More

    ಪುತ್ತೂರಿನ ತ್ಯಾಜ್ಯ ಇನ್ಮುಂದೆ ಇಂಧನ

    ಶ್ರವಣ್ ಕುಮಾರ್ ನಾಳ ಪುತ್ತೂರು

    ಪುತ್ತೂರಿನ ಬನ್ನೂನಲ್ಲಿರುವ ಲ್ಯಾಂಡ್‌ಫಿಲ್ ಸೈಟ್‌ನಲ್ಲಿ ಜೈವಿಕ ಅನಿಲ ಘಟಕ ನಿರ್ಮಾಣ ಅಂತಿಮ ಹಂತದಲ್ಲಿದ್ದು, ಮೂರು ತಿಂಗಳಲ್ಲಿ ಬಯೋಗ್ಯಾಸ್ ಉತ್ಪಾದನೆಗೆ ಘಟಕ ಸಿದ್ಧವಾಗಲಿದೆ. ಈ ಅನಿಲವನ್ನು ಇಂಧನ ರೂಪದಲ್ಲಿ ನಗರಸಭೆಯ ತ್ಯಾಜ್ಯ ಸಾಗಾಟ ವಾಹನಗಳಿಗೆ ಬಳಸುವ ಮಹತ್ತರ ಯೋಜನೆ ಅನುಷ್ಠಾನಗೊಳ್ಳಲಿದೆ.
    ಪುತ್ತೂರು ನಗರಸಭೆ ಜತೆ 15 ವರ್ಷಗಳ ಒಪ್ಪಂದದಿಂದ ಸಚ್ಛ ಭಾರತ ಟ್ರಸ್ಟ್, ರೋಟರಿ ಕ್ಲಬ್ ಸಹಯೋಗದಲ್ಲಿ ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲಿ ನಾಲ್ಕು ಕೋಟಿ ರೂ. ವೆಚ್ಚದ ಬಯೋಗ್ಯಾಸ್ ಪ್ಲಾಂಟ್ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಟ್ರಸ್ಟ್ ನೇತೃತ್ವದಲ್ಲಿ 5-ಟ್ಯಾಪ್ ಸೊಲ್ಯೂಷನ್ ಘಟಕದ ಗುತ್ತಿಗೆ ವಹಿಸಿಕೊಂಡಿದೆ. ನಗರದಲ್ಲಿ ಪ್ರತಿದಿನ 18 ಟನ್ ತ್ಯಾಜ್ಯ ಸಂಗಹವಾಗುತ್ತಿದ್ದು, ಅದನ್ನು ನಗರಸಭೆ ವತಿಯಿಂದ ಸಂಗ್ರಹಿಸಿ ಬನ್ನೂರು ನೆಕ್ಕಿಲದ ನೆಲ ಭರ್ತಿ ಸ್ಥಳದಲ್ಲಿ ಹಾಕಲಾಗುತ್ತಿದೆ. ಈ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪತ್ತಿ ಮಾಡಲಾಗುತ್ತದೆ. ಮೊದಲ ಹಂತವಾಗಿ ನಗರಸಭೆಯ ತ್ಯಾಜ್ಯ ಸಾಗಾಟ ವಾಹನಗಳ ಇಂಧನವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.
    ಬಯೋಗ್ಯಾಸ್, ಡಿಸೇಲ್‌ಗೆ ತಗಲುವ ಧಾರಣೆ ಸಮ ಪ್ರಮಾಣದಲ್ಲಿ ಇದ್ದರೂ ಮೈಲೇಜ್‌ನಲ್ಲಿ ಇದು ಡಿಸೇಲ್‌ಗಿಂತ ಹೆಚ್ಚು ಲಾಭದಾಯಕ. ಒಂದು ಲೀಟರ್ ಡಿಸೇಲ್‌ನಲ್ಲಿ 7-8 ಕಿ.ಮೀ. ವಾಹನ ಸಂಚರಿಸಿದರೆ, ಬಯೋಗ್ಯಾಸ್‌ನಲ್ಲಿ 9-10 ಕಿ.ಮೀ. ದೂರ ಸಂಚರಿಸಬಹುದು. ಮಧ್ಯಪ್ರದೇಶದ ಇಂದೋರ್‌ನಲ್ಲಿ ಸಿಟಿ ಬಸ್‌ಗಳಿಗೆ ಬಯೋಗ್ಯಾಸ್ ಅಳವಡಿಸುತ್ತಿದ್ದಾರೆ. ಆದರೆ ಕಸದಿಂದ ಅನಿಲ ಉತ್ಪಾದಿಸಿ ವಾಹನಗಳಿಗೆ ಬಳಕೆ ಮಾಡುವ ಪ್ರಯತ್ನ ದೇಶದಲ್ಲೇ ಮೊದಲನೆಯದ್ದು ಎನ್ನಲಾಗಿದೆ.

    ಸಿಎನ್‌ಜಿ ಕಿಟ್ ಕೌನ್ಸಿಲ್ ಅನುಮೋದನೆ
    ಪುತ್ತೂರು ನಗರಸಭೆಯಲ್ಲಿ ಘನತ್ಯಾಜ್ಯ ನಿರ್ವಹಣೆಗೆಂದು 17 ವಾಹನ ಸಹಿತ ಒಟ್ಟು 20 ವಾಹನಗಳಿವೆ. ಈ ಎಲ್ಲ ವಾಹನಕ್ಕೆ ಡೀಸೆಲ್ ಕಿಟ್‌ನೊಂದಿಗೆ ಸಿಎನ್‌ಜಿ ಕಿಟ್ ಅಳವಡಿಸಲು ನಗರಸಭೆ ಕೌನ್ಸಿಲ್ ಅನುಮೋದನೆ ನೀಡಿದೆ. ಒಂದು ವಾಹನಕ್ಕೆ ಸಿಎನ್‌ಜಿ ಕಿಟ್ ಅಳವಡಿಸಲು 2.15 ಲಕ್ಷ ರೂ. ತಗಲಲಿದೆ. ಇಲ್ಲಿ ಉತ್ಪಾದನೆಯಾದ ಗ್ಯಾಸ್ ಅನ್ನು ನಿರ್ದಿಷ್ಟ ಉದ್ದೇಶಕ್ಕೆ ಮಾರಾಟ ಮಾಡುವ ಟ್ರಸ್ಟ್ ಆದರಿಂದ ಸೂಕ್ತ ರಾಯಧನ ನಗರಸಭೆಗೆ ಪಾವತಿಸಲಿದೆ. ಇದರಿಂದ ಸಂಗ್ರಹವಾಗುವ ಹಣ ಹಾಗೂ ನಗರಸಭೆಗೆ ಘನತ್ಯಾಜ್ಯಕ್ಕೆ ಬರುವ ಅನುದಾನ ಬಳಸಿ ಕಿಟ್ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ನಗರಸಭೆ ಪೌರಯುಕ್ತ ಮಧು ಎಸ್.ಮನೋಹರ್ ತಿಳಿಸಿದ್ದಾರೆ.

    ಪ್ರಸ್ತುತ ಆರು ಟನ್ ಸಾಮರ್ಥ್ಯದ ಪ್ಲಾಂಟ್ ಅಂತಿಮ ಹಂತದಲ್ಲಿದೆ. ಇದರಲ್ಲಿ ಪ್ರತಿನಿತ್ಯ ಉತ್ಪಾದನೆಯಾಗುವ ಅನಿಲವನ್ನು ನಗರಸಭೆಯ ವಾಹನಗಳಿಗೆ ಬಳಸುವ ನಿಟ್ಟಿನಲ್ಲಿ ಅಧ್ಯಯನ ನಡೆಸಿದ್ದು, ಎಲ್ಲ ವಿಧದಲ್ಲಿ ಅನುಕೂಲಕರವಾಗಿರುವ ಹಿನ್ನೆಲೆಯಲ್ಲಿ ಬಳಕೆಗೆ ಉದ್ದೇಶಿಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಅನುಷ್ಠಾನಕ್ಕೆ ಬರಲಿದೆ. ತ್ಯಾಜ್ಯ ಸಾಗಾಟ ವಾಹನಗಳಿಗೆ ಸಿಎನ್‌ಜಿ ಕಿಟ್ ಅಳವಡಿಸಲು ನಗರಸಭೆಯ ಕೌನ್ಸಿಲ್ ಅನುಮೋದನೆ ನೀಡಿದೆ.
    ಜೀವಂಧರ್ ಜೈನ್, ಅಧ್ಯಕ್ಷ ಪುತ್ತೂರು ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts