More

    ನಮ್ಮ ಬಳಿ ಇದೆ ರಿಪೋರ್ಟ್ ಕಾರ್ಡ್: ಬಿ.ಎಲ್.ಸಂತೋಷ್

    ಶಿವಮೊಗ್ಗ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ ನಮ್ಮ ಜತೆಗಿದೆ. ನಮಗೆ ಗ್ಯಾರಂಟಿ ಕಾರ್ಡ್‌ನ ಅವಶ್ಯಕತೆಯಿಲ್ಲ. ಬಿಜೆಪಿ ಕಾರ್ಯಕರ್ತರ ಬಳಿ ರಿಪೋರ್ಟ್ ಕಾರ್ಡ್ ಇದೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.

    ಭಾನುವಾರ ಏರ್ಪಡಿಸಿದ್ದ ವಿವಿಧ ಸಮಾಜಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಯಾರು ಅಧಿಕಾರಕ್ಕೆ ಬರುವುದಿಲ್ಲವೋ ಅವರು ಭರವಸೆಗಳ ಗ್ಯಾರಂಟಿ ಕಾರ್ಡ್ ಕೊಡುತ್ತಾರೆ. ನಾವು ಪಕ್ಷದ ಪ್ರಮುಖ ಭರವಸೆಗಳನ್ನು ಈಡೇರಿಸುವ ಜತೆಗೆ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ ಎಂದರು.
    ರಾಜ್ಯದಲ್ಲಿ ಇದುವರೆಗೂ ಬಿಜೆಪಿ ಪರಿಪೂರ್ಣ ಬಹುಮತದ ಸರ್ಕಾರ ರಚನೆ ಮಾಡುವುದು ಸಾಧ್ಯವಾಗಿಲ್ಲ. ಸಂಪೂರ್ಣ ಬಹುಮತ ಸಿಗುವವರೆಗೆ ನಾವು ಸರ್ಕಾರ ಮಾಡುವುದಿಲ್ಲ ಎಂದು ಕೈಕಟ್ಟಿ ಕೂರುವ ವಾತಾವರಣವೂ ಇರಲಿಲ್ಲ. ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಸಾಮರ್ಥ್ಯದ ಬಗ್ಗೆ ನಮಗೆ ಯಾವುದೇ ಅಪನಂಬಿಕೆಯಿಲ್ಲ. ಸಿಕ್ಕ ಅವಕಾಶದಲ್ಲೇ ಅವರಿಬ್ಬರೂ ಅತ್ಯುತ್ತಮ ಆಡಳಿತ ನೀಡಿದ್ದಾರೆ. ಆದರೆ ಬಹುಮತದ ಕೊರತೆಯಿಂದ ಅಂದುಕೊಂಡಿದ್ದೆಲ್ಲವನ್ನೂ ಅನುಷ್ಠಾನ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
    ಕೇಂದ್ರದಲ್ಲಿ ಬಿಜೆಪಿಗೆ 303 ಸ್ಥಾನಗಳ ಸಂಪೂರ್ಣ ಬಹುಮತ ಸಿಕ್ಕಿದೆ. ಇದೇ ಕಾರಣದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ ಜಾರಿಗೆ ತರುವುದು ಸಾಧ್ಯವಾಯಿತು. ಕರ್ನಾಟಕದಲ್ಲೂ 120-130 ಸ್ಥಾನ ಬಂದರೆ ನಮ್ಮ ಪ್ರಣಾಳಿಕೆಯಲ್ಲಿನ ಎಲ್ಲ ಅಂಶಗಳನ್ನು ಜಾರಿಗೊಳಿಸುವುದು ಸಾಧ್ಯವಿದೆ ಎಂದು ತಿಳಿಸಿದರು.
    ಕಾಂಗ್ರೆಸ್ ಪಕ್ಷ ಹಾಗೂ ಮಾಧ್ಯಮಗಳ ಸಮೀಕ್ಷೆ ಬಗ್ಗೆ ನಮಗೆ ಯಾವುದೇ ಆತಂಕ ಬೇಡ. ಬಿಜೆಪಿ ಪರ ವಾತಾವರಣವಿದೆ. ಹಾಗೆಂದು ಮೈಮರೆಯುವಂತಿಲ್ಲ. ಪ್ರತಿಭಾವಂತ ವಿದ್ಯಾರ್ಥಿ ತನಗೆ ರ‌್ಯಾಂಕ್ ಬರುವುದು ಖಚಿತ ಎಂದು ತಿಳಿದಿದ್ದರೂ ಪರೀಕ್ಷೆಯ ಕೊನೆಯ ದಿನದವರೆಗೂ ಕಷ್ಪಪಟ್ಟು ವ್ಯಾಸಂಗ ಮಾಡುತ್ತಾನೆ. ಅದೇ ರೀತಿ ಮತದಾನದ ದಿನದವರೆಗೂ ನಾವೆಲ್ಲರೂ ಶ್ರಮ ಹಾಕಿ ಕೆಲಸ ಮಾಡಬೇಕೆಂದರು.
    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಿವಮೊಗ್ಗ ಅಭ್ಯರ್ಥಿ ಎಸ್.ಎನ್.ಚನ್ನಬಸಪ್ಪ, ರಾಜ್ಯ ಪ್ರಕೋಷ್ಟಗಳ ಸಂಚಾಲಕ ಎಂ.ಬಿ.ಭಾನುಪ್ರಕಾಶ್, ನಗರಾಧ್ಯಕ್ಷ ಜಗದೀಶ್, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಪ್ರಮುಖರಾದ ಆರ್.ಕೆ.ಸಿದ್ದರಾಮಣ್ಣ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts