More

    ಔಷಧ ಅಂಗಡಿಗಳ ಮೇಲೆ ನಿಗಾ, ಮಾತ್ರೆ ಖರೀದಿಸುವವರ ಮಾಹಿತಿ ಸಂಗ್ರಹ ತಪಾಸಣೆಗೆ ಮುಂದಾಗದವರ ಮೇಲೆ ಎಚ್ಚರ

    ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
    ಗ್ರಾಮಾಂತರ ಜಿಲ್ಲೆಯಲ್ಲಿ ಕರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಸೋಂಕಿನ ಸರಪಳಿ ತುಂಡರಿಸಲು ಸಾಕಷ್ಟು ಕಸರತ್ತು ನಡೆಸುತ್ತಿರುವ ಜಿಲ್ಲಾಡಳಿತ ಈಗ ಮೆಡಿಕಲ್ ಸ್ಟೋರ್‌ಗಳತ್ತ ಕಣ್ಣಿಟ್ಟಿದೆ.

    ಸೋಂಕಿತರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚುವುದು ಕಗ್ಗಂಟಾಗಿದೆ. ಇದರ ಜತೆಗೆ ಸೋಂಕಿನ ಲಕ್ಷಣವಿಲ್ಲದವರಲ್ಲೂ ಸೋಂಕು ದೃಢಪಡುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವು ತರಿಸಿದೆ. ಇದರ ಮೂಲ ಹುಡುಕುತ್ತಿರುವ ಜಿಲ್ಲಾಡಳಿತ, ಮೆಡಿಕಲ್ ಸ್ಟೋರ್‌ಗಳಲ್ಲಿ ಜ್ವರ, ಕೆಮ್ಮು, ನೆಗಡಿ ಮತ್ತಿತರ ರೋಗಗಳಿಗೆ ಮಾತ್ರೆ ಅಥವಾ ಔಷಧ ಪಡೆದವರ ಮಾಹಿತಿ ಕಲೆ ಹಾಕುತ್ತಿದ್ದು, ಇಂಥವರ ತಪಾಸಣೆ ನಡೆಸಲು ಚಿಂತನೆ ನಡೆಸಿದೆ.

    ಮೆಡಿಕಲ್ ಸ್ಟೋರ್‌ಗಳಲ್ಲಿ ಖರೀದಿ: ಸೋಂಕಿನ ಲಕ್ಷಣ ಕಂಡುಬಂದರೂ ಹಲವು ಮಂದಿ ತಪಾಸಣೆಗೆ ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಮನೆ ಮದ್ದಿಗೆ ಮೊರೆಹೋದರೆ, ಮತ್ತೆ ಕೆಲವರು ಮೆಡಿಕಲ್ ಸ್ಟೋರ್‌ಗಳಲ್ಲಿ ಔಷಧ ಪಡೆಯುತ್ತಿದ್ದಾರೆ. ವೈದ್ಯರ ಚೀಟಿ ಆಧರಿಸಿ ಔಷಧ ಪಡೆಯುವವರು ಒಂದೆಡೆಯಾದರೆ, ಪರಿಚಯದ ಮೂಲಕ ಮಾತ್ರೆ ಖರೀದಿಸುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

    ಈ ಹಿನ್ನೆಲೆಯಲ್ಲಿ ಕರೊನಾ ಸೋಂಕಿತರು ಸೂಕ್ತ ಸಮಯದಲ್ಲಿ ತಪಾಸಣೆಗೊಳಪಡದೆ ಸೋಂಕು ತೀವ್ರಗೊಂಡ ಬಳಿಕ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಸೋಂಕಿತರ ಸಾವಿನ ಪ್ರಮಾಣ ಹೆಚ್ಚಬಹುದೆಂಬ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಮೆಡಿಕಲ್ ಸ್ಟೋರ್‌ಗಳಿಂದ ಗ್ರಾಹಕರ ಮಾಹಿತಿ ಪಡೆಯಲಾಗುತ್ತಿದೆ.

    ಮುಂದೆ ಬರುತ್ತಿಲ್ಲ: ಸೋಂಕಿನ ಬಗ್ಗೆ ಜಿಲ್ಲಾಡಳಿತ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ, ಕೆಲವರು ಭೀತಿಗೊಳಗಾಗುತ್ತಿದ್ದಾರೆ. ಮುಖ್ಯವಾಗಿ ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದೇ ದೊಡ್ಡ ಮುಜುಗರ ಎಂಬ ಭಾವನೆ ಬಹಳಷ್ಟು ಮಂದಿಯಲ್ಲಿದೆ. ಅಲ್ಲದೆ ಸೋಂಕಿತರ ಸಂಪರ್ಕದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡುತ್ತಾರೆ ಎಂಬ ಭೀತಿ ಒಂದೆಡೆಯಾದರೆ ನೆರೆ-ಹೊರೆಯವರು ಸೋಂಕಿತರನ್ನು ನೋಡುವ ರೀತಿಯೇ ಬದಲಾಗುತ್ತದೆ ಎಂಬ ಆತಂಕ ಜನರನ್ನು ತಪಾಸಣೆಗೆ ಮುಂದಾಗದಂತೆ ತಡೆಯುತ್ತಿದೆ ಎನ್ನಲಾಗಿದೆ.

    ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಜ್ವರ, ಶೀತ, ಕೆಮ್ಮಿನಂತಹ ಕಾಯಿಲೆಗಳಿಗೆ ಸ್ಥಳೀಯ ವೈದ್ಯರಿಂದ ತಪಾಸಣೆಗೊಳಪಟ್ಟು ವೈದ್ಯರ ಚೀಟಿ ಆಧರಿಸಿ ಔಷಧ ಖರೀದಿಸಬಹುದು. ಆದರೆ ಇಂಥವರ ಸಂಪೂರ್ಣ ವಿವರ ಪಡೆದು ಮೆಡಿಕಲ್ ಸ್ಟೋರ್‌ನವರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

    ವೈದ್ಯರ ಚೀಟಿ ಆಧಾರದಲ್ಲಿ ಔಷಧ ನೀಡಬೇಕು. ಕರೊನಾ ಲಕ್ಷಣಗಳಾದ ಜ್ವರ, ಕೆಮ್ಮು, ನೆಗಡಿಯಂಥ ರೋಗಕ್ಕೆ ಔಷಧ ಪಡೆದವರು ಸಂಪೂರ್ಣ ಮಾಹಿತಿ ಪಡೆಯಬೇಕು. ವೈದ್ಯರ ಚೀಟಿ ಇಲ್ಲದೆ ಔಷಧ ನೀಡಬಾರದು, ಇಂಥ ವ್ಯಕ್ತಿಗಳು ಕಂಡುಬಂದರೆ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು.
    ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ

    ಮೆಡಿಕಲ್ ಸ್ಟೋರ್‌ಗಳಿಗೆ ಔಷಧ ಪಡೆಯಲು ಬರುವವರ ಮೊಬೈಲ್ ಸಂಖ್ಯೆ, ವಿಳಾಸವನ್ನು ಕಡ್ಡಾಯವಾಗಿ ಪಡೆಯಬೇಕೆಂದು ಸೂಚನೆ ನೀಡಲಾಗಿದೆ. ಇಂಥವರ ಬಗ್ಗೆ ಜಿಲ್ಲಾ ಆರೋಗ್ಯ ನಿಗಾವಹಿಸಲಿದ್ದು, ಕರೊನಾ ಸೋಂಕು ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.
    ಡಾ.ಮಂಜುಳಾದೇವಿ, ಜಿಲ್ಲಾ ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts