More

    ಪುತ್ತೂರಿಗಿಲ್ಲ ನೀರಿನ ಬರ

    ಶ್ರವಣ್ ಕುಮಾರ್ ನಾಳ, ಪುತ್ತೂರು
    2003-04ರಲ್ಲಿ ಪುತ್ತೂರು ಪುರಸಭೆ(ಇಂದಿನ ನಗರಸಭೆ) ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ ಸಾಲ ಪಡೆದು ನಿರ್ಮಿಸಿದ ಕುಮಾರಧಾರೆಯ ನೆಕ್ಕಿಲಾಡಿ ಅಣೆಕಟ್ಟಿನಲ್ಲಿ ನೀರು ನಿರಂತರ ಸೋರಿಕೆಯಾಗುತ್ತಿದ್ದರೂ, ಒಳ ಹರಿವು ಹೆಚ್ಚಾಗಿದ್ದರಿಂದ ಮೇ ತಿಂಗಳ ಕೊನೆಯ ವಾರದವರೆಗೂ ಪುತ್ತೂರಿಗೆ ನೀರಿನ ಬರ ಎದುರಾಗದು.
    ದಿನದ 24 ಗಂಟೆ ಪುತ್ತೂರಿಗೆ ನೀರು ಪೂರೈಕೆಗೆಂದೇ ನೆಕ್ಕಿಲಾಡಿ ಬಳಿ ಎಡಿಬಿ ಯೋಜನೆಯಿಂದ ಡ್ಯಾಂ ನಿರ್ಮಿಸಲಾಗಿದೆ. ಪ್ರಸ್ತುತ 630 ಎಂಎಲ್‌ಡಿ ನೀರು ಸಂಗ್ರಹಣಾ ಸಾಮರ್ಥ್ಯದ ನೆಕ್ಕಿಲಾಡಿ ಡ್ಯಾಂನಲ್ಲಿ ತುಂಬಿ ಹೆಚ್ಚುವರಿ ನೀರು ಹೊರಹೋಗುತ್ತಿದೆ.

    70 ಲಕ್ಷ ಲೀಟರ್ ನೀರು ಸರಬರಾಜು
    ಪುತ್ತೂರು ನಗರ ನೀರು ಸರಬರಾಜು ಯೋಜನೆಯ ರೇಚಕ ಯಂತ್ರ ಸ್ಥಾವರ 34ನೇ ನೆಕ್ಕಿಲಾಡಿ ಗ್ರಾಮದಲ್ಲಿ ಕುಮಾರಧಾರಾ ನದಿ ದಂಡೆ ಬಳಿ ಇದೆ. ಇಲ್ಲಿ 35 ಅಶ್ವಶಕ್ತಿಗಳ ಮೂರು ಪಂಪ್‌ಗಳಿವೆ. ಪುತ್ತೂರು ನಗರಕ್ಕೆ ಇಲ್ಲಿಂದ ದಿನಂಪ್ರತಿ 70 ಲಕ್ಷ ಲೀಟರ್ ನೀರು ಸರಬರಾಜಾಗುತ್ತಿದೆ. 15 ಗಂಟೆ ನಿರಂತರ ನೀರು ಮೇಲೆತ್ತಲಾಗುತ್ತ್ತಿದೆ. ನೀರು ಸರಬರಾಜು ವ್ಯವಸ್ಥೆಯ ರೇಚಕ ಯಂತ್ರ ಸ್ಥಾವರಕ್ಕೆ ಪುತ್ತೂರು ಉಪವಿದ್ಯುತ್ ಕೇಂದ್ರದಿಂದ 11 ಕೆ.ವಿ. ಸಾಮರ್ಥ್ಯದ ಎಕ್ಸ್‌ಪ್ರೆಸ್ ಫೀಡರ್ ಲೈನ್ ಎಳೆಯಲಾಗಿದೆ.

    ಕಳೆದ ಬಾರಿ ನೀರಿನ ಮಟ್ಟ ಕುಸಿತ
    ಕಳೆದ ವರ್ಷ ಫೆಬ್ರವರಿ 2ನೇ ವಾರ ನೀರಿನ ಹರಿವು ಬಹುತೇಕ ನಿಂತಿದ್ದು, 500 ಎಂಎಲ್‌ಡಿ ನೀರು ಮಾತ್ರ ಸಂಗ್ರಹವಾಗಿತ್ತು. ಜತೆಗೆ ಕಾಮಗಾರಿಯ ತಾಂತ್ರಿಕ ದೋಷದಿಂದ ಡ್ಯಾಂ ಗೇಟ್ ಮೂಲಕ ನೀರು ಸೋರಿಕೆಯಾಗಿತ್ತು. ರೇಚಕ ಯಂತ್ರ ಸ್ಥಾವರದ ಬಳಿ ನೀರೆತ್ತುವ ಮತ್ತು ಜಲಶುದ್ಧೀಕರಣ ವ್ಯವಸ್ಥೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ನಿರ್ವಹಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇನ್ನೂ ನೆಕ್ಕಿಲಾಡಿ ಡ್ಯಾಂನಲ್ಲಿ ನೀರು ತುಂಬುತ್ತಿದ್ದು, ಹೆಚ್ಚುವರಿ ನೀರು ಹೊರಹೋಗುತ್ತಿದೆ.

    75 ಲಕ್ಷ ಲೀಟರ್ ನೀರಿನ ಪೂರೈಕೆ
    ಪುತ್ತೂರಿಗೆ 50 ಲಕ್ಷ ಲೀಟರ್ ನೀರು ಸಾಕಾಗುತ್ತಿತ್ತು. ಈಗ ಅದು 75ಕ್ಕೆ ಏರಿದೆ. 27 ವಾರ್ಡ್ ಹೊಂದಿರುವ ಪುತ್ತೂರು ನಗರಸಭೆಯಲ್ಲಿ 60 ಸಾವಿರ ಜನಸಂಖ್ಯೆಯಿದ್ದು, ಪ್ರತಿದಿನ ಅಗತ್ಯವಿರುವ 75 ಲಕ್ಷ ಲೀಟರ್ ನೀರಿನ ಪೂರೈಕೆಗೆ 9,200 ನೀರು ಸಂಪರ್ಕ ನೀಡಲಾಗಿದೆ. ಜತೆಗೆ 34 ಶಿಕ್ಷಣ ಸಂಸ್ಥೆ-ಅಂಗನವಾಡಿ ಕೇಂದ್ರಗಳು, 270 ಸ್ಲಂ ಪ್ರದೇಶದಲ್ಲಿ ನಳ್ಳಿ ಸಂಪರ್ಕವಿದೆ. ಡ್ಯಾಂ ನೀರು ಶುದ್ಧೀಕರಿಸಲು ನೆಕ್ಕಿಲಾಡಿ ರೇಚಕ ಸ್ಥಾವರವಿದೆ. ಅಲ್ಲಿಂದ ಪುತ್ತೂರು ಸಿಟಿಒ ಗುಡ್ಡೆ ಪ್ರಧಾನ ಪಂಪ್‌ಹೌಸ್ ಗೆ ಬರುತ್ತದೆ. ಅಲ್ಲಿಂದ ಕಬಕ ರಕ್ತೇಶ್ವರಿ, ಬಲ್ನಾಡ್, ಬೀರಮಲೆ ಟ್ಯಾಂಕ್‌ಗಳಿಗೆ ವರ್ಗಾವಣೆಯಾಗುತ್ತದೆ. ಇದಲ್ಲದೆ ಕೃಷ್ಣನಗರ ಸ್ಥಾವರಕ್ಕೆ 15 ಲಕ್ಷ ಲೀಟರ್ ನೀರು ನೇರ ಪೂರೈಕೆಯಾಗತ್ತದೆ. ಈ ನೀರು ಪುತ್ತೂರಿನ ಸಮತಟ್ಟು ಮತ್ತು ತಗ್ಗು ಪ್ರದೇಶಗಳಿಗೆ ಮಾತ್ರ ಪೂರೈಕೆಯಾಗುತ್ತದೆ.

    ನೆಕ್ಕಿಲಾಡಿ ಡ್ಯಾಂನಲ್ಲಿ ಈ ಬಾರಿ ಬಹಳ ಬೇಗ ಡ್ಯಾಂ ಗೇಟ್ ಅಳವಡಿಸಲಾಗಿದೆ. ಮೂರು ವಾರದ ಹಿಂದೆ ಬಿದ್ದ ಮಳೆಯಿಂದ ಕುಮಾರಧಾರಾ ನದಿ ನೀರಿನ ಮಟ್ಟ ಹೆಚ್ಚಳವಾಗಿದ್ದು, ನೆಕ್ಕಿಲಾಡಿ ಡ್ಯಾಂನಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಮಾರ್ಚ್ ಕೊನೇ ವಾರ ಅಥವಾ ಜೂನ್ 2ನೇ ವಾರದವರೆಗೆ ಪುತ್ತೂರಿಗೆ ನೀರಿನ ಬರ ಕಾಡದು.
    ರೂಪಾ ಶೆಟ್ಟಿ, ಪೌರಾಯುಕ್ತೆ, ನಗರಸಭೆ ಪುತ್ತೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts