More

    ಯಾವುದೇ ಸಮಸ್ಯೆ ಆಗಲು ಬಿಡುವುದಿಲ್ಲ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹೋಳಿ, ರಂಜಾನ್, ಗುಡ್​ಫ್ರೖೆಡೆ, ಈಸ್ಟರ್ ಹಬ್ಬ ಆಚರಣೆಯ ಹಿನ್ನೆಲೆಯಲ್ಲಿ ಹು-ಧಾ ಅವಳಿ ನಗರದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಯಾವುದೇ ಸಮಸ್ಯೆ ಆಗಲು ಬಿಡುವುದಿಲ್ಲ ಎಂದು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಹೇಳಿದರು.

    ಹು-ಧಾ ಪೊಲೀಸ್ ಕಮೀಷನರೇಟ್ ಹೋಳಿ ಹಬ್ಬದ ನಿಮಿತ್ತ ಶನಿವಾರ ಸಂಜೆ ಆಯೋಜಿಸಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, 1983ರಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಅಹಿತಕರ ಘಟನೆ ನಡೆದಿತ್ತು. ಬಳಿಕ ಎಲ್ಲ ಹಬ್ಬಗಳು ಸಾಮರಸ್ಯ ಹಾಗೂ ಶಾಂತಿಯುತವಾಗಿ ನಡೆದಿವೆ. ಈ ಬಾರಿಯೂ ಎಲ್ಲರೂ ಖುಷಿಯಿಂದ ಹಬ್ಬವನ್ನು ಆಚರಿಸೋಣ ಎಂದರು.

    ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಎಲ್ಲ ಧರ್ಮೀಯರು ಕೂಡಿ ಹಬ್ಬ ಆಚರಿಸಿದರೆ ಹೆಚ್ಚು ಸಂತೋಷ ಕೊಡುತ್ತದೆ. ಆ ಮೂಲಕ ರಾಜ್ಯ ಮತ್ತು ದೇಶಕ್ಕೆ ಭಾವೈಕ್ಯತೆಯ ಸಂದೇಶವನ್ನು ಕೊಡಬೇಕು ಎಂದು ಹೇಳಿದರು.

    ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಧಾರವಾಡ ಹಾಗೂ ಉಣಕಲ್ ಭಾಗದಲ್ಲಿ ಮಾ. 26ರಂದು ಹಾಗೂ ಹುಬ್ಬಳ್ಳಿಯಲ್ಲಿ 29ರಂದು ಬಣ್ಣದೋಕುಳಿ ಇದೆ. ಈ ದಿನಗಳಲ್ಲಿ ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಿ ಎಂದು ಮನವಿ ಮಾಡಿದರು.

    ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು ಮಾತನಾಡಿ, ಕಿಡಿಗೇಡಿಗಳು ಎಲ್ಲ ಸಮಾಜದಲ್ಲಿ ಇರುತ್ತಾರೆ. ಸದ್ಯ ಲೋಕಸಭೆ ಚುನಾವಣೆ ಇರುವುದರಿಂದ ಹೊಸ ಹೊಸ ಘೊಷಣೆಗಳು ಕೇಳಿ ಬರುತ್ತಿವೆ. ಇವನ್ನೆಲ್ಲ ಪೊಲೀಸ್​ರು ನಿಯಂತ್ರಿಸಬೇಕು. ಹಬ್ಬಗಳ ಆಚರಣೆಗೆ ಎಲ್ಲ ಧರ್ಮದವರು ಸಹಕಾರ ಕೊಡಲಿ ಎಂದರು.

    ಸಿಖ್ ಧರ್ಮಗುರು ಮೇಜರ್ ಗ್ಯಾನಿ ಸಿಂಗ್, ತಾಜುದ್ದಿನ್ ಖಾದ್ರಿ ಪೀರಾ, ಫಾ. ಜೋಸೆಫ್ ಲಾಪಿಸ್, ಹುಬ್ಬಳ್ಳಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಐ.ಜಿ. ಸನದಿ, ಗುರುನಾಥ ಉಳ್ಳಿಕಾಶಿ, ಜೈನ್ ಸಮಾಜದ ಮುಖಂಡ ಮಹೇಂದ್ರ ಸಿಂಘಿ, ಸತೀಶ ಮೆಹರವಾಡೆ, ವಿಠ್ಠಲ ಲದವಾ ಮಾತನಾಡಿದರು.

    ಡಿಸಿಪಿ ಎಂ. ರಾಜೀವ ಪ್ರಾಸ್ತಾವಿಕ ಮಾತನಾಡಿದರು. ಡಿಸಿಪಿ ರವೀಶ ಆರ್., ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts