More

    ನಾವು ವೋಟ್ ಹಾಕುವುದಿಲ್ಲ!

    ರೋಣ: ಗ್ರಾಮದ ಸರ್ಕಾರಿ ಜಮೀನಿನಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡ ನಿರ್ವಿುಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದ ಬೇಸತ್ತು ಗ್ರಾಪಂ ಚುನಾವಣೆ ಬಹಿಷ್ಕರಿಸಲು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಜಿಗಳೂರ ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.

    ಗ್ರಾಮದ ಮುಖಂಡರೆಲ್ಲ ಶನಿವಾರ ಬೆಳಗ್ಗೆ ಒಂದೆಡೆ ಸೇರಿ ಮತದಾನ ಬಹಿಷ್ಕಾರದ ಅಂತಿಮ ತೀರ್ಮಾನ ಕೈಗೊಂಡಿರುವುದಾಗಿ ಬಾಬುಗೌಡ ಪಾಟೀಲ, ಮಲ್ಲಪ್ಪ ಹಾಳಕೇರಿ, ಶರಣಪ್ಪ ಶಿಂಪ್ರಿ ತಿಳಿಸಿದ್ದಾರೆ.

    ಎರಡು ಸಭೆ ವಿಫಲ: ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಮತ್ತು ತಾಪಂ ಇಒ ಸಂತೋಷ ಪಾಟೀಲ ಅವರು ಡಿ. 6ರಂದು ಗ್ರಾಮಸ್ಥರ ಸಭೆ ನಡೆಸಿ ಮನವೊಲಿಸುವಲ್ಲಿ ಪ್ರಯತ್ನಿಸಿ ವಿಫಲರಾಗಿದ್ದರು. ಡಿ. 11ರಂದು ಗದಗ ಉಪ ವಿಭಾಗಾಧಿಕಾರಿ ರಾಯಪ್ಪ ಹುಣಶ್ಯಾಳ, ಜಿಪಂ ಉಪ ಕಾರ್ಯದರ್ಶಿ ಬಿ. ಕಲ್ಲೇಶ ಅವರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಲು ನಡೆಸಿದ ಪ್ರಯತ್ನವೂ ವಿಫಲವಾಗಿತ್ತು.

    2015 ರಲ್ಲಿ ಗ್ರಾಪಂ ಚುನಾವಣೆ ಬಹಿಷ್ಕರಿಸಿದಾಗ ಆದ ಎಡವಟ್ಟುಗಳು ಈ ಬಾರಿ ಆಗದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಗ್ರಾಮದ ಯುವಕರನ್ನೊಳಗೊಂಡ ಕಣ್ಗಾವಲು ಸಮಿತಿ ರಚಿಸಿದೆ. ಗ್ರಾಮದ ಪರವಾಗಿ ಬೇರೆ ಯಾರಾದರೂ ನಾಮಪತ್ರ ಸಲ್ಲಿಸುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳ ಮೇಲೆ ನಿಗಾ ವಹಿಸುವ ನಿಟ್ಟಿನಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದೆ ಎನ್ನುತ್ತಾರೆ ಗ್ರಾಮಸ್ಥರು.

    ಬೇಡಿಕೆ ಈಡೇರಿದರೆ ಅವಿರೋಧ ಆಯ್ಕೆ

    ಜಿಗಳೂರಲ್ಲಿರುವ ಒಂದು ಎಕರೆ ಸರ್ಕಾರಿ ಜಮೀನಿನಲ್ಲಿ ನೂತನ ಗ್ರಾಪಂ ಕಟ್ಟಡ ನಿರ್ವಿುಸಲು ಜಿಲ್ಲಾಧಿಕಾರಿಗಳು ಲಿಖಿತ ಭರವಸೆ ನೀಡಿದರೆ, ನಮ್ಮ ಗ್ರಾಪಂನ ನಾಲ್ಕು ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡುತ್ತೇವೆ ಎಂದು ಗ್ರಾಮದ ಗುರುಲಿಂಗಪ್ಪ ಕುರಡಗಿ, ಬಸವರಾಜ ಯರಗಪ್ಪ್ಪ ಮಲ್ಲಪ್ಪ ಬಸೇವಡೆಯರ, ಹನುಮಂತ ಮಣ್ಣೇರಿ, ರಫೀಕ್ ನದಾಫ, ಶೇಖಪ್ಪ ಉಪ್ಪಾರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts