More

    ಕೊನೆಗೂ ಬಯಲಾಯಿತು ವಾರಂಗಲ್ ಕೃಷಿ ಹೊಂಡದ 9 ಶವಗಳ ರಹಸ್ಯ!

    ವಾರಂಗಲ್​: ದೇಶದ ಗಮನಸಳೆದಿದ್ದ ವಾರಂಗಲ್ ಕೃಷಿ ಹೊಂಡದಲ್ಲಿ ಎರಡು ದಿನಗಳಲ್ಲಿ ಪತ್ತೆಯಾದ ಒಂಭತ್ತು ಶವಗಳ ನಿಗೂಢ ರಹಸ್ಯ ಬಯಲಾಗಿದೆ. ವಿವಾಹಿತೆಯೊಂದಿಗಿನ ಪ್ರೇಮ ಪ್ರಕರಣ ಮತ್ತು ಹತ್ಯೆ ವಿಚಾರ ಮುಚ್ಚಿಡುವ ಸಲುವಾಗಿ ಬಿಹಾರದ ವ್ಯಕ್ತಿ ಈ ಕೃತ್ಯವೆಸಗಿದ್ದ! ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ನಿಗೂಢ ಪ್ರಕರಣದ ವಿವರ ಬಹಿರಂಗವಾಗಿದೆ. ಬಂಧಿತನನ್ನು ಸಂಜಯ್ ಕುಮಾರ್ ಯಾದವ್​ (30) ಎಂದು ಗುರುತಿಸಲಾಗಿದೆ. ಈತ ಗೋರೆಕುಂಟ ಗ್ರಾಮದ ಸೆಣಬಿನ ಮಿಲ್​ನಲ್ಲಿ ಕಾರ್ಮಿಕ.

    ಇದನ್ನೂ ಓದಿ: 1974ರಿಂದ ತಿಮ್ಮಪ್ಪನ 126 ಆಸ್ತಿ ಮಾರಾಟ

    ಪೊಲೀಸರ ಮಾಹಿತಿ ಪ್ರಕಾರ, ಮಕ್ಸೂದ್​ ಪಶ್ಚಿಮ ಬಂಗಾಳದವರಾಗಿದ್ದು, 20 ವರ್ಷಗಳ ಹಿಂದೆ ಕುಟುಂಬ ಸಮೇತ ವಾರಂಗಲ್​ಗೆ ಬಂದು ನೆಲೆಯೂರಿದವರು. ರಫೀಕಾ ಐದು ವರ್ಷಗಳ ಹಿಂದೆ ಮಕ್ಸೂದ್ ಮನೆಗೆ ನೆಲೆ ಅರಸಿ ಮೂವರು ಮಕ್ಕಳೊಂದಿಗೆ ಬಂದವಳು. ಆಕೆಗೂ ತಾನು ಕೆಲಸ ಮಾಡುವ ಮಿಲ್​ನಲ್ಲೇ ಕೆಲಸ ಒದಗಿಸಿದ್ದ ಮಕ್ಸೂದ್. ಈ ನಡುವೆ ಸಂಜಯ್​ಗೂ ರಫೀಕಾ ಅಡುಗೆ ಮಾಡಿ ಹಾಕುತ್ತಿದ್ದಳು. ಹಾಗೆ ಪ್ರೇಮ ಚಿಗುರಿತು. ಮೂವರು ಮಕ್ಕಳೊಂದಿಗೆ ಸಂಜಯ್​ ಮನೆಗೆ ಸ್ಥಳಾಂತರವಾದಳು ರಫೀಕಾ. ಆಕೆಯನ್ನು ಮದುವೆಯಾಗುವ ಭರವಸೆಯನ್ನೂ ಸಂಜಯ್ ಕೊಟ್ಟಿದ್ದ. ಇದಲ್ಲದೆ, ಇತ್ತೀಚೆಗೆ ರಫೀಕಾ ಮತ್ತು ಸಂಜಯ್​ ನಡುವೆ ವೈಮನಸ್ಸು ಉಂಟಾಗಿತ್ತು. ಕಾರಣ ರಫೀಕಾಳ ಹದಿಹರೆಯದ ಮಗಳ ಜತೆಗೆ ಸಂಜಯ್​ ಅಸಭ್ಯವಾಗಿ ವರ್ತಿಸಿದ್ದ. ಆಕೆಯನ್ನೂ ಮದುವೆಯಾಗುವುದಾಗಿ ಹೇಳಿದ್ದ.

    ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಎಕ್ಸಾಂ ಕಸಿವಿಸಿ

    ಕೊನೆಗೆ ಮಾರ್ಚ್ 7ರಂದು ಸಂಜಯ್ ಮತ್ತು ರಫೀಕಾ ಪಶ್ಚಿಮ ಬಂಗಾಳಕ್ಕೆ ಗರೀಬ್​ ರಥ್​ ರೈಲು ಹತ್ತಿ ಹೋಗಿದ್ದರು. ಆಕೆ ಬಂಧುಗಳ ಜತೆ ಮಾತುಕತೆ ನಡೆಸಿ ವಿವಾಹವಾಗುವುದಾಗಿ ಮನವೊಲಿಸಿದ್ದ. ರೈಲಿನಲ್ಲಿ ರಫೀಕಾಗೆ ಮಜ್ಜಿಗೆಯಲ್ಲಿ ನಿದ್ದೆ ಗುಳಿಗೆ ಬೆರೆಸಿ ಕುಡಿಸಿದ್ದ. ಬೆಳಗಿನ ಜಾವ 3 ಗಂಟೆ ವೇಳೆಗೆ ಆಕೆಯನ್ನು ಹತ್ಯೆ ಮಾಡಿ ರೈಲಿನಿಂದ ಹೊರಗೆಸೆದಿದ್ದ. (ತಾಡೇಪಲ್ಲಿಗುಡೆಂನಲ್ಲಿ ಮಹಿಳೆಯ ಶವ ಪತ್ತೆಯಾದ ಬಗ್ಗೆ ರೈಲ್ವೆ ಪೊಲೀಸರು ಕೇಸ್ ದಾಖಲಿಸಿದ್ದರು. ಆದರೆ, ಆ ಸಂದರ್ಭದಲ್ಲಿ ಆಕೆಯ ಗುರುತು ಪತ್ತೆಯಾಗಿರಲಿಲ್ಲ. ) ಬಳಿಕ ರಾಜಮಂಡ್ರಿಯಲ್ಲಿ ರೈಲು ಇಳಿದು ವಾರಂಗಲ್​ಗೆ ವಾಪಸಾಗಿದ್ದ. ಮನೆಗೆ ಬಂದು ರಫೀಕಾಳ ಮೂವರು ಮಕ್ಕಳನ್ನು ಅಮ್ಮ ಪಶ್ಚಿಮ ಬಂಗಾಳದಲ್ಲೇ ಉಳಿದುಕೊಂಡಿದ್ದು ಕೆಲ ದಿನಗಳ ಬಳಿಕ ಬರುವುದಾಗಿ ಸಮಾಧಾನಿಸಿದ್ದ.

    ಇದನ್ನೂ ಓದಿ: ರೈತರ ಸಂಕಷ್ಟ ನಿವಾರಣೆಗೆ ಹೊಸ ಆಪ್ ಅನ್ನದಾತ

    ಆದಾಗ್ಯೂ, ಮಕ್ಸೂದ್ ಮತ್ತು ಆತನ ಪತ್ನಿ ನಿಶಾಗೆ ಸಂದೇಹ ಉಂಟಾಗಿ ಪಶ್ಚಿಮ ಬಂಗಾಳದಲ್ಲಿರುವ ಬಂಧುಗಳಿಗೆ ಕರೆ ಮಾಡಿ ರಫೀಕಾಳ ಬಗ್ಗೆ ವಿಚಾರಿಸಿದ್ದರು. ಆಕೆ ಅಲ್ಲಿಗೆ ಹೋಗಿಲ್ಲ ಎಂಬುದು ಗೊತ್ತಾದ ಬಳಿಕ ಸಂಜಯ್​ ಜತೆಗೆ ರಫೀಕಾಳ ಕುರಿತು ವಿಚಾರಿಸಲಾರಂಭಿಸಿದ್ದರು. ಅಲ್ಲದೆ, ಪೊಲೀಸ್ ದೂರು ದಾಖಲಿಸುವುದಾಗಿ ಬೆದರಿಸಿದ್ದರು. ಈ ಬೆಳವಣಿಗೆಯಿಂದ ಸಂಜಯ್ ವಿಚಲಿತನಾಗಿದ್ದ. ಮಾರ್ಚ್ 24ರಂದು ಲಾಕ್​ಡೌನ್ ಘೋಷಣೆಯಾದಾಗ ಸಂಜಯ್​ ಜತೆಗಿನ ಸಂಪರ್ಕ ಮಕ್ಸೂದ್​ ಕುಟುಂಬಕ್ಕೆ ಕಡಿದು ಹೋಗಿತ್ತು. ಆದರೆ, ಮೇ 15ರ ಸುಮಾರಿಗೆ ಮತ್ತೆ ಸಂಪರ್ಕಕ್ಕೆ ಸಿಕ್ಕಾಗ ರಫೀಕಾಳ ಬಗ್ಗೆ ವಿಚಾರಿಸಿತ್ತು ಮಕ್ಸೂದ್ ಕುಟುಂಬ. ಮತ್ತೆ ಪೊಲೀಸ್ ದೂರು ದಾಖಲಿಸುವುದಾಗಿ ಬೆದರಿಸಿದಾಗ ಸಂಜಯ್​ ಮಕ್ಸೂದ್ ಕುಟುಂಬವನ್ನು ಮುಗಿಸಲು ಸ್ಕೆಚ್ ಹಾಕಿದ್ದ.

    ಇದನ್ನೂ ಓದಿ: ಲಾ ಆ್ಯಂಡ್​ ಆರ್ಡರ್​: ವೈದ್ಯಕೀಯ ಉಪಕರಣ ನಿಯಂತ್ರಣಕ್ಕೆ ಕಾನೂನು

    ಮೇ 20ರಂದು ಸಂಜಯ್​ 50-60 ನಿದ್ದೆ ಗುಳಿಗೆ ಹಿಡಿದುಕೊಂಡು ಮಕ್ಸೂದ್​ ಇದ್ದ ಮಿಲ್​ನ ಗೋಡೌನ್​ಗೆ ಭೇಟಿ ನೀಡಿದ್ದ. ಆಗ ಅಲ್ಲಿ ಇವರ ಕುಟುಂಬದ ಜತೆಗೆ ಬಿಹಾರದ ಇನ್ನಿಬ್ಬರು ಕೆಲಸದವರೂ ಇದ್ದರು. ಆಗ ಅಡುಗೆ ಕೋಣೆಗೆ ನೀರು ಕುಡಿಯುವುದಕ್ಕೆ ಹೋದ ಸಂಜಯ್​ ಅಲ್ಲಿ ಅವರು ಮಾಡಿ ಇಟ್ಟಿದ್ದ ದಾಲ್​ಗೆ ನಿದ್ದೆ ಗುಳಿಗೆ ಬೆರೆಸಿದ್ದ. ಎಲ್ಲರೂ ಅಲ್ಲೇ ಊಟ ಮಾಡಿದ್ದರು. ನಸುಕಿನ ಎರಡು ಗಂಟೆ ಸುಮಾರಿಗೆ ಎಲ್ಲರೂ ಅಬೋಧಾವಸ್ಥೆಯಲ್ಲಿರುವುದು ಕಂಡು ಒಬ್ಬೊಬ್ಬರನ್ನೇ ಗೋಣಿಗೆ ತುಂಬಿಸಿ ಕೃಷಿ ಹೊಂಡಕ್ಕೆ ಎಸೆದು ಬಳಿಕ ಸೈಕಲ್​ನಲ್ಲಿ ತನ್ನ ರೂಮಿಗೆ ಹೋಗಿದ್ದ.

    ಇದನ್ನೂ ಓದಿ: ಪ್ರಣೀತಾ ಶಭಾಷ್: ಗ್ಲಾಮರ್ ಹುಡುಗಿಯ ಇನ್ನೊಂದು ಮುಖ

    ಮಕ್ಸೂದ್​ನ ಫೋನ್ ಕರೆ ವಿವರ ಅನುಸರಿಸಿ ಸಂಜಯ್​ ಮೇಲೆಯೇ ಪೊಲೀಸರ ಶಂಕೆ ದೃಢವಾಗಿತ್ತು. ಸಿಸಿಟಿವಿ ದೃಶ್ಯಾವಳಿಯಲ್ಲೂ ಮೇ 20ರ ಸಂಜೆ ಮಿಲ್ ಕಡೆಗೆ ಹೋಗಿದ್ದ ಮತ್ತು ಮರುದಿನ ಬೆಳಗಿನ ಜಾವ 5.30ಕ್ಕೆ ಮಿಲ್​ ಕಡೆಯಿಂದ ರೂಮಿಗೆ ಈತ ಹೋಗಿದ್ದ ದೃಶ್ಯಗಳೂ ಲಭಿಸಿವೆ. ರಫೀಕಾಳ ಮಕ್ಕಳನ್ನು ಬಾಲಗೃಹಕ್ಕೆ ಕಳುಹಿಸಿದ್ದು, ಅಲ್ಲಿಂದ ಪಶ್ಚಿಮ ಬಂಗಾಳದಲ್ಲಿರುವ ಬಂಧುಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.(ಏಜೆನ್ಸೀಸ್​)

    ಗುರುವಾರ ಪತ್ತೆಯಾಗಿದ್ದವು ನಾಲ್ಕು ಶವಗಳು, ಶುಕ್ರವಾರ ಇನ್ನೈದು! ನಿಗೂಢವಾಗಿದೆ ವಾರಂಗಲ್​ ಕೃಷಿ ಹೊಂಡದ ರಹಸ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts