More

    ರಸ್ತೆ ಬದಿ ಕೊಳೆಯುತ್ತಿದೆ ತ್ಯಾಜ್ಯ, ಕೋಟೆಕಾರ್ ಪಟ್ಟಣ ಪಂಚಾಯಿತಿ ದುರಾವಸ್ಥೆ

    ಉಳ್ಳಾಲ: ರಸ್ತೆಬದಿ ಖಾಲಿ ಜಾಗದಲ್ಲಿ ಗಬ್ಬೆದ್ದು ನಾರುತ್ತಿರುವ ತ್ಯಾಜ್ಯರಾಶಿ, ರಸ್ತೆಯಲ್ಲೇ ಹರಿಯುತ್ತಿರುವ ಕೊಳಕು ನೀರು. ಇದು ಸಾರ್ವಜನಿಕರು ಮಾಡಿದ ತಪ್ಪಲ್ಲ. ಕೋಟೆಕಾರ್ ಪಟ್ಟಣ ಪಂಚಾಯಿತಿ ಮಾಡಿಕೊಂಡಿರುವ ಎಡವಟ್ಟು.
    ಕೆಲವರ್ಷಗಳ ಹಿಂದೆ ಕೋಟೆಕಾರ್‌ನಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣಕ್ಕಾಗಿ ಸ್ಮಶಾನದ ಬಳಿ ಜಮೀನು ಗುರುತಿಸಿದಾಗ ಭಾರಿ ವಿವಾದ ವ್ಯಕ್ತವಾಗಿದ್ದರಿಂದ ಆಗಿನ ಗ್ರಾಪಂ ಆಡಳಿತ ಜನರ ಮನವೊಲಿಸುವ ಬದಲು ಯೋಜನೆಯನ್ನೇ ಕೈಬಿಟ್ಟಿತು. ಗ್ರಾಮ ಪಂಚಾಯಿತಿ ಆಗಿದ್ದಾಗಲೇ ಅತ್ಯಂತ ಹೆಚ್ಚು ಆದಾಯ ಹೊಂದಿದ್ದರೂ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ಸಾಧ್ಯವಾಗಿರಲಿಲ್ಲ.
    ಈಗ ಕೋಟೆಕಾರ್ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿ ಆರು ವರ್ಷಗಳಾಗುತ್ತಿದೆ. ಆದಾಯವೂ ದುಪ್ಪಟ್ಟಾಗಿದೆ. ಆದರೂ ಘನತ್ಯಾಜ್ಯ ಘಟಕ ನಿರ್ಮಾಣ ಮಾಡಲು ಮನ ಮಾಡಿಲ್ಲ.

    ಸಮಸ್ಯೆಗಿದು ಮೂಲ ಕಾರಣ!
    ಅತ್ಯಧಿಕ ಆದಾಯ ಇದ್ದರೂ ಘಟಕ ನಿರ್ಮಿಸದ ಕಾರಣ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯ ಪಚ್ಚನಾಡಿಗೆ ಸಾಗಿಸಬೇಕಿದೆ. ಸಾಗಿಸುವ ಸಂದರ್ಭ ಹಸಿ ಮತ್ತು ಒಣಕಸವನ್ನು ಬೇರ್ಪಡಿಸುವುದು ಕಡ್ಡಾಯ. ಈ ನಿಟ್ಟಿನಲ್ಲಿ ಮಡ್ಯಾರ್ ರಸ್ತೆಬದಿ ಒಂದಷ್ಟು ಖಾಲಿ ಜಾಗ ಆಯ್ಕೆ ಮಾಡಿದ ಪಟ್ಟಣ ಪಂಚಾಯಿತಿ, ವಾಹನಗಳಲ್ಲಿ ತಂದ ಕಸವನ್ನು ಇಲ್ಲೇ ಸುರಿದು ಬೇರ್ಪಡಿಸಿ ಪಚ್ಚನಾಡಿಗೆ ಸಾಗಿಸುತ್ತಿದೆ. ಆದರೆ ಇಲ್ಲಿ ಮಳೆ, ಬಿಸಿಲು ಬೀಳದಂತೆ ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸಿಲ್ಲ. ಇದೀಗ ಮಳೆ ಬಂದಾಗ ಸಮಸ್ಯೆ ಶುರುವಾಗಿದೆ. ರಾಶಿ ಹಾಕಿರುವ ತ್ಯಾಜ್ಯ ಮಳೆ ನೀರಿನಲ್ಲಿ ಕೊಳೆತು ಬೇರ್ಪಡಿಸಲು ಸಾಧ್ಯವಾಗದೆ, ಸಾಗಿಸಲೂ ಆಗದ ಕಾರಣ ದುರ್ನಾತ ಬೀರುತ್ತಿದೆ. ಕೊಳಕು ನೀರು ರಸ್ತೆಯಲ್ಲೇ ಹರಿಯುತ್ತಿರುವುದರಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.

    ಜಾಗೃತಿ ಕಾರ್ಯಕ್ರಮ ನಡೆದರೂ ಫಲವಿಲ್ಲ
    ಕಸಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜನ ಶಿಕ್ಷಣ ಟ್ರಸ್ಟ್ ಸಹಭಾಗಿತ್ವದಲ್ಲಿ ಈಗಾಗಲೇ ಎರಡು ಜಾಗೃತಿ ಸಭೆಗಳನ್ನು ನಡೆಸಲಾಗಿದೆ. ಈ ಸಭೆ ನಡೆಸಲು ಕಿರಿಯ ಆರೋಗ್ಯ ನಿರೀಕ್ಷಕ ವಿಕ್ರಂ ಅತ್ಯುತ್ಸಾಹ ತೋರಿದ್ದಾರೆ. ಇದರಲ್ಲಿ ಬೆರಳೆಣಿಕೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗವಹಿಸಿದ್ದಾರೆ. ಆದರೆ ಪಂಚಾಯಿತಿ ಮಟ್ಟದಲ್ಲೇ ತ್ಯಾಜ್ಯ ನಿರ್ವಹಣೆ ಮಾಡುವಲ್ಲಿ ವೈಫಲ್ಯ ಅನುಭವಿಸಿರುವುದಕ್ಕೆ ಮಾಡೂರು ರಸ್ತೆಬದಿ ತ್ಯಾಜ್ಯ ಸಾಕ್ಷಿ ಹೇಳುತ್ತಿದೆ.

    ಅದು ನಮ್ಮ ಕಸವಲ್ಲ, ಜನರು ಹಾಕಿದ್ದು!
    ಪಟ್ಟಣ ಪಂಚಾಯಿತಿಯಿಂದ ಒಣಕಸ ಘಟಕ ನಿರ್ಮಾಣ ಆಗುತ್ತಿದ್ದು, ಬಳಿಕ ಸಮಸ್ಯೆ ಪರಿಹಾರ ಆಗುತ್ತದೆ. ಹಸಿಕಸ ಈಗಿನಂತೆಯೇ ಪಚ್ಚನಾಡಿಗೆ ಕಳುಹಿಸುತ್ತೇವೆ. ಈಗ ಮಡ್ಯಾರ್‌ನಲ್ಲಿರುವ ಜಾಗ ರಸ್ತೆಗೆ ಸಂಬಂಧಿಸಿದೆ. ಪೌರಕಾರ್ಮಿಕರು ಸದ್ಯಕ್ಕೆ ಅದೇ ಜಾಗದಲ್ಲಿ ಕಸ ಬೇರ್ಪಡಿಸುತ್ತಾರೆ. ಮಳೆ ನೀರು ಬಿದ್ದರೂ ಕಸ ಬೇರ್ಪಡಿಸದೆ ವಿಧಿಯಿಲ್ಲ. ಇಲ್ಲೇ ಕಸದ ವಾಹನಗಳು ನಿಲ್ಲುವುದು, ಬೇರ್ಪಡಿಸುವುದರಿಂದ ಜನರು ತಪ್ಪಾಗಿ ತಿಳಿದು ತ್ಯಾಜ್ಯ ಎಸೆದು ಹೋಗುತ್ತಾರೆ. ಕೆ.ಸಿ.ರೋಡು-ನಾಟೆಕಲ್ ರಸ್ತೆ, ದೇರಳಕಟ್ಟೆ-ಮಾಡೂರು ರಸ್ತೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಈಗ ಹಿಂದಿಗಿಂತ ತ್ಯಾಜ್ಯ ರಾಶಿ ಬೀಳುವುದು ಕಡಿಮೆಯಾಗಿದೆ ಎನ್ನುತ್ತಾರೆ ಕೋಟೆಕಾರ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts