ನೀರಿನ ಝುರಿ: ಕೋಟೆಯಲ್ಲಿರುವ ಹಿಂದು ದೇವಾಲಯದ ಮುಂಭಾಗದಲ್ಲಿ ನೀರಿನ ಹೊಂಡವೊಂದು ಕಾಣಿಸಿದ್ದು, ಇದು ಪುಷ್ಕರಣಿಯಾಗಿತ್ತೇ ಎಂಬ ಅನುಮಾನಗಳು ಬರುತ್ತಿವೆ. ಬಹುತೇಕ ಹಿಂದು ದೇಗುಲಗಳ ಮುಂದೆ ಬಾವಿ ಅಥವಾ ಪುಷ್ಕರಣಿ ಇರುವುದು ಸಾಮಾನ್ಯ. ಇದೇ ರೀತಿಯಲ್ಲಿ ಕೋಟೆಯಲ್ಲಿರುವ ಪುರಾತನ ದೇಗುಲದ ಮುಂದೆಯೂ ನೀರಿನ ಹೊಂಡ ನಿರ್ವಿುಸಲಾಗಿತ್ತು. ಹಾಳು ಬಿದ್ದಿದ್ದರಿಂದ ಮುಳ್ಳಿನ ಕಂಟಿಯಲ್ಲಿ ಮುಚ್ಚಿ ಹೋಗಿದೆ. ಸಮರ್ಪಕ ಸ್ವಚ್ಛತಾ ಕಾರ್ಯ ನಡೆಯಬೇಕಿದೆ.

    ಪುರಾತತ್ವ ಇಲಾಖೆಗೆ ಮಾಹಿತಿಯೇ ಇಲ್ಲ: ಐತಿಹಾಸಿಕ ಸ್ಮಾರಕಗಳ ರಕ್ಷಣೆ ಹೊಣೆ ಹೊತ್ತಿರುವ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಈ ದೇಗುಲದ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದಿರುವುದು ವಿಚಿತ್ರ. ಕಲಬುರಗಿ ಕೋಟೆಯಲ್ಲಿನ ದೇಗುಲ ಬಗ್ಗೆ ಮಾಹಿತಿ ಪಡೆಯಲು ಪುರಾತತ್ವ ಇಲಾಖೆ ಅಧಿಕಾರಿಗಳನ್ನು ಕೇಳಿದರೂ ಸಮರ್ಪಕ ಉತ್ತರ ಸಿಗಲಿಲ್ಲ. ಇನ್ನು ಇಲಾಖೆ ವೆಬ್​ಸೈಟ್​ನಲ್ಲಿ ಜಾಮೀಯಾ ಮಸೀದಿ ಹಾಗೂ ತೋಪುಗಳು ಬಿಟ್ಟರೆ ಇನ್ನುಳಿದ ಯಾವುದೇ ಮಾಹಿತಿಯಿಲ್ಲ. ಪುರಾತತ್ವ ಇಲಾಖೆ ವಿಭಾಗೀಯ ಕಚೇರಿ ಧಾರವಾಡದಲ್ಲಿದ್ದು, ಜಿಲ್ಲೆಯ ಸ್ಮಾರಕಗಳನ್ನು ನೋಡಿಕೊಳ್ಳುವವರೇ ಇಲ್ಲದಂತಾಗಿದೆ.

    Web Exclusive | ಬಹಮನಿ ಕೋಟೆಯೊಳಗೊಂದು ಭವ್ಯ ದೇಗುಲ; ಪುರಾತತ್ವ, ಪ್ರವಾಸೋದ್ಯಮ ಇಲಾಖೆ ದಿವ್ಯ ನಿರ್ಲಕ್ಷ್ಯ
    ದೇವಸ್ಥಾನದ ಕಂಬದ ಮೇಲೆ ಹಿಂದು ದೇವರು ಹಾಗೂ ವಿವಿಧ ಪ್ರಾಣಿಗಳ ಕೆತ್ತನೆ ಮಾಡಿರುವುದು.

    ನಮ್ಮ ಪುರಾತನ ಶಿಲ್ಪಕಲೆ, ವೈಭವ ಮರುಕಳಿಸುವಂತೆ ಮಾಡಬೇಕು. ಅಮೋಘ ಶಿಲಾ ವೈಭವ ಹೊಂದಿರುವ ದೇಗುಲ ಆಡಳಿತದ ನಿರ್ಲಕ್ಷ್ಯಂದ ಪಾಳು ಬಿದ್ದಿದೆ. ಕೆಲವರು ಅಲ್ಲಿನ ಮೂರ್ತಿ, ಶಿಲೆಗಳನ್ನು ವಿರೂಪಗೊಳಿಸಿದ್ದಾರೆ. ಕೂಡಲೇ ಅವುಗಳ ರಕ್ಷಣೆ ಮಾಡಬೇಕು. ಸ್ವಚ್ಛತೆ ಮಾಡಿ ಪುರಾತತ್ವ ಇಲಾಖೆಯಿಂದ ಮಾಹಿತಿ, ಸೂಚನೆ ನೀಡುವಂಥ ಫಲಕ ಅಳವಡಿಸಬೇಕು.

    | ಮಾಲಾಶ್ರೀ ದಣ್ಣೂರ ಸಾಮಾಜಿಕ ಕಾರ್ಯಕರ್ತೆ

    ಕಲಬುರಗಿ ಕೋಟೆ ಪ್ರದೇಶದಲ್ಲಿ ಒಂದು ಜೈನ ಮಂದಿರ ಹಾಗೂ ದೇವಾಲಯವಿತ್ತು. ಆದರೆ ನಿಜಾಮರ ಆಳ್ವಿಕೆಯಲ್ಲಿ ನಾಶ ಮಾಡಲಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಂದಾಗಿ ನಮ್ಮ ಇತಿಹಾಸ ಕಣ್ಮರೆಯಾಗುತ್ತಿದೆ. ಸೂಕ್ತ ಉತ್ಖನನ ನಡೆಸುವುದರ ಜತೆಗೆ ಐತಿಹಾಸಿಕ ಪ್ರದೇಶಗಳ ರಕ್ಷಣೆ ಕಾರ್ಯ ಆಗಬೇಕಿದೆ.

    | ಡಿ.ಎನ್. ಅಕ್ಕಿ ಹಿರಿಯ ಸಂಶೋಧಕ

    ಹಿಂದು ಸಂಸ್ಕೃತಿ ಬಿಂಬಿಸುವ ಐತಿಹಾಸಿಕ ದೇಗುಲ ಸಂರಕ್ಷಿಸುವುದು ಸರ್ಕಾರದ ಕರ್ತವ್ಯ. ಕೋಟೆಯೊಳಗಿನ ದೇಗುಲವನ್ನು ಪ್ರವಾಸಿಗರಿಗೆ ಮುಕ್ತ ಮಾಡಬೇಕು. ಸ್ವಚ್ಛತೆ ಮತ್ತು ಮರು ನಿರ್ವಣದ ಕಾರ್ಯ ಕೈಗೊಳ್ಳಬೇಕು. ಸೂಕ್ತ ಮಾರ್ಗದರ್ಶಿ ಫಲಕಗಳನ್ನು ಅಳವಡಿಸಿ ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು.

    | ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಂದೋಲಾ ಶ್ರೀರಾಮಸೇನೆ ಗೌರವಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts