More

    ಸೇನೆಯಲ್ಲಿ ಸೈನಿಕರೆಂಬ ಆಯುಧ

    ಮಗುವನ್ನು ಕಾಯುವ ಅಮ್ಮನಂತೆ ತಾಯ್ಗಾವಲು ಪಡೆಯ ಕೆಲಸಕ್ಕೆ ಸೇರುವುದೇ ಒಂದು ರೋಚಕ ಅನುಭವ. ಮೊದಲೆಲ್ಲಾ ನಮಗೆ ಸೈನಿಕರೆಂದರೆ ಯಾರೆಂದೇ ತಿಳಿಯುತ್ತಿರಲಿಲ್ಲ. ಆದರೆ ‘ನಾವು ಸೈನಿಕರ ರಕ್ಷಣೆಯಲ್ಲಿದ್ದೇವೆ’ ಎಂಬುದಕ್ಕಿಂತ ‘ನನ್ನದೇ ಸ್ನೇಹಿತನ ರಕ್ಷಣೆಯಲ್ಲಿದ್ದೇವೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕಾಲವಿದು. ಏಕೆಂದರೆ ಅದೆಷ್ಟೋ ಜನ ನಮ್ಮದೇ ಸ್ನೇಹಿತರು, ನಮ್ಮದೇ ಊರಿನವರು ಕಾವಲುದೈವವಾಗುವ ಕೆಲಸಕ್ಕೆ ಸೇರುತ್ತಿದ್ದಾರೆ. ಇಂಥ ದೇಶಸೇವಕರ ದಿನದ ಅಂಗವಾಗಿ ಸೇನೆಯ ಕುರಿತ ಒಳನೋಟ…

    ‘ದೇಶದ ರಕ್ಷಣೆ ನಮೆಲ್ಲರ ಹೊಣೆ’ ಎಂಬ ಮಾತನ್ನು ಎಲ್ಲರೂ ಆಡುತ್ತಾರೆ. ಆದರೆ ಏನೊಂದೂ ಮಾತನಾಡದೆ ಮೌನವಾಗಿ ಉರಿಬಿಸಿಲಲ್ಲಿ, ಮೂಳೆ ಥರಥರಗುಟ್ಟುವ ಸಿಯಾಚಿನ್ ಚಳಿಯಲ್ಲಿ, ಹಿಮಾಲಯದ ಮಂಜು ಸೆಕ್ಟರ್​ಗಳಲ್ಲಿ, ಒಣ ಮರುಭೂಮಿಗಳಲ್ಲಿ, ಸಮುದ್ರದ ನಡು ನೀರಿನಲ್ಲಿ, ಕಾರಡವಿಯ ತಿಮಿರಾಂಧಕಾರದಲ್ಲಿ ಕಾಯುತ್ತಾ ಕೂತು, ಅಲ್ಲೆಲ್ಲೋ ಸಂದಿಯಲ್ಲಿ ಅಲುಗಾಡಿದ ವೈರಿಯ ಚಲನೆಯನ್ನು ಅಂದಾಜಿಸುವುದು, ಅದನ್ನು ಮೆಲ್ಲನೆ ಮೇಲಧಿಕಾರಿಗೆ ವರ್ಗಾಯಿಸುವುದು, ಒಂದು ವೇಳೆ ಪರಿಸ್ಥಿತಿ ವಿಪರೀತಕ್ಕಿಳಿದಿದೆ ಎಂದೆನಿಸಿದರೆ, ರೈಫಲ್ ಮೇಲಿನ ಹಿಡಿತ ಬಿಗಿಗೊಳಿಸಿ, ಕೇವಲ ಒಮ್ಮೆ ಟ್ರಿಗರ್ ದಬಾಯಿಸುವುದು… ಇತ್ತ ಟ್ರಿಗರ್ ಒತ್ತುವ ಶಬ್ದ ಬಂತೆಂದರೆ ಸಾಕು, ಅತ್ತ, ಇಡೀ ವೈರಿ ದೇಶವನ್ನೇ ಅನಾಮತ್ತಾಗಿ ಮಗುಚೆಸೆದುಬಿಡುವಷ್ಟು ಬಲಿಷ್ಠವಾಗಿರುವ ನಮ್ಮ ಭಾರತೀಯ ಸೇನೆ ಆತನ ಬೆನ್ನಿಗೆ ನಿಂತುಬಿಡುತ್ತದೆ…ಇಂಥ ಆಂತರಿಕ, ವಿಶಿಷ್ಟ ಅನುಭವ ಮಿಲಿಟರಿಗೆ ಸೇರಿದ ವ್ಯಕ್ತಿಗೆ ಮಾತ್ರ ಅರಿವಾಗುವಂಥದ್ದು.

    ಭಾರತೀಯ ಸೇನೆ… ಭಾರತದ ಅತ್ಯಂತ ಗೌರವಾನ್ವಿತ ಶ್ರೀಮಂತ ಕುಟುಂಬ ಅದು. ಭಾರತದ ಕುರಿತು ಮುಷ್ಟಿ ಪ್ರೀತಿಯನ್ನು ಎದೆಯಲ್ಲಿಟ್ಟುಕೊಂಡ ಯಾರೇ ಆದರೂ ಆ ಕುಟುಂಬವನ್ನು ಗೌರವಿಸದೇ ಇರಲಾರರು. ಭಾರತದ ರಕ್ಷಣೆಗಾಗಿ ಹಗಲಿರುಳೆನ್ನದೆ ಸಮರ ಸನ್ನದ್ಧವಾಗಿ ನಿಂತಿರುವ ಬೃಹತ್ ಕುಟುಂಬವದು.

    ಪ್ರಸ್ತುತ ಹೊಸದಾಗಿ ಮಿಲಿಟರಿಯೆಡೆಗೆ ದಾಂಗುಡಿ ಇಡುತ್ತಿರುವ ಯಾರನ್ನೂ ಪಾಕಿಸ್ತಾನ- ಚೀನಾ ಬಾರ್ಡರ್​ಗೆ ಕಳುಹಿಸುವ ಸಾಧ್ಯತೆ ಇಲ್ಲ. ಏಕೆಂದು ನೀವು ಹಿಂದೊಮ್ಮೆ ಇದೇ ಪತ್ರಿಕೆಯಲ್ಲಿ ಪ್ರಕಟವಾದ ‘ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್’ ಎಂಬ ಮಾಹಿತಿ ಕುರಿತು ಓದಿರಬಹುದು. ಗಡಿ ಭಾಗದಲ್ಲಿನ ವೈರಿ ಸಮೂಹದಿಂದಾಗುವ ಕಿತಾಪತಿಗಳಿಗೆ ರಣವೇಗದಲ್ಲಿ ಪ್ರತ್ಯುತ್ತರಿಸಲಿಕ್ಕಾಗಿಯೇ ‘ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್’ ಎಂಬ ಖಡ್ಗದ ತುಂಡಿನಂಥ ಸ್ಪೆಷಲ್ ಕಮಾಂಡೋ ಫೋರ್ಸ್ ನ್ನು ಬಳಕೆ ಮಾಡುವ ಹೊಸ ವಿಧಾನದ ಕಡೆಗೆ ಭಾರತೀಯ ಸೇನೆಯು ಯೋಚಿಸಿರುವುದರಿಂದ ಯುವಕರೆಲ್ಲರನ್ನೂ ಪೂರಕ ರಕ್ಷಣಾತ್ಮಕ ಪಡೆಯಾಗಿ ಬಳಕೆ ಮಾಡಲಾಗುತ್ತಿದೆ. ದೇಶದ ಆಂತರಿಕ ರಕ್ಷಣೆಗಾಗಿ ಹೆಚ್ಚಿನ ಸೈನ್ಯ ಜಮಾವಣೆಯಾಗುತ್ತಿದೆ.

    ಇಂಥ ಭಾರತದ ಸೇನೆಯಲ್ಲಿ ಸೇವೆ ಮಾಡಲಿಕ್ಕಾಗಿ ಆಯ್ಕೆಯಾದ ಯುವಕರನ್ನು ಬೆಳಗಿನ ಜಾವ ಐದು ಗಂಟೆಯಿಂದ ಹಿಡಿದು, ರಾತ್ರಿ 10 ಗಂಟೆಯವರೆಗೂ ವ್ಯಾಪಕ ಶ್ರೇಣಿಯ ವಿಚಾರಗಳಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಠಿಣ ತರಬೇತಿ ಕೊಡಲಾಗುತ್ತದೆ. ಅತೀ ಹೆಚ್ಚು ಬೆವರು ಹರಿಸುವ ದೈಹಿಕ ತರಬೇತಿಗಳ ಮೂಲ ಉದ್ದೇಶವು ಬೇಗನೆ ದಣಿವಾಗದಿರಲೆಂದು ಹಾಗೂ ‘ದೈಹಿಕ ತರಬೇತಿಯಲ್ಲಿ ಗರಿಷ್ಠ ಮಟ್ಟದ ಬೆವರು- ಯುದ್ಧಭೂಮಿಯಲ್ಲಿ ಕನಿಷ್ಠ ರಕ್ತಸ್ರಾವ’ ಎಂಬ ಮಾತನ್ನು ಮಿಲಿಟರಿಯ ತರಬೇತಿ ಸಮಯದಲ್ಲಿ ಹೇಳುತ್ತಿರುತ್ತಾರೆ. ಹೌದು. ಇವೆಲ್ಲವೂ ನಿಜ. ಆದರೆ ಸಾಮಾನ್ಯ ಜನರಲ್ಲಿ ಒಂದು ಮೂಢನಂಬಿಕೆ ಇದೆ. ಮಿಲಿಟರಿಗೆ ಸೇರಿದ ಕೂಡಲೇ ಆರು ತಿಂಗಳು ಟ್ರೇನಿಂಗ್ ಕೊಟ್ಟು, ನಂತರ ಕೈಗೊಂದು ದಪ್ಪನೆಯ ಮಷಿನ್ ಗನ್ ಇಟ್ಟು ಪಾಕಿಸ್ತಾನದ ಬಾರ್ಡರಿನಲ್ಲಿ ನಿಲ್ಲಿಸಿಬಿಡುತ್ತಾರೆ ಎಂದು.

    ನೈಜ ವಿಚಾರ ಏನೆಂದರೆ ಸೈನ್ಯ ಸೇರಿದ ಎಲ್ಲರ ಕೈಗೂ ಗನ್ ಕೊಡುವುದಿಲ್ಲ. ಸೈನ್ಯಕ್ಕೆ ಆಯ್ಕೆಯಾದ ವ್ಯಕ್ತಿಯ ವಿದ್ಯಾಭ್ಯಾಸ ಹಾಗೂ ಆತನಲ್ಲಿರುವ ಕೌಶಲದ ಆಧಾರದ ಮೇಲೆ ಆ ನವಸೈನಿಕನಿಗೆ ತಕ್ಕುನಾದ ಜವಾಬ್ದಾರಿ ಹೊರಿಸಲಾಗುತ್ತದೆ.

    ಉದಾಹರಣೆಗೆ, ಗಡಿಯಲ್ಲಿರುವ ಅಥವಾ ಬೇರೆ ಯಾವುದೋ ಜಾಗದ ರಕ್ಷಣೆಗೆ ಸೈನಿಕರು ನುಗ್ಗಬೇಕಾದ ಸಂದರ್ಭದಲ್ಲಿ, ಏಕಾಏಕಿ ನುಗ್ಗಲಾಗದು. ಅದಕ್ಕಾಗಿಯೇ ನೇಮಿತವಾಗಿರುವ ‘ಜಿಯೋಗ್ರಾಫಿಕ್ ಇಂಜನಿಯರ್’ನಿಂದ ನುಗ್ಗಬೇಕಾದ ಸ್ಥಳದ ಉದ್ದಗಲ, ಏರಿಳಿತಗಳ ಕೂಲಂಕಷ ಮಾಹಿತಿ ಪಡೆದೇ ಮುಂದುವರೆಯಬೇಕಾಗಿರುತ್ತದೆ. ಆ ಭೌಗೋಳಿಕ ತಜ್ಞನಿಗೆ ಯುದ್ಧ ಮಾಡುವುದು ತಿಳಿದಿರುವುದಿಲ್ಲ. ಆದರೆ ಭೌಗೋಳಿಕ ಅಧ್ಯಯನದ ಆಧಾರದ ಮೇಲೆ ಯಾವ ಜಾಗಕ್ಕೆ ಯಾವ ಮಿಲಿಟರಿ ವಾಹನ ಚಲಿಸಬಲ್ಲುದು, ಆ ಜಾಗದ ಆಮ್ಲಜನಕ ಪ್ರಮಾಣವೇನು, ಆರೋಗ್ಯ ಏರುಪೇರಾಗುತ್ತದೆಯಾ, ಆ ಜಾಗದಲ್ಲಿ ಯಾವ ರೀತಿಯ ಆಯುಧಗಳು ಪರಿಣಾಮಕಾರಿ ಎಂಬುದನ್ನು ನಿರ್ಧರಿಸಬಲ್ಲವನಾಗಿರುತ್ತಾನೆ. ಇವರಿಗೂ ಮೇಲಿನ ಹಂತದಲ್ಲಿ ‘ಜಿಯೋಗ್ರಾಫಿಕ್ ಇನ್​ಫಮೇಷನ್ ಸಿಸ್ಟಮ್ ಆಪರೇಟಿಂಗ್ ಆಫೀಸರ್ಸ್ ಇರುತ್ತಾರೆ. ಅವರದ್ದು ಸೆಟಲೈಟ್ ಮೂಲಕ ಕಣ್ಗಾವಲು.

    ‘ನನ್ನ ಮಗ ಮಿಲಿಟರಿಯಲ್ಲಿದ್ದಾನೆ’ ಎನ್ನುವುದು ಹಿಂದೊಮ್ಮೆ ಅಮ್ಮ ಕಣ್ಣೀರು ಕಡಲೊಡೆಯುವ ವಿಚಾರವಾಗಿತ್ತು. ಆದರೆ ಈಗ ಹಾಗಿಲ್ಲ ,‘ನಮ್ಮ ಮನೆಯಲ್ಲಿದ್ದ ಅದ್ಭುತ ಆಯುಧವೊಂದನ್ನು ಭಾರತೀಯ ಸೇನೆಗೆ ಕೊಟ್ಟಿದ್ದೇವೆ’ ಎಂಬ ಆತ್ಮಸಂತೋಷವೊಂದು ಹೆತ್ತವರೆದೆಯಲ್ಲಿ ಅಡಗಿರುತ್ತದೆ. ಊರಿನವರಿಗೂ ಅದೊಂದು ಹೆಮ್ಮೆಯ ವಿಚಾರವಾಗಿದೆ. ಹಾಗೆಯೇ ‘ಯಾವ ದೇಶದ ರಸ್ತೆಗಳು ಅಭಿವೃದ್ಧಿಯ ದ್ಯೋತಕ’ ಎಂಬ ಮಾತಿದೆಯೋ ಅದೇ ರೀತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯಾ ದೇಶದ ಮಿಲಿಟರಿ ತಾಕತ್ತು ಆಯಾ ದೇಶದ ಗೌರವದ ಮಟ್ಟ ಎಂಬಂತಾಗಿದೆ.

    ಹೆಚ್ಚು ಸಾವಾಗುವುದು ಎಲ್ಲಿ ಗೊತ್ತಾ?

    ಮಿಲಿಟರಿ ಎಂದರೆ ಅದು ಸಾವಿನ ಮನೆ ಎಂದುಕೊಂಡು ಅಲ್ಲಿ ಸೇರಲು ಅಥವಾ ಮಕ್ಕಳನ್ನು ಸೇರಿಸಲು ಭಯಪಡುವವರೇ ಹೆಚ್ಚು. ಆದರೆ ನಿಮಗೆ ಗೊತ್ತೆ? 2018ರಲ್ಲಿ 1,51,419 ಜನರು ರಸ್ತೆ ಅಪಘಾತದಿಂದ ಸಾವನ್ನಪ್ಪಿದ್ದರು. ಅದೇ ವರ್ಷದಲ್ಲಿ ಭಾರತೀಯ ಸೇನೆಯಲ್ಲಿ ಹುತಾತ್ಮರಾದವರ ಸಂಖ್ಯೆ ಸಾವಿರಕ್ಕಿಂತಲೂ ಕಮ್ಮಿ. ಇನ್ನೂ ಗಂಭೀರವಾಗಿ ಹೇಳಬೇಕೆಂದರೆ 1999 ರಿಂದ 2019 ನಡುವಿನ ಅವಧಿಯಲ್ಲಿ ಹುತಾತ್ಮರಾದವರ ಸಂಖ್ಯೆ ಯಾವುದೇ ಒಂದು ವರ್ಷದಲ್ಲಿ ನಡೆದ ರಸ್ತೆ ಅಪಘಾತದ ಸಾವಿನ ಸಂಖ್ಯೆಗೆ ಸರಿಸಮನಾಗಿಲ್ಲ. ಹೀಗಿದ್ದಾಗ ‘ಮನೆಯ ಮುಂದಿರುವ ರಸ್ತೆ ಹೆಚ್ಚು ಅಪಾಯಕಾರಿಯಾ ಅಥವಾ ಮಿಲಿಟರಿಯಾ? ಈಗ ಯೋಚಿಸಿ ನೋಡಿ.

    25ರ ಯುವತಿ ಫೈಟರ್ ಜೆಟ್ ಕಲಿಯಲು ಹೊರಟಾಗ..

    ಒಂದು ಬೃಹತ್ ಡೈನೋಸಾರ್ ಗಾತ್ರದಲ್ಲಿರುವ ಫೈಟರ್ ಜೆಟ್​ನ ಒಳಗೆ ಒಬ್ಬ ಗಡಸು ಜೆಸಿಬಿ ಆಪರೇಟರನ್ನು ಕೂರಿಸಿದರೂ, ಆ ಫೈಟರ್ ಜೆಟ್​ನ ಗಡಚಿಕ್ಕುವ ಶಬ್ದದ ಹುಟ್ಟಿಗೆ,ಆ ಜೆಸಿಬಿ ಆಪರೇಟರ್​ಗೆ ಹತ್ತೇ ನಿಮಿಷಕ್ಕೆ ಹೊಟ್ಟೆ ಎಂಬುದು ಕದಡಿದ ಮೊಸರು ಗಡಿಗೆಯಂತಾಗಿ ಜೆಟ್​ನಿಂದ ಆಚೆ ಓಡಿಹೋಗಲು ಅಕ್ಕ ಪಕ್ಕ ದಾರಿ ಹುಡುಕುವಂತಾಗಿ ಬಿಡುತ್ತದೆ. ಅಂತಹದರಲ್ಲಿ ಸುಕೋಮಲ ಬಳೆಕೈಒಡತಿಯಾದ ಆವನಿ ಚತುರ್ವೆದಿ ಎಂಬ ಯುವತಿಯು ಅದು ಹೇಗೆ ಅಗಾಧ ಅಳತೆಯ ಫೈಟರ್ ಜೆಟ್​ನ ‘ಯೋಕ್’ (ಸ್ಟೇರಿಂಗ್) ಹಿಡಿದು ಕೂರುತ್ತಾಳೋ ಎಂದು ಆಶ್ಚರ್ಯಪಟ್ಟವರೂ, ಕೀಟಲೆ ಮಾಡಿದವರೂ ಇದ್ದರು ಆದರೆ ಆಕೆ ‘ಇಂಡಿಯನ್ ಏರ್​ಫೋರ್ಸಿನ ಫ್ಲೈಟ್ ಲೆಫ್ಟಿನೆಂಟ್ ಆವಂತಿ ಚತುರ್ವೆದಿ’ ಯಾದದ್ದು ಇತಿಹಾಸ. ಅದಾದ ನಂತರ ಇಷ್ಟು ದಿನ ಕೇವಲ ಪ್ರವೈಟ್ ಏರ್​ಲೈನ್ಸಿನ, ಏರ್ ಹೋಸ್ಟಸ್ ಕೆಲಸದ ಕಡೆಗಷ್ಟೇ ಗಮನ ಹರಿಸುತ್ತಿದ್ದ ಯುವತಿಯರು ಈಗೀಗ ಇಂಡಿಯನ್ ಏರ್ ಫೊರ್ಸ್ ವಿಭಾಗದ ಕಡೆಗೆ ಮುಖ ಮಾಡುವಂತಾಗಿದ್ದಾರೆ. ಮಿಲಿಟರಿ, ನೇವಿ, ಏರ್​ಫೋರ್ಸ್ ಈ ಮೂರನ್ನೂ ಗಮನಿಸಿದರೆ ಇಂಡಿಯನ್ ಏರ್​ಫೋರ್ಸ್​ನಲ್ಲಿಯೇ ಅತೀ ಹೆಚ್ಚು ಲೇಡಿ ಆಫೀಸರ್ಸ್ ಇರುವುದು, ಒಟ್ಟಾರೆ ಭಾರತದ ರಕ್ಷಣಾ ವಲಯವದತ್ತ ಯುವಜನತೆಯು ಮುಖ ಮಾಡಿದೆ ಸದ್ಯಕ್ಕಿದು ಗೌರವಾನ್ವಿತ ಬೆಳವಣಿಗೆ.

    ದೇಶ ಸೇವೆಯ ಉದ್ಯೋಗಗಳು…

    ಮಿಲಿಟರಿ ಎಂದರೆ ಗನ್ ಹಿಡಿಯುವುದು ಅಷ್ಟೇ ಎಂಬ ಕಾಲ ಇದಲ್ಲ. ಈಗೀಗ ಯುವಕರು ‘ಆರ್ವಿು ಕೋರ್ಸ್’ ಗಳತ್ತ ಮುಖ ಮಾಡಿದ್ದಾರೆ. ಅದೇ ತಾನೆ ಹತ್ತನೇ ತರಗತಿ ಮುಗಿಸಿದ ಬಾಲಕನಲ್ಲಿ ‘ಮುಂದೆ ಏನನ್ನು ಓದುವುದು? ಓದಿದರೆ ಕೆಲಸ ಸಿಕ್ಕೀತಾ?’ ಎಂಬ ಅತಂತ್ರ ಮನಃಸ್ಥಿತಿ ಏನಾದರೂ ಇದ್ದರೆ ಒಮ್ಮೆ ಈ ಕೋರ್ಸಗಳ ಕಡೆ ಕಾಲಿಟ್ಟು ನೋಡಿ. ರಕ್ಷಣಾ ಇಲಾಖೆಯು ನಿಮಗಾಗಿ ಒಂದು ಕೆಲಸವನ್ನು ಕಾದಿಟ್ಟಿರುತ್ತದೆ. ಅಲ್ಲಿಗೆ ಆಯ್ಕೆಯಾಗುವುದಷ್ಟೇ ಬಾಕಿ.

    ‘ಕೂಲಿ ಕೆಲಸವಷ್ಟೇ ನನ್ನ ಕೌಶಲ’ ಎಂದುಕೊಂಡಿದ್ದರೆ ಇಂಡಿಯನ್ ಆರ್ವಿುಯ ‘ಬಾರ್ಡರ್ ರೋಡ್ ಆರ್ಗನೈಜೇಷನ್’ನಲ್ಲಿ ಕೆಲಸ ಮಾಡಬಹುದು. ಮಿಲಿಟರಿ ಸಂಬಂಧಿತ ವಾಹನ ಸಂಪರ್ಕ ರಸ್ತೆ ನಿರ್ವಿುಸುವುದಷ್ಟೇ ಇವರ ಕೆಲಸ. ಹಾಗಿದ್ದೂ ‘ಈ ದೇಶದಲ್ಲಿ ನನಗೊಂದು ಕೆಲಸ ಇಲ್ಲ’ ಎನ್ನುವ ವ್ಯಕ್ತಿಯು ತನ್ನ ತಂಪು ಹಿತ್ತಲಿನಲ್ಲಿಯೇ ಕೆಲಸ ಹುಡುಕುತ್ತಿರುತ್ತಾನೆಯೇ ಹೊರತು ದಾಪುಗಾಲಿಟ್ಟು ಸಿಕ್ಕ ಕಡೆ ಕೆಲಸ ಮಾಡಲು ಆತ ತಯಾರಾಗಿಯೇ ಇರುವುದಿಲ್ಲ ಅಥವಾ ದೇಹದಾರ್ಢ್ಯತೆಯ ಕೊರತೆಯೂ ಇರಬಹುದು ಎಂಬುದು ಅಹಿತಕರ ಸತ್ಯ. ಹೀಗೆ ಹತ್ತು, ನೂರು ವಿಭಾಗಗಳಲ್ಲಿ ಕೆಲಸಗಳು ದಂಡಿಯಾಗಿಯೇ ಇವೆ. ಅಡುಗೆ ಮಾಡಲು ಬಲ್ಲವರಿಂದ ಹಿಡಿದು. ವೆಲ್ಡಿಂಗ್ ಕೌಶಲ ಇರುವವರು, ಇಲೆಕ್ಟ್ರಿಕಲ್- ಟೆಕ್ನಿಕಲ್ ಇಂಜನಿಯರಿಂಗ್ ಓದಿದವರು, ಯೋಗ, ಈಜು, ವಾಲಿಬಾಲ್, ಬಾಸ್ಕೆಟ್ ಬಾಲ್, ಜುಡೋ, ಕರಾಟೆ ಕೌಶಲ ಇರುವವರು, ಇಂಟಲಿಜೆನ್ಸ್ ಸ್ಟಾಫ್ ಕೋರ್ಸ್ ಇತ್ಯಾದಿ ನೂರಕ್ಕೂ ಹೆಚ್ಚು ಕೋರ್ಸಗಳನ್ನು ಕಲಿತವರಿಗೂ ಇಲ್ಲಿದೆ ಉದ್ಯೋಗ.

    ಮಿಲಿಟರಿಯಲ್ಲೂ ಇವೆ ಅನೇಕ ಕೋರ್ಸ್

    ನಿಮಗೆ ತಿಳಿದಿರಲಿಕ್ಕಿಲ್ಲ. ಬೈಕು,ಕಾರುಗಳ ಬೋರ್ ಸರ್ವೀಸಿಗೆ ಬಂದಿದೆ ಎನ್ನುತ್ತಾರಲ್ಲಾ ಹಾಗೆಯೇ ಮಿಲಿಟರಿಯ ಗನ್ನು, ರೈಫಲ್ಲುಗಳೂ ಕೂಡ ಬೋರ್​ಗೆ ಬಂದಿರುತ್ತವೆ. ಹಾಗೆ ಬೋರ್ ಸರ್ವೀಸಿಗೆ ಬಂದ ಮತಿಭ್ರಮಿತ ರೈಫಲ್​ನಿಂದ ರಂಗಪ್ಪನಿಗೆ ಗುರಿ ಇಟ್ಟರೆ ತಿಮ್ಮಪ್ಪನ ಕಡೆ ಬುಲೆಟ್ ತೂರುವಂತಾಗಿರುತ್ತವೆ. ಅಂತಹವನ್ನೆಲ್ಲಾ ರಿಪೇರಿ ಮಾಡುವುದು, ಸೈನಿಕರ ಶಸ್ತ್ರಾಸ್ತ್ರ ಪಾಕ್ಷಿಕ ಪರಿಶೀಲನೆ ಇವೆಲ್ಲವನ್ನೂ ‘ಆರ್ಮೊರರ್’ ಎಂಬ ಹೆಸರಿನ ಕೋರ್ಸ್ ಓದಿದವರಿಗೆ ಕೊಡಲಾಗುತ್ತದೆ. ಇದು ಕೇವಲ ಉದಾಹರಣೆಯಷ್ಟೇ.

    ಭಾರತದ ರಕ್ಷಣಾ ನಿಯಮದ ಪ್ರಕಾರ ಅನೇಕ ಕೋರ್ಸ್​ಗಳ ಸಂಪೂರ್ಣ ವಿಚಾರವನ್ನು ಇಲ್ಲಿ ಬರೆಯುವಂತಿಲ್ಲ. ಅಂಥ ಆರ್ವಿು ಕೋರ್ಸಿನ ಮಿಲಿಟರಿ ಕಾಲೇಜುಗಳು ‘ಸಿಕಂದರಾಬಾದ್, ಜಬಲ್​ಪುರ್, ಭೋಪಾಲ್,ಆಗ್ರಾ, ವಡೋದರಾ, ಬೆಂಗಳೂರು, ಡೆಹರಾಡೂನ್, ಮೀರತ್, ಮಹೂ, ಪುಣೆ, ಮಿಜೋರಾಮ್ ಬೆಳಗಾವಿ, ಬರೇಲಿ, ದೇವ್ಹ್​ಲಾಲಿ ಮುಂತಾದ ಕಡೆಗಳಲ್ಲಿವೆ. ಆಸಕ್ತರು ಗಮನಿಸಬಹುದು. ಮಿಲಿಟರಿಯಲ್ಲಿ ಈಗಾಗಲೇ ಕಮಾಂಡೋ ಅಗಿ ಕೆಲಸ ಮಾಡುತ್ತಿರುವವರಿಗೂ ಈ ಎಲ್ಲಾ ವಿಚಾರಗಳು ತಿಳಿದಿರುವುದಿಲ್ಲ. ಏಕೆಂದರೆ ಅಸವರಿಗೆ ವಹಿಸಿದ ಕೆಲಸದ ಹೊರತಾಗಿ ಸೇನೆಯ ಬೇರೆ ವಿಚಾರವನ್ನಾಗಲಿ, ಮಾಹಿತಿಯನ್ನಾಗಲಿ ತಿಳಿಯಲು ಯತ್ನಿಸುವುದು ಮಿಲಿಟರಿ ಮಾರ್ಷಲ್ ಕೋರ್ಟಿನ ಪ್ರಕಾರ ಗಂಭೀರ ಅಪರಾಧ ಎಂದು ಪರಿಗಣಿಸಲ್ಪಡುತ್ತದೆ.

    ಉಮೇಶ್ ಆಚಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts