More

    ವಾರ್ಡ್ ಸಮಿತಿ ರಚನೆ ಕನಸು ಸಾಕಾರ, ಎರಡು ದಿನದಲ್ಲಿ ನೋಡಲ್ ಅಧಿಕಾರಿಗಳ ನೇಮಕ

    ಮಂಗಳೂರು; ಮಹಾನಗರ ಪಾಲಿಕೆ ಆಡಳಿತ ವ್ಯವಸ್ಥೆಯಲ್ಲಿ ಜನರ ನೇರವಾದ ಪಾತ್ರವನ್ನು ಖಾತರಿಪಡಿಸಲು ವಾರ್ಡ್ ಸಮಿತಿ ರಚಿಸಬೇಕು ಎನ್ನುವ ನಗರದ ಜನರ ಸುಮಾರು 15 ವರ್ಷಗಳ ಹೋರಾಟ ಫಲಿಸುವ ಸಮಯ ಸನ್ನಿಹಿತವಾಗಿದೆ. ವಾರ್ಡ್ ಸಮಿತಿಗೆ ಇಬ್ಬರು ನೋಡಲ್ ಅಧಿಕಾರಿಗಳ ಹೆಸರು ಇನ್ನೆರಡು ದಿನಗಳಲ್ಲಿ ಅಂತಿಮಗೊಳ್ಳಲಿದೆ.

    ಪಾಲಿಕೆ ಆಯುಕ್ತರ ಪ್ರಕಾರ ಈ ಮಾಸಾಂತ್ಯದೊಳಗೆ ಸಮಿತಿ ರಚನೆ ಪ್ರಕ್ರಿಯೆ ಒಂದು ನಿರ್ಣಾಯಕ ಘಟ್ಟ ತಲುಪಲಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬಂದರೆ ವಾರ್ಡ್ ಸಮಿತಿ ರಚಿಸುವುದಾಗಿ ಚುನಾವಣೆ ಪೂರ್ವ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಭರವಸೆ ನೀಡಿದ್ದವು. ಅದು ಈಗ ಈಡೇರುತ್ತಿದೆ. ಆದರೆ ಸಮಿತಿ ಸದಸ್ಯರನ್ನು ವಾರ್ಡ್‌ನ ಜನರೇ ಆಯ್ಕೆ ಮಾಡಬೇಕು ಎನ್ನುವ ಹೋರಾಟಗಾರರ ಬೇಡಿಕೆ ಈಡೇರುತ್ತಿಲ್ಲ. ಬದಲಾಗಿ ಯಾರು ಸಮಿತಿ ಸದಸ್ಯರಾಗಬೇಕು ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳೇ ತೀರ್ಮಾನಿಸಲಿದ್ದಾರೆ.

    ಪರಿಣಾಮಕಾರಿ ನಿರ್ವಹಣೆ: ಬೆಂಗಳೂರು, ಹುಬ್ಬಳ್ಳಿ ಮುಂತಾದೆಡೆ ಜನರಿಂದಲೇ ಆಯ್ಕೆಯಾದ ವಾರ್ಡ್ ಸಮಿತಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ. ನಿವೃತ್ತ ಹಿರಿಯ ಅಧಿಕಾರಿಗಳು, ಮಹಿಳೆಯರು, ಯುವಜನರು ಒಳಗೊಂಡ ಸಮಿತಿ ರಚನೆಯಾಗುವುದರಿಂದ ಪಾರದರ್ಶಕ ಆಡಳಿತ ಸಾಧ್ಯವಾಗುವುದು ಎನ್ನುವುದು ಹೋರಾಟಗಾರರ ಅಭಿಪ್ರಾಯ.

    10 ಮಂದಿ ಸದ್ಯರು ಇರುವ ಪ್ರತೀ ವಾರ್ಡ್ ಸಮಿತಿಯಲ್ಲಿ ಮೂವರು ಮಹಿಳೆಯರು, ನಿವೃತ್ತ ಸರ್ಕಾರಿ ನೌಕರರು, ಯುವಜನರು ಸಹಿತ ಪ್ರಮುಖ ಎಲ್ಲ ವರ್ಗದ ಜನರ ಪ್ರಾತಿನಿಧ್ಯಕ್ಕೆ ಅವಕಾಶ ಒದಗಿಸಲು ಉದ್ದೇಶಿಸಲಾಗಿದೆ.

    15 ವರ್ಷ ಹಿಂದೆ ಮಣಿವಣ್ಣನ್ ಅವರು ಹುಬ್ಬಳ್ಳಿ ಪಾಲಿಕೆಯಲ್ಲಿ ಆಯುಕ್ತರಾಗಿದ್ದ ಸಂದರ್ಭ ಆರಂಭಿಸಿದ ವಾರ್ಡ್ ಸಮಿತಿ ಹೆಚ್ಚಿನ ಜನಪ್ರಿಯತೆ ಗಳಿಸಿತ್ತು. ವಾರ್ಡ್ ಸಮಿತಿಯ ಮೂಲ ಪರಿಕಲ್ಪನೆಯಲ್ಲಿ ಸಾರ್ವಜನಿಕರು ಪಾಲಿಕೆ ಆಡಳಿತದಲ್ಲಿ ನೇರವಾಗಿ ಪಾತ್ರ ವಹಿಸುವ ಅವಕಾಶ ಸಮಿತಿಗೆ ಇದೆ. ಪಾಲಿಕೆ ಸದಸ್ಯರು ಅನಗತ್ಯವಾಗಿ ಕೈಗೆತ್ತಿಕೊಳ್ಳುವ ಕಾಮಗಾರಿ ತಡೆಹಿಡಿಯುವ, ಸೂಕ್ತ ಕಾಮಗಾರಿಯ ಪ್ರಸ್ತಾವನೆ ಮುಂದಿಡುವ ಎರಡೂ ಅವಕಾಶಗಳೂ ಸಮಿತಿಗೆ ಇವೆ.

    ಮಾಸಾಂತ್ಯದೊಳಗೆ ಪಾಲಿಕೆ ವಾರ್ಡ್ ಸಮಿತಿ ರಚನೆಯಾಗಲಿದೆ. ಎರಡು ದಿನಗಳೊಳಗೆ ನೋಡಲ್ ಅಧಿಕಾರಿಗಳ ಹೆಸರು ಪ್ರಕಟಿಸಲಾಗುವುದು. ವಾರ್ಡ್ ಸಮಿತಿ ರಚನೆ ಮೂಲಕ ಪಾಲಿಕೆ ವ್ಯಾಪ್ತಿಯ ಜನರ ಬಹುಕಾಲದ ಬೇಡಿಕೆ ಈಡೇರುತ್ತಿದೆ.

    ಅಕ್ಷಿ ಶ್ರೀಧರ್, ಆಯುಕ್ತ, ಮಂಗಳೂರು ಮಹಾನಗರ ಪಾಲಿಕೆ

    ಅಧಿಕಾರಿಗಳಿಂದ ನೇಮಕಗೊಳ್ಳುವ ಸಮಿತಿ ಸದಸ್ಯರು ಜನರಿಗೆ ಮೋಸ ಮಾಡುವ ಸಾಧ್ಯತೆಯನ್ನು ನಿರಾಕರಿಸುವುದು ಅಸಾಧ್ಯ. ಸದಸ್ಯರಾಗಿ ನೇಮಕಗೊಳ್ಳುವವರು ‘ನನ್ನ ವಾರ್ಡ್ ಅಭಿವೃದ್ದಿ ಮಾಡಲು ಇದೊಂದು ಉತ್ತಮ ಅವಕಾಶ’ ಎಂದು ಕೆಲಸ ಮಾಡಬೇಕು.

    ಹನುಮಂತ ಕಾಮತ್,
    ಅಧ್ಯಕ್ಷ, ನಾಗರಿಕ ಹಿರಕ್ಷಣಾ ವೇದಿಕೆ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts