More

    ಒಂದು ತಿಂಗಳಿಗೆ ನೀರಿನ ಬಿಲ್ 5209 ರೂ: ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ವಾಗ್ದಾಳಿ

    ಮಂಡ್ಯ: ನಗರದಲ್ಲಿ ಗೃಹಬಳಕೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ಜನವರಿಯಲ್ಲಿ ಬಂದಿರುವ ನೀರಿನ ಬಿಲ್ 5209 ರೂ.
    ಹೌದು, ಜಲಮಂಡಳಿಯ ಅವೈಜ್ಞಾನಿಕ ನೀತಿಗಳಿಂದಾಗಿ ಸಾರ್ವಜನಿಕರನ್ನು ಆತಂಕಕ್ಕೆ ದೂಡಿದೆ. ನಗರದ ಸಮೀವುಲ್ಲಾ ಎಂಬುವರ ಮನೆಯ ನೀರಿನ ಬಿಲ್ 5209 ರೂ ಬಂದಿದೆ. ಅಂತೆಯೇ ಸುರೇಶ್ ಎಂಬುವರಿಗೆ 1210 ರೂ ಬಿಲ್ ನೀಡಲಾಗಿದೆ. ಇದು ಒಬ್ಬಿಬ್ಬರ ಕಥೆಯಲ್ಲ. ಬದಲಿಗೆ ಸಾವಿರಾರೂ ಜನರಿಗೆ ಇಂತಹ ಆಘಾತ ಎದುರಾಗಿದ್ದು, ಇದರಿಂದಾಗಿ ಬೇಸತ್ತು ಬಿಲ್ ಪಾವತಿಸದ ಪರಿಣಾಮ 10 ಸಾವಿರ ರೂ ಬಾಕಿ ಉಳಿದುಕೊಂಡಿದೆ.
    ಸುದ್ದಿಗೋಷ್ಠಿಯಲ್ಲಿ ಅವೈಜ್ಞಾನಿಕ ಬಿಲ್‌ಗಳನ್ನು ಪ್ರದರ್ಶಿಸಿದ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ಕರೊನಾ ಸಂಕಷ್ಟದಲ್ಲಿ ಆರ್ಥಿಕವಾಗಿ ಬಳಲುತ್ತಿರುವ ಸಾರ್ವಜನಿಕರು ಮಂಡ್ಯ ಜಲಮಂಡಳಿ ವಿಧಿಸುತ್ತಿರುವ ನೀರಿನ ದರ ಕಂಡು ಭಯಭೀತರಾಗಿದ್ದಾರೆ. ನಗರ ವ್ಯಾಪ್ತಿಯಲ್ಲಿ 2019ರ ಏಪ್ರಿಲ್‌ವರೆಗೆ 120 ರೂ ಇದ್ದ ಕುಡಿಯುವ ನೀರಿನ ಸುಂಕ ಈಗ ಮಹಾನಗರ ಪಾಲಿಕೆಗಳಿಗಿಂತಲೂ ದುಪ್ಪಟ್ಟಾಗಿರುವುದು ವಿಪರ್ಯಾಸ. ಮೈಸೂರಿನಲ್ಲಿ 1000 ಲೀಟರ್ ನೀರಿಗೆ 8 ರೂನಂತೆ ದರ ವಿಧಿಸುತ್ತಿದ್ದಾರೆ. ಮಂಡ್ಯದಲ್ಲಿ 26.25 ರೂ ತೆಗೆದುಕೊಳ್ಳಲಾಗುತ್ತಿದೆ. ಮಂಡ್ಯ ನಗರವಾಸಿಗಳಿಂದ ಒಂದೆರಡು ತಿಂಗಳಿಂದ ಬರುತ್ತಿರುವ ದುಬಾರಿ ಮೊತ್ತ ಬಿಲ್‌ಗಳನ್ನು ಜಲಮಂಡಳಿಯು ಸಾರ್ವಜನಿಕರಿಂದ ಹಗಲು ದರೋಡೆ ಮಾಡುತ್ತಿರುವುದು ಕಣ್ಣಿಗೆ ಕಾಣುತ್ತಿದೆ ಎಂದು ಆರೋಪಿಸಿದರು.
    ತಿಂಗಳಿಗೆ ಹಲವು ಬಾರಿ ಕಾಮಗಾರಿ ಮಾಡುವ ನೆಪದಲ್ಲಿ ಎರಡು ಮೂರು ದಿನ ನೀರಿನ ಪೂರೈಕೆಯನ್ನು ಸ್ಥಗಿತ ಮಾಡಲಾಗುತ್ತದೆ. ಮತ್ತೊಂದೆಡೆ ಇಷ್ಟಬಂದಂತೆ ದರ ನಿಗದಿ ಮಾಡಲಾಗುತ್ತಿದೆ. ಸಮೀವುಲ್ಲಾ ಅವರಿಗೆ 5209 ಹಾಗೂ ಸುರೇಶ್ ಅವರಿಗೆ 1210 ರೂ ಬಂದಿದೆ. ಈ ರೀತಿ ಹಲವರಿಗೆ ದುಬಾರಿ ಮೊತ್ತ ಬಿಲ್ ಬಂದಿದೆ. ಕೂಡಲೇ ಜಲಮಂಡಳಿ ಈ ಬಗ್ಗೆ ಎಚ್ಚೆತ್ತುಕೊಂಡು ನೀರಿಗೆ ವಿಧಿಸುತ್ತಿರುವ ಅವೈಜ್ಞಾನಿಕ ದರ ಹಿಂಪಡೆಯಬೇಕು. ತಪ್ಪಿದರೆ ಜಲಮಂಡಳಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. ಜತೆಗೆ ನೀರಿನ ಮೀಟರ್ ಕಿತ್ತು ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
    ಮುಖಂಡರಾದ ಪ್ರಸನ್ನ ಎನ್.ಗೌಡ ಅರಕೆರೆ, ಹಾಲಹಳ್ಳಿ ಮಹೇಶ್, ಶೆಟ್ಟಹಳ್ಳಿ ರವಿಕುಮಾರ್, ಸಂತೋಷ್, ಲಿಂಗಪ್ಪಾಜಿ, ವಿಜಿಯ್‌ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts