More

    ಜಿಲ್ಲೆಯಲ್ಲಿ ಭತ್ತ ನಾಟಿಗೆ ಆಸಕ್ತಿ: ಬಾಗೇಪಲ್ಲಿ, ಚಿಂತಾಮಣಿ ತಾಲೂಕಿನಲ್ಲಿ ಉತ್ತಮ ಸಾಧನೆ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಹಲವು ವರ್ಷಗಳ ಬಳಿಕ ಭತ್ತದ ನಾಟಿಯಲ್ಲಿ ನಿಗದಿತ ಗುರಿಗಿಂತಲೂ ದಾಖಲೆ ಪ್ರಮಾಣದಲ್ಲಿ ಸಾಧನೆ ಕಂಡು ಬಂದಿದೆ.
    2,232 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಗುರಿ ಹೊಂದಲಾಗಿತ್ತು. ಇದರಲ್ಲಿ 2,371 ಹೆಕ್ಟೇರ್ ಪ್ರದೇಶಕ್ಕಿಂತಲೂ ಹೆಚ್ಚು ನಾಟಿ ಮಾಡಲಾಗಿದೆ. ಇದರೊಂದಿಗೆ ಶೇ.106.23 ಸಾಧನೆಯಾಗಿದೆ. 6 ತಾಲೂಕುಗಳ ಪೈಕಿ ಬಾಗೇಪಲ್ಲಿ ಮತ್ತು ಚಿಂತಾಮಣಿಯಲ್ಲಿ ಉತ್ತಮ ಸಾಧನೆ ಕಂಡು ಬಂದಿದೆ. ಇದಕ್ಕೆ ಅಂತರ್ಜಲಮಟ್ಟ ಹೆಚ್ಚಳ ಪ್ರಮುಖ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.


    ಹಿಂದೆ ನಿರಂತರ ಬರಗಾಲ, ಅಂತರ್ಜಲ ಮಟ್ಟ ಕುಸಿತ, ಕೊಳವೆಬಾವಿ ವೈಫಲ್ಯ, ನೀರಿನ ಅಭಾವ ಸೇರಿ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಭತ್ತದ ನಾಟಿಯಲ್ಲಿ ಉತ್ತಮ ಸಾಧನೆಯಾಗುತ್ತಿರಲಿಲ್ಲ. ಕಡಿಮೆ ಕೆಲಸದಲ್ಲೂ ಹಿನ್ನಡೆ ಕಂಡು ಬರುತ್ತಿತ್ತು. ಇದಕ್ಕೆ ಬಹುತೇಕರು ಬೇರೆ ಬೆಳೆ ನೆಚ್ಚಿಕೊಂಡಿದ್ದರು. ಕೇವಲ ಕೆರೆ-ಕುಂಟೆ ಸುತ್ತಲಿನ ಪ್ರದೇಶದ ರೈತರು ಭತ್ತ ನಾಟಿ ಮಾಡುತ್ತಿದ್ದರು. ಅದರಲ್ಲೂ ಶ್ರೀಮಂತ ರೈತರ ಪಾಲು ಹೆಚ್ಚು. ಉಳಿದಂತೆ ಇತರರು ನೀರಿನ ಅಭಾವದಿಂದ ದೂರ ಸರಿಯುತ್ತಿದ್ದರು. ಆದರೆ, ಇದೀಗ ಸಮೃದ್ಧ್ಧ ನೀರಿನ ಸೌಲಭ್ಯವು ಬಹುತೇಕರಲ್ಲಿ ಈ ಬೆಳೆಯ ಕಡೆಗೆ ಒಲವು ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.


    ಜಿಲ್ಲೆಯಲ್ಲಿ ಕಳೆದ ಸಾಲಿನ ಹಿಂಗಾರು ಅವಧಿಯಿಂದ ಹಿಡಿದು ಇಂದಿನ ಮುಂಗಾರು ಅವಧಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. 40 ವರ್ಷಗಳ ಬಳಿಕ ಅತಿವೃಷ್ಟಿ ಕಂಡು ಬಂದಿದೆ. ಈ ಭಾಗದಲ್ಲಿನ ಬಹುತೇಕ ಕೆರೆಗಳು, ಜಲಾಶಯಗಳು ತುಂಬಿ ಕೋಡಿ ಹರಿಯುತ್ತಿವೆ. ಕೃಷಿ ಜಮೀನಿನಲ್ಲಿ ಮಣ್ಣಿನ
    ತೇವಾಂಶ ಹೆಚ್ಚಳವಾಗಿದ್ದು ಭತ್ತದ ನಾಟಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಮತ್ತಷ್ಟು ಉತ್ತಮ ಸಾಧನೆಯಾಗುವ ನಿರೀಕ್ಷೆ ಮೂಡಿದೆ.ಬಾಗೇಪಲ್ಲಿ, ಚಿಂತಾಮಣಿ, ಗೌರಿಬಿದನೂರು ತಾಲೂಕು ಭತ್ತ ಬೆಳೆಯುವುದರಲ್ಲಿ ಮುಂಚೂಣಿಯಲ್ಲಿವೆ. ಉಳಿದಂತೆ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಗುಡಿಬಂಡೆಯಲ್ಲಿ ನಿರೀಕ್ಷೆಗೆ ಅನುಗುಣವಾಗಿ ಸಾಧನೆ ಕಂಡು ಬಂದಿಲ್ಲ. ಪ್ರಸಕ್ತ ಸಾಲಿನಲ್ಲಿ ಹೂವು, ಹಣ್ಣು, ತರಕಾರಿ ಬೆಳೆಯುವಲ್ಲಿ ಆಸಕ್ತಿ ಕಂಡು ಬಂದಿದೆ.

    ಜಿಲ್ಲೆಯಲ್ಲಿ ಉತ್ತಮ ಮಳೆಯ ಹಿನ್ನೆಲೆಯಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ರೈತರು ಭತ್ತ ನಾಟಿ ಮಾಡಿದ್ದಾರೆ. ಒಳ್ಳೆಯ ಗುರಿ ಸಾಧನೆಯಾಗಿದೆ.
    ಜಾವೀದಾ ನಸೀಮಾ ಖಾನ್, ಜಂಟಿ ಕೃಷಿ ನಿರ್ದೇಶಕಿ, ಚಿಕ್ಕಬಳ್ಳಾಪುರ

    ಹಿಂದೆ ಮಳೆ ಮತ್ತು ನೀರಿನ ಅಭಾವದ ಹಿನ್ನೆಲೆಯಲ್ಲಿ ಭತ್ತದ ನಾಟಿ ಕೈ ಬಿಡಲಾಗಿತ್ತು. ಇದೀಗ ಬೆಳೆಯಲು ಪೂರಕ ವಾತಾವರಣವಿದ್ದು ಹಲವು ವರ್ಷಗಳ ಬಳಿಕ ಭತ್ತ ಬೆಳೆಯಲಾಗುತ್ತಿದೆ.
    ನರಸಿಂಹಮೂರ್ತಿ, ರೈತ, ಬಾಗೇಪಲ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts