More

    ಬರಿದಾದ ಕುಮದ್ವತಿ ಒಡಲು, ತುಂಗಾ ಮೇಲ್ದಂಡೆ ಕಾಲುವೆಗಳಿಗೆ ಹರಿಯದ ನೀರು

    ರಟ್ಟಿಹಳ್ಳಿ: ತಾಲೂಕಿನ ಜನರ ಜೀವನಾಡಿಯಾಗಿರುವ ಕುಮದ್ವತಿ ನದಿ ಹಾಗೂ ತುಂಗಾ ಮೇಲ್ದಂಡೆ ಕಾಲುವೆಗಳು ನೀರಿಲ್ಲದೆ ಬರಿದಾಗಿವೆ.

    ಪ್ರತಿ ವರ್ಷ ಈ ವೇಳೆಗೆ ಆರ್ಭಟಿಸುತ್ತಿದ್ದ ಮುಂಗಾರು ಮಳೆ ಮಾಯವಾಗಿದ್ದು, ಅರ್ಧ ಜುಲೈ ತಿಂಗಳು ಮುಗಿಯುತ್ತ ಬಂದರೂ ಜಮೀನಿಗೆ ಹನಿ ನೀರೂ ಹರಿಯುತ್ತಿಲ್ಲ ಎಂದು ರೈತರು ಆತಂಕಗೊಂಡಿದ್ದಾರೆ.


    ತುಂಗಾ ನದಿಯ ಕಾಲುವೆಗಳಲ್ಲಿ ನೀರು ಹರಿಯದ್ದರಿಂದ ಜನ ಜಾನುವಾರುಗಳಿಗೆ, ಕೆರೆ- ಕಟ್ಟೆಗಳಿಗೆ ನೀರು ಹರಿಯುತ್ತಿಲ್ಲ. ತುಂಗಾ ಮೇಲ್ದಂಡೆ ಕಾಲುವೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಶೀಘ್ರವೇ ನೀರು ಹರಿಸಲು ಕ್ರಮ ಕೈಗೊಂಡು ರೈತ ಸಂಕುಲಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಈ ಭಾಗದ ರೈತರು ಒತ್ತಾಯಿಸುತ್ತಿದ್ದಾರೆ.


    ಶಿವಮೊಗ್ಗದ ಗಾಜನೂರು ಡಾಂನಿಂದ ಪ್ರತಿ ವರ್ಷ ಜೂನ್ ತಿಂಗಳ ಪ್ರಾರಂಭದಲ್ಲಿ ತುಂಗಾ ಮೇಲ್ದಂಡೆಯ ಮುಖ್ಯ ಕಾಲುವೆಗಳಿಗೆ ನೀರು ಹರಿಯುತ್ತದೆ. 93 ಕಿ.ಮೀ. ಅಂತರದಲ್ಲಿ ತಾಲೂಕಿನ ಮುಖ್ಯ ಕಾಲುವೆಗಳು ಗಾಜನೂರ ಡ್ಯಾಂಗೆ ಸಂಪರ್ಕದಲ್ಲಿದ್ದು, ಈ ಬಾರಿ ಮುಂಗಾರು ಮಳೆಯ ಕೊರತೆಯಿಂದಾಗಿ ಕಾಲುವೆಗಳಲ್ಲಿ ನೀರು ಹರಿಯುತ್ತಿಲ್ಲ.

    ಬರಿದಾದ ಕುಮದ್ವತಿ ಒಡಲು, ತುಂಗಾ ಮೇಲ್ದಂಡೆ ಕಾಲುವೆಗಳಿಗೆ ಹರಿಯದ ನೀರು

    ತಾಲೂಕಿನ ಕಮಲಾಪುರ ಗ್ರಾಮದಿಂದ ನೇಶ್ವಿ ಗ್ರಾಮದವರೆಗೆ (90- 156) ಕಿ.ಮೀ. ವ್ಯಾಪ್ತಿಯೊಳಗೆ ಈ ಮುಖ್ಯ ಕಾಲುವೆಗಳು, ಉಪಕಾಲುವೆಗಳು ಒಳಪಡುತ್ತವೆ. ಜೂನ್ ತಿಂಗಳಿನಲ್ಲಿ ಕಾಲುವೆಗೆ ಹರಿಯುವ ನೀರು ಮುಂದಿನ ಐದಾರು ತಿಂಗಳವರೆಗೆ ಕೊರತೆಯಾಗುವುದಿಲ್ಲ. ಈ ನೀರು ಅಕ್ಕ ಪಕ್ಕದ ಕೆರೆಗಳಿಗೂ ಹರಿದು ಜನ-ಜಾನುವಾರುಗಳಿಗೆ ಉಪಯೋಗವಾಗುತ್ತದೆ.


    ಕುಮದ್ವತಿ ಬರಿದು:
    ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಬಳಿ ಅಂಜನಾಪುರ ಕೆರೆಯಿಂದ ಮದಗದ ಕೆರೆಯ ಮೂಲಕ ಕುಮದ್ವತಿ ನದಿಗೆ ನೀರು ಹರಿಯುತ್ತದೆ.

    ಈ ಬಾರಿ ಮಳೆಯ ಅಭಾವದಿಂದಾಗಿ ಕುಮದ್ವತಿ ನದಿಯ ಒಡಲೂ ಬರಿದಾಗಿದೆ. ಮದಗದ ಕೆರೆ, ತಿಪ್ಪಾಯಿಕೊಪ್ಪ, ಖಂಡೇಬಾಗೂರು, ರಾಮತೀರ್ಥ, ಹಿರೇಮೊರಬ, ಎಲಿವಾಳ, ರಟ್ಟಿಹಳ್ಳಿ, ಸಣ್ಣಗುಬ್ಬಿ, ಕುಡುಪಲಿ, ಬಡಾಸಂಗಾಪುರ ಹೀಗೆ ವಿವಿಧ ಗ್ರಾಮಗಳ ಅಂಚಿನ ಮೂಲಕ ರಾಣೆಬೆನ್ನೂರು ತಾಲೂಕಿನ ಮುದೇನೂರ ಬಳಿ ಕುಮದ್ವತಿ ನದಿಯು ತುಂಗಾಭದ್ರಾ ನದಿಗೆ ಸೇರುತ್ತದೆ. ಈ ನದಿಯ ನೀರು ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಗೆ ಆಸರೆಯಾಗಿದೆ.

    ಆದರೆ, ಈ ಬಾರಿ ಕುಮದ್ವತಿ ನದಿ ಬತ್ತಿದ್ದರಿಂದ ರಟ್ಟಿಹಳ್ಳಿ ಸೇರಿ ಹುಲ್ಲತ್ತಿ, ಚಿಕ್ಕಯಡಚಿ, ಮಕರಿ, ಶಿರಗಂಬಿ, ಹಳ್ಳೂರು, ಹಿರೇಕಬ್ಬಾರ, ಕಣವಿಸಿದ್ದಗೇರಿ, ನೇಶ್ವಿ, ಮಾವಿನತೋಪ, ಕುಂಚೂರು, ಕಡೂರು, ಬತ್ತಿಕೊಪ್ಪ, ನಾಗವಂದ ಹೀಗೆ ಹಲವಾರು ಕೆರೆಗಳು ನೀರು ಕಾಣದೇ ಬತ್ತಿ ಹೋಗಿವೆ.

    ಅಂತರ್ಜಲ ಕುಸಿತ: ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ 370ಕ್ಕೂ ಹೆಚ್ಚು ಬೋರ್‌ವೆಲ್‌ಗಳು ಇದ್ದು, ಅಂತರ್ಜಲಮಟ್ಟ ಕುಸಿತದಿಂದ 50ಕ್ಕೂ ಹೆಚ್ಚು ಬೋರ್‌ವೆಲ್‌ಗಳು ಬಂದ್ ಆಗಿವೆ. ನೀರಾವರಿಗಾಗಿ 13 ಸಾವಿರ ಬೋರ್‌ವೆಲ್‌ಗಳಿದ್ದು, ಈ ಪೈಕಿ 4 ಸಾವಿರ ಬೋರ್‌ವೆಲ್‌ಗಳಲ್ಲಿ ಹನಿ ನೀರೂ ಬರುತ್ತಿಲ್ಲ.


    ಜು. 6ರಂದು ಗಾಜನೂರ ಡ್ಯಾಂನಿಂದ ತುಂಗಾ ಮೇಲ್ದಂಡೆಯ ಕಾಲುವೆಗಳಿಗೆ ನೀರು ಬಿಡಲಾಗಿತ್ತು. ಕೆಲವು ಕಾಲುವೆಗಳಲ್ಲಿ ಸಮಸ್ಯೆ ಇದ್ದ ಕಾರಣ ತಡೆಯಲಾಗಿತ್ತು. ಮತ್ತೆ ಜು. 11ರಂದು ಕಾಲುವೆಗೆ 800 ಕ್ಯೂಸೆಕ್ ನೀರು ಹರಿಸಲಾಗಿದೆ. ಸದ್ಯ ಹೊನ್ನಾಳಿ ತಾಲೂಕು ಭಾಗದ ಕಾಲುವೆಗಳಲ್ಲಿ ನೀರು ಬರುತ್ತಿದ್ದು, 2-3 ದಿವಸಗಳಲ್ಲಿ ರಟ್ಟಿಹಳ್ಳಿ ತಾಲೂಕಿನ ಕಾಲುವೆಗಳಿಗೆ ನೀರು ಹರಿಯಲಿದೆ. – ವಿ. ಹನುಮಂತಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಯುಟಿಪಿ ಉಪವಿಭಾಗ ರಟ್ಟಿಹಳ್ಳಿ


    ಮುಂಗಾರು ಕೊರತೆಯಿಂದಾಗಿ ರೈತರು ಎರಡ್ಮೂರು ಸಲ ಬಿತ್ತನೆ ಮಾಡಿ ಮಳೆ ಇಲ್ಲದೇ ಸಂಕಷ್ಟ ಅನುಭವಿಸಿದ್ದಾರೆ. ವಾರದಿಂದ ಸಾಧಾರಣ ಮಳೆಯಾಗುತ್ತಿದ್ದು, ರೈತರು ಮತ್ತೆ ಬಿತ್ತನೆ ಮಾಡಿದ್ದಾರೆ. ತುಂಗಾ ಮೇಲ್ದಂಡೆಯ ಮುಖ್ಯ ಕಾಲುವೆಗಳಲ್ಲಿ ನೀರು ಹರಿದರೆ ರೈತರಿಗೆ ಅನುಕೂಲವಾಗುತ್ತದೆ. – ರಾಮಣ್ಣ ಕೆಂಚಳ್ಳೇರ, ರೈತ ಸಂಘದ ಜಿಲ್ಲಾಧ್ಯಕ್ಷ

    ತುಂಗಾ ಎಡ-ಬಲದಂಡೆ ನಾಲೆಗಳಿಗೆ ನೀರು
    ಶಿವಮೊಗ್ಗ: ಪ್ರಸಕ್ತ ಸಾಲಿನ ಮುಂಗಾರು ಬೆಳೆಗಳಿಗೆ ತುಂಗಾ ಅಣೆಕಟ್ಟು ಯೋಜನೆಯ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನ.30ರವರೆಗೆ ನೀರು ಹರಿಸಲಾಗುವುದು ಎಂದು ತುಂಗಾ ಯೋಜನಾ ನೀರಾವರಿ ಅಧಿಕಾರಿ ಮತ್ತು ಕಾರ್ಯಪಾಲಕ ಇಂಜಿನಿಯರ್ ಬಿ.ಸುರೇಶ್ ತಿಳಿಸಿದ್ದಾರೆ. ಗುರುವಾರದಿಂದ ನೀರು ಹರಿಸಲಾಗುತ್ತಿದ್ದು ಕರ್ನಾಟಕ ನೀರಾವರಿ ಕಾಯ್ದೆ ಅನ್ವಯ ಬೆಳೆ ಮಾದರಿ ಉಲ್ಲಂಘಿಸುವವರು, ನೀರಾವರಿ ಕಾಲುವೆ ಕಟ್ಟಡಗಳನ್ನು ಜಖಂಗೊಳಿಸುವವರು, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಬಳಸುವವರು ಮತ್ತು ಅನಧಿಕೃತ ನೀರಾವರಿ ಬೆಳೆಗಾರರು ವಿವಿಧ ನಿಯಮಗಳ ಪ್ರಕಾರ ಕಾನೂನು ಕ್ರಮಕ್ಕೆ ಒಳಗಾಗುತ್ತಾರೆ. ಹಾಲಿ ಜಲಾಶಯದಲ್ಲಿ ಇರುವ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಅನುಸೂಚಿಯಲ್ಲಿ ನಮೂದಿಸಿದ ಕ್ಷೇತ್ರ ಹಾಗೂ ಬೆಳೆಗಳಿಗೆ ಮಾತ್ರ ನೀರು ಒದಗಿಸಲು ಉದ್ದೇಶಿಸಲಾಗಿದೆ. ಪ್ರಕಟಿತ ಬೆಳೆಗಳನ್ನು ಬಿಟ್ಟು ಬೇರೆ ಬೆಳೆ ಹಾಕಿ ನಿಯಮ ಉಲ್ಲಂಘನೆ ಮಾಡಿ ನಷ್ಟ ಅನುಭವಿಸಿದಲ್ಲಿ ಅದಕ್ಕೆ ಸಂಬಂಧಪಟ್ಟ ರೈತರೇ ಹೊಣೆಗಾರರು. ಜಲಸಂಪನ್ಮೂಲ ಇಲಾಖೆ ಜವಾಬ್ದಾರಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts