More

    ಓವರ್‌ಹೆಡ್ ಟ್ಯಾಂಕ್‌ಇದೆ, ನೀರಿಲ್ಲ: ಜಲಮೂಲ ಗುರುತಿಸದೆ ನಿರ್ಮಾಣ ಕೊಳವೆಬಾವಿ ಕೊರೆಯಲು ಬೇಕು ಅನುದಾನ

    ನರೇಂದ್ರ ಎಸ್. ಮರಸಣಿಗೆ, ಹೆಬ್ರಿ
    ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲಿಕೊಡ್ಲು ಎಂಬಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ ಈ ಟ್ಯಾಂಕ್‌ಗೆ ನೀರಿನ ಮೂಲವೇ ಇಲ್ಲ. ಈ ಹಿಂದೆ ಇದ್ದ ಹಳೆ ಬೋರ್‌ವೆಲ್ ಕೂಡ ನೀರಿಲ್ಲದೆ ಪಾಳು ಬಿದ್ದಿದೆ. ಈ ಭಾಗದ ಜನರು ನೀರಿನ ವ್ಯವಸ್ಥೆ ಮಾಡಿಕೊಳ್ಳದೆ ಟ್ಯಾಂಕ್ ನಿರ್ಮಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಂದಿನ ಹೆಬ್ರಿ ಜಿಲ್ಲಾ ಪಂಚಾಯತಿ ಸದಸ್ಯೆಯ ಪ್ರಸ್ತಾವನೆಯಂತೆ ಸುಮಾರು 12 ಲಕ್ಷ ರೂಪಾಯಿ ವೆಚ್ಚದಲ್ಲಿ ನೀರಿನ ಟಾಂಕಿಯ ನಿರ್ಮಾಣವಾಗಿದೆ.ಟಾಂಕಿಗೆ ಸಮೀಪದಲ್ಲಿ ಯಾವುದೇ ಬೋರ್‌ವೆಲ್, ಹಳ್ಳಕೊಳ್ಳ ಇಲ್ಲ. ನೀರಿಗೆ ಯಾವುದೇ ವ್ಯವಸ್ಥೆ ಮಾಡಿಕೊಳ್ಳದೆ ಟ್ಯಾಂಕ್ ನಿರ್ಮಾಣ ಮಾಡಿರುವುದು ಏಕೆ ಎನ್ನುವುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.

    ಒಂದು ಬೋರ್‌ವೆಲ್, ಎರಡು ಸಂಪರ್ಕ: ಕುಚ್ಚೂರು ಬೇಳಂಜೆ ಸಂಪರ್ಕಿಸುವ ರಸ್ತೆ ತಿರುವು ಸಮೀಪ ಒಂದು ಕೊಳವೆಬಾವಿ ಇದ್ದು, ಅದರಿಂದ ಬೇರೆಡೆಗೆ ನೀರು ಸರಬರಾಜಾಗುತ್ತಿದೆ. ಹಾಲಿಕೊಡ್ಲಿನಲ್ಲಿರುವ ಟಾಂಕಿಗೆ ಇದನ್ನೇ ಬಳಸುವ ಯೋಜನೆ ಇದ್ದು, ಈ ಬೋರ್‌ವೆಲ್ ದೂರ ಹಾಗೂ ಕೆಳಮಟ್ಟದಲ್ಲಿ ಇರುವುದರಿಂದ ನೀರಿನ ಟ್ಯಾಂಕ್ ತುಂಬಲು ಸುಮಾರು ಮೂರು ದಿನ ಬೇಕಾಗುತ್ತದೆ. ಇದು ಕಾರ್ಯಸಾಧುವಲ್ಲದ ಯೋಜನೆ ಎಂದು ಸ್ಥಳೀಯರು ಹೇಳುತ್ತಾರೆ.

    ಹಾಲಿಕೋಡ್ಲು ನೀರಿನ ಸಮಸ್ಯೆ: ಬೇಸಿಗೆ ಕಾಲದಲ್ಲಿ ಈ ಭಾಗದಲ್ಲಿ ನೀರಿನ ಸಮಸ್ಯೆ ತಲೆದೋರುತ್ತದೆ. ಕಳೆದ ವರ್ಷ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದೆ. ಈಗ ಓವರ್‌ಹೆಡ್ ಟ್ಯಾಂಕ್ ಇದ್ದರೂ ಅದು ಯಾವುದೇ ಪ್ರಯೋಜನಕ್ಕೆ ಇಲ್ಲ. ಶೀಘ್ರವಾಗಿ ನೀರಿನ ಮೂಲವನ್ನು ಹುಡುಕಿ ವ್ಯವಸ್ಥೆ ಮಾಡಿಕೊಡಲು ಸಂಬಂಧಪಟ್ಟ ಇಲಾಖೆಗೆ ಜನರು ತಾಕೀತು ಮಾಡಿದ್ದಾರೆ.

    ಸ್ಥಳೀಯವಾಗಿ ಬೋರ್‌ವೆಲ್ ನಿರ್ಮಿಸುವ ಆಶ್ವಾಸನೆ ಈ ಹಿಂದೆಯೇ ಬಂದಿದ್ದರೂ ಕಾರ್ಯರೂಪಕ್ಕಿಳಿದಿಲ್ಲ. ಒಂದು ವೇಳೆ ಓವರ್‌ಹೆಡ್ ಟ್ಯಾಂಕ್‌ನಲ್ಲಿ ನೀರು ಸಂಗ್ರಹವಾದರೆ ಕುಚ್ಚೂರು, ಹಾಲಿಕೊಡ್ಲು, ಬೈಲುಮನೆ, ಕಾನ್ಬೆಟ್ ಪ್ರದೇಶಗಳ ನೀರಿನ ಸಮಸ್ಯೆ ನೀಗುತ್ತದೆ. ಆಶ್ವಾಸನೆ ಶೀಘ್ರದಲ್ಲಿ ಕಾರ್ಯರೂಪಕ್ಕೆ ಬಂದರೆ ಸ್ಥಳೀಯ ಜನರಿಗೆ ಅನುಕೂಲವಾಗುತ್ತದೆ.

    ನೀರಿಲ್ಲದಿದ್ದರೂ ಪೈಪ್‌ಲೈನ್: ಹಳೇಕಾಸನಕೊಡ್ಲು, ಬೈಲುಮನೆ, ದಾಸ್‌ಬೈಲ್, ಕುಡಿಬೈಲ್, ದೇವಳಬೈಲ್ ಪ್ರದೇಶಗಳಲ್ಲಿ ನೀರಿನ ಮೂಲವಿಲ್ಲದಿದ್ದರೂ ಪೈಪ್‌ಲೈನ್ ಮಾಡಿದ್ದಾರೆ. ಅದರಿಂದ ಯಾರಿಗೂ ನಯಾಪೈಸೆಯ ಪ್ರಯೋಜನ ಆಗಿಲ್ಲ. ಕುಡಿಬೈಲ್ ರಸ್ತೆಯಲ್ಲಿ ಗೇಟ್‌ವಾಲ್ ಈಗಾಗಲೇ ತೂತು ಬಿದ್ದಿದೆ. ಸಂಬಧಪಟ್ಟವರನ್ನು ವಿಚಾರಿಸಿದರೆ ಸಬೂಬು ಹೇಳುತ್ತಾರೆ. ಯಾವುದೇ ಸಮರ್ಪಕ ಯೋಜನೆ ಇಲ್ಲದೆ ಅನುದಾನ ದುರಪಯೋಗ ಆಗಿದೆ ಎಂದು ಜನ ಅಕ್ರೋಶಗೊಂಡಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ಸೂಚಿಸದಿದ್ದಲ್ಲಿ ಪ್ರತಿಭಟಿಸುವ ಇರಾದೆ ಜನರಲ್ಲಿದೆ. ನೀರಿನ ಟ್ಯಾಂಕ್ ನಿರ್ಮಾಣವಾದ ಸ್ಥಳದಲ್ಲಿ ಎತ್ತರಕ್ಕೆ ಗಿಡಗಂಟಿಗಳು ಬೆಳೆದಿವೆ. ಬೇಲಿ ಕೂಡ ಸಮರ್ಪಕವಾಗಿಲ್ಲ.

    ನಿರ್ವಹಣೆ ಸವಾಲು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ಟಾಂಕಿಯನ್ನು ಪಂಚಾಯಿತಿಗೆ ಒಪ್ಪಿಸಿದ್ದಾರೆ. ನಂತರ ಪಂಚಾಯಿತಿ ವತಿಯಿಂದ ನಿರ್ವಹಣೆ ಮಾಡಬೇಕಾಗುತ್ತದೆ. ಆದರೆ ಸುಮಾರು 5 ಲಕ್ಷ ರೂ. ಹೆಚ್ಚು ವೆಚ್ಚ ತಗಲುವುದರಿಂದ ಪಂಚಾಯಿತಿ ವತಿಯಿಂದ ಬೋರ್‌ವೆಲ್ ನಿರ್ಮಾಣ ಅಸಾಧ್ಯ. ಸಂಬಂಧಪಟ್ಟ ಇಲಾಖೆಯವರೇ ಇದರ ಹೊಣೆ ಹೊತ್ತು ಸೂಕ್ತ ಕ್ರಮ ಜರುಗಿಸಬೇಕಾಗಿದೆ.

    ನಾವು ಈಗಾಗಲೇ ಟಾಂಕಿಯನ್ನು ಪಂಚಾಯಿತಿಗೆ ಒಪ್ಪಿಸಿದ್ದೇವೆ. ಮುಂದಿನ ನಿರ್ವಹಣೆಗೆ ಪಂಚಾಯಿತಿಯೇ ಜವಾಬ್ದಾರಿ.
    ಸುರೇಂದ್ರನಾಥ್ ಎಇಇ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಉಡುಪಿ

    ಪಂಚಾಯಿತಿಯಿಂದ 5 ಲಕ್ಷ ರೂ.ಅನುದಾನ ನೀಡಲು ಸಾಧ್ಯವಿಲ್ಲ. ವರ್ಷದ ಕ್ರಿಯಾ ಯೋಜನೆ ಮುಗಿದಿದ್ದು, ಮುಂದಿನ ಕ್ರಿಯಾ ಯೋಜನೆಯಲ್ಲಿ ನೋಡಬೇಕಾದೀತು. ಸಂಬಂಧಪಟ್ಟ ಇಲಾಖೆಯವರು ಅನುದಾನ ನೀಡಿದರೆ ಒಳಿತಾಗುತ್ತಿತ್ತು.
    ಪುರಂದರ, ಕುಚ್ಚೂರು ಪಿಡಿಒ

    ಕುಚ್ಚೂರಿನಲ್ಲಿ ಬೃಹತ್ ನೀರಿನ ಟ್ಯಾಂಕನ್ನು ನಿರ್ಮಿಸಿ ಅಲ್ಲಲ್ಲಿ ಪೈಪುಗಳನ್ನು ಅಳವಡಿಸಿ ಮನೆ ಮನೆಗೆ ನೀರು ಕೊಡುತ್ತೇವೆ ಎಂದು ಹೇಳಿದ್ದರು. ಈಗ ಪೈಪುಗಳೆಲ್ಲ ಒಡೆದು ಹೋಗಿವೆ. ನೀರಿನ ಮೂಲವಿಲ್ಲದೆ ಲಕ್ಷಾಂತರ ರೂ ಸಾರ್ವಜನಿಕರ ಹಣ ರಾಜಕೀಯ ನಾಯಕರ ಪರ್ಸೆಂಟೇಜ್‌ಗೆ ಬಳಕೆಯಾದಂತಿದೆ. ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲದ ಯೋಜನೆಯಿದು.
    ಕುಚ್ಚೂರು ಶ್ರೀಕಾಂತ್ ಪೂಜಾರಿ, ಅಧ್ಯಕ್ಷರು ಜೆಡಿಎಸ್ ಕಾರ್ಕಳ ತಾಲೂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts